ಅಂಬೇಡ್ಕರ್‌ ಅರ್ಥಶಾಸ್ತ್ರ ವಿ.ವಿ ಮಸೂದೆ :ರಾಜಭವನ–ಸರ್ಕಾರ ಸಂಘರ್ಷ

7
ಅಂಕಿತಕ್ಕೆ ರಾಜ್ಯಪಾಲ ತಕರಾರು

ಅಂಬೇಡ್ಕರ್‌ ಅರ್ಥಶಾಸ್ತ್ರ ವಿ.ವಿ ಮಸೂದೆ :ರಾಜಭವನ–ಸರ್ಕಾರ ಸಂಘರ್ಷ

Published:
Updated:
Prajavani

ಬೆಂಗಳೂರು: ಮೈತ್ರಿ ಸರ್ಕಾರದ ಇಬ್ಬರು ಸಚಿವರು ಮನವೊಲಿಸಿದ ಬಳಿಕವೂ ಬೆಂಗಳೂರಿನ ‘ಡಾ.ಬಿ.ಆರ್‌.ಅಂಬೇಡ್ಕರ್‌ ಅರ್ಥಶಾಸ್ತ್ರ ವಿಶ್ವವಿದ್ಯಾಲಯ ಮಸೂದೆ–2018’ಕ್ಕೆ ಸಹಿ ಹಾಕಲು ರಾಜ್ಯಪಾಲ ವಜುಭಾಯಿ ವಾಲಾ ತಕರಾರು ಎತ್ತಿದ್ದಾರೆ. ಈ ಮೂಲಕ ರಾಜ್ಯ ಸರ್ಕಾರ ಹಾಗೂ ರಾಜ್ಯಪಾಲರ ಮಧ್ಯೆ ಸಂಘರ್ಷ ಆರಂಭವಾದಂತಾಗಿದೆ.

2018ರ ಫೆಬ್ರುವರಿಯಲ್ಲಿ ನಡೆದ ವಿಧಾನಮಂಡಲ ಅಧಿವೇಶನದಲ್ಲಿ ಈ ಮಸೂದೆಗೆ ಉಭಯ ಸದನಗಳಲ್ಲಿ ಅಂಗೀಕಾರ ನೀಡಲಾಗಿತ್ತು. ಬಳಿಕ ಒಪ್ಪಿಗೆಗೆ ರಾಜ್ಯಪಾಲರಿಗೆ ಕಳುಹಿಸಲಾಗಿತ್ತು. ರಾಜ್ಯಪಾಲರನ್ನು ಅಕ್ಟೋಬರ್ 26ರಂದು ಭೇಟಿ ಮಾಡಿದ್ದ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಅವರು ಮಸೂದೆಗೆ ಒಪ್ಪಿಗೆ ನೀಡುವಂತೆ ಕೋರಿದ್ದರು. ರಾಜ್ಯಪಾಲರು ಸಕಾರಾತ್ಮಕ ಪ್ರತಿಕ್ರಿಯೆ ನೀಡಿರಲಿಲ್ಲ.

ನಾಲ್ಕು ದಿನಗಳ ಹಿಂದೆ ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್‌ ಖರ್ಗೆ ಅವರು ವಜುಭಾಯಿ ವಾಲಾ ಅವರನ್ನು ಭೇಟಿ ಮಾಡಿ ಮನವೊಲಿಸುವ ಯತ್ನ ಮಾಡಿದರು. ಕುಲಪತಿ ನೇಮಕದ ಅಧಿಕಾರವನ್ನು ಕಿತ್ತುಕೊಳ್ಳಲು ಮುಂದಾಗಿರುವ ರಾಜ್ಯ ಸರ್ಕಾರದ ಧೋರಣೆ ಬಗ್ಗೆ ಪ್ರಮುಖವಾಗಿ ಆಕ್ಷೇಪ ಎತ್ತಿದರು ಎಂದು ಮೂಲಗಳು ತಿಳಿಸಿವೆ.

ಕುಲಪತಿ ಆಯ್ಕೆ ಹೇಗೆ: ಕುಲಪತಿ ಅವಧಿ ಮುಕ್ತಾಯಗೊಳ್ಳುವ ಮೂರು ತಿಂಗಳ ಮೊದಲು ರಾಜ್ಯ ಸರ್ಕಾರ ಶೋಧನಾ ಸಮಿತಿ ರಚಿಸಬೇಕು. ಈ ಸಮಿತಿಯಲ್ಲಿ ಐವರು ಸದಸ್ಯರು ಇರಬೇಕು. ಇದರಲ್ಲಿ ಒಬ್ಬರನ್ನು ರಾಜ್ಯಪಾಲರು, ಒಬ್ಬರನ್ನು ಯುಜಿಸಿ, ಇಬ್ಬರನ್ನು ರಾಜ್ಯ ಸರ್ಕಾರ ಹಾಗೂ ಒಬ್ಬರನ್ನು ಕಾರ್ಯನಿರ್ವಾಹಕ ಪರಿಷತ್‌ ನಾಮನಿರ್ದೇಶನ ಮಾಡಬೇಕು. ಮೂರು ಸದಸ್ಯರು ಸಭೆಗೆ ಹಾಜರಾದರೂ ಕೋರಂ ಸಂಪೂರ್ಣ ಎಂದು ಪರಿಗಣಿಸಲಾಗುವುದು ಎಂದು ಮಸೂದೆಯಲ್ಲಿ ತಿಳಿಸಲಾಗಿದೆ.

‘ಈ ಸಮಿತಿ ಶಿಫಾರಸು ಮಾಡಿದ ಮೂವರ ಹೆಸರಿನ ಪೈಕಿ ಒಬ್ಬರ ಹೆಸರನ್ನು ರಾಜ್ಯ ಸರ್ಕಾರ ರಾಜ್ಯಪಾಲರಿಗೆ ಕಳುಹಿಸಿಕೊಡಬೇಕು.  ಹೆಸರು ತೃಪ್ತಿಕರವಾಗಿಲ್ಲದಿದ್ದರೆ ರಾಜ್ಯಪಾಲರು ವಾಪಸ್‌ ಕಳುಹಿಸಬಹುದು. ಎರಡನೆ ಬಾರಿ ಶಿಫಾರಸು ಮಾಡಿದಲ್ಲಿ 30 ದಿನದೊಳಗೆ ರಾಜ್ಯಪಾಲರು ಕುಲಪತಿ ನೇಮಕ ಮಾಡಲೇಬೇಕು’ ಎಂದು ಈ ಮಸೂದೆಯಲ್ಲಿ ವಿವರಿಸಲಾಗಿದೆ.

ಈಗಿರುವ ವಿಶ್ವವಿದ್ಯಾಲಯದ ಕಾಯ್ದೆ ಅನುಸಾರ ಕುಲಪತಿ ನೇಮಕಕ್ಕೆ ಸರ್ಕಾರ ರಚಿಸುವ ಶೋಧನಾ ಸಮಿತಿ ಶಿಫಾರಸು ಮಾಡಿದ ಮೂರು ಹೆಸರುಗಳನ್ನು ರಾಜ್ಯಪಾಲರಿಗೆ ಕಳುಹಿಸಲಾಗುತ್ತಿತ್ತು. ಈ ಪೈಕಿ ಒಬ್ಬರನ್ನು ನೇಮಕ ಮಾಡುವ ಪರಮಾಧಿಕಾರ ರಾಜ್ಯಪಾಲರಿಗೆ ಇದೆ. ಈ ಮಸೂದೆಯಲ್ಲಿ ಅವರ ಅಧಿಕಾರವನ್ನು ಕಿತ್ತುಕೊಳ್ಳಲಾಗಿದೆ. 

ವಿವಿ ಮಸೂದೆಗೂ ಅಂಗೀಕಾರ ಇಲ್ಲ: ವಿಶ್ವವಿದ್ಯಾಲಯಗಳ ನೇಮಕಾತಿ ಅಧಿಕಾರ ಮತ್ತು ಕಾಮಗಾರಿ ಟೆಂಡರ್ ಕರೆಯುವ ಅಧಿಕಾರಗಳಿಗೆ ಕತ್ತರಿ ಹಾಕುವ ಕರ್ನಾಟಕ ವಿಶ್ವವಿದ್ಯಾಲಯ ಮಸೂದೆಗೂ ಸಹ ರಾಜ್ಯಪಾಲರು ಅಂಗೀಕಾರ ನೀಡಿಲ್ಲ. ಇದಕ್ಕೆ ಅಂಗೀಕಾರ ನೀಡುವಂತೆಜಿ.ಟಿ.ದೇವೇಗೌಡ ಅವರು ಅಕ್ಟೋಬರ್‌ನಲ್ಲಿ ರಾಜ್ಯಪಾಲರಿಗೆ ಮನವಿ ಮಾಡಿದ್ದರು.

ಬೇಸ್‌ ಕಾರ್ಯಶೈಲಿ: ‍ಪ್ರಿಯಾಂಕ್‌ ಕೋಪ

‘ಲಂಡನ್‌ ಸ್ಕೂಲ್‌ ಆಫ್‌ ಎಕನಾಮಿಕ್ಸ್‌’ ಮಾದರಿಯಲ್ಲೇ ‘ಅಂಬೇಡ್ಕರ್‌ ಸ್ಕೂಲ್ ಆಫ್‌ ಎಕನಾಮಿಕ್ಸ್‌ (ಬೇಸ್‌)’ ಬೆಳೆಯಲಿದೆ ಎಂದು ರಾಜ್ಯ ಸರ್ಕಾರ ಈ ಹಿಂದೆ ಪ್ರಕಟಿಸಿತ್ತು. ಸಂಸ್ಥೆ ಈಗ ಚೌಕಟ್ಟು ಬಿಟ್ಟು ಸಾಮಾನ್ಯ ಸಂಸ್ಥೆಯ ಮಾದರಿಯಲ್ಲಿ ಮುನ್ನಡೆಯುತ್ತಿದೆ ಎಂದು ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್‌ ಖರ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬೇಸ್‌ ಸದ್ಯ ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಕ್ಯಾಂಪಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದೆ. ಸಂಸ್ಥೆಯ ಕ್ಯಾಂಪಸ್‌ಗೆ ಜ್ಞಾನಭಾರತಿಯಲ್ಲಿ 43 ಎಕರೆ ನೀಡಲಾಗಿದೆ. ಮೊದಲ ಬ್ಯಾಚ್‌ನಲ್ಲಿ 50 ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲಾಗಿದೆ.  ‘ಲಂಡನ್‌ ಸ್ಕೂಲ್‌ ಆಫ್ ಎಕನಾಮಿಕ್ಸ್‌ ಮಾದರಿಯಲ್ಲಿ ಬೆಳೆಯಬೇಕು ಎಂಬುದು ನಮ್ಮ ಆಕಾಂಕ್ಷೆ. ಇದಕ್ಕಾಗಿ ಜಾಗತಿಕ ಸಲಹೆಗಾರರ ನೆರವು ಪಡೆಯಲಾಗುತ್ತದೆ. ಈ ಪ್ರಕ್ರಿಯೆ ಕೆಲವೇ ದಿನಗಳಲ್ಲಿ ಪೂರ್ಣಗೊಳ್ಳಲಿದೆ. ಮೂರು ವರ್ಷಗಳಲ್ಲಿ ಜಾಗತಿಕ ಮಟ್ಟದ ಸಂಸ್ಥೆಯಾಗಬೇಕು ಎಂಬುದು ನಮ್ಮ ಗುರಿ’ ಎಂದು ಪ್ರಿಯಾಂಕ್‌ ಖರ್ಗೆ ‘ಪ್ರಜಾವಾಣಿ’ಗೆ ತಿಳಿಸಿದರು.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !