ಮಂಗಳವಾರ, ಜನವರಿ 28, 2020
18 °C
ಭೂಭರ್ತಿ ಕೇಂದ್ರದ ಬಳಿ ಠಿಕಾಣಿ ಹೂಡಿದ ಲಾರಿಗಳು * ಟೆಂಡರ್‌ ಅಕ್ರಮ ಮುಚ್ಚಿ ಹಾಕಲು ಬಿಬಿಎಂಪಿ ಒತ್ತಡ ತಂತ್ರ?

ಇಂದು ಕಸ ವಿಲೇವಾರಿ ಅಸ್ತವ್ಯಸ್ತ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ಬೆಂಗಳೂರು: ನಗರದ ಕಸವನ್ನು ಬೆಳ್ಳಹಳ್ಳಿ ಕ್ವಾರಿಯ ಭೂಭರ್ತಿ ಕೇಂದ್ರಕ್ಕೆ ಬುಧವಾರ ಸಾಗಿಸಿರುವ ಲಾರಿಗಳು ಈ ಕ್ವಾರಿ ಭರ್ತಿಯಾಗಿದೆ ಎಂಬ ಕಾರಣಕ್ಕೆ ಕಸವನ್ನು ಇಳಿಸಿಲ್ಲ. ಕಸ ಹೊತ್ತುಕೊಂಡ ಬಹುತೇಕ ಲಾರಿಗಳು ಅಲ್ಲೇ ಠಿಕಾಣಿ ಹೂಡಿರುವುದರಿಂದ ಗುರುವಾರ ಕಸ ವಿಲೇವಾರಿ ವ್ಯವಸ್ಥೆ ಅಸ್ತವ್ಯಸ್ತವಾಗುವ ಸಾಧ್ಯತೆ ಇದೆ.

‘ಕ್ವಾರಿ ಗುಂಡಿಯಲ್ಲಿ ವೈಜ್ಞಾನಿಕ ನಿರ್ವಹಣಾ ಘಟಕ ಸ್ಥಾಪನೆಗೆ ಕರೆದಿದ್ದ ಟೆಂಡರ್‌ ರದ್ದಾಗಿದ್ದರಿಂದ ಬೆಳ್ಳಹಳ್ಳಿಯಲ್ಲೇ ಪರ್ಯಾಯ ಜಾಗ ಹುಡುಕಿ ಕಸ ವಿಲೇ ಮಾಡುತ್ತಿದ್ದೆವು. ಆ ಕ್ವಾರಿಯೂ ಭರ್ತಿಯಾಗಿದೆ. ಹೊಸ ಟೆಂಡರ್‌ ಪ್ರಕ್ರಿಯೆ ಮುಗಿಯುವವರೆಗೂ ಮತ್ತೆ ಪರ್ಯಾಯ ಜಾಗವನ್ನು ಹುಡುಕಬೇಕಾಗಿದೆ. ವಿಶೇಷ ಆಯುಕ್ತ ರಂದೀಪ್‌ ಹಾಗೂ ನಾನು ಬೆಳ್ಳಹಳ್ಳಿ ಕ್ವಾರಿಗೆ ಗುರುವಾರ ಭೇಟಿ ನೀಡಲಿದ್ದೇವೆ. ಈ ಲಾರಿಗಳಲ್ಲಿರುವ ಕಸವನ್ನು ಮಧ್ಯಾಹ್ನದೊಳಗೆ ವಿಲೇವಾರಿ ಮಾಡಲು ಪ್ರಯತ್ನ ಮಾಡುತ್ತೇವೆ’ ಎಂದು ಬಿಬಿಎಂಪಿ ಜಂಟಿ ಆಯುಕ್ತ (ಕಸ ವಿಲೇವಾರಿ) ಸರ್ಫರಾಜ್‌ ಖಾನ್‌ ‘ಪ್ರಜಾವಾಣಿ’ಗೆ ತಿಳಿಸಿದರು.

2017ರಿಂದ 2019ರವರೆಗೆ ಸರ್ಕಾರ ಮೂರು ಕ್ವಾರಿಗಳಲ್ಲಿ ಕಸ ವಿಲೇವಾರಿಗೆ ಬಿಬಿಎಂಪಿಗೆ ₹ 40 ಕೋಟಿ ಅನುದಾನ ನೀಡಿತ್ತು. ಅದಲ್ಲದೇ ಮಿಟ್ಟಗಾನಹಳ್ಳಿ ಭೂಭರ್ತಿ ಕೇಂದ್ರದ ಒಂದು ಕ್ವಾರಿ ಗು೦ಡಿಯಲ್ಲಿ ಕಸ ವಿಲೇವಾರಿಯನ್ನು ₹15 ಕೋಟಿ ವೆಚ್ಚದಲ್ಲಿ ಕೈಗೊಳ್ಳಲು ಮೆ.ಜತಿನ್‌ ಇಸ್‌ಫ್ರಾ ಸಂಸ್ಥೆಯ ಸೇವೆಯನ್ನು ನೇರವಾಗಿ ಪಡೆಯುವುದಕ್ಕೆ ಆರ್ಥಿಕ ಇಲಾಖೆ 1999ರ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ (ಕೆಟಿಪಿಪಿ) ಕಾಯ್ದೆಯ ಕಲ೦ 4ಜಿ ಅಡಿ 2019ರ ನ.07ರಂದು ವಿನಾಯಿತಿ ನೀಡಿತ್ತು. ಇದೇ ಭೂಭರ್ತಿ ಕೇಂದ್ರದ ಇನ್ನೊಂದು ಕ್ವಾರಿ ಗುಂಡಿಯಲ್ಲಿ ವೈಜ್ಞಾನಿಕ ನಿರ್ವಹಣಾ ಘಟಕ ಸ್ಥಾಪನೆ ಕಾಮಗಾರಿಗೆ ಬಿಬಿಎಂಪಿ ಟೆಂಡರ್‌ ಕರೆದಿತ್ತು.

ಗೊರಾಂಟ್ಲಾ ಜಿಯೊಸಿಂಥೆಟಿಕ್ಸ್‌ ಪ್ರೈವೇಟ್‌ ಲಿಮಿಟೆಡ್‌ನ ಜಿ.ಪ್ರವೀಣ್‌ ಕುಮಾರ್ ಅವರಿಗೆ ಈ ಟೆಂಡರ್‌ ( ₹ 71.65 ಕೋಟಿ ವೆಚ್ಚ) ನೀಡಲು ಬಿಬಿಎಂಪಿ ನಿರ್ಧರಿಸಿತ್ತು. ಈ ಗುತ್ತಿಗೆದಾರರು ಅರ್ಹತೆ ಹೊಂದಿಲ್ಲ ಎಂಬ ಕಾರಣಕ್ಕೆ ನಗರಾಭಿವೃದ್ಧಿ ಇಲಾಖೆ ಟೆಂಡರ್‌ ರದ್ದುಪಡಿಸಿ ಮರು ಟೆಂಡರ್‌ ಕರೆಯುವಂತೆ ಸೂಚಿಸಿತ್ತು.

ಈ ಟೆಂಡರ್‌ ರದ್ದುಪಡಿಸಿದ್ದರಿಂದಲೇ ಕಸ ವಿಲೇವಾರಿ ಸಮಸ್ಯೆ ಮತ್ತಷ್ಟು ಉಲ್ಬಣಗೊಳ್ಳಲಿದೆ ಎಂದು ಬಿಂಬಿಸುವ ಉದ್ದೇಶದಿಂದಲೇ ಲಾರಿಗಳು ಕಸವನ್ನು ಇಳಿಸಿಲ್ಲ ಎಂಬ ಆರೋಪವೂ ಕೇಳಿಬಂದಿದೆ. ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಸ್.ಆರ್. ವಿಶ್ವನಾಥ್‌ ಅವರು ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಕಾರ್ಯದರ್ಶಿಗೆ 2019ರ ಡಿ.30ರಂದು ಪತ್ರ ಬರೆದು, ‘ಘನತ್ಯಾಜ್ಯ ವಿಲೇವಾರಿ ತುರ್ತು ವಿಷಯ ಎಂಬ ಅರಿವಿದ್ದರೂ ಉದ್ದೇಶಪೂರ್ವಕವಾಗಿ ಅನರ್ಹ ಗುತ್ತಿಗೆದಾರರಿಗೆ ಟೆಂಡರ್ ನೀಡುವ ಅನಿವಾರ್ಯವನ್ನು ಬಿಬಿಎಂಪಿ ಅಧಿಕಾರಿಗಳು ಸೃಷ್ಟಿಸಿದ್ದಾರೆ’ ಎಂದು ಆರೋಪಿಸಿದ್ದರು.

‘ಈ ಟೆಂಡರ್‌ ಅನ್ನೇ ಅಂತಿಮಗೊಳಿಸವಂತೆ ಬಿಬಿಎಂಪಿ ಆಡಳಿತ ಸರ್ಕಾರದ ಮೇಲೆ ಒತ್ತಡ ಹೇರುತ್ತಿದೆ. ಹೊಸ ಟೆಂಡರ್‌ ಕರೆದು ಕಾಮಗಾರಿ ನಡೆಸಲು ಇನ್ನಷ್ಟು ಸಮಯ ಹಿಡಿಯಲಿದೆ ಎಂದು ಬಿಂಬಿಸಿ ಅಕ್ರಮ ಮುಚ್ಚಿಹಾಕುವ ತಂತ್ರವಿದು. ಹೊಸದಾಗಿ ಟೆಂಡರ್‌ ಕರೆಯುವ ಬದಲು ಈ ಕ್ವಾರಿ ಗುಂಡಿಯಲ್ಲಿ ವೈಜ್ಞಾನಿಕ ನಿರ್ವಹಣಾ ಘಟಕ ಸ್ಥಾಪಿಸುವ ಕಾಮಗಾರಿಗೂ ಕೆಟಿಪಿಪಿ ಕಾಯ್ದೆ ಅಡಿ ವಿನಾಯಿತಿ ಪಡೆಯುವ ಪ್ರಯತ್ನ ನಡೆದಿದೆ. ಇದು ಇನ್ನಷ್ಟು ಅಕ್ರಮಗಳಿಗೆ ದಾರಿ ಮಾಡಿಕೊಡಲಿದೆ’ ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ತಿಳಿಸಿದರು.

 

ಪ್ರತಿಕ್ರಿಯಿಸಿ (+)