ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಂಪ್‌ಸೆಟ್‌ಗಾಗಿ ಪ್ರಾಣ ಪಣ! ರಭಸದಿಂದ ಹರಿಯುವ ನೀರಿಗಿಳಿದರೂ ಕೇಳುವವರಿಲ್ಲ

Last Updated 7 ಆಗಸ್ಟ್ 2019, 19:30 IST
ಅಕ್ಷರ ಗಾತ್ರ

ಅಥಣಿ (ಬೆಳಗಾವಿ ಜಿಲ್ಲೆ): ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಕೃಷ್ಣಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ದಡದಿಂದ ನೂರಾರು ಮೀಟರ್‌ ದೂರದಲ್ಲಿರುವ ಕಬ್ಬಿನ ಗದ್ದೆಗಳನ್ನು ನೀರು ಅಪೋಶನ ತೆಗೆದುಕೊಂಡಿದೆ. ಪ್ರವಾಹದ ರೌದ್ರಾತವಾರವನ್ನೂ ಲೆಕ್ಕಿಸದೇ, ತೀರದಲ್ಲಿದ್ದ ಪಂಪ್‌ಸೆಟ್‌ಗಳನ್ನು ರಕ್ಷಿಸಿಕೊಳ್ಳಲು ರೈತರು ನೀರಿಗಿಳಿದು ಹುಚ್ಚು ಸಾಹಸ ಮಾಡುತ್ತಿದ್ದಾರೆ.

ಕೃಷ್ಣೆಯ ಅಬ್ಬರದಿಂದ ಬಹಳಷ್ಟು ಹಾನಿಗೆ ಒಳಗಾಗಿರುವ ತಾಲ್ಲೂಕುಗಳಲ್ಲಿ ಅಥಣಿಯೂ ಒಂದು. ಈಗಾಗಲೇ ಇಲ್ಲಿನ ನದಿ ಇಂಗಳಗಾಂವ, ತೀರ್ಥ, ದರೂರ, ಸಪ್ತಸಾಗರ, ಹುಲಗಬಾಳಿ, ಹಳ್ಯಾಳ, ಸತ್ತಿ, ನಂದೇಶ್ವರ, ಜನವಾಡ, ಅವರಕೋಡ, ನಾಗನೂರ ಪಿ.ಕೆ., ದೊಡ್ಡವಾಡ, ಹಿಪ್ಪರಗಿ ಬ್ಯಾರೇಜ್‌ನ ಕೆಳ ಭಾಗದಲ್ಲಿರುವ ಸವದಿ, ಶಿರಹಟ್ಟಿ, ಜುಂಜರವಾಡ ಗ್ರಾಮಗಳು ಹಾಗೂ ತೋಟಗಳು ಜಲಾವೃತವಾಗಿವೆ. ಇದರಿಂದ ಅಲ್ಲಿನ ಜನರನ್ನು ಸ್ಥಳಾಂತರಿಸಲಾಗಿದೆ. ನಡುಗಡ್ಡೆಗಳಲ್ಲಿ ಇರುವವರಲ್ಲಿ ಹಾಗೂ ಗಂಜಿ ಕೇಂದ್ರಗಳಲ್ಲಿರುವ ಕೆಲವು ರೈತರಿಗೆ ಪಂಪ್‌ಸೆಟ್‌ಗಳದ್ದೇ ಚಿಂತೆ. ಅವುಗಳನ್ನು ರಕ್ಷಿಸಿಕೊಳ್ಳಲು ಪ್ರಾಣವನ್ನೇ ಪಣಕ್ಕಿಡುತ್ತಿದ್ದುದು ‘ಪ್ರಜಾವಾಣಿ’ ಪ್ರತಿನಿಧಿ ಸ್ಥಳಕ್ಕೆ ಭೇಟಿ ನೀಡಿದಾಗ ಕಂಡುಬಂತು.

ಲೈಫ್ ಜಾಕೆಟ್ ಇಲ್ಲ!:

ತಾಲ್ಲೂಕು ಆಡಳಿತದಿಂದ ಒದಗಿಸಿರುವ ದೋಣಿಗಳಲ್ಲಿ ದಾಟುವ ಅವರು, ತಮ್ಮ ಜಮೀನುಗಳಲ್ಲಿ ಹಾಕಿರುವ ಪಂಪ್‌ಸೆಟ್‌ಗಳನ್ನು ಹಗ್ಗ ಕಟ್ಟಿ, ಈಜುತ್ತಾ ಎಳೆದು ತರಲು (ನೀರಿನ ಡ್ರಮ್‌ಗಳ ಮೇಲೆ ಪಂಪ್‌ಸೆಟ್‌ ಕಟ್ಟಿರುವುದರಿಂದ ಅವು ತೇಲುತ್ತಿರುತ್ತವೆ) ಬರಿಮೈಯಲ್ಲಿ ಹೋಗುತ್ತಾರೆ. ಜಮೀನುಗಳ ನಡುವೆ ರಭಸದಿಂದ ಹರಿಯುತ್ತಿರುವ ನೀರಿನಲ್ಲೂ ಅವರು ಲೈಫ್‌ ಜಾಕೆಟ್ ಇಲ್ಲದೆಯೂ ಹುಚ್ಚು ಧೈರ್ಯ ಪ್ರದರ್ಶಿಸುವುದು ಕಂಡುಬರುತ್ತಿದೆ. ಪ್ರಾಣವನ್ನೂ ಲೆಕ್ಕಿಸದೇ ಅವರು ಈ ರೀತಿ ಮಾಡುವುದನ್ನು ಯಾರೂ ತಡೆಯುವುದಿಲ್ಲ!

ತೋಟದ ವಸತಿ ಹಾಗೂ ಗ್ರಾಮದ ನಡುವೆ ಸಂಪರ್ಕ ಕಡಿತಗೊಂಡಿದೆ. ಯಾರೂ ನೀರಿಗೆ ಇಳಿಯಬಾರದು ಬ್ಯಾನರ್‌ ಹಾಕಿದ್ದಾರೆ. ಆಯಾ ಪೊಲೀಸ್ ಠಾಣೆ ವತಿಯಿಂದ ಬ್ಯಾರಿಕೇಡ್‌ಗಳನ್ನು ತಂದಿಡಲಾಗಿದೆ. ಆದರೆ, ಆ ಸ್ಥಳಗಳಲ್ಲಿ ಜನರನ್ನು ತಡೆಯುವುದಕ್ಕಾಗಿ ಪೊಲೀಸರು ಅಥವಾ ಯಾವುದೇ ಸಿಬ್ಬಂದಿಯನ್ನೂ ನಿಯೋಜಿಸಿಲ್ಲ. ರೈತರು ಪಂಪ್‌ಸೆಟ್‌ಗಾಗಿ ನೀರಿಗಿಳಿಯುವುದನ್ನು ತಪ್ಪಿಸುವ ಕೆಲಸ ನಡೆಯುತ್ತಿಲ್ಲ. ರೈತರಿಗೆ ಪ್ರಾಣಾಪಾಯವಾದರೆ ಹೊಣೆ ಯಾರು ಎನ್ನುವ ಪ್ರಶ್ನೆ ಮೂಡಿದೆ.

ಬದುಕಿನ ಪ್ರಶ್ನೆ:

‘ಪಂಪ್‌ಸೆಟ್‌ಗಾಗಿ₹ 25ರಿಂದ ₹ 30 ಸಾವಿರ ಖರ್ಚು ಮಾಡಿರುತ್ತೇವೆ. ಅವು ನೀರಿನಲ್ಲಿ ಕೊಚ್ಚಿ ಹೋದರೆ ಬದುಕೇ ಕೊಚ್ಚಿ ಹೋಗುತ್ತದೆ. ನದಿ ನೀರಿನ ಮಟ್ಟ ಇಳಿದ ಮೇಲೆ ಕೃಷಿಗೆ ಬೇಕಾಗುತ್ತದೆಯಲ್ಲವೇ? ಇದು ನಮ್ಮ ಬದುಕಿನ ಪ್ರಶ್ನೆಯೂ ಹೌದು. ಹೀಗಾಗಿ, ಈಜಿಕೊಂಡು ಹೋಗಿ ಅವುಗಳನ್ನು ಎಳೆದುಕೊಂಡು ಬರುವುದು ಅನಿವಾರ್ಯ. ಈಗ ಬೇಡ ಎನ್ನುವವರು ತಂದುಕೊಡುತ್ತಾರೆಯೇ’ ಎಂದು ಮಾಯಣ್ಣ ಮೊದಲಾದ ರೈತರು ಕೇಳಿದರು. ಕುತ್ತಿಗೆವರೆಗೂ ಮುಳುಗಿದ್ದರೂ ಪಂಪ್‌ಸೆಟ್‌ ಇಟ್ಟಿದ್ದ ಕ್ಷಣಾರ್ಧದಲ್ಲಿ ಹೋದರು.

‘ನದಿಗೆ ನೀರು ಹೆಚ್ಚಾಗುತ್ತದೆ ಎಂದು ಗೊತ್ತಾಗಲೇ ಪಂಪ್‌ಸೆಟ್‌ಗಳನ್ನು ದೂರಕ್ಕೆ ಸಾಗಿಸಿದ್ದರು. ಈಗ ಅವೂ ಮುಳುಗಿರುವುದರಿಂದ, ಮತ್ತಷ್ಟು ಸಮೀಪಕ್ಕೆ ಎಳೆದು ತರಲು ಹೋಗಿದ್ದಾರೆ. ಅವುಗಳನ್ನು ರಕ್ಷಿಸಿಕೊಳ್ಳಲು ಹಗ್ಗದಿಂದ ಮರಕ್ಕೆ ಕಟ್ಟಿ ಬರುತ್ತಾರೆ’ ಎಂದು ಸ್ಥಳೀಯರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT