7
7ನೇ ಅಖಿಲ ಭಾರತ ದಲಿತ ಯುವ ಸಾಹಿತ್ಯ ಸಮ್ಮೇಳನಾಧ್ಯಕ್ಷೆಯಾಗಿ ಡಾ. ಸಮತಾ ದೇಶಮಾನೆ ಅಭಿಪ್ರಾಯ

ಸಮತಾ ಭಾರತ ಕಟ್ಟಲು ಮನುಜರಾಗುವ ಅಗತ್ಯ

Published:
Updated:

ಧಾರವಾಡ: ‘ಸಮತಾ ಭಾರತದ ‘ಧರ್ಮ’ ಜೀವ ಪರವಾದದ್ದು. ಅದರ ಗೌರವವನ್ನು ಎತ್ತರಿಸಲು ನಾವು ತಾರತಮ್ಯವನ್ನು ಕಿತ್ತುಹಾಕಿ, ಶುದ್ಧ ಮನಸ್ಸಿನಿಂದ ನಾವೆಲ್ಲರೂ ಮನುಜರು ಎಂದು ಒಪ್ಪಿಕೊಳ್ಳುವುದು ಇಂದಿನ ಅಗತ್ಯವಾಗಿದೆ’ ಎಂದು ಬೆಂಗಳೂರು ವಿಶ್ವವಿದ್ಯಾಲಯದ ಸಮಾಜಶಾಸ್ತ್ರ ಪ್ರಾಧ್ಯಾಪಕಿ ಡಾ. ಸಮತಾ ದೇಶಮಾನೆ ಅಭಿಪ್ರಾಯಪಟ್ಟರು.

ಗದುಗಿನ ದಲಿತ ಸಾಹಿತ್ಯ ಪರಿಷತ್ತು ರಾಜ್ಯ ಘಟಕವು ಭಾನುವಾರ ಆಯೋಜಿಸಿದ್ದ 7ನೇ ಅಖಿಲ ಭಾರತ ದಲಿತ ಯುವ ಸಾಹಿತ್ಯ ಸಮ್ಮೇಳನದ ಉದ್ಘಾಟನಾ ಕಾರ್ಯಕ್ರಮದ ಸರ್ವಾಧ್ಯಕ್ಷರಾಗಿ ಅವರ ಮಾತನಾಡಿದರು.

‘ಯುವಜನತೆ ಈ ವರ್ತಮಾನವನ್ನು ಅತ್ಯಂತ ಸೂಕ್ಷ್ಮವಾಗಿ ಗ್ರಹಿಸಬೇಕಾಗಿದೆ. ದುರಾಡಳಿತವುಳ್ಳ ರಾಜಕಾರಣದ ಅಫೀಮು ಯುವಕರನ್ನು ಬಲಿ ಪಡೆದು ದಾರಿ ತಪ್ಪಿಸುತ್ತಿರುವುದು ಬೇಸರದ ಸಂಗತಿ. ಇಂಥ ಆಮಿಷದ ಬದುಕಿಗೆ ಒಳಗಾಗದೆ ಯುವಕರು ಎದೆಗಾರಿಕೆಯಿಂದ ಸಾಮಾಜಿಕ ನ್ಯಾಯವನ್ನು ಮೆರೆಯುವಲ್ಲಿ ದೊಡ್ಡ ಸವಾಲನ್ನು ಎದುರಿಸಬೇಕಿದೆ’ ಎಂದರು.

‘ನಮ್ಮ ಯುವ ಪೀಳಿಗೆ ಶ್ರದ್ಧೆ, ಶ್ರಮ ವಹಿಸಿ ವರ್ತಮಾನವನ್ನು ಜಯಿಸುವ ಗುಣಮಟ್ಟದ ಶಿಕ್ಷಣ ಪಡೆಯುವುದು ತೀರಾ ಅವಶ್ಯಕವಾಗಿದೆ.  ಯಾವುದಾದರೊಂದು ಉದ್ಯೋಗ ದೊರೆತರೆ ಕುಟುಂಬದ ಆದಾಯ ಗಟ್ಟಿಗೊಳ್ಳಲಿದೆ. ಅದರಿಂದ ಸಮಾಜದ ಸಹಬಾಳ್ವೆಯಲ್ಲಿ ಪಾಲುದಾರರಾಗಿರಬಹುದು. ಬಂದ ಆಲೋಚನೆಯನ್ನು ಸಮಾಜಕ್ಕೆ ಧಾರೆ ಎರೆಯಬಹುದು’ ಎಂದರು.

‘ಉನ್ನತ ಶಿಕ್ಷಣ ಪಡೆಯುವುದರಿಂದ ಮಾತ್ರ ನಾವು ಬೆಳಕಾಗುವುದಿಲ್ಲ. ಸಮಾಜದಲ್ಲಿ ದಕ್ಕಿದ ಜ್ಞಾನವನ್ನು ಸಾಮಾನ್ಯರಿಗೆ ಸೈದ್ಧಾಂತಿಕ ನೆಲೆಗಟ್ಟಿನಲ್ಲಿ ಸಿದ್ಧಿಸುವುದೂ ಕಾಲದ ಒತ್ತಾಶಯವಾಗಿದೆ. ಇದನ್ನರಿಯಲು ಇಂಥ ಚಿಂತನ, ಮಂಥನ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ನಡೆಯುವ ಅಗತ್ಯವಿದೆ’ ಎಂದು ಡಾ. ಸಮತಾ ಅಭಿಪ್ರಾಯಪಟ್ಟರು.

ದಲಿತರ ಮೇಲಾಗುವ ದೌರ್ಜನ್ಯ, ಬಹಿಷ್ಕಾರ, ಕೊಲೆ, ಸಾಮೂಹಿಕ ಅತ್ಯಾಚಾರ, ಮಹಿಳೆಯರನ್ನು ಬೆತ್ತಲುಗೊಳಿಸುತ್ತಿರುವ ಘಟನೆಗಳು ತೀರಾ ನೋವಿನ ಸಂಗತಿಗಳು. ಇವೆಲ್ಲವನ್ನೂ ನೋಡಿದರೆ ಡಾ. ಬಾಬಾಸಾಹೇಬರು ಕಂಡ ಕನಸಿನ ಭಾರತದಲ್ಲಿದ್ದೇವೇಯೇ ಎಂಬ ಅನುಮಾನ ಮೂಡುತ್ತದೆ. ‘ಸಮಾಜವನ್ನು ಎಚ್ಚರಿಸಬೇಕಾದ ಮಾಧ್ಯಮಗಳು ತಮ್ಮತನವನ್ನು ಕಳೆದುಕೊಳ್ಳುತ್ತಿವೆ. ಮಾಧ್ಯಮಗಳು ಸಾಮಾಜಿಕ ನ್ಯಾಯದ ಪರವಾಗಿ ಧ್ವನಿ ಹೆಚ್ಚಿಸಬೇಕು’ ಎಂದು ಆತಂಕ ವ್ಯಕ್ತಪಡಿಸಿದರು.

‘ಧರ್ಮದ ಹೆಸರಿನಲ್ಲಿ ಸೋಗಲಾಡಿ ಸಂಘಟನೆಗಳು ದಲಿತರ ಬದುಕಿನ ಮೇಲೆ ಪ್ರಹಾರ ಮಾಡುತ್ತಿವೆ. ನಮ್ಮ ಅನಕ್ಷರತೆ ಅವರಿಗೆ ಬಂಡಾಳವಾಗಬಾರದು. ನೊಂದವರ ಮೇಲೆ ಆಗುವ ದಬ್ಬಾಳಿಕೆಯನ್ನು ತಡೆಯುವ ನಿಟ್ಟಿನಲ್ಲಿ ಯುವಜನತೆ ಬಾಬಾಸಾಹೇಬರ ಆಶಯದಂತೆ ಶಿಕ್ಷಣವು ಬಡವರ ಅಸ್ತ್ರವಾಗಲಿ’ ಎಂಬ ಆಶಯವನ್ನು ಡಾ. ಸಮತಾ ವ್ಯಕ್ತಪಡಿಸಿದರು.

‘ಮಹಿಳೆಯರು ಲಿಂಗಭೇದ ಮತ್ತು ಜಾತಿಭೇದಗಳ ಕಾರಣದಿಂದ ವಂಚನೆಗೆ ಒಳಗಾಗುತ್ತಿದ್ದಾರೆ. ದಲಿತ ಮಹಿಳೆಯರಿಗೆ ಬುದ್ಧಿಬಲ ಇದ್ದರೂ, ಧನಬಲ, ತೋಳ್ಬಲ ಇಲ್ಲದ ಕಾರಣ ಸಮರ್ಥ ಅರ್ಹತೆ ಗೌಣವಾಗುತ್ತಿದೆ. ಬಾಬಾಸಾಹೇಬರ ತತ್ವಗಳನ್ನು ಮರೆತ ದಲಿತ ರಾಜಕಾರಣಿಗಳು, ಮಹಿಳೆಯರಿಗೆ ಸಮಾನ ಅವಕಾಶ, ಉನ್ನತ ಅಧಿಕಾರ, ಸಚಿವ ಸ್ಥಾನ ಕೊಡದೆ ವಂಚಿಸುತ್ತಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು.‌

‘ಕನ್ನಡದಲ್ಲಿ ದಲಿತ ಸಾಹಿತ್ಯ ಗುಣಾತ್ಮಕವಾದ ಹಲವು ಪ್ರಕಾರಗಳಲ್ಲಿ ಕೃಷಿಗೈದು ತನ್ನ ಹೆಚ್ಚುಗಾರಿಕೆಯನ್ನು ಸಾಬೀತುಪಡಿಸಿದೆ. ಅಭಿವ್ಯಕ್ತಿ ಸ್ವಾತಂತ್ರ್ಯ ಅಂತರ್ಜಾಲದ ತಂತ್ರಗಾರಿಕೆಯಿಂದ ಆಲೋಚನಾ ವಿಧಾನಗಳೇ ಬದಲಾಗುತ್ತಿವೆ. ದಲಿತ ಸಾಹಿತ್ಯವೆಂದರೆ ನೋವು, ಅವಮಾನ, ಬಡತನ, ಗೋಳು ಈ ಎಲ್ಲವನ್ನೂ ಮೀರಿ ಸವಾಲುಗಳೆಂಬ  ವರ್ತಮಾನದಲ್ಲಿ ದಲಿತರು ನಿಂತು ಭೂತವನ್ನು ವಿಮರ್ಶಿಸುತ್ತಾ, ಆತ್ಮಾವಲೋಕನ ಮಾಡಿಕೊಳ್ಳುತ್ತ, ಭವಿಷ್ಯವನ್ನು ಗಟ್ಟಿಯಾಗಿ ಕಟ್ಟಿಕೊಳ್ಳುವುದರಲ್ಲಿ ದಲಿತ ಬರಹಗಾರರು ಮುಂಚೂಣಿಯಲ್ಲಿದ್ದಾರೆ’ ಎಂದು ಹೇಳಿದರು.

‘ದಲಿತ ಯುವ ಸಾಹಿತ್ಯ ಸಮ್ಮೇಳನವು ಎಲ್ಲರಲ್ಲೂ ಸಮಾನತೆ ಮೂಡಿಸಿ, ಸಮತಾ ಭಾರತದ ಬಾವುಟ ಹಾರಿಸುವತ್ತ ಸಾಹಿತ್ಯ, ಶಿಕ್ಷಣ, ಸಂಸ್ಕೃತಿಯ ಜಾತ್ರೆಯನ್ನು ಪ್ರತಿ ವರ್ಷ ನಡೆಸಿಕೊಂಡು ಬರುತ್ತಿರುವುದು ನಮ್ಮೆಲ್ಲರ ಹೆಮ್ಮೆಯ ಸಂಗತಿ. ಡಾ. ಅರ್ಜುನ ಗೋಳಸಂಗಿ ಅವರ ನಿಸ್ವಾರ್ಥ ಸೇವೆಯಿಂದಾಗಿ ಸಮತಾ ಭಾರತ ಕಟ್ಟಲು ಶ್ರಮಿಸಿದವರಿಗೆ ಸನ್ಮಾನ, ಯುವ ಸಾಹಿತಿಗಳಿಗೆ ಪ್ರೋತ್ಸಾಹ ಸಿಗುತ್ತಿದೆ’ ಎಂದು ಡಾ. ಸಮತಾ ಬಣ್ಣಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !