ಮಂಗಳವಾರ, ನವೆಂಬರ್ 12, 2019
20 °C
ಬಿಬಿಎಂಪಿಯಲ್ಲಿ ಭಾರಿ ಭ್ರಷ್ಟಾಚಾರ: ನ್ಯಾ.ನಾಗಮೋಹನದಾಸ್‌ ಸಮಿತಿ ವರದಿ ಜಾರಿಗೆ ಶಾಸನ ರಚನಾ ಸಮಿತಿ ಸಭೆ

ಶಿಸ್ತುಕ್ರಮಕ್ಕೆ 15 ದಿನ ಸಮಯ ಕೇಳಿದ ಪಾಲಿಕೆ

Published:
Updated:

ಬೆಂಗಳೂರು: ಮಲ್ಲೇಶ್ವರ, ರಾಜರಾಜೇಶ್ವರಿನಗರ ಹಾಗೂ ಗಾಂಧಿನಗರ ವಿಭಾಗಗಳಲ್ಲಿ 2008ರಿಂದ 2012ರ ನಡುವೆ ನಡೆದ ಕಾಮಗಾರಿಗಳಲ್ಲಿ ಭ್ರಷ್ಟಾಚಾರ ನಡೆಸಿದ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳಲು ಬಿಬಿಎಂಪಿ 15 ದಿನಗಳ ಕಾಲಾವಕಾಶ ಕೇಳಿದೆ.

ಪಾಲಿಕೆಯ ಈ ಮೂರು ವಿಭಾಗಗಳಲ್ಲಿ ನಡೆದ ಭ್ರಷ್ಟಾಚಾರಗಳ ಬಗ್ಗೆ ತನಿಖೆ ನಡೆಸಿರುವ ನ್ಯಾ.ನಾಗಮೋಹನ್‌ ದಾಸ್‌ ಸಮಿತಿ ನಗರಾಭಿವೃದ್ಧಿ ಇಲಾಖೆಗೆ ವರದಿ ಸಲ್ಲಿಸಿತ್ತು. ಈ ಸಮಿತಿ ವರದಿಯ ಶಿಫಾರಸುಗಳ ಜಾರಿ ಕುರಿತು 2019ರ ಅ.19ರಂದು ಬಿಬಿಎಂಪಿಗೆ ಪತ್ರ ಬರೆದಿದ್ದ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಇ.ವಿ.ರಮಣ ರೆಡ್ಡಿ, ತಪ್ಪಿತಸ್ಥ ಅಧಿಕಾರಿಗಳು ಮತ್ತು ಗುತ್ತಿಗೆದಾರರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಸೂಚಿಸಿದ್ದರು.

ನ್ಯಾ.ನಾಗಮೋಹನದಾಸ್‌ ಸಮಿತಿಯ ವರದಿಯ ಶಿಫಾರಸು ಜಾರಿ ಬಗ್ಗೆ ಚರ್ಚಿಸಲು ಎಸ್‌.ಎ.ರಾಮದಾಸ್‌ ನೇತೃತ್ವದ ವಿಧಾನಮಂಡಲದ ಶಾಸನ ರಚನಾ ಸಮಿತಿಯು ಬಿಬಿಎಂಪಿ ಅಧಿಕಾರಿಗಳ ಜೊತೆ ಮಂಗಳವಾರ ಸಭೆ ನಡೆಸಿತು.

‘ತನಿಖೆ ವೇಳೆ ಬಿಬಿಎಂಪಿ ಅಧಿಕಾರಿಗಳು ಸಂಪೂರ್ಣ ಮಾಹಿತಿ ಒದಗಿಸಿಲ್ಲ. ತನಿಖೆಗೆ ಸಹಕರಿಸಿಲ್ಲ’ ಎಂಬ ಅಂಶವೂ ನ್ಯಾ. ಸಮಿತಿಯ ವರದಿಯಲ್ಲಿದೆ. ಈ ಬಗ್ಗೆ ಪಾಲಿಕೆ ಅಧಿಕಾರಿಗಳನ್ನು ಶಾಸನ ರಚನಾ ಸಮಿತಿ ತರಾಟೆಗೆ ತೆಗೆದುಕೊಂಡಿತು. 

ಈ ಮೂರು ವಿಭಾಗಗಳ ಅಕ್ರಮಗಳಿಂದ ಬಿಬಿಎಂಪಿಗೆ ಆಗಿರುವ ನಷ್ಟದ ಬಗ್ಗೆ ಲೆಕ್ಕಪರಿಶೋಧನಾ ಅಧಿಕಾರಿಗಳ ಸಮಿತಿಯೂ ವರದಿ ಸಲ್ಲಿಸಿದೆ. ಪಾಲಿಕೆಯಲ್ಲಿ ನಡೆದ ಅವ್ಯವಹಾರಗಳ ಬಗ್ಗೆ ಐಎಎಸ್‌ ಅಧಿಕಾರಿ ರಾಜೇಂದರ್‌ ಕುಮಾರ್‌ ಕಟಾರಿಯಾ ಅವರೂ ವರದಿ ನೀಡಿದ್ದರು. ಈ ಎಲ್ಲ ವರದಿಗಳ ಬಗ್ಗೆ ಹಾಗೂ ಅವುಗಳಿಗೆ ಸಂಬಂಧಿಸಿ ತೆಗೆದುಕೊಂಡಿರುವ ಕ್ರಮಗಳ ಬಗ್ಗೆಯೂ ಸಮಿತಿಯು ಮಾಹಿತಿ ಪಡೆಯಿತು. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿತು.

‘ಇದುವರೆಗೆ ತಪ್ಪಿತಸ್ಥರ ವಿರುದ್ಧ ಇನ್ನೂ ಏಕೆ ಕ್ರಮ ತೆಗೆದುಕೊಂಡಿಲ್ಲ. ಕ್ರಮ ತೆಗೆದುಕೊಳ್ಳಲು ಇನ್ನು ಎಷ್ಟು ಸಮಯ ಬೇಕು’ ಎಂದು ಸಮಿತಿಯ ಪ್ರಮುಖರು ಪಾಲಿಕೆ ಅಧಿಕಾರಿಗಳನ್ನು ಪ್ರಶ್ನೆ ಮಾಡಿದರು. ‌

‘ನ್ಯಾ.ನಾಗಮೋಹನದಾಸ್‌ ಸಮಿತಿ ವರದಿ ಬಗ್ಗೆ ಕೂಲಂಕಷ ಚರ್ಚೆ ನಡೆಯಿತು. ಬಿಬಿಎಂಪಿ ಕ್ರಮ ತೆಗೆದುಕೊಳ್ಳಲು ವಿಳಂಬ ಮಾಡಿದ್ದೂ ಸೇರಿದಂತೆ, 2–3 ವಿಚಾರಗಳ ಚರ್ಚೆ ನಡೆಯಿತು. ತಪ್ಪಿತಸ್ಥರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು 15 ದಿನಗಳ ಕಾಲಾವಕಾಶ ಕೇಳಿದ್ದೇವೆ. ಇದಕ್ಕೆ ಸಮಿತಿ ಒಪ್ಪಿದೆ’ ಎಂದು ಪಾಲಿಕೆ ಆಯುಕ್ತ ಬಿ.ಎಚ್‌.ಅನಿಲ್‌ ಕುಮಾರ್‌ ಸುದ್ದಿಗಾರರಿಗೆ ತಿಳಿಸಿದರು.

ತಪ್ಪಿತಸ್ಥ ಗುತ್ತಿಗೆದಾರರನ್ನು ಇನ್ನೂ ಕಪ್ಪುಪಟ್ಟಿಗೆ ಸೇರಿಸದ ಕುರಿತು ಪ್ರತಿಕ್ರಿಯಿಸಿದ ಆಯುಕ್ತರು, ‘ಈ ಕಾಮಗಾರಿಗಳಲ್ಲಿ ಅಕ್ರಮ ನಡೆಸಿರುವ ಗುತ್ತಿಗೆದಾರರಿಗೆ ಹೊಸ ಕಾಮಗಾರಿ ಕೊಡಬಾರದು ಎಂದು ಬಿಬಿಎಂಪಿ ತೀರ್ಮಾನಿಸಿತ್ತು. ಇದನ್ನು ಪ್ರಶ್ನಿಸಿ ಕೆಲವರು ಹೈಕೋರ್ಟ್ ಮೊರೆ ಹೋಗಿದ್ದರು. ಈ ಅರ್ಜಿಯನ್ನು ಹೈಕೋರ್ಟ್‌ ಇತ್ಯರ್ಥಪಡಿಸಿದೆ. ಗುತ್ತಿಗೆದಾರರಿಗೆ ತಮ್ಮ ವಾದವನ್ನು ಹೇಳಿಕೊಳ್ಳಲು ಅವಕಾಶ ಕೊಡಬೇಕು. ಅವರಿಂದ ಹೇಳಿಕೆ  ಪಡೆದ ಬಳಿಕವಷ್ಟೇ ಅವರನ್ನು ಕಪ್ಪುಪಟ್ಟಿಗೆ ಸೇರಿಸುವ ಬಗ್ಗೆ ನಿರ್ಣಯಿಸಬೇಕು ಎಂದು ಹೈಕೋರ್ಟ್‌ ನಿರ್ದೇಶನ ನೀಡಿದೆ’ ಎಂದರು.

‘67 ಪ್ರಕರಣ: ₹ 76 ಕೋಟಿ ವಸೂಲಿಗೆ ಕ್ರಮ’
‘ನಾಗಮೋಹನದಾಸ್‌ ಸಮಿತಿ ತನಿಖೆಗೆ ಒಳಪಡಿಸಿದ ಎಲ್ಲ ಪ್ರಕರಣಗಳಲ್ಲಿ ಬಿಬಿಎಂಪಿಗೆ ಎಷ್ಟು ನಷ್ಟ ಉಂಟಾಗಿದೆ ಎಂಬುದನ್ನು ಪತ್ತೆಹಚ್ಚಲು ಲೆಕ್ಕಪರಿಶೋಧನೆ ಮಾಡಬೇಕಾಗಿದೆ. ಸದ್ಯಕ್ಕೆ ಲೆಕ್ಕಪರಿಶೋಧನೆ ನಡೆದಿರುವ 67 ಪ್ರಕರಣಗಳಲ್ಲಿ 33 ಅಧಿಕಾರಿಗಳು ಹಾಗೂ 31 ಗುತ್ತಿಗೆದಾರರಿಂದ ₹76 ಕೋಟಿ ವಸೂಲಿ ಮಾಡಬೇಕಿದೆ’ ಎಂದು ಬಿ.ಎಚ್‌.ಅನಿಲ್‌ ಕುಮಾರ್‌ ತಿಳಿಸಿದರು.

ನಿವೃತ್ತದ ವಿರುದ್ಧವೂ ಕ್ರಮ: ‘ತಪ್ಪಿತಸ್ಥರಲ್ಲಿ ಕೆಲವು ಅಧಿಕಾರಿಗಳು ಲೋಕೋಪಯೋಗಿ ಇಲಾಖೆಯಿಂದ ಬಂದವರು. ಅವರು ಮಾತೃ ಇಲಾಖೆಗೆ ಮರಳಿದ್ದಾರೆ. ಕೆಲವರು ಬಿಬಿಎಂಪಿ ಉದ್ಯೋಗಿಗಳು. ಅವರಲ್ಲಿ ಕೆಲವರು ನಿವೃತ್ತರಾಗಿದ್ದರೆ. ಪಾಲಿಕೆಯಲ್ಲಿ ಈಗಲೂ ಕಾರ್ಯನಿರ್ವಹಿಸುತ್ತಿರುವವರ ವಿರುದ್ಧ ತಕ್ಷಣ ಕ್ರಮ ತೆಗೆದುಕೊಳ್ಳುತ್ತೇವೆ’ ಎಂದರು.

‘ಪ್ರಜಾವಾಣಿ’ ವರದಿ ಬಳಿಕ ಎಚ್ಚೆತ್ತ ಸರ್ಕಾರ
ಈ ಮೂರು ವಲಯಗಳ ಕಾಮಗಾರಿಗಳ ಅಕ್ರಮಗಳ ಸಮಗ್ರ ತನಿಖೆಗೆ ಎಚ್‌.ಎನ್‌.ನಾಗಮೋಹನ ದಾಸ್‌ ನೇತೃತ್ವದಲ್ಲಿ ಸಮಿತಿಯನ್ನು ಸರ್ಕಾರ ರಚಿಸಿತ್ತು. ಸಮಿತಿಯು ಆಗಿನ ಬೆಂಗಳೂರು ಅಭಿವೃದ್ಧಿ ಸಚಿವ ಜಿ.ಪರಮೇಶ್ವರ ಅವರಿಗೆ 2018ರ ಡಿಸೆಂಬರ್‌ನಲ್ಲಿ ಅಂತಿಮ ವರದಿ ಸಲ್ಲಿಸಿತ್ತು. ಆದರೆ, ಇಲಾಖೆ ಯಾವುದೇ ಕ್ರಮ ಕೈಗೊಂಡಿರಲಿಲ್ಲ.

ಈ ವರದಿಯನ್ನು ಆಧರಿಸಿ ‘ಪ್ರಜಾವಾಣಿ’ ಸೆಪ್ಟೆಂಬರ್‌ ತಿಂಗಳಲ್ಲಿ ‘ಬ್ರಹ್ಮಾಂಡ ಭ್ರಷ್ಟಾಚಾರ’ ಶೀರ್ಷಿಕೆಯಲ್ಲಿ 11 ಸರಣಿ ವರದಿಗಳನ್ನು ಪ್ರಕಟಿಸಿ ಅಕ್ರಮದ ಇಂಚಿಂಚನ್ನೂ ವಿವರಿಸಿತ್ತು.

ಯಾವ ವಿಭಾಗದಲ್ಲಿ ಎಷ್ಟು ನಷ್ಟ?
ಗಾಂಧಿನಗರ ವಿಭಾಗ;
₹47.63 ಕೋಟಿ
ಮಲ್ಲೇಶ್ವರ ವಿಭಾಗ; 24.01 ಕೋಟಿ
ರಾಜರಾಜೇಶ್ವರಿನಗರ ವಿಭಾಗ; ₹4.91 ಕೋಟಿ

6,880: ಸಿಐಡಿ ನಾಗಮೋಹನದಾಸ್‌ ಸಮಿತಿಗೆ ಹಸ್ತಾಂತರಗೊಂಡ ಕಡತಗಳು
ಆರ್‌.ಆರ್.ನಗರ; 1,227
ಮಲ್ಲೇಶ್ವರ; 3,093
ಗಾಂಧಿನಗರ; 2,560 

ಪ್ರತಿಕ್ರಿಯಿಸಿ (+)