ಭಾನುವಾರ, ಫೆಬ್ರವರಿ 28, 2021
23 °C

ಯತ್ನಾಳ್ ವಿರುದ್ಧ ₹204 ಕೋಟಿ ಮಾನನಷ್ಟ ಮೊಕದ್ದಮೆ ದಾಲಿಸಿದ ಡಿ.ಕೆ ಶಿವಕುಮಾರ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಮನಗರ: ಶಾಸಕ ಡಿ.ಕೆ. ಶಿವಕುಮಾರ್ ಅವರು ವಿಜಯಪುರದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಕನಕಪುರ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ದಾಖಲಿಸಿ, ₹204 ಕೋಟಿ ಮೊತ್ತದ ಪರಿಹಾರ ಕೋರಿದ್ದಾರೆ.

ಪ್ರಕರಣವನ್ನು ನ್ಯಾಯಾಧೀಶರು ವಿಚಾರಣೆಗೆ ಅಂಗೀಕರಿಸಿದ್ದು, ಪ್ರತಿವಾದಿಗೆ ಸಮನ್ಸ್ ಜಾರಿಗೊಳಿಸಿ ವಿಚಾರಣೆಯನ್ನು ಸೆಪ್ಟೆಂಬರ್ 18ಕ್ಕೆ ಮುಂದೂಡಿದ್ದಾರೆ. ಶಿವಕುಮಾರ್ ನ್ಯಾಯಾಲಯಕ್ಕೆ ಚೆಕ್ ಮೂಲಕ 1.04 ಕೋಟಿ ಶುಲ್ಕವನ್ನೂ ಪಾವತಿಸಿದ್ದಾರೆ.

ಏನು ಹೇಳಿದ್ದರು ಯತ್ನಾಳ್‌?:  ‘ಪ್ರಕರಣ ರದ್ದುಪಡಿಸಲು ಡಿಕೆಶಿ ಲಾಬಿ’

'ಬಸನಗೌಡ ಪಾಟೀಲ್ ಯತ್ನಾಳ್ ಜೂನ್ 23 ರಂದು ಮಾಧ್ಯಮದವರ ಜತೆ ಮಾತನಾಡಿ ನನ್ನ ಬಗ್ಗೆ ಮಾನಹಾನಿಕಾರಿ ಹೇಳಿಕೆ ನೀಡಿದ್ದಾರೆ. ಶಿವಕುಮಾರ್ ತಮ್ಮ ವಿರುದ್ಧ ದಾಖಲಾಗಿರುವ ಆದಾಯ ತೆರಿಗೆ ಇಲಾಖೆ (ಐಟಿ), ಜಾರಿ ನಿರ್ದೇಶನಾಲಯದ (ಇಡಿ) ಪ್ರಕರಣಗಳಿಂದ ಮುಕ್ತಗೊಳಿಸಲು ಸಹಾಯ ಮಾಡುವಂತೆ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರು ಹಾಗೂ ಕೇಂದ್ರ ಸಚಿವರ ಮೇಲೆ ಒತ್ತಡ ಹಾಕುತ್ತಿದ್ದಾರೆ. ಪ್ರಕರಣಗಳನ್ನು ರದ್ದುಪಡಿಸಿದರೆ, ಇದಕ್ಕೆ ಪ್ರತಿಯಾಗಿ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಮಾಡಲು ವಿರೋಧ ಮಾಡುವುದಿಲ್ಲ ಅಂತ ಭರವಸೆ ನೀಡಿದ್ದಾರೆ ಎಂದು ಯತ್ನಾಳ್ ಸುಳ್ಳು ಆರೋಪ ಮಾಡಿದ್ದಾರೆ. ಇದರಿಂದ ನನ್ನ ಪ್ರಾಮಾಣಿಕತೆ, ನೈತಿಕತೆ, ಪ್ರತಿಷ್ಠೆ ಹಾಗೂ ವರ್ಚಸ್ಸಿಗೆ ಧಕ್ಕೆಯಾಗಿದೆ' ಎಂದು ಅರ್ಜಿಯಲ್ಲಿ ದೂರಿದ್ದಾರೆ.‌

'ನಾನು, ನನ್ನ ಕುಟುಂಬ, ಸ್ನೇಹಿತರ ವಿರುದ್ಧ ಐ.ಟಿ ಮತ್ತು ಇ.ಡಿ ದಾಖಲಿಸಿದ ಪ್ರಕರಣಗಳ ವಿಚಾರಣೆಯು ವಿವಿಧ ನ್ಯಾಯಾಲಯಗಳಲ್ಲಿ ನಡೆದಿದೆ. ಹೀಗಿರುವಾಗ ಯತ್ನಾಳರ ಆರೋಪ ಕಾನೂನು ಸಂಸ್ಥೆಗಳ ದಿಕ್ಕುತಪ್ಪಿಸುವ ಹಾಗೂ ಅವುಗಳ ಮೇಲೆ ಪ್ರಭಾವ ಬೀರುವ ಹುನ್ನಾರದಿಂದ ಕೂಡಿದೆ. ರಾಜಕೀಯವಾಗಿಯೂ‌ ನನ್ನ ಭವಿಷ್ಯಕ್ಕೆ ಧಕ್ಕೆ ಉಂಟು ಮಾಡಿದೆ' ಎಂದು ಮನವಿಯಲ್ಲಿ ಹೇಳಿದ್ದಾರೆ.

'ಮೈತ್ರಿ ಸರ್ಕಾರದಲ್ಲಿ ಜಲ ಸಂಪನ್ಮೂಲ ಸಚಿವರಾಗಿದ್ದ ನಾನು, ಹಲವು ಬಾರಿ ದೆಹಲಿಗೆ ಭೇಟಿ ನೀಡಿದ್ದೇನೆ. ಜೂನ್ 12 ರಿಂದ ಜೂನ್ 19 ರ ನಡುವೆ ಇಂಥ ಪ್ರವಾಸ ಮಾಡಿದಾಗ ಕೇಂದ್ರದ ಕೆಲವು ಸಚಿವರನ್ನು ಭೇಟಿ ಮಾಡಿ ಮಹದಾಯಿ, ಮೇಕೆದಾಟು ಸೇರಿದಂತೆ ರಾಜ್ಯದ ನಾನಾ ಜಲ ಸಂರಕ್ಷಣೆ, ಕುಡಿಯುವ ನೀರಿನ ಯೋಜನೆಗಳ ಅನುಷ್ಠಾನಕ್ಕೆ ನೆರವಾಗುವಂತೆ ಮನವಿ ಮಾಡಿದ್ದೇನೆ. ವೈಯಕ್ತಿಕ ವಿಚಾರಗಳ ಕುರಿತು ಯಾರೊಂದಿಗೂ ಚರ್ಚಿಸಿಲ್ಲ.‌ ಯತ್ನಾಳ್ ಈ ವಿಚಾರವಾಗಿ ನೀಡಿರುವ ಅಪಾರ್ಥದ ಹೇಳಿಕೆಯಿಂದ ಮಾನಸಿಕವಾಗಿ ಹಿಂಸೆಯಾಗಿದೆ. ಇದಕ್ಕೆ ಪರಿಹಾರವಾಗಿ ₹204 ಕೋಟಿ ಕೊಡಿಸಬೇಕು. ನನ್ನ ವಿರುದ್ಧ ಯಾವುದೇ ಹೇಳಿಕೆ ನೀಡದಂತೆ ನಿರ್ಬಂಧ ಹೇರಬೇಕು' ಎಂದು ವಿನಂತಿಸಿದ್ದಾರೆ.‌

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು