ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಟರಿಚಾಲಿತ ವಾಹನ ಪಲ್ಟಿ, ಆರು ಜನಕ್ಕೆ ಗಾಯ

ಹಂಪಿ ವಿಜಯ ವಿಠಲ ದೇವಸ್ಥಾನದ ಬಳಿ ಜರುಗಿದ ಘಟನೆ
Last Updated 12 ನವೆಂಬರ್ 2019, 16:30 IST
ಅಕ್ಷರ ಗಾತ್ರ

ಹೊಸಪೇಟೆ: ರಸ್ತೆ ಬದಿಯ ಸಣ್ಣ ಮಣ್ಣಿನ ದಿಬ್ಬದ ಮೇಲೆ ವಾಹನ ಹತ್ತಿ, ಚಾಲಕಿ ನಿಯಂತ್ರಣ ಕಳೆದುಕೊಂಡಿದ್ದರಿಂದ ತಾಲ್ಲೂಕಿನ ಹಂಪಿ ವಿಜಯ ವಿಠಲ ದೇಗುಲದ ಬಳಿ ಮಂಗಳವಾರ ಬ್ಯಾಟರಿಚಾಲಿತ ವಾಹನ ಪಲ್ಟಿಯಾಗಿದ್ದು, ಚಾಲಕಿ ಸೇರಿದಂತೆ ಆರು ಜನ ಗಾಯಗೊಂಡಿದ್ದಾರೆ.

ವಿಜಯ ವಿಠಲ ದೇವಸ್ಥಾನದಿಂದ ಮರಳುವ ವೇಳೆ ಈ ಘಟನೆ ನಡೆದಿದೆ. ಗಾಯಗೊಂಡವರೆಲ್ಲ ಆಂಧ್ರ ಪ್ರದೇಶದ ಕಡಪ ಜಿಲ್ಲೆಯ ಆರ್‌.ಎಸ್‌. ಕೊಂಡಪುರ ಗ್ರಾಮದವರು. ನಾಲ್ಕು ವರ್ಷದ ಬಾಲಕಿ ರಿತಿಕಾ ರೆಡ್ಡಿ, ರಾಮಾಂಜಿನಮ್ಮ, ಅರುಣ, ಲಕ್ಷ್ಮಿದೇವಿ, ಶಾರದಾ ಹಾಗೂ ವಾಹನದ ಚಾಲಕಿ ಭಾಗ್ಯಲಕ್ಷ್ಮಿ ಗಾಯಗೊಂಡಿದ್ದಾರೆ. ಅವರಿಗೆ ನಗರದ ನೂರು ಹಾಸಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.

‘ವಾಹನ ಮಣ್ಣಿನ ದಿಬ್ಬ ಹತ್ತಿದ್ದರಿಂದ ಚಾಲಕಿ ನಿಯಂತ್ರಣ ಕಳೆದುಕೊಂಡಿದ್ದರಿಂದ ಘಟನೆ ಸಂಭವಿಸಿದೆ. ಪ್ರವಾಸಿಗರಿಗೆ ಸಣ್ಣಪುಟ್ಟ ತರಚಿದ ಗಾಯಗಳಾಗಿದ್ದು, ಯಾವುದೇ ಅಪಾಯವಿಲ್ಲ’ ಎಂದು ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಯೋಗಕ್ಷೇಮ ವಿಚಾರಿಸಿದ ಹಂಪಿ ವಿಶ್ವ ಪಾರಂಪರಿಕ ಪ್ರದೇಶ ನಿರ್ವಹಣಾ ಪ್ರಾಧಿಕಾರದ ಆಯುಕ್ತ ಪಿ.ಎನ್‌. ಲೋಕೇಶ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಸಂರಕ್ಷಿತ ಸ್ಮಾರಕವಾಗಿರುವ ಹಂಪಿ ವಿಜಯ ವಿಠಲ ದೇವಸ್ಥಾನವು ವಾಹನಗಳು ಉಗುಳುವ ಹೊಳೆಯಿಂದ ಕಳೆಗುಂದದಿರಲಿ ಎಂದು ಪ್ರಾಧಿಕಾರವು ಬ್ಯಾಟರಿಚಾಲಿತ ವಾಹನಗಳ ವ್ಯವಸ್ಥೆ ಮಾಡಿದೆ. ಮುಖ್ಯರಸ್ತೆಯಿಂದ ದೇವಸ್ಥಾನಕ್ಕೆ ಪ್ರವಾಸಿಗರು ಒಂದು ಕಾಲ್ನಡಿಗೆಯಲ್ಲೇ ಹೋಗಬೇಕು ಅಥವಾ ಬ್ಯಾಟರಿಚಾಲಿತ ವಾಹನಗಳಲ್ಲಿ ಹೋಗಬೇಕಿದೆ.

ಪ್ರಾಧಿಕಾರದ ಬಳಿ ಒಟ್ಟು 26 ಬ್ಯಾಟರಿ ವಾಹನಗಳಿದ್ದು, ನಿರ್ವಹಣೆ ಇಲ್ಲದೆ 20 ವಾಹನಗಳು ಮೂಲೆ ಸೇರಿವೆ. ನಿತ್ಯ ಆರು ವಾಹನಗಳಷ್ಟೇ ಓಡಾಡುತ್ತಿವೆ. ಅವುಗಳ ನಿರ್ವಹಣೆ ಕೂಡ ಅಷ್ಟಕಷ್ಟೆ. ಸಾಲು ಸಾಲು ರಜಾ ದಿನಗಳು ಬಂದಾಗ ಪ್ರವಾಸಿಗರ ದಟ್ಟಣೆ ಹೆಚ್ಚಾಗಿರುತ್ತದೆ. ಈ ವೇಳೆ ಬ್ಯಾಟರಿಚಾಲಿತ ವಾಹನಗಳಿಗೆ ಪ್ರವಾಸಿಗರು ಗಂಟೆಗಟ್ಟಲೇ ಸಾಲಿನಲ್ಲಿ ಕಾದು ನಿಲ್ಲಬೇಕಾದ ಪರಿಸ್ಥಿತಿ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT