ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊರಟ್ಟಿ ಕೈ ತಪ್ಪಲಿರುವ ಸಭಾಪತಿ ಸ್ಥಾನ

ಎಸ್‌.ಆರ್‌.ಪಾಟೀಲ ಪರ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬ್ಯಾಟಿಂಗ್‌
Last Updated 4 ಜುಲೈ 2018, 19:24 IST
ಅಕ್ಷರ ಗಾತ್ರ

ಬೆಂಗಳೂರು: ವಿಧಾನಪರಿಷತ್‌ ಸಭಾಪತಿ ಸ್ಥಾನಕ್ಕೆ ಎಸ್‌.ಆರ್‌.ಪಾಟೀಲ ಅವರನ್ನೇ ನೇಮಿಸುವುದಾಗಿ ಜೆಡಿಎಸ್‌– ಕಾಂಗ್ರೆಸ್ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಪಟ್ಟು ಹಿಡಿದಿರುವ ಕಾರಣ ಹಿರಿಯ ನಾಯಕ ಬಸವರಾಜ ಹೊರಟ್ಟಿ ಸಭಾಪತಿಯಾಗಿ ಮುಂದುವರಿಯುವ ಸಾಧ್ಯತೆ ಇಲ್ಲ.

ಎಸ್‌.ಆರ್‌.ಪಾಟೀಲ ಅವರನ್ನು ಸಭಾಪತಿ ಮಾಡುವುದರ ಜೊತೆಗೆ ಜಯಮಾಲಾ ವಿರುದ್ಧ ಚಿತಾವಣೆ ನಡೆಸುತ್ತಿರುವ ಹಿರಿಯ ಸದಸ್ಯರಿಗೆ ಪಾಠ ಕಲಿ
ಸಲು ಸಿದ್ದರಾಮಯ್ಯ ತೀರ್ಮಾನಿಸಿದ್ದಾರೆ. ಇದಕ್ಕಾಗಿ ಹೊರಟ್ಟಿಯವರನ್ನು ಮಂತ್ರಿ ಮಾಡುವಂತೆ ಜೆಡಿಎಸ್‌ಗೆ ಸಲಹೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಹೊರಟ್ಟಿಯವರನ್ನು ಸಚಿವರನ್ನಾಗಿ ಮಾಡಿದರೆ, ಮೇಲ್ಮನೆಯಲ್ಲಿ ಸಭಾ ನಾಯಕ ಹುದ್ದೆಯ ಸಮಸ್ಯೆ ಬಗೆಹರಿಯುತ್ತದೆ. ಹಿರಿಯ ಸದಸ್ಯರಾಗಿರುವುದ
ರಿಂದ ಸಹಜವಾಗಿ ಅವರು ಸಭಾ ನಾಯಕ ಆಗುತ್ತಾರೆ ಎಂಬುದು ಸಿದ್ದರಾಮಯ್ಯ ಲೆಕ್ಕಾಚಾರ ಎಂದು ಮೂಲಗಳು ಹೇಳಿವೆ.ಸಭಾಪತಿ ಸ್ಥಾನದ ಕಗ್ಗಂಟು ಇತ್ಯರ್ಥಗೊಳಿಸಲೆಂದು ನಗರದಲ್ಲೇ ಬೀಡು ಬಿಟ್ಟಿರುವ ಜೆಡಿಎಸ್‌ನ ರಾಷ್ಟ್ರೀಯ ಮಹಾಪ್ರಧಾನ ಕಾರ್ಯದರ್ಶಿ ಹಾಗೂ ಸಮನ್ವಯ ಸಮಿತಿ ಸಂಚಾಲಕ ಡ್ಯಾನಿಷ್‌ ಅಲಿ ಅವರು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಜಿ.ಪರಮೇಶ್ವರ ಜತೆ ಈ ಸಂಬಂಧ ಮಾತುಕತೆ ನಡೆಸಿದ್ದಾರೆ.

‘ಸಭಾಪತಿ ಸ್ಥಾನ ನಮಗೆ ಬಿಟ್ಟುಕೊಡಿ, ಉಪಸಭಾಪತಿ ಮತ್ತು ಮುಖ್ಯ ಸಚೇತಕ ಸ್ಥಾನವನ್ನು ನೀವು ಇಟ್ಟುಕೊಳ್ಳಿ’ ಎಂದು ಡ್ಯಾನಿಷ್‌ ಅಲಿ ಪ್ರಸ್ತಾಪ ಮುಂದಿಟ್ಟಾಗ, ಸಿದ್ದರಾಮಯ್ಯ ಜೆಡಿಎಸ್‌ ಪ್ರಸ್ತಾವನೆಯನ್ನು ಸ್ಪಷ್ಟವಾಗಿ ನಿರಾಕರಿಸಿದ್ದೂ ಅಲ್ಲದೆ, ‘ನಿಮ್ಮ ಬಳಿ ಭರ್ತಿ ಮಾಡಬೇಕಾಗಿರುವ ಒಂದು ಸಚಿವ ಸ್ಥಾನವನ್ನು ಹೊರಟ್ಟಿಯವರಿಗೆ ಕೊಡಿ. ಅದರಿಂದ, ಮೇಲ್ಮನೆಯಲ್ಲಿ ಸಭಾನಾಯಕ ಸ್ಥಾನದ ಸಮಸ್ಯೆಯೂ ಬಗೆಹರಿಯುತ್ತದೆ’ ಎಂದು ಸಲಹೆ ನೀಡಿದರು.

ಜಯಮಾಲಾ ಅವರನ್ನು ಸಭಾನಾಯಕಿ ಮಾಡಿರುವ ಕ್ರಮದ ಬಗ್ಗೆ ಅಪಸ್ವರ ಎತ್ತಿದವರಿಗೆ ಪಾಠ ಕಲಿಸಲು ಈ ದಾಳವನ್ನು ಉರುಳಿಸಿದ್ದಾರೆ. ಇದರಿಂದ ಹಿರಿಯರು ಸಚಿವರಾಗಬೇಕು ಎಂಬ ಇಂಗಿತಕ್ಕೆ ಬ್ರೇಕ್‌ ಹಾಕಿದಂತಾಗುತ್ತದೆ ಎನ್ನಲಾಗಿದೆ.

ಈಗಾಗಲೇ ಜೆಡಿಎಸ್‌ನಲ್ಲಿ ವೀರಶೈವ– ಲಿಂಗಾಯತ ಕೋಟದಿಂದ ಇಬ್ಬರನ್ನು ಸಚಿವರನ್ನಾಗಿ ನೇಮಕ ಮಾಡಿರುವುದರಿಂದ ಹೊರಟ್ಟಿಯವ
ರಿಗೆ ಅವಕಾಶ ಸಿಗುವ ಸಾಧ್ಯತೆ ಇಲ್ಲ. ವಿಧಾನಪರಿಷತ್ತಿನಿಂದ ಯಾರನ್ನೂ ಮಂತ್ರಿ ಮಾಡುವುದಿಲ್ಲ ಎಂಬ ತೀರ್ಮಾನ ತೆಗೆದುಕೊಳ್ಳಲಾಗಿದೆ. ಹೊರಟ್ಟಿಯವರನ್ನು ಸಚಿವರನ್ನಾಗಿ ಮಾಡಿದರೆ, ಉಳಿದ ಸದಸ್ಯರು ಅಸಮಾಧಾನಗೊಳ್ಳುವ ಸಾಧ್ಯತೆ ಇದೆ ಎಂದು ಜೆಡಿಎಸ್‌ ಮೂಲಗಳು ತಿಳಿಸಿವೆ.

ಉಪಸಭಾಧ್ಯಕ್ಷ ಸ್ಥಾನಕ್ಕೆ ಎಚ್‌.ಕೆ.ಕುಮಾರಸ್ವಾಮಿ?

ವಿಧಾನಸಭೆ ಉಪಸಭಾಧ್ಯಕ್ಷ ಸ್ಥಾನಕ್ಕೆ ಜೆಡಿಎಸ್‌ ಎಚ್‌.ಕೆ.ಕುಮಾರಸ್ವಾಮಿ ಅಥವಾ ಎ.ಟಿ.ರಾಮಸ್ವಾಮಿ ಅವರ ಪೈಕಿ ಒಬ್ಬರನ್ನು ಆಯ್ಕೆ ಮಾಡುವ ಸಾಧ್ಯತೆ ಇದೆ.

ಉಪಸಭಾಧ್ಯಕ್ಷ ಹುದ್ದೆಗೆ ಇದೇ 6 ರಂದು ಚುನಾವಣೆ ನಡೆಸಲು ವಿಧಾನಸಭೆ ಸಚಿವಾಲಯ ದಿನಾಂಕ ನಿಗದಿ ಮಾಡಿದೆ.

ಜೆಡಿಎಸ್‌ ಮೂಲಗಳ ಪ್ರಕಾರ, ಎಚ್‌.ಕೆ.ಕುಮಾರಸ್ವಾಮಿ ದಲಿತ ಸಮುದಾಯಕ್ಕೆ ಸೇರಿರುವುದರಿಂದ ಅವರ ಬಗ್ಗೆ ವರಿಷ್ಠರು ಒಲವು ಹೊಂದಿದ್ದಾರೆ. ಆದರೆ, ಸಚಿವ ಸ್ಥಾನದ ಆಕಾಂಕ್ಷಿಯಾಗಿರುವ ಎ.ಟಿ.ರಾಮಸ್ವಾಮಿ ಅವರನ್ನು ಸಮಾಧಾನ ಪಡಿಸಲು ಕಡೆ ಕ್ಷಣದಲ್ಲಿ ವರಿಷ್ಠರು ಮನಸ್ಸು ಬದಲಿಸಿದರೂ ಅಚ್ಚರಿ ಇಲ್ಲ.

ಎ.ಟಿ.ರಾಮಸ್ವಾಮಿ ಖಡಕ್‌ ಮಾತಿಗೆ ಹೆಸರಾದವರು. ಮಂತ್ರಿ ಸ್ಥಾನ ಸಿಗದ ಕಾರಣ ವಿಧಾನಸಭೆಯಲ್ಲಿ ಪಕ್ಷಕ್ಕೆ ಮುಜುಗರ ತರುವ ಮಾತುಗಳನ್ನು ಆಡಬಹುದು. ಇದನ್ನು ತಪ್ಪಿಸಲು, ಉತ್ಸವ ಮೂರ್ತಿಯಂತಿರುವ ಉಪಸಭಾಧ್ಯಕ್ಷರ ಕೊಟ್ಟು ಕೂರಿಸಿದರೆ, ಬೀಸುವ ದೊಣ್ಣೆ ತಪ್ಪಿಸಿಕೊಂಡಂತೆ ಆಗಬಹುದು ಎಂಬ ಚಿಂತನೆಯೂ ಪಕ್ಷದ ವರಿಷ್ಠರಲ್ಲಿದೆ ಎಂದು ಜೆಡಿಎಸ್‌ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT