ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಗದ ‘ಇಂಧನ’: ಬಿಎಸ್‌ವೈ – ಈಶ್ವರಪ್ಪ ಮಧ್ಯೆ ಮುಸುಕಿನ ಗುದ್ದಾಟ

Last Updated 1 ಮಾರ್ಚ್ 2020, 7:25 IST
ಅಕ್ಷರ ಗಾತ್ರ

ಬೆಂಗಳೂರು: ಒಂದು ಕಾಲದಲ್ಲಿ ‘ಆಪ್ತ ಮಿತ್ರ’ರಾಗಿದ್ದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಮಧ್ಯೆ ಮುಸುಕಿನ ಗುದ್ದಾಟಕ್ಕೆ ಖಾತೆ ಕ್ಯಾತೆ ಕಾರಣ ಎಂಬ ಗಂಭೀರ ಚರ್ಚೆ ಪಕ್ಷದಲ್ಲಿ ಶುರುವಾಗಿದೆ.

ಯಡಿಯೂರಪ್ಪ ತವರು ಜಿಲ್ಲೆ ಶಿವಮೊಗ್ಗದಲ್ಲಿ ಕಾರ್ಯಕ್ರಮ ಹಮ್ಮಿಕೊಂಡಾಗಲೆಲ್ಲ ಆ ಜಿಲ್ಲೆಯ ಉಸ್ತುವಾರಿ ಸಚಿವರೂ ಆಗಿರುವ ಈಶ್ವರಪ್ಪ ಗೈರಾಗಿರುವುದು ಹಾಗೂ ಬೆಂಗಳೂರಿನಲ್ಲಿ ನಡೆದ ಮುಖ್ಯಮಂತ್ರಿಯವರ 77ನೇ ಜನ್ಮದಿನದ ಸಮಾರಂಭದಲ್ಲಿ ಕಾಣಿಸಿಕೊಳ್ಳದಿರುವುದು ಈ ಚರ್ಚೆಯನ್ನು ಮುನ್ನೆಲೆಗೆ ತಂದಿದೆ.

‘ಶಿವಮೊಗ್ಗದಲ್ಲಿ ನಡೆದ ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳದೇ ಇರಲು ಅನಾರೋಗ್ಯ ಕಾರಣ. ಜನ್ಮದಿನದಲ್ಲಿ ಭಾಗವಹಿಸದೇ ಇದ್ದರೂ ಯಡಿಯೂರಪ್ಪ ಅವರಿಗೆ ಒಳ್ಳೆಯದಾಗಲಿ ಎಂದು ಕೋರಿ ತಮ್ಮ ಕ್ಷೇತ್ರದ ದೇವಸ್ಥಾನಗಳಲ್ಲಿ ಪೂಜೆ ಮಾಡಿಸಿದ್ದೇನೆ. ವೈಮನಸ್ಸು ಎಂಬುದು ಕಲ್ಪಿತ’ ಎಂದು ಈಶ್ವರಪ್ಪ ಸ್ಪಷ್ಟನೆಯನ್ನು ಕೊಟ್ಟಿದ್ದಾರೆ. 2018ರ ವಿಧಾನಸಭೆ ಚುನಾವಣೆಗೆ ಮುನ್ನ ನಡೆದ ವಿದ್ಯಮಾನಗಳು, ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ನ ಚಟುವಟಿಕೆಗಳನ್ನು ಹಿನ್ನೆಲೆಯೊಳಗಿಟ್ಟು ನೋಡಿದರೆ ಈಶ್ವರಪ್ಪ ‘ಗೈರು’ ಬೇರೆಯದೇ ಆದ ಸಂಗತಿಗಳ ಕಡೆ ಹೊರಳಿಕೊಳ್ಳುತ್ತದೆ’ ಎನ್ನುತ್ತಾರೆ ಪಕ್ಷದ ನಾಯಕರು.

‘ಖಾತೆ ಹಂಚಿಕೆ ಸಂದರ್ಭದಲ್ಲಿ ಇಂಧನ ಖಾತೆ ಬೇಕು ಎಂದು ಈಶ್ವರಪ್ಪ ಬೇಡಿಕೆ ಇಟ್ಟಿದ್ದರು. ಅನ್ಯಪಕ್ಷದಿಂದ ಬಂದವರಿಗೆ ಉತ್ತಮ ಖಾತೆ ನೀಡಬೇಕಾಗುತ್ತದೆ. ಈಗ ಕೇಳಿದ ಖಾತೆ ಕೊಡಲು ಕಷ್ಟ’ ಎಂದು ಯಡಿಯೂರಪ್ಪ ನಯವಾಗಿಯೇ ಹೇಳಿದ್ದರು. ಸಂಪುಟ ವಿಸ್ತರಣೆ ಬಳಿಕ ಇಂಧನ ಖಾತೆಯನ್ನು ಯಡಿಯೂರಪ್ಪನವರೇ ಇಟ್ಟುಕೊಂಡಿದ್ದು, ಈಗಲಾದರೂ ಬದಲಾವಣೆ ಮಾಡಿ ಎಂದು ಹಕ್ಕೊತ್ತಾಯ ಮಂಡಿಸಲು ಈಶ್ವರಪ್ಪ ಮುಂದಾಗಿದ್ದಾರೆ. ಅದೇ ಕಾರಣಕ್ಕೆ ಮುಖ್ಯಮಂತ್ರಿ ಜತೆ ಗುರುತಿಸಿಕೊಳ್ಳದೇ ಅಸಮಾಧಾನ ಹೊರಹಾಕುತ್ತಿದ್ದಾರೆ’ ಎಂದು ನಾಯಕರೊಬ್ಬರು ಹೇಳಿದರು.

ಸೋಮಣ್ಣ ಅತೃಪ್ತಿ: ತಮಗೆ ನಗರಾಭಿವೃದ್ಧಿ ಖಾತೆ ಬೇಕು ಎಂದು ವಿ.ಸೋಮಣ್ಣ ಕೂಡ ಮನವಿ ಮಾಡಿದ್ದಾರೆ. ಬೈರತಿ ಬಸವರಾಜು ಅವರಿಗೆ ಕೊಟ್ಟಿರುವುದಕ್ಕೆ ಸೋಮಣ್ಣ ತುಸು ಅತೃಪ್ತಿ ಹೊಂದಿದ್ದಾರೆ ಎಂದು ಅವರು ವಿವರಿಸಿದರು.

**
ರಾಜ್ಯದ ಮುಕ್ಕಾಲು ಪಾಲು ಪ್ರದೇಶದ ಅಭಿವೃದ್ಧಿಗೆ ಆಸರೆಯಾಗಿರುವ ಗ್ರಾಮೀಣಾಭಿವೃದ್ಧಿ ಖಾತೆ ನನಗೆ ತುಂಬಾ ಇಷ್ಟದ ಖಾತೆ. ನಾನು ಇಂಧನ ಖಾತೆ ಕೇಳಿಲ್ಲ.
–ಕೆ.ಎಸ್. ಈಶ್ವರಪ್ಪ, ಗ್ರಾಮೀಣಾಭಿವೃದ್ಧಿ ಸಚಿವ

**

ಪಾಲಿಗೆ ಬಂದಿದ್ದು ಪಂಚಾಮೃತ ಎಂದು ಸ್ವೀಕರಿಸಿ ಒಳ್ಳೆಯ ಕೆಲಸ ಮಾಡಲು ಶ್ರಮಿಸುತ್ತಿದ್ದೇನೆ. ಖಾತೆ ಬದಲಾವಣೆ ಅಥವಾ ನಗರಾಭಿವೃದ್ಧಿ ಖಾತೆ ಬೇಕೆಂದು ಕೇಳಿಲ್ಲ.
–ವಿ. ಸೋಮಣ್ಣ, ವಸತಿ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT