ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನನ್ನದು ಹಿಂಬಾಗಿಲಿನ ರಾಜಕಾರಣವಲ್ಲ: ಹೊರಟ್ಟಿ

Last Updated 3 ಜೂನ್ 2019, 18:28 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಪ್ರಜ್ಞಾವಂತ ಶಿಕ್ಷಕರ ಕ್ಷೇತ್ರದಿಂದ ನಾನು ಏಳು ಬಾರಿ ಚುನಾವಣೆಯಲ್ಲಿ ಆಯ್ಕೆಯಾಗಿದ್ದೇನೆಯೇ ಹೊರತು, ಹಿಂಬಾಗಿಲಿನಿಂದ ಬಂದು ರಾಜಕಾರಣ ಮಾಡುತ್ತಿಲ್ಲ’ ಎಂದು ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ ಸೋಮವಾರ ಇಲ್ಲಿ ತಿರುಗೇಟು ನೀಡಿದರು.

‘ಹೊರಟ್ಟಿ ಅವರದ್ದು ಹಿಂಬಾಗಿಲಿನ ರಾಜಕಾರಣ’ ಎಂದು ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್. ವಿಶ್ವನಾಥ್ ಮತ್ತು ಸಚಿವ ಆರ್.ವಿ. ದೇಶಪಾಂಡೆ ಇತ್ತೀಚೆಗೆ ನೀಡಿದ್ದ ಹೇಳಿಕೆಗೆ ಅವರು ಪ್ರತಿಕ್ರಿಯಿಸಿದರು.

‘ನಾನು ವಿಧಾನ ಪರಿಷತ್ತಿನ ನಾಮಕರಣ ಸದಸ್ಯ ಅಲ್ಲ. ಇಂತಹ ಸನ್ನಿವೇಶದಲ್ಲಿ ಈ ರೀತಿಯ ಹೇಳಿಕೆಗಳಿಂದ ಶಿಕ್ಷಕರಿಗೆ ಅವಮಾನ ಮಾಡಿದಂತಾಗಿದೆ’ ಎಂದು ಅವರು ಹೇಳಿದರು.

‘ವಿಶ್ವನಾಥ್ ಮತ್ತು ದೇಶಪಾಂಡೆ ನನ್ನ ವಿರುದ್ಧ ಸ್ಪರ್ಧಿಸಿ ಗೆಲ್ಲಲಿ ನೋಡೇ ಬಿಡೋಣ’ ಎಂದೂ ಸವಾಲು ಹಾಕಿದರು.

‘ಮೈತ್ರಿ ಸರ್ಕಾರದಲ್ಲಿರುವ ಯಾವ ಶಾಸಕರೂ ರಾಜೀನಾಮೆ ಕೊಡುವ ಸ್ಥಿತಿ ಈಗ ಇಲ್ಲ. ನಾನು 38 ವರ್ಷದಿಂದ ರಾಜಕೀಯ ಮಾಡುತ್ತಿದ್ದೇನೆ. ನನ್ನ ಮಂತ್ರಿ ಮಾಡಿಲ್ಲ; ಸ್ಪೀಕರ್ ಸ್ಥಾನದಿಂದ ಕೆಳಗಿಳಿಸಿದರು. ಆದರೂ ನಾನು ಪಕ್ಷ ಬಿಟ್ಟಿಲ್ಲ, ಅಸಮಾಧಾನ ಮಾಡಿಕೊಂಡಿಲ್ಲ’ ಎಂದು ಹೇಳಿದರು.

ಹೊರಟ್ಟಿ ಹೇಳಿಕೆಗೆ ಧಾರವಾಡದಲ್ಲಿ ಪ್ರತಿಕ್ರಿಯಿಸಿದ ಸಚಿವ ದೇಶಪಾಂಡೆ, ‘ಹೊರಟ್ಟಿ ವಿರುದ್ಧ ಚುನಾವಣೆಗೆ ನಿಲ್ಲುವ ಪರಿಸ್ಥಿತಿ ಎದುರಾದರೆ ನೋಡುತ್ತೇನೆ. ಅಂತಹ ಪರಿಸ್ಥಿತಿ ಇನ್ನೂ ಎದುರಾಗಿಲ್ಲ. ಹಾಗೆ ಒಂದು ವೇಳೆ ಸ್ಪರ್ಧಿಸುವುದಾದರೆ ನಾನು ಎಂಎಲ್‌ಸಿ ಸ್ಥಾನಕ್ಕೆ ನಿಲ್ಲಬೇಕು. ಇಲ್ಲವೇ ಹೊರಟ್ಟಿ ಎಂಎಲ್‌ಎ ಚುನಾವಣೆಗೆ ನಿಲ್ಲಬೇಕು ಅಂದಾಗ ಮಾತ್ರ ಅದು ಸಾಧ್ಯ’ ಎಂದು ಕುಟುಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT