ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸವರಾಜ ಹೊರಟ್ಟಿ ವಿರುದ್ಧದ ವರದಿ ಜಾರಿಗೆ ಪತ್ರ

‘ಮೈತ್ರಿ’ ಮಧ್ಯೆ ಚರ್ಚೆಗೆ ಕಾರಣವಾದ ರಮೇಶ ಜಾರಕಿಹೊಳಿ ವರ್ತನೆ
Last Updated 25 ಅಕ್ಟೋಬರ್ 2018, 19:57 IST
ಅಕ್ಷರ ಗಾತ್ರ

ಬೆಂಗಳೂರು: ಧಾರವಾಡದ ಸರ್ವೋದಯ ಶಿಕ್ಷಣ ಟ್ರಸ್ಟ್‌ ಆಡಳಿತದಲ್ಲಿ ಬಸವರಾಜ ಹೊರಟ್ಟಿ ನಡೆಸಿರುವ ಅಕ್ರಮಗಳ ಕುರಿತಂತೆ ಮುಖ್ಯಮಂತ್ರಿ ಆದೇಶದಂತೆ ವಿಚಾರಣೆ ನಡೆಸಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರು 2017ರ ಸೆ. 28ರಂದು ಸಲ್ಲಿಸಿದ ವಿಚಾರಣಾ ವರದಿಯನ್ನು ಜಾರಿಗೆ ತರುವಂತೆ ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್‌ ಖರ್ಗೆ ಅವರಿಗೆ ಪೌರಾಡಳಿತ ಸಚಿವ ರಮೇಶ ಜಾರಕಿಹೊಳಿ ಪತ್ರ ಬರೆದಿದ್ದಾರೆ.

‘ಈ ಪ್ರಕರಣದಲ್ಲಿ ಧಾರವಾಡ ಜಿಲ್ಲಾ ನ್ಯಾಯಾಲಯ ನೀಡಿದ ಆದೇಶದಂತೆ ಟ್ರಸ್ಟ್‌ನ ಆಡಳಿತವನ್ನು ಶ್ರೀ ಮಠದ ವ್ಯಾಪ್ತಿಗೆ ತರಲು ಕ್ರಮ ತೆಗೆದುಕೊಳ್ಳಬೇಕು’ ಎಂದೂ ಅವರು ಈ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಈ ‘ಪತ್ರ’ ಮೈತ್ರಿ ಸರ್ಕಾರದ ಪಾಲುದಾರ ಪಕ್ಷಗಳಾದ ಜೆಡಿಎಸ್‌– ಕಾಂಗ್ರೆಸ್‌ ಮಧ್ಯೆ ಸಮನ್ವಯ ಕೊರತೆಯನ್ನು ಮತ್ತೊಮ್ಮೆ ಬಹಿರಂಗಪಡಿಸಿದೆ. ಅಷ್ಟೇ ಅಲ್ಲ, ಜಾರಕಿಹೊಳಿ, ವಿಧಾನಪರಿಷತ್‌ ಸಭಾಪತಿ ಆಗಿರುವ ಹೊರಟ್ಟಿ ವಿರುದ್ಧದ ವರದಿ ಜಾರಿಗೆ ಒತ್ತಾಯಿಸಿರುವುದು ‘ದೋಸ್ತಿ’ಯಲ್ಲಿ ಗೊಂದಲ ಮೂಡಿಸುವ ಸಾಧ್ಯತೆಯೂ ಇದೆ.

ಕಾಯ್ದೆಗೆ ಜಾರಿಗೆ ಒತ್ತಾಯ: ‘ಮೀಸಲಾತಿ ಆಧಾರದಲ್ಲಿ ಬಡ್ತಿ ಹೊಂದಿದ ಪರಿಶಿಷ್ಟ ಸಮುದಾಯದ ನೌಕರರಿಗೆ ತತ್ಪರಿಣಾಮ ಜ್ಯೇಷ್ಠತೆ ವಿಸ್ತರಿಸುವ ಕಾಯ್ದೆ 2018ರ ಜೂನ್‌ 23ರಿಂದಲೇ ಜಾರಿಗೆ ಬಂದಿದೆ. ಈ ಕಾಯ್ದೆ ಬಿ.ಕೆ. ಪವಿತ್ರ ಪ್ರಕರಣ ಅಥವಾ ಯಾವುದೇ ನ್ಯಾಯಾಲಯದ ದಾವೆಗಳಿಗೆ ಒಳಪಟ್ಟಿಲ್ಲ. ಹೀಗಾಗಿ, ಬಿ.ಕೆ. ಪವಿತ್ರ ಪ್ರಕರಣದಲ್ಲಿ ನೀಡಿಲಾದ ಎಲ್ಲ ಹಿಂಬಡ್ತಿ ಆದೇಶಗಳು ಸಹಜವಾಗಿ ರದ್ದು ಆಗುತ್ತವೆ. ಆದ್ದರಿಂದ ವಿಳಂಬ ಮಾಡದೆ ಕಾಯ್ದೆ ಜಾರಿ ಮಾಡುವಂತೆ ಎಲ್ಲ ಇಲಾಖೆಗಳಿಗೆ ತಕ್ಷಣ ಕಾರ್ಯಾದೇಶ ಹೊರಡಿಸಬೇಕು’ ಎಂದೂ ಪತ್ರದಲ್ಲಿ ಜಾರಕಿಹೊಳಿ ಆಗ್ರಹಿಸಿದ್ದಾರೆ.

‘ಪರಿಶಿಷ್ಟ ಪಂಗಡದ (ಎಸ್‌.ಟಿ) ಜನಸಂಖ್ಯೆ ಆಧಾರದ ಮೇಲೆ ಈಗ ಇರುವ ಶೇ 3ರ ಮೀಸಲಾತಿಯನ್ನು ಶೇ 7.5ಕ್ಕೆ ಹೆಚ್ಚಿಸಬೇಕು. ಪರಿಶಿಷ್ಟ ಪಂಗಡಕ್ಕೆ ಒಳಪಡದ ಜನಾಂಗಗಳು ನಕಲಿ ಜಾತಿ ಪ್ರಮಾಣ ಪತ್ರ ಪಡೆದುಕೊಂಡು ಈ ಜನಾಂಗದ ಮೀಸಲಾತಿ ಪಡೆಯುತ್ತಿ
ರುವುದನ್ನು ತಕ್ಷಣ ನಿಲ್ಲಿಸಲು ಕ್ರಮ ವಹಿಸಬೇಕು’ ಎಂದೂ ಇದೇ ಪತ್ರದಲ್ಲಿ ಅವರು ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT