ಗುರುವಾರ , ಜೂಲೈ 9, 2020
21 °C
ಸಾರ್ವಜನಿಕರ ದೂರುಗಳಿಗೆ ಸ್ಥಳದಲ್ಲೇ ಪರಿಹಾರ ಕೊಡಿಸಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ

ಪೊಲೀಸ್ ನೇಮಕಾತಿ ವಯೋಮಿತಿ ಹೆಚ್ಚಳ: ಸಿ.ಎಂ ಜತೆ ಚರ್ಚೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಪೊಲೀಸ್ ಕಾನ್‌ಸ್ಟೆಬಲ್ ನೇಮಕಾತಿ ವಯೋಮಿತಿ ಹೆಚ್ಚಿಸಬೇಕು ಎಂದು ಹಲವು ಆಕಾಂಕ್ಷಿಗಳು ‘ಫೋನ್‌–ಇನ್’ ಕಾರ್ಯಕ್ರಮದಲ್ಲಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಮಾಡಿದರು.

ಹಾಸನ, ಧಾರವಾಡ, ಚಿತ್ರದುರ್ಗ, ದಾವಣಗೆರೆ, ಕಲುರ್ಗಿ, ಬೆಳಗಾವಿ ಹೀಗೆ ರಾಜ್ಯದ ವಿವಿಧ ಭಾಗಗಳಿಂದ ಕರೆ ಮಾಡಿದ ಉದ್ಯೋಗಾಕಾಂಕ್ಷಿಗಳು, ‘ಬೇರೆ ರಾಜ್ಯಗಳಲ್ಲಿ ಈಗಾಗಲೇ ವಯೋಮಿತಿ ಹೆಚ್ಚಿಸಲಾಗಿದೆ. ನಮ್ಮಲ್ಲೂ ಸಾಮಾನ್ಯ ಅಭ್ಯರ್ಥಿಗಳಿಗೆ ಗರಿಷ್ಠ 30 ವರ್ಷ ಹಾಗೂ ಹಿಂದುಳಿದ ವರ್ಗ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿಯನ್ನು 33 ವರ್ಷಕ್ಕೆ ನಿಗದಿ ಮಾಡಬೇಕು’ ಎಂದು ಕೋರಿದರು.

ಅದಕ್ಕೆ ಪ್ರತಿಕ್ರಿಯಿಸಿದ ಬೊಮ್ಮಾಯಿ, ‘ವಯೋಮಿತಿ ಹೆಚ್ಚಳ ಸಂಬಂಧ ಮುಖ್ಯಮಂತ್ರಿ ಜೊತೆ ಚರ್ಚಿಸುತ್ತೇನೆ. ಬೇರೆ ರಾಜ್ಯಗಳಲ್ಲಿನ ವಯೋಮಿತಿ ಗಣನೆಗೆ ತೆಗೆದುಕೊಂಡು ತೀರ್ಮಾನ ತೆಗೆದುಕೊಳ್ಳಲಾಗುವುದು’ ಎಂದರು.

ಅಗ್ನಿಶಾಮಕ ದಳದ ನೇಮಕಾತಿ ಆಕಾಂಕ್ಷಿಯೊಬ್ಬರು, ‘ವಯೋಮಿತಿ ಹೆಚ್ಚಳ ಮಾಡಿ’ ಎಂದು ಕೋರಿದರು. ಅದಕ್ಕೆ ಬೊಮ್ಮಾಯಿ, ‘ಸದ್ಯ ಚಾಲ್ತಿಯಲ್ಲಿದ್ದ ನಿಯಮಗಳ ಅನ್ವಯ ಅಗ್ನಿಶಾಮಕ ದಳದ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿದೆ. ಮುಂದಿನ ದಿನಗಳಲ್ಲಿ ವಯೋಮಿತಿ ಹೆಚ್ಚಳ ಸಂಬಂಧಿಸಿದಂತೆ ಮುಖ್ಯಮಂತ್ರಿ ಜೊತೆ ಚರ್ಚಿಸಲಾಗುವುದು’ ಎಂದರು.

ಮುರಳೀಧರ್, ಮಂಚೇನಹಳ್ಳಿ

* ‘ಜೂಜಾಟ, ಅಕ್ರಮ ಮದ್ಯ ಪ್ರಕರಣದಲ್ಲಿ ಆರೋಪಿಗಳನ್ನು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ಯುವ ಪೊಲೀಸರು, ಅವರಿಂದ ಹಣ ಪಡೆದು ಬಿಟ್ಟು ಕಳುಹಿಸುತ್ತಿದ್ದಾರೆ’

ಬೊಮ್ಮಾಯಿ: ‘ಜೂಜಾಟ, ಅಕ್ರಮ ಮದ್ಯ, ಡ್ರಗ್ಸ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಎಲ್ಲ ಎಸ್ಪಿಗಳಿಗೆ ಸೂಚನೆ ನೀಡಲಾಗಿದೆ. ಪೊಲೀಸರಿಂದಲೇ ಲೋಪವಾದರೆ ಅವರ ವಿರುದ್ಧವೂ ಕ್ರಮ ಜರುಗಿಸುತ್ತೇನೆ.

(ಕಾರ್ಯಕ್ರಮ ಮುಗಿಯುತ್ತಿದ್ದಂತೆ, ಚಿಕ್ಕಬಳ್ಳಾಪುರದ ಎಸ್‌ಪಿ ಜತೆ ಮಾತನಾಡಿ, ದೂರಿನ ವಿರುದ್ಧ ಕ್ರಮ ಜರುಗಿಸುವಂತೆ ಆದೇಶಿಸಿದರು) 

ಹೆಸರು ಹೇಳಲು ಬಯಸದವರು, ಜಗಳೂರು

* ‘ನಮ್ಮೂರಿನಲ್ಲಿ ಕೊರೊನಾ ಪಾಸಿಟಿವ್ ಪ್ರಕರಣ ಇದೆ. ಯಾವುದೇ ಸ್ಯಾನಿಟೈಸ್ ಮಾಡಿಲ್ಲ. ಅಧಿಕಾರಿಗಳು ಬರುತ್ತಿಲ್ಲ. ಎಲ್ಲರೂ ನಿರ್ಲಕ್ಷ್ಯ ತೋರುತ್ತಿದ್ದಾರೆ’.

ಬೊಮ್ಮಾಯಿ: ‘ಜಿಲ್ಲಾ ಆರೋಗ್ಯಾಧಿಕಾರಿ ಹಾಗೂ ಜಿಲ್ಲಾ ಎಸ್ಪಿ ಜೊತೆ ಮಾತನಾಡುವೆ. ಸರ್ಕಾರದ ನಿಯಮದಂತೆ ಸ್ಥಳವನ್ನು ಸ್ಯಾನಿಟೈಸ್ ಮಾಡಿ ಇತರೆ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸುವೆ’. (ಫೋನ್‌ ಇನ್‌ ಕಾರ್ಯಕ್ರಮ ಮುಗಿದ ತಕ್ಷಣ ಆರೋಗ್ಯಾಧಿಕಾರಿ ಮತ್ತು ಎಸ್‌ಪಿಗೆ ಕರೆ ಮಾಡಿದ ಬೊಮ್ಮಾಯಿ, ತಕ್ಷಣ ಕ್ರಮ ತೆಗೆದುಕೊಳ್ಳುವಂತೆ ಸೂಚಿಸಿದರು)

ಚಂದ್ರಸಿಂಗ್ ರಜಪೂತ, ತಾಳಿಕೋಟೆ
* ‘ಕೊರೊನಾ ಪಾಸಿಟಿವ್ ಇದ್ದರೂ ಆಸ್ಪತ್ರೆಯಿಂದ ಮನೆಗೆ ಕಳುಹಿಸಲಾಗುತ್ತಿದೆ. ಅಂಥವರು ಮಾಸ್ಕ್ ಹಾಕಿಕೊಳ್ಳದೆ ಓಡಾಡುತ್ತಿದ್ದಾರೆ’.

ಬೊಮ್ಮಾಯಿ: ‘ಆ ರೀತಿ ಯಾರನ್ನೂ ಆಸ್ಪತ್ರೆಯಿಂದ ಬಿಡುವುದಿಲ್ಲ. ನಿಗದಿತ ಪ್ರಕರಣವಿದ್ದರೆ ಕ್ರಮ ಕೈಗೊಳ್ಳವಂತೆ ಸಂಬಂಧಪಟ್ಟ ಠಾಣೆ ಇನ್‌ಸ್ಪೆಕ್ಟರ್‌ಗೆ ಸೂಚನೆ ನೀಡುತ್ತೇನೆ’.

ವಿಶ್ವಾಸ, ರಾಣೆಬೆನ್ನೂರು
* ‘ಪೊರಕೆ ಹಾಗೂ ಇತರೆ ವಸ್ತುಗಳನ್ನು ಬೀದಿಗಳಲ್ಲಿ ಮಾರಾಟ ಮಾಡಲು ಹೊರ ಜಿಲ್ಲೆ ಹಾಗೂ ರಾಜ್ಯಗಳಿಂದ ಜನ ಬರುತ್ತಾರೆ. ಅವರು ಎಲ್ಲರ ಮನೆಗೂ ಹೋಗುತ್ತಾರೆ. ಅವರಿಂದಲೇ ಭಯವಾಗುತ್ತಿದೆ. ಅವರನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲು ಅಧಿಕಾರಿಗಳಿಗೆ ಸೂಚಿಸಿ’.

ಬೊಮ್ಮಾಯಿ: ‘ರಾಣೆಬೆನ್ನೂರು ಪೊಲೀಸರಿಗೆ ಹೇಳುತ್ತೇನೆ’ ( ಕಾರ್ಯಕ್ರಮ ಮುಗಿಯುತ್ತಿದ್ದಂತೆ ತಹಶೀಲ್ದಾರ್‌ಗೆ ಕರೆ ಮಾಡಿ, ಬೀದಿಗಳಲ್ಲಿ ಪಾತ್ರೆ, ಪಗಡೆ ಮಾರಾಟ ಮಾಡುವವರನ್ನು ತಪಾಸಣೆಗೆ ಒಳಪಡಿಸಬೇಕು. ಸೋಂಕು ದೃಢಪಟ್ಟರೆ ಕೋವಿಡ್‌ ಆಸ್ಪತ್ರೆಗೆ ದಾಖಲಿಸಬೇಕು ಎಂದು ಸೂಚಿಸಿದರು)

ವೆಂಕಟೇಶ,ಸಾಗರ
* ‘ಗೃಹರಕ್ಷಕ ಕೆಲಸ ಕೊಡಿ’.

ಬೊಮ್ಮಾಯಿ: ‘ಸದ್ಯದಲ್ಲೇ ಗೃಹರಕ್ಷಕರನ್ನು ಕೆಲಸಕ್ಕೆ ತೆಗೆದುಕೊಳ್ಳುತ್ತೇವೆ. ಪೊಲೀಸ್ ಇಲಾಖೆ ಜೊತೆಯಲ್ಲೇ ಬೇರೆ ಇಲಾಖೆಗೂ ಗೃಹ ರಕ್ಷಕರನ್ನು ನಿಯೋಜಿಸುವ ತೀರ್ಮಾನ ಕೈಗೊಳ್ಳಲಾಗಿದೆ. ಸುಪ್ರೀಂ ಕೋರ್ಟ್ ಆದೇಶದಂತೆ ಸಂಬಳವನ್ನೂ ನೀಡಲಿದ್ದೇವೆ’

ನಾಗರಾಜ, ಗೃಹ ರಕ್ಷಕ, ಕೆ.ಆರ್.ನಗರ

* ಕೊರೊನಾ ಬಂದೋಬಸ್ತ್ ಮಾಡುತ್ತಿದ್ದೇವೆ. ಆದರೆ, ಸಂಬಳ ಕೊಟ್ಟಿಲ್ಲ’.
ಬೊಮ್ಮಾಯಿ: ‘ಸಂಬಳ ಕೊಡಿಸಲು ತಕ್ಷಣ ಕ್ರಮ ಕೈಗೊಳ್ಳುವೆ’.

ರವಿಕುಮಾರ್, ಚಾಮರಾಜನಗರ
* ‘ರಾಜ್ಯದ ಹಲವು ಚೆಕ್‌ಪೋಸ್ಟ್‌ಗಳಲ್ಲಿ ಪೊಲೀಸರು ಹಗಲು–ರಾತ್ರಿ ಕೆಲಸ ಮಾಡುತ್ತಿದ್ದಾರೆ. ಚೆಕ್‌ಪೋಸ್ಟ್‌ ಮೂಲಕ ಹಾದು ಹೋಗುವ ಎಲ್ಲರನ್ನೂ ಪರೀಕ್ಷಿಸುತ್ತಿದ್ದಾರೆ. ಅಂಥ ಜನರಿಂದ ಪೊಲೀಸರಿಗೂ ಸೋಂಕು ತಗುಲುವ ಸಾಧ್ಯತೆ ಹೆಚ್ಚು. ಅವರ ಸುರಕ್ಷತೆಗೆ ಕ್ರಮ ಕೈಗೊಳ್ಳಿ’.

ಬೊಮ್ಮಾಯಿ: ‘ಪ್ರತಿ ಚೆಕ್‌ಪೋಸ್ಟ್‌ನಲ್ಲೂ ಸಿಬ್ಬಂದಿ ಮೂರು ಪಾಳಿ ಪ್ರಕಾರ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಅಗತ್ಯವಿರುವ ಮಾಸ್ಕ್‌, ಸ್ಯಾನಿಟೈಸರ್ ಸೇರಿದಂತೆ ಕಿಟ್ ವ್ಯವಸ್ಥೆ ಮಾಡಲಾಗಿದೆ. 2 ದಿನಕೊಮ್ಮೆ ಚೆಕ್‌ಪೋಸ್ಟ್‌, ಪೊಲೀಸ್ ಠಾಣೆ, ಪೊಲೀಸ್ ವಾಹನ ಸ್ಯಾನಿಟೈಸ್ ಮಾಡಲೂ ಸೂಚಿಸಲಾಗಿದೆ’.

ವಿಜಯಕುಮಾರ್, ಸವಣೂರು
* ‘ಆಟೊ, ಟ್ಯಾಕ್ಸಿ, ಕ್ಯಾಬ್ ಚಾಲಕರಿಗೆ ಮಾತ್ರ ಸರ್ಕಾರ ಪರಿಹಾರ ನೀಡುತ್ತಿದೆ. ಮ್ಯಾಕ್ಸಿ ಕ್ಯಾಬ್‌ ಚಾಲಕರೂ ಸಂಕಷ್ಟದಲ್ಲಿದ್ದು, ಅವರಿಗೂ ಪರಿಹಾರ ಕೊಡಿಸಿ’.

ಬೊಮ್ಮಾಯಿ: ‘ಈ ಬಗ್ಗೆ ಮುಖ್ಯಮಂತ್ರಿ ಜೊತೆ ಚರ್ಚಿಸುವೆ’.

***
ಬನಹಟ್ಟಿ ಮಹಿಳೆಯ ಕರೆಗೆ ಪ್ರಶಂಸೆ

ಬನಹಟ್ಟಿಯಿಂದ ಕರೆ ಮಾಡಿದ್ದ ಮಹಿಳೆಯೊಬ್ಬರು, ‘ನಮ್ಮೂರಿನಲ್ಲಿ ಬಹುತೇಕರು ಮಾಸ್ಕ್ ಧರಿಸುತ್ತಿಲ್ಲ. ಅಂತರವಂತೂ ಇಲ್ಲವೇ ಇಲ್ಲ. ಮಾಸ್ಕ್ ಧರಿಸುವಂತೆ ಕಠಿಣ ಕ್ರಮ ಕೈಗೊಳ್ಳಿ’ ಎಂದು ಕೋರಿದರು.

ಮಹಿಳೆಯ ಕಾಳಜಿಯನ್ನು ಪ್ರಶಂಸಿಸಿದ  ಬೊಮ್ಮಾಯಿ, ‘ನಿಮ್ಮ ವಿಚಾರ ಸತ್ಯವಾದದ್ದು. ಎಲ್ಲರಿಗೂ ಜಾಗೃತಿ ಬರಬೇಕು. ಬನಹಟ್ಟಿ ನೇಕಾರರ ಊರು. ಮಾಸ್ಕ್ ತಯಾರಿಸುವ ಸ್ಥಳ. ಅಲ್ಲಿಯೇ ಈ ರೀತಿಯಾದರೆ ಹೇಗೆ? ಸಂಬಂಧಪಟ್ಟ ಅಧಿಕಾರಿಗಳಿಗೆ ತಕ್ಷಣವೇ ಸೂಚನೆ ನೀಡುತ್ತೇನೆ’ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು