ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕಸ ವಿಂಗಡಿಸಿ ನೀಡದಿದ್ದರೆ ದಂಡ’

ಎನ್‌ಜಿಟಿ ರಾಜ್ಯ ಮಟ್ಟದ ಸಮಿತಿ ಅಧ್ಯಕ್ಷ ನ್ಯಾಯಮೂರ್ತಿ ಅಡಿ ಎಚ್ಚರಿಕೆ
Last Updated 27 ಮೇ 2019, 19:56 IST
ಅಕ್ಷರ ಗಾತ್ರ

ಬೆಂಗಳೂರು: ‘ಹಸಿ ಮತ್ತು ಒಣ ಕಸವನ್ನು ವಿಂಗಡಣೆ ಮಾಡುವುದು ಜನರ ಕರ್ತವ್ಯ. ಅದನ್ನು ಮಾಡದಿದ್ದರೆ ದಂಡ ವಿಧಿಸುತ್ತೇವೆ’ ಎಂದುರಾಷ್ಟ್ರೀಯ ಹಸಿರು ನ್ಯಾಯ ಮಂಡಳಿಯ (ಎನ್‌ಜಿಟಿ) ರಾಜ್ಯ ಮಟ್ಟದ ಸಮಿತಿಯ ಅಧ್ಯಕ್ಷ ನ್ಯಾಯಮೂರ್ತಿ ಸುಭಾಷ್ ಬಿ. ಅಡಿ ಎಚ್ಚರಿಸಿದರು.

ಎನ್‌ಜಿಟಿ ಮತ್ತು ಬಿಬಿಎಂಪಿ ಪೂರ್ವ ವಲಯದಿಂದ ನಗರದಲ್ಲಿ ಸೋಮವಾರ ಆಯೋಜಿಸಿದ್ದ ‌ಘನತಾಜ್ಯ ನಿರ್ವಹಣೆಯ ಪಾಲುದಾರರ ಸಭೆಯಲ್ಲಿ ಅವರು ಮಾತನಾಡಿದರು.

‘ನಗರದಲ್ಲಿ ಪ್ರತಿದಿನ 5,600 ಟನ್‌ ಕಸ ಉತ್ಪತ್ತಿಯಾಗುತ್ತಿದೆ. 2018–19ನೇ ಸಾಲಿನಲ್ಲಿ ಬಿಬಿಎಂಪಿಯು ಕಸ ಸಂಗ್ರಹ ಮತ್ತು ಸಾಗಣೆಗೆ ₹821 ಕೋಟಿ ಖರ್ಚು ಮಾಡಿದೆ. ಹಿಂದಿನ ಸಾಲಿಗೆ ಹೋಲಿಸಿದರೆ ₹100 ಕೋಟಿ ಹೆಚ್ಚಾಗಿದೆ’ ಎಂದು ಹೇಳಿದರು.

‘ಇದಲ್ಲದೇ ಪೌರಕಾರ್ಮಿಕರಿಗೆ ನೀಡುವ ವೇತನ ಹಾಗೂ ಇತರೆ ಖರ್ಚು ಸೇರಿ ₹1 ಸಾವಿರ ಕೋಟಿ ದಾಟಲಿದೆ. ಆದರೂ, ಶೇ 23ರಷ್ಟು ಮಾತ್ರ ಬೇರ್ಪಡಿಸಿದ ಕಸ ಸಂಗ್ರಹವಾಗುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಹಸಿ ಮತ್ತು ಒಣ ಕಸ ಒಟ್ಟಿಗೆ ಭೂಭರ್ತಿ ಘಟಕಗಳನ್ನು ಸೇರುತ್ತಿವೆ. ಅಲ್ಲಿ ದುರ್ವಾಸನೆ ಹೆಚ್ಚಾಗುತ್ತಿದೆ. ಘಟಕದಿಂದ ಹೊರಬರುವ ವಿಷಪೂರಿತ ದ್ರವ ಹರಿಯುವ ನೀರು ಮಾತ್ರವಲ್ಲ ಅಂತರ್ಜಲವನ್ನೂ ಸೇರುತ್ತಿದೆ. ಇದು ಆ ಭಾಗದ ಜನರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಇದಕ್ಕೆ ಯಾರು ಜವಾಬ್ದಾರರು’ ಎಂದು ಪ್ರಶ್ನಿಸಿದರು.

‘ಬಿಬಿಎಂಪಿಯನ್ನೇ ದೂರುವುದರಿಂದ ಪ್ರಯೋಜನ ಇಲ್ಲ. ಸಾರ್ವಜನಿಕರು ಕೂಡ ಸ್ಪಂದಿಸಬೇಕು. ಜನಪ್ರತಿನಿಧಿಗಳು ತಮ್ಮ ಜವಾಬ್ದಾರಿ ಅರಿಯಬೇಕು’ ಎಂದರು.

‘‌ಘನತಾಜ್ಯ ವಿಲೇವಾರಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ2016ರಲ್ಲಿ ನಿಯಮಾವಳಿಗಳನ್ನು ರೂಪಿಸಿದೆ. ಅದರ ಪ್ರಕಾರ, ಹಸಿ ಕಸವನ್ನು ಆದಷ್ಟು ಮನೆಯಲ್ಲೇ ಕಾಂಪೋಸ್ಟ್‌ ಮಾಡಬೇಕು. ಆಗದಿದ್ದರೆ ಕಸ ಸಂಗ್ರಹಿಸಲು ಬರುವವರಿಗೆ ಹಸಿ, ಒಣ ಮತ್ತು ಹಾನಿಕಾರಕ ಕಸ ಎಂದು ಮೂರು ಭಾಗವಾಗಿ ವಿಂಗಡಿಸಿ ನೀಡಬೇಕು. ಇಲ್ಲದಿದ್ದರೆ ದಂಡಕ್ಕೆ ಅರ್ಹರಾಗುತ್ತೀರಿ’ ಎಂದು ಎಚ್ಚರಿಸಿದರು.

‘ಖಾಲಿ ನಿವೇಶನಗಳಲ್ಲಿ ಕಸ ಸುರಿಯಲು ಅವಕಾಶ ಆಗದಂತೆ ಸ್ವಚ್ಛವಾಗಿ ಇಟ್ಟುಕೊಳ್ಳುವುದು ಕೂಡ ಮಾಲೀಕರ ಜವಾಬ್ದಾರಿ. ಈ ಸಂಬಂಧ ಬಿಬಿಎಂಪಿ ಈಗಾಗಲೇ ಸುತ್ತೋಲೆ ಹೊರಡಿಸಿದೆ’ ಎಂದರು.

ಬೈಲಾ ತರಬೇಕು: ವಿಂಗಡಿಸಿದ ಕಸ ನೀಡದವರಿಗೆ ದಂಡ ಹಾಕುವ ಸಂಬಂಧ ಬಿಬಿಎಂಪಿ ಪರಿಣಾಮಕಾರಿ ಬೈಲಾ ಜಾರಿಗೆ ತರಬೇಕು ಎಂದು ಸುಭಾಷ್ ಬಿ. ಅಡಿ ಸಲಹೆ ನೀಡಿದರು.

‘ಕಸ ಸಂಗ್ರಹಿಸಲು ಹೋಗುವ ವಾಹನಗಳಿಗೆ ಜಿಪಿಎಸ್‌ ಅಳವಡಿಸಿ ನಿಗಾ ವಹಿಸಬೇಕು. ಆಯಾ ವಾರ್ಡ್‌ನ ಕಸವನ್ನು ಅಲ್ಲಿಯೇ ಕಾಂಪೋಸ್ಟ್‌ ಮಾಡಲು ಘಟಕಗಳನ್ನು ತೆರೆಯಬೇಕು’ ಎಂದು ಹೇಳಿದರು.

‘ವಿಂಗಡಿಸಿದರೂ ಒಟ್ಟಿಗೇ ಸುರಿಯುತ್ತಾರೆ’
‘ನಾವು ಕಸ ವಿಂಗಡಣೆ ಮಾಡಿಕೊಟ್ಟರೂ ಕಸ ಸಂಗ್ರಹಕ್ಕೆ ಬರುವವರು ಒಟ್ಟಿಗೆ ಸುರಿದುಕೊಳ್ಳುತ್ತಾರೆ’ ಎಂದು ಶಾಂತಲಾನಗರದ ಪೀಟರ್ ಆರೋಪಿಸಿದರು.

‘ಪ್ಲಾಸ್ಟಿಕ್ ನಿಷೇಧವಿದೆ ಎಂದು ನೀವು ಹೇಳುತ್ತೀರಿ. ಪ್ಲಾಸ್ಟಿಕ್‌ ಚೀಲದಲ್ಲಿ ಕಸ ತುಂಬಿಸಿ ಕೊಡದಿದ್ದರೆ ಅವರು ಸ್ವೀಕರಿಸುವುದೇ ಇಲ್ಲ. ಏನು ಮಾಡಬೇಕು’ ಎಂದು ಪ್ರಶ್ನಿಸಿದರು.

‘ಪ್ಲಾಸ್ಟಿಕ್ ಸಂಪೂರ್ಣ ನಿಷೇಧವಿದೆ. ಅದರಲ್ಲೇ ತುಂಬಿಕೊಡಬೇಕೆಂದು ಒತ್ತಡ ಹೇರುವ ಮತ್ತು ವಿಂಗಡಿಸಿದ ಕಸವನ್ನು ಒಟ್ಟಿಗೆ ಸುರಿದುಕೊಳ್ಳುವ ಗುತ್ತಿಗೆದಾರರ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಿ’ ಎಂದು ಸುಭಾಷ್ ಅಡಿ ಬಿಬಿಎಂಪಿ ಅಧಿಕಾರಿಗಳಿಗೆ ಸ್ಥಳದಲ್ಲೇ ಸೂಚನೆ ನೀಡಿದರು.

‘ದಿನಕ್ಕೆ ಎರಡು ಬಾರಿ ಕಸ ಸಂಗ್ರಹಿಸಿ’
‘ದಿನಕ್ಕೆ ಎರಡು ಬಾರಿ ಕಸ ಸಂಗ್ರಹಿಸುವ ವ್ಯವಸ್ಥೆ ಮಾಡಿ’ ಎಂದು ಆರ್‌.ಟಿ. ನಗರದ ಕೃಷ್ಣಮೂರ್ತಿ ಮನವಿ ಮಾಡಿದರು.

‘ಐಟಿ ಕಂಪನಿ ಉದ್ಯೋಗಿಗಳು ಸಾಮಾನ್ಯವಾಗಿ ತಡರಾತ್ರಿ ಮನೆಗೆ ಬರುತ್ತಾರೆ. ಬೆಳಿಗ್ಗೆ ತಡವಾಗಿ ಎದ್ದೇಳುತ್ತಾರೆ. ಅಷ್ಟೊತ್ತಿಗೆ ಕಸದ ಗಾಡಿ ಬಂದು ಹೋಗಿರುತ್ತದೆ. ರಸ್ತೆ ಬದಿ ಖಾಲಿ ಜಾಗದಲ್ಲೇ ಕಸ ಎಸೆದು ಹೋಗುತ್ತಾರೆ. ಇದನ್ನು ತಪ್ಪಿಸಲು ಮಧ್ಯಾಹ್ನ 12.30ರ ಸುಮಾರಿಗೆ ಎರಡನೇ ಬಾರಿಗೆ ಕಸ ಸಂಗ್ರಹಿಸುವುದು ಸೂಕ್ತ’ ಎಂದು ಸಲಹೆ ನೀಡಿದರು.

ಅಂಕಿ–ಅಂಶ
1.50 ಲಕ್ಷ ಟನ್:
ದೇಶದ ವಿವಿಧ ನಗರಗಳಲ್ಲಿ ಪ್ರತಿದಿನ ಉತ್ಪಾತ್ತಿಯಾಗುತ್ತಿವ ಕಸ
11,600 ಟನ್:ರಾಜ್ಯದ ವಿವಿಧ ನಗರಗಳಲ್ಲಿ ಪ್ರತಿದಿನ ಉತ್ಪತ್ತಿಯಾಗುತ್ತಿರುವ ಕಸ
5,600 ಟನ್‌:ಬಿಬಿಎಂಪಿ‌ವ್ಯಾಪ್ತಿಯಲ್ಲಿಪ್ರತಿದಿನ ಉತ್ಪತ್ತಿಯಾಗುತ್ತಿರುವ ಕಸ

**

ಆರೋಗ್ಯ ನಿರೀಕ್ಷಕರಿಗೆ ಕೆಲಸಕ್ಕೆ ತಕ್ಕ ವೇತನ ನೀಡುವ ಪದ್ಧತಿ ಜಾರಿಗೆ ತರಬೇಕು. ಆಗ ರಸ್ತೆಯಲ್ಲಿ ಬೀಳುವ ಕಸ ತಾನಾಗಿಯೇ ಖಾಲಿ ಆಗುತ್ತದೆ.
-ಮೀನಾಕ್ಷಿ, ಶಾಂತಿನಗರ ನಿವಾಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT