ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಂದಾಪುರದ ಬೀಜಾಡಿ ಸರ್ವಿಸ್‌ ರಸ್ತೆಗೆ ಡಾಮರೀಕರಣ

ಸ್ಥಳೀಯರ ಸಂಘಟಿತ ಹೋರಾಟಕ್ಕೆ ಜಯ, ಕೊನೆಗೂ ಬಗೆ ಹರಿದ ರಸ್ತೆ ಸಮಸ್ಯೆ
Last Updated 14 ಜೂನ್ 2019, 19:30 IST
ಅಕ್ಷರ ಗಾತ್ರ

ಕುಂದಾಪುರ: ಸಮೀಪದ ಬೀಜಾಡಿಯ ಸರ್ವಿಸ್‌ ರಸ್ತೆ ಡಾಮರೀಕರಣದ ಕೆಲಸ ಆರಂಭಗೊಂಡಿದ್ದು, ಸ್ಥಳೀಯರ ಸಂಘಟಿತ ಹೋರಾಟಕ್ಕೆ
ಜಯ ಲಭಿಸಿದೆ.

ರಾಷ್ಟ್ರೀಯ ಹೆದ್ದಾರಿ 66ರ ಚತುಷ್ಫಥ ಕಾಮಗಾರಿ ವೇಳೆ ಬೀಜಾಡಿಯಲ್ಲಿ ಸರ್ವಿಸ್ ರಸ್ತೆ ನಿರ್ಮಾಣಕ್ಕೆ ಮುಂದಾಗಿದ್ದ ಗುತ್ತಿಗೆದಾರ ಕಂಪೆನಿಯು, ರಸ್ತೆಯನ್ನು ಅಗೆದು ಹಾಕಿ ನಾಪತ್ತೆಯಾಗಿತ್ತು. ಗುತ್ತಿಗೆದಾರರ ಕಂಪೆನಿಯ ನಿರ್ಲಕ್ಷ್ಯದ ವಿರುದ್ದ ಸ್ಥಳೀಯರು ‘ಬೀಜಾಡಿ ಸರ್ವಿಸ್‌ ರಸ್ತೆ ಹೋರಾಟ ಸಮಿತಿ’ ಮೂಲಕ ಹೋರಾಟ ನಡೆಸಿದ್ದರು. ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ, ಹೆದ್ದಾರಿ ಇಲಾಖೆಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಮನವಿ ನೀಡಿ, ಕೂಡಲೇ ರಸ್ತೆ ನಿರ್ಮಾಣಕ್ಕೆ ಆಗ್ರಹಿಸಿದ್ದರ.

ಹೋರಾಟಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿ ಸ್ಥಳ ಪರಿಶೀಲನೆ ನಡೆಸಿ, ಸ್ಥಳೀಯರ ಅಹವಾಲನ್ನು ಪಡೆದುಕೊಂಡು ರಸ್ತೆ ನಿರ್ಮಾಣಕ್ಕೆ ಸೂಚನೆ ನೀಡಿದ್ದರು. ಬಳಿಕ ಕೆಲವೇ ದಿನಗಳಲ್ಲಿ ಲೋಕಸಭಾ ಚುನಾವಣೆ ಘೋಷಣೆಯಾಗಿತ್ತು. ರಸ್ತೆ ನಿರ್ಮಾಣ ಕಾರ್ಯ ಮತ್ತೆ ನನೆಗುದಿಗೆ ಬಿದ್ದಿತ್ತು.

ಚುನಾವಣೆ ಬಹಿಷ್ಕಾರ:

ಇದರಿಂದ ಸಿಟ್ಟಿಗೆದ್ದ ಜನತೆ, ‘ರಸ್ತೆ ನಿರ್ಮಾಣವಾಗದೆ ಮತದಾನ ಮಾಡುವುದಿಲ್ಲ’ ಎಂದು ಚುನಾವಣಾ ಬಹಿಷ್ಕಾರಕ್ಕೆ ಮುಂದಾಗಿದ್ದರು. ಆಗ ಇಲ್ಲಿಗೆ ಭೇಟಿ ನೀಡಿದ ಹಿರಿಯ ಅಧಿಕಾರಿಗಳು, ಚುನಾವಣೆ ಮುಗಿದ ಕೂಡಲೇ ರಸ್ತೆ ಕಾಮಗಾರಿ ಮುಗಿಸುವ ಭರವಸೆ ನೀಡಿದ್ದು, ಬಹಿಷ್ಕಾರ ಹಿಂತೆಗೆಯುವಂತೆ ಮನವೂಲಿಸಿದ್ದರು.

ಚುನಾವಣೆ ಬಳಿಕ ನೂತನ ಸಂಸದೆ ಶೋಭಾ ಕರಂದ್ಲಾಜೆ ಅವರನ್ನು ಭೇಟಿಯಾಗಿದ್ದ ಸಮಿತಿ, ಮಳೆಗಾಲದ ಸಂದರ್ಭದಲ್ಲಿ ಸರ್ವಿಸ್‌ ರಸ್ತೆಯ ಮೇಲಾಗುವ ಪರಿಣಾಮಗಳನ್ನು ಮನದಟ್ಟು ಮಾಡಿದ್ದರು. ಸ್ಥಳೀಯರ ಆಗ್ರಹಕ್ಕೆ ಸ್ಪಂದಿಸಿದ ಸಂಸದೆ ಕರಂದ್ಲಾಜೆ ಗುತ್ತಿಗೆ ಕಂಪೆನಿ ಹಾಗೂ ಹೆದ್ದಾರಿ ಇಲಾಖೆಯ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ, ಕೂಡಲೇ ಕಾಮಗಾರಿ ಮುಗಿಸುವಂತೆ ತಾಕೀತು ಮಾಡಿದ್ದರು.

ಏಕಮುಖ ಸಂಚಾರಕ್ಕೆ ಆದ್ಯತೆ:
ಬೀಜಾಡಿಯಲ್ಲಿ ಏಕಮುಖ ಸಂಚಾರಕ್ಕೆ ಆದ್ಯತೆ ನೀಡುವ ಮೂಲಕ ಅಪಘಾತಗಳಿಗೆ ಮುಕ್ತಿ ನೀಡುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ. ಒಳಪೇಟೆಯಿಂದ ಬರುವ ವಾಹನಗಳು ರಾಷ್ಟ್ರೀಯ ಹೆದ್ದಾರಿಯ ಸಂಚಾರದ ವಿರುದ್ಧ ದಿಕ್ಕಿನಿಂದ ಚಲಿಸದಂತೆ ಮನವಿ ಮಾಡಿದ್ದಾರೆ.

ಅಪಘಾತ ವಲಯ

ಅಪಘಾತ ವಲಯವಾಗಿದ್ದ ಬೀಜಾಡಿ ಸರ್ವಿಸ್‌ ರಸ್ತೆಯ ನಿರ್ಮಾಣ ತೊಡಕಿನಿಂದಾಗಿ ಬೀಜಾಡಿ ಜಂಕ್ಷನ್‌ ಅಪಘಾತ ವಲಯವಾಗಿ ಗುರುತಿಸಿಕೊಂಡಿತ್ತು. ಸರ್ವಿಸ್‌ ರಸ್ತೆಯಿಂದ ಹೆದ್ದಾರಿ ಪ್ರವೇಶಿಸುವ ಹಾಗೂ ಹೆದ್ದಾರಿಯಿಂದ ಬೀಜಾಡಿ ರಸ್ತೆ ಪ್ರವೇಶಿಸುವ ವಾಹನ ಸವಾರರು ಹಾಗೂ ಪಾದಾಚಾರಿಗಳು ಅಪಘಾತಕ್ಕೀಡಾಗಿದ್ದರು.

**

ಸರ್ವಿಸ್‌ ರಸ್ತೆ ನಿರ್ಮಾಣದಿಂದ ಪ್ರಾಣ ಹಾನಿ ತಪ್ಪಲಿದೆ. ಇದಕ್ಕೆ ಸಹಕಾರ ನೀಡಿದ ಎಲ್ಲರಿಗೂ ನಾವು ಕೃತಜ್ಞತೆ ಸಲ್ಲಿಸಬೇಕು.
- ರಾಜು ಬೆಟ್ಟಿನ್‌ಮನೆ, ಹೋರಾಟ ಸಮಿತಿ ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT