ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬಿಡಿಎ ನಿವೇಶನ ಮಾರುವಷ್ಟು ಆರ್ಥಿಕ ದಿವಾಳಿ’

ನಿರೀಕ್ಷೆ ಹುಸಿ ಮಾಡಿದ ಪ್ರಧಾನಿ : ಸಿದ್ದರಾಮಯ್ಯ
Last Updated 14 ಏಪ್ರಿಲ್ 2020, 19:29 IST
ಅಕ್ಷರ ಗಾತ್ರ

ಬೆಂಗಳೂರು: ‘ಬಿಡಿಎ ಸೈಟ್‌ಗಳನ್ನು ಹರಾಜು ಹಾಕುವಷ್ಟು ರಾಜ್ಯದ ಆರ್ಥಿಕ ಪರಿಸ್ಥಿತಿ ಸ್ಥಿತಿ ದಿವಾಳಿ ಆಗಿದೆ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟೀಕಿಸಿದ್ದಾರೆ.

ಮಂಗಳವಾರ ಇಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಅಸಮರ್ಪಕ ಆರ್ಥಿಕ ನಿರ್ವಹಣೆಯಿಂದಾಗಿ ರಾಜ್ಯ ಈ ದುಸ್ಥಿತಿಗೆ ಬಂದಿದೆ ಎಂದು ಅವರು ಟೀಕಿಸಿದರು.

‘ಬಿಡಿಎ ನಿವೇಶನ ಈ ಸಂದರ್ಭದಲ್ಲಿ ಮಾರಾಟಕ್ಕೆ ಇಡಬೇಡಿ. ಜನರ ಬಳಿ ದುಡ್ಡು ಇಲ್ಲದೇ ಇದ್ದಾಗ ಹರಾಜಿಗೆ ಹೇಗೆ ಬರುತ್ತಾರೆ? ಸರ್ಕಾರದ ಆಸ್ತಿ ಕಡಿಮೆ ಹಣಕ್ಕೆ ಮಾರುವ ಕೆಲಸ ಮಾಡಬೇಡಿ. ಮೊದಲು ಈ ಕ್ರಮದಿಂದ ಹಿಂದೆ ಸರಿಯಿರಿ’ ಎಂದು ಅವರು ಹೇಳಿದರು.

‘ಲಾಕ್‍ಡೌನ್‍ನಿಂದ ಸಂಕಷ್ಟಕ್ಕೆ ಒಳಗಾಗಿರುವ ರೈತರು, ಕೂಲಿ ಕಾರ್ಮಿಕರು ಹಾಗೂ ಬಡವರಿಗೆ ಪ್ರಧಾನಿ ನರೇಂದ್ರ ಮೋದಿಯವರು ಪರಿಹಾರ ಒದಗಿಸುತ್ತಾರೆ ಎಂಬ ಜನರ ನಿರೀಕ್ಷೆ ಹುಸಿಯಾಗಿದೆ. ಆರ್ಥಿಕವಾಗಿ ಚೈತನ್ಯ ತುಂಬುವ, ಕೃಷಿ ಕ್ಷೇತ್ರ ಮೇಲೆತ್ತುವ ಕೆಲಸ ಮಾಡಬೇಕಿತ್ತು. ಬಡವರು, ಕಾರ್ಮಿಕರಿಗೆ ಜೀವನದ ಭದ್ರತೆ ಒದಗಿಸಬೇಕಿತ್ತು. ಏಳು ಸೂತ್ರಗಳನ್ನು ಹೇಳಿ ಕೈ ತೊಳೆದುಕೊಂಡಿದ್ದಾರೆ. ಜನರನ್ನು ಕಷ್ಟದ ಕಡಲಲ್ಲಿಯೇ ತೇಲಲು ಬಿಟ್ಟಿದ್ದಾರೆ. ಪ್ರಧಾನಿ ಅವರ ಭಾಷಣ ರಾಜಕೀಯ ಭಾಷಣದ ರೀತಿಯಲ್ಲಿ ಇತ್ತು. ಕೊರೊನಾ ನಿಯಂತ್ರಣಕ್ಕೆ ಸರ್ಕಾರ ತೆಗೆದುಕೊಳ್ಳುವ ನಿರ್ಧಾರಕ್ಕೆ ನಾವು ಬದ್ದರಾಗಿದ್ದೇವೆ’ ಎಂದರು.

‘ಮಾವು, ಕಲ್ಲಂಗಡಿ ರೈತರ ಜಮೀನುಗಳಲ್ಲಿಯೇ ಕೊಳೆಯುತ್ತಿದೆ. ಇಂದಿರಾ ಕ್ಯಾಂಟೀನ್‍ನಲ್ಲಿ ಉಚಿತ ಊಟ ನಿಲ್ಲಿಸಬೇಡಿ ಎಂದು ಸರ್ಕಾರಕ್ಕೆ ಪದೇ ಪದೇ ಮನವಿ ಮಾಡಿದ್ದೆ. ಆದರೆ, ದರ ನಿಗದಿ ಮಾಡಿದರು. ಇದರಿಂದ ಬೆಂಗಳೂರಿನಲ್ಲಿ ಶೇ 50ರಷ್ಟು ಕ್ಯಾಂಟೀನ್‍ಗಳು ಮುಚ್ಚುವ ಹಂತಕ್ಕೆ ಬಂದಿವೆ’ ಎಂದರು.

ಆರ್ಥಿಕ ಪ್ಯಾಕೇಜ್ ನಿರೀಕ್ಷಿಸಿದ್ದೆವು: ಡಿಕೆಶಿ

‘ಪ್ರಧಾನಿ ಅವರಿಂದ ನಾವು ಆರ್ಥಿಕ ಪ್ಯಾಕೇಜ್‌ ನಿರೀಕ್ಷಿಸಿದ್ದೆವು. ಆದರೆ ಅವರಿಂದ ಅದ್ಯಾವ ಭರವಸೆಯೂ ಸಿಕ್ಕಿಲ್ಲ. ಇದು ಆಘಾತಕಾರಿ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯಿಸಿದರು.‌

‘ಈ ಮೊದಲು ಘೋಷಿಸಿದ್ದ ಯಾವ ಪ್ಯಾಕೇಜ್ ಸಹ ಕಾರ್ಯಗತಗೊಂಡಿಲ್ಲ, ವೈದ್ಯರು, ವೈದ್ಯಕೀಯ ಸಿಬ್ಬಂದಿಯ ಸುರಕ್ಷಿತ ಪಿಪಿಇ ಕಿಟ್‌ ಕೊಟ್ಟಿಲ್ಲ’ ಎಂದರು.

ವಾರದ ಮೊದಲು ಮಾಹಿತಿ ಕೊಡಬೇಕಿತ್ತು

‘ಲಾಕ್‌ಡೌನ್‌ ಮಾಡುವ ಒಂದು ವಾರ ಮೊದಲು ಸೂಚನೆ ಕೊಟ್ಟಿದ್ದರೆ ಈಗಿನ ಪರಿಸ್ಥಿತಿ ಬರುತ್ತಿರಲಿಲ್ಲ, ಕೂಲಿಕಾರ್ಮಿಕರು ತಮ್ಮ ಊರುಗಳಿಗೆ ಸುರಕ್ಷಿತವಾಗಿ ತಲುಪುತ್ತಿದ್ದರು. ಇದೀಗ ಅವರು ಅರ್ಧದಾರಿಯಲ್ಲೇ ಸಿಕ್ಕಿಬೀಳುವಂತಾಗಿದೆ’ ಎಂದು ಕಾಂಗ್ರೆಸ್‌ನ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಬೇಸರ ವ್ಯಕ್ತಪಡಿಸಿದರು.

‘ಪ್ರಧಾನಿ ಅವರು ತಮ್ಮ ಭಾಷಣದಲ್ಲಿ ಸಣ್ಣಪುಟ್ಟ ಉದ್ಯಮಿಗಳು, ಕಾರ್ಮಿಕರ ಬಗ್ಗೆ ಏನಾದರೂ ಉಪಾಯ ಹುಡುಕುತ್ತಾರೆ ಅಂದುಕೊಂಡಿದ್ದೆವು. ಆದರೆ ಅದು ಹುಸಿಯಾಗಿದೆ. ಅಂಬೇಡ್ಕರ್ ತತ್ವಗಳನ್ನು ಅಳವಡಿಸಿಕೊಂಡು ಅವರು ಅಧಿಕಾರ ನಡೆಸಲಿ’ ಎಂದು ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT