ಕೃಷಿ ಭೂಮಿ ಖರೀದಿ ನಿರ್ಬಂಧ ಸಡಿಲ: ಹೊರಟ್ಟಿ ಅಸಮಾಧಾನ

7

ಕೃಷಿ ಭೂಮಿ ಖರೀದಿ ನಿರ್ಬಂಧ ಸಡಿಲ: ಹೊರಟ್ಟಿ ಅಸಮಾಧಾನ

Published:
Updated:
Deccan Herald

ಹುಬ್ಬಳ್ಳಿ: ರೈತರಲ್ಲದವರು ಕೃಷಿ ಭೂಮಿ ಖರೀದಿಸಲು ಇದ್ದ ನಿರ್ಬಂಧಗಳನ್ನು ತೆಗೆದುಹಾಕಲು ಮುಂದಾಗಿರುವ ರಾಜ್ಯ ಸರ್ಕಾರದ ಕ್ರಮಕ್ಕೆ ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇಲ್ಲಿನ ಕೆಸಿಸಿಐ ಸಭಾಂಗಣದಲ್ಲಿ ಧಾರವಾಡ ಜಿಲ್ಲಾ ಸಹಕಾರಿ ಬ್ಯಾಂಕ್‌ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಅಧ್ಯಕ್ಷರು ಮತ್ತು ಮುಖ್ಯ ಕಾರ್ಯನಿರ್ವಾಹಕರಿಗೆ ಶನಿವಾರ ಏರ್ಪಡಿಸಿದ್ದ ತರಬೇತಿ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕೃಷಿಯೇತರ ಆದಾಯ ಹೊಂದಿರುವವರು ಕೃಷಿ ಭೂಮಿ ಖರೀದಿಸಲು ಸದ್ಯ ಇರುವ ₹ 25 ಲಕ್ಷ ಆದಾಯ ಮಿತಿಯನ್ನು ಯಾವುದೇ ಕಾರಣಕ್ಕೂ ಹೆಚ್ಚಳ ಮಾಡದಂತೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿಗೆ ಪತ್ರ ಬರೆಯುವುದಾಗಿ ಅವರು ಹೇಳಿದರು.

ಈಗಿರುವ ನಿರ್ಬಂಧವನ್ನು ತೆಗೆದುಹಾಕಿದರೆ ರೈತರ ಹೊಲ ರಿಯಲ್‌ ಎಸ್ಟೇಟ್‌ ದಂಧೆಕೋರರ ಪಾಲಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದ ಅವರು, ರೈತರ ಹೊಲವನ್ನು ರೈತರು ಮಾತ್ರ ಖರೀದಿಸಲು ಅವಕಾಶವಿರುವಂತಾಗಬೇಕು ಎಂದರು.

ಬಿಡಿಎ ಬಂದ್‌ ಮಾಡಿ:

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ)ವನ್ನು ತಕ್ಷಣ ಬಂದ್‌ ಮಾಡುವಂತೆ ಹೊರಟ್ಟಿ ಅವರು ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.

ಬೆಂಗಳೂರು ಸುತ್ತಮುತ್ತಲಿನ ರೈತರ ಭೂಮಿಯನ್ನು ವಶಪಡಿಸಿಕೊಂಡು ಸಿದ್ಧಪಡಿಸುವ ನಿವೇಶನಗಳಲ್ಲಿ ಶೇ 75ರಷ್ಟು ದೇಶ, ವಿದೇಶದ ಉದ್ಯಮಿಗಳ ಪಾಲಾಗುತ್ತಿದೆ. ಸ್ಥಳೀಯರಿಗೆ ಲಭಿಸುತ್ತಿಲ್ಲ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !