ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಬಿಎಂಪಿ ಬಜೆಟ್‌: ಮೊದಲ ಮಗಳು ‘ಮಹಾಲಕ್ಷ್ಮಿ’

ಐ.ಟಿ. ಕಂಪನಿಗಳಿರುವ ಪ್ರದೇಶಗಳ ಅಭಿವೃದ್ಧಿಗೆ ಆದ್ಯತೆ
Last Updated 18 ಫೆಬ್ರುವರಿ 2019, 20:29 IST
ಅಕ್ಷರ ಗಾತ್ರ

ಬೆಂಗಳೂರು: ಮಹಿಳೆಯರ ಮುಂದಾಳತ್ವದಲ್ಲಿ ಸಿದ್ಧಗೊಂಡು, ಮೊದಲ ಬಾರಿ ಮಹಿಳೆಯೇ ಮಂಡಿಸಿದ ಬಿಬಿಎಂಪಿಯ ಬಜೆಟ್‌ ಹೆಣ್ಣುಮಕ್ಕಳ ಕಲ್ಯಾಣದ ಕನಸು ಹೊತ್ತು, ಅಲಕ್ಷಿತ ಸಮುದಾಯಕ್ಕೆ ಸ್ವಾವಲಂಬಿ ಬದುಕು ಕಟ್ಟಿಕೊಡುವ ಸಂಕಲ್ಪವನ್ನು ಬಿಂಬಿಸಿದೆ.

ಸ್ತ್ರೀ ಸಂಕುಲದ ಸರ್ವತೋಮುಖ ಅಭಿವೃದ್ಧಿಯ ರೂಪುರೇಷೆಯನ್ನು ಒಳಗೊಂಡಿರುವ ಬಜೆಟ್‌,ನಗರದ ಜನರ ಆರೋಗ್ಯದತ್ತಲೂ ಕಾಳಜಿ ವಹಿಸುವ ಪ್ರಯತ್ನವನ್ನು ಗಂಭೀರವಾಗಿ ಮಾಡಿದೆ.

ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷೆ ಎಸ್‌.ಪಿ.ಹೇಮಲತಾ ಅವರು ಸೋಮವಾರ ಮಂಡಿಸಿದ ಬಜೆಟ್‌ನಲ್ಲಿ ಮಹಿಳೆಯರಿಗಾಗಿ ‘ಅನ್ನಪೂರ್ಣೇಶ್ವರಿ’ ಹಾಗೂ ಹೆಣ್ಣು ಭ್ರೂಣ ಹತ್ಯೆ ತಡೆಯಲು ‘ಮಹಾಲಕ್ಷ್ಮಿ’ಯಂತಹ ಪ್ರಮುಖ ಕಾರ್ಯಕ್ರಮಗಳನ್ನು ಪ್ರಕಟಿಸಿದ್ದಾರೆ. ಜತೆಗೆ ಪ್ರತಿ ವಾರ್ಡ್‌ನಲ್ಲಿ ಮಹಿಳೆಯರಿಗಾಗಿ ಸಾಮಾಜಿಕ ಕಾರ್ಯಕ್ರಮ ಏರ್ಪಡಿಸಲು ತಲಾ ₹ 10 ಲಕ್ಷ ಅನುದಾನ ನೀಡುವುದಾಗಿಯೂ ಘೋಷಿಸಿದ್ದಾರೆ. ಈ ಕಾರ್ಯಕ್ರಮಕ್ಕಾಗಿ ₹ 19.80 ಕೋಟಿ ಕಾಯ್ದಿರಿಸಲಾಗಿದೆ.

‘ಮಹಾಲಕ್ಷ್ಮಿ’ ಕಾರ್ಯಕ್ರಮ ಪಿಂಕ್‌ ಬೇಬಿ ಯೋಜನೆಯ ಮಾರ್ಪಾಡಾದ ರೂಪ. ಪಿಂಕ್‌ ಬೇಬಿ ಕಾರ್ಯಕ್ರಮದಡಿ ಬಿಬಿಎಂಪಿ ಹೆರಿಗೆ ಆಸ್ಪತ್ರೆಗಳಲ್ಲಿ ಜನವರಿ 1 ರಂದು ಹುಟ್ಟುವ ಮೊದಲ ಹೆಣ್ಣು ಮಗುವಿಗೆ ಹೆಸರಿನಲ್ಲಿ ತಲಾ ₹ 5 ಲಕ್ಷ ಮೊತ್ತದ ಬಾಂಡ್‌ ವಿತರಿಸಲಾಗುತ್ತಿತ್ತು. ಅದರ ಬದಲು ‘ಮಹಾಲಕ್ಷ್ಮಿ’ ಯೋಜನೆಯಡಿ ದಂಪತಿಗೆ ಜನಿಸುವ ಮೊದಲ ಹೆಣ್ಣು ಮಗುವಿನ ಹೆಸರಿನಲ್ಲಿ ₹ 1 ಲಕ್ಷ ಮೊತ್ತದ ಬಾಂಡ್‌ ನೀಡಲಾಗುತ್ತದೆ. ‘ಭಾಗ್ಯಲಕ್ಷ್ಮಿ ’ ಯೋಜನೆಯ ಪಡಿಯಚ್ಚಿನಂತಿರುವ ಈ ಯೋಜನೆಯಡಿ ವಿತರಿಸುವ ಬಾಂಡ್‌ನ ಹಣವನ್ನು 15 ವರ್ಷಗಳ ಬಳಿಕ ಆ ಬಾಲಕಿಯ ಶಿಕ್ಷಣಕ್ಕೆ ಅಥವಾ ವಿವಾಹಕ್ಕೆ ಬಳಸಿಕೊಳ್ಳಬಹುದು. ಈ ಕಾರ್ಯಕ್ರಮಕ್ಕೆ ₹ 60 ಕೋಟಿ ಕಾಯ್ದಿರಿಸಲಾಗಿದೆ.

ಶಿವಕುಮಾರ ಸ್ವಾಮೀಜಿ ಸ್ಮರಣಾರ್ಥ ಪ್ರಶಸ್ತಿ

ಬಡ ಮಕ್ಕಳಿಗೆ ಶಿಕ್ಷಣ ಕಲ್ಪಿಸಲು ಜೀವನಪೂರ್ತಿ ಶ್ರಮಿಸಿದ ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿ ಅವರ ಹೆಸರಿನಲ್ಲಿ ಶಿಕ್ಷಣ ಸಂಸ್ಥೆಗಳಿಗೆ ಹಾಗೂ ಸಂಘಗಳಿಗೆ ನಗದು ಪ್ರಶಸ್ತಿ ನೀಡಲು ಪಾಲಿಕೆ ನಿರ್ಧರಿಸಿದೆ. ಈ ಕಾರ್ಯಕ್ರಮಕ್ಕೆ ₹ 25 ಲಕ್ಷ ಮೀಸಲಿಡಲಾಗಿದೆ.

‘ಬಡ ವರ್ಗದ, ಅಂಗವಿಕಲ ಅಥವಾ ಬುದ್ಧಿಮಾಂದ್ಯ ಮಕ್ಕಳಿಗೆ ಉಚಿತ ಶಿಕ್ಷಣ ನೀಡುವ ಮೂಲಕ ಅವರು ಬದುಕು ಕಟ್ಟಿಕೊಳ್ಳಲು ನೆರವಾಗುತ್ತಿರುವ ಶಿಕ್ಷಣ ಸಂಸ್ಥೆಗಳು, ಶಿಕ್ಷಣಕ್ಕೆ ಉನ್ನತ ಮಟ್ಟದಲ್ಲಿ ಸೇವೆ ಸಲ್ಲಿಸುತ್ತಿರುವ ಸಂಸ್ಥೆಗಳನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗುತ್ತದೆ’ ಎಂದು ಹೇಮಲತಾ ಪ್ರಕಟಿಸಿದರು.

ಪುತ್ಥಳಿ ಸ್ಥಾಪನೆ: ತುಮಕೂರು ರಸ್ತೆಯ ಬಳಿ ಸ್ವಾಮೀಜಿ ಪುತ್ಥಳಿ ಸ್ಥಾಪಿಸಲು ₹ 5 ಕೋಟಿ ಮೀಸಲಿಡಲಾಗಿದೆ.

ಗದ್ದಲದ ನಡುವೆ ಬಜೆಟ್‌ ಮಂಡನೆ

ವಿರೋಧ ಪಕ್ಷದ ಸದಸ್ಯರು ಗದ್ದಲ ಎಬ್ಬಿಸಿದರೂ, ಅದಕ್ಕೆ ಕಿವಿಗೊಡದೆ ಬಿಬಿಎಂಪಿಯ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷೆ ಎಸ್‌.ಪಿ.ಹೇಮಲತಾ ಅವರು ಬಜೆಟ್‌ ಮಂಡಿಸಿದರು.

ಬಜೆಟ್‌ ಮಂಡನೆ ಆರಂಭವಾಗುತ್ತಿದ್ದಂತೆಯೇ ಬಿಜೆಪಿ ಸದಸ್ಯರು ‘ಇದು, ಬೋಗಸ್‌ ಬಜೆಟ್‌’ ಎಂದು ಕೂಗುತ್ತಾ ಗಲಾಟೆ ಆರಂಭಿಸಿದರು. ಬಳಿಕ ಮೇಯರ್‌ ಪೀಠದ ಎದುರು ಧರಣಿ ನಡೆಸಿದರು. ಭಿತ್ತಿಪತ್ರ ಪ್ರದರ್ಶಿಸಿ, ‘ಲೂಟಿ... ಲೂಟಿ... ಬಿಬಿಎಂಪಿ ಲೂಟಿ’, ‘ದಿವಾಳಿ... ದಿವಾಳಿ... ಬಿಬಿಎಂಪಿ ದಿವಾಳಿ’ ಎಂದು ಘೋಷಣೆ ಕೂಗಿದರು.

ಇದಕ್ಕೆ ಪ್ರತಿಯಾಗಿ ಆಡಳಿತ ಪಕ್ಷದ ಸದಸ್ಯರು, ‘ಮಹಿಳೆಯೊಬ್ಬರು ಬಜೆಟ್‌ ಮಂಡಿಸುವಾಗ ಅಡ್ಡಿಪಡಿಸುತ್ತಿದ್ದೀರಿ. ಸಂಪ್ರದಾಯ ಮುರಿಯುತ್ತಿದ್ದೀರಿ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹೇಮಲತಾ 40 ನಿಮಿಷಗಳಲ್ಲಿ ಬಜೆಟ್‌ ಭಾಷಣವನ್ನು ಓದಿ ಮುಗಿಸಿದರು.

ಪುಲ್ವಾಮದಲ್ಲಿ ಹುತಾತ್ಮರಾದ ಯೋಧರ ಗೌರವಾರ್ಥ ಸಭೆಯ ಆರಂಭದಲ್ಲಿ ಮೌನಾಚರಣೆ ನಡೆಸಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಮೊದಲ ಬಾರಿ ₹ 10 ಸಾವಿರ ಕೋಟಿ ದಾಟಿದ ಬಜೆಟ್‌

ಪಾಲಿಕೆಯ ಆಯವ್ಯಯದ ಗಾತ್ರ ಮೊದಲ ಬಾರಿ ₹ 10 ಸಾವಿರ ಕೋಟಿ ದಾಟಿದೆ. 2012–13ನೇ ಸಾಲಿನಲ್ಲಿ ₹ 9,498 ಕೋಟಿ ಗಾತ್ರದ ಬಜೆಟ್‌ ಮಂಡಿಸಲಾಗಿತ್ತು. 2018–19ನೇ ಸಾಲಿನಲ್ಲಿ ₹ 9,325 ಕೋಟಿ ಬಜೆಟ್‌ ಮಂಡಿಸಲಾಗಿತ್ತು. ಆದರೆ, ಸರ್ಕಾರದಿಂದ ಅನುಮೋದನೆಯಾಗಿ ಬರುವಾಗ ಆಯವ್ಯಯ ಅಂದಾಜು ₹ 10,132 ಕೋಟಿಗೆ ಹೆಚ್ಚಳವಾಗಿತ್ತು.

ಆರ್ಥಿಕವಾಗಿ ಹಿಂದುಳಿದ ಮಹಿಳೆಯು ‘ಸಂಚಾರಿ ಕ್ಯಾಂಟೀನ್ ವಾಹನ’ ಖರೀದಿಸಿ ಸ್ವಯಂ ಉದ್ಯೋಗ ಆರಂಭಿಸಲು ನೆರವಾಗುವ ‘ಅನ್ನಪೂಣೇಶ್ವರಿ’ ಕಾರ್ಯಕ್ರಮದಡಿ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ನಾಲ್ವರು ಮಹಿಳೆಯರಿಗೆ ಶೇ 50ರಷ್ಟು ಸಬ್ಸಿಡಿ ಸೌಲಭ್ಯ ನೀಡಲಾಗುತ್ತದೆ. ಈ ಕಾರ್ಯಕ್ರಮಕ್ಕೆ ₹ 5 ಕೋಟಿ ಮೀಸಲಿಡಲಾಗಿದೆ.

ಜನರ ಆರೋಗ್ಯ ರಕ್ಷಣೆಗೆ ನೆರವಾಗುವ ಹಲವಾರು ಕಾರ್ಯಕ್ರಮಗಳ ಪಟ್ಟಿಯೇ ಬಜೆಟ್‌ನಲ್ಲಿದೆ. ‘ಆರೋಗ್ಯ ಕವಚ’ ಕಾರ್ಯಕ್ರಮವು ಹೆಂಗಸರು ಸ್ತನ ಹಾಗೂ ಗರ್ಭಕೋಶದ ಕ್ಯಾನ್ಸರ್‌ಗಳ ಕಬಂಧ ಬಾಹುವಿಗೆ ಸಿಲುಕುವುದನ್ನು ತಪ್ಪಿಸಲು ನೆರವಾಗಲಿದೆ. ಕ್ಯಾನ್ಸರ್‌ ಪ್ರಾಥಮಿಕ ಹಂತದಲ್ಲಿರುವಾಗಲೇ ಪತ್ತೆ ಹಚ್ಚಲು ನೆರವಾಗಲು ಆರೋಗ್ಯ ತಪಾಸಣೆ ನಡೆಸುವ ಸೌಕರ್ಯಗಳಿರುವ ಎರಡು ಸುಸಜ್ಜಿತ ಬಸ್‌ಗಳನ್ನು ಪಾಲಿಕೆ ಖರೀದಿಸಲಿದೆ. ಇವು ನಿರ್ದಿಷ್ಟ ದಿನ ನಿಗದಿತ ಜಾಗದಲ್ಲಿ ಮಹಿಳೆಯರ ಆರೋಗ್ಯ ತಪಾಸಣೆ ನಡೆಸಲಿವೆ.

ನರ ಆರೋಗ್ಯ ಮಾತ್ರವಲ್ಲ; ಪ್ರಾಣಿಗಳ ಆರೋಗ್ಯ ರಕ್ಷಣೆಯತ್ತಲೂ ಕ್ರಮ ವಹಿಸಲಾಗಿದೆ. ಅಪಘಾತಕ್ಕೆ ಒಳಗಾದ ಹಾಗೂ ರೋಗಗ್ರಸ್ತ ಪ್ರಾಣಿಗಳ ತುರ್ತು ಚಿಕಿತ್ಸೆಗೆ ಆಂಬುಲೆನ್ಸ್‌ ಸೇವೆಗೆ ₹ 25 ಲಕ್ಷ ಮೀಸಲಿಡಲಾಗಿದೆ.

ನಗರದ ವಾಹನ ದಟ್ಟಣೆ ಹೆಚ್ಚುಇರುವ ಪ್ರದೇಶಗಳಲ್ಲಿ ವಾಯು ಶುದ್ಧೀಕರಣ ಯಂತ್ರಗಳನ್ನು ಅಳವಡಿ ಸಲು ಪಾಲಿಕೆ ಮೊದಲ ಹೆಜ್ಜೆ ಇಟ್ಟಿದೆ. ಇದಕ್ಕಾಗಿ ₹ 5 ಕೋಟಿ ನೀಡಲಾಗಿದೆ. ಪ್ರತಿ ವಾರ್ಡ್‌ಗೆ ತಲಾ 50ರಂತೆ ಬೈಸಿಕಲ್‌ ಒದಗಿಸುವ ಕಾರ್ಯಕ್ರಮವೂ ವಾಯು ಮಾಲಿನ್ಯ ತಡೆಯಲು ನೆರವಾಗಲಿದೆ.

ಇಷ್ಟು ದಿನ ನಗರದ ಕಸವನ್ನು ಹೊರವಲಯದ ಪ್ರದೇಶಗಳಲ್ಲಿ ಸುರಿಯುತ್ತಿದ್ದ ಪಾಲಿಕೆ, ಕಸ ವಿಲೇವಾರಿ ಕೇಂದ್ರ ಹಾಗೂ ಘನತ್ಯಜ್ಯ ನಿರ್ವಹಣಾ ಘಟಕಗಳ ಆಸುಪಾಸಿನ ಪ್ರದೇಶಗಳ ಅಭಿವೃದ್ಧಿಗೆ ಮೊದಲ ಬಾರಿ ಬಜೆಟ್‌ನಲ್ಲಿ ಅನುದಾನ ನೀಡಿದೆ. ಈ ಸಲುವಾಗಿ ₹ 110 ಕೋಟಿ ಮೀಸಲಿಡಲಾಗಿದೆ.

ನಾಲ್ಕು ಕಡೆ ಸ್ಮಶಾನ: ನಗರದ ನಾಲ್ಕು ದಿಕ್ಕುಗಳಲ್ಲಿ ಹೊಸ ಸ್ಮಶಾನಗಳನ್ನು ನಿರ್ಮಿಸಲು ಪಾಲಿಕೆ ಮುಂದಾಗಿದ್ದು, ಈ ಸಲುವಾಗಿ ₹ 40 ಕೋಟಿ ಕಾಯ್ದಿರಿಸಿದೆ. ಸ್ಮಶಾನಗಳ ನಿರ್ವಹಣೆಗಾಗಿ ₹ 12 ಕೋಟಿ ಮೀಸಲಿಡಲಾಗಿದೆ.

ಸರ್ಕಾರ ‘ನವ ಬೆಂಗಳೂರು’ ಯೊಜನೆ ಅಡಿ ಪ್ರಕಟಿಸಿರುವ ಕಾರ್ಯಕ್ರಮಗಳನ್ನು ಬಜೆಟ್‌ನಲ್ಲೂ ಸೇರಿಸಲಾಗಿದೆ. ಈ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಸರ್ಕಾರ ₹ 2,300 ಕೋಟಿ ಈ ವರ್ಷ ಒದಗಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT