ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ ವಿಮಾನ ಹುಬ್ಬಳ್ಳಿಯತ್ತ ‘ಪ್ರಯಾಣ’!

ಏರ್‌ ಇಂಡಿಯಾ ವಿಮಾನ ವಾಪಸ್‌ಗೆ ಉದ್ಯಮಿಗಳ ಆಕ್ರೋಶ
Last Updated 26 ಮೇ 2019, 20:00 IST
ಅಕ್ಷರ ಗಾತ್ರ

ಬೆಳಗಾವಿ: ಬೆಂಗಳೂರು–ಬೆಳಗಾವಿ–ಬೆಂಗಳೂರು ಮಾರ್ಗವಾಗಿ ವಾರದಲ್ಲಿ 4 ದಿನಗಳವರೆಗೆ ಕಾರ್ಯಾಚರಣೆ ನಡೆಸುತ್ತಿದ್ದ ಏರ್‌ಇಂಡಿಯಾ ವಿಮಾನ (ಏರ್‌ ಬಸ್– ಎ319 ಎ15017) ಸೇವೆಯನ್ನು ಜೂನ್‌ 3ರಿಂದ ಸ್ಥಗಿತಗೊಳಿಸುತ್ತಿರುವುದು, ಈ ಭಾಗದ ಉದ್ಯಮಿಗಳ ಅಸಮಾಧಾನಕ್ಕೆ ಕಾರಣವಾಗಿದೆ.

ಏರ್‌ಇಂಡಿಯಾ ವಿಮಾನ ಸೇವೆಯನ್ನು ವಾಪಸ್‌ ಪಡೆಯುತ್ತಿರುವ ಬಗ್ಗೆ ವಿಮಾನನಿಲ್ದಾಣದ ಟ್ಟಿಟರ್‌ ಪುಟದಲ್ಲಿ ಭಾನುವಾರ ಮಾಹಿತಿ ಪ್ರಕಟಿಸಲಾಗಿದೆ. ಈ ಮಾರ್ಗದಲ್ಲಿ ಶೇ 90ರಿಂದ 95ರಷ್ಟು ಪ್ರಯಾಣಿಕರು ಸಂಚರಿಸುತ್ತಿದ್ದರು. ಆದರೂ ಸೇವೆಯನ್ನು ‘ಸಕಾರಣವಿಲ್ಲದೇ’ ಸ್ಥಗಿತಗೊಳಿಸಲಾಗುತ್ತಿದೆ ಎಂಬ ಆಕ್ರೋಶ ವ್ಯಕ್ತವಾಗಿದೆ.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ವಿಮಾನನಿಲ್ದಾಣ ನಿರ್ದೇಶಕ ರಾಜೇಶ್‌ಕುಮಾರ್‌ ಮೌರ್ಯ, ‘ಏರ್‌ ಇಂಡಿಯಾ ವಿಮಾನ ಜೂನ್‌ ಮೊದಲ ವಾರ ಬೆಳಗಾವಿಯಿಂದ ಹುಬ್ಬಳ್ಳಿಗೆ ಕಾರ್ಯಾಚರಣೆ ಸ್ಥಳಾಂತರಗೊಳಿಸುತ್ತಿರುವುದು ಗೊತ್ತಾಗಿದೆ. ಬೆಂಗಳೂರಿಗೆ ಹಾರಾಡುತ್ತಿದ್ದ 4 ವಿಮಾನಗಳ ಸಂಖ್ಯೆ 3ಕ್ಕೆ ಇಳಿಯಲಿದೆ’ ಎಂದಷ್ಟೇ ತಿಳಿಸಿದರು.

‌ಇಲ್ಲಿಂದ ಸದ್ಯ ಬೆಂಗಳೂರಿಗೆ 3 ವಿಮಾನಗಳ ಕಾರ್ಯಾಚರಣೆ ಇದೆ. ಅಲಯನ್ಸ್‌ ಏರ್‌ (ಬೆಂಗಳೂರು–ಪುಣೆ–ಬೆಂಗಳೂರು), ಸ್ಟಾರ್ ಏರ್ (ಬೆಂಗಳೂರು–ಬೆಳಗಾವಿ–ಅಹಮದಾಬಾದ್) ಹಾಗೂ ಏರ್‌ಇಂಡಿಯಾ (ವಾರದಲ್ಲಿ 4 ದಿನ ಬೆಂಗಳೂರು–ಬೆಳಗಾವಿ–ಬೆಂಗಳೂರು) ವಿಮಾನಗಳು ಹಾರಾಡುತ್ತಿದ್ದುದ್ದರಿಂದ ಹೆಚ್ಚಿನ ಪ್ರಯಾಣಿಕರಿಗೆ ಅವಕಾಶವಾಗುತ್ತಿತ್ತು. ಇಲ್ಲಿಂದ ಬೆಂಗಳೂರಿಗೆ ಹೋಗುವವರು, ಅಲ್ಲಿಂದ ಇಲ್ಲಿಗೆ ಬರುವವರಿಗೆ ಹೆಚ್ಚಿನ ಆಯ್ಕೆಗಳು ಸಿಗುತ್ತಿದ್ದುದ್ದರಿಂದ ಬಹಳ ಅನುಕೂಲವಾಗಿತ್ತು. ಕೆಲವು ಗಂಟೆಗಳ ಕೆಲಸಕ್ಕಾಗಿ ಬೆಂಗಳೂರಿಗೆ ಹೋಗಿ ಬರುವವರಿಗೆ ಪೂರಕವಾಗಿದೆ. ಆದರೆ, ಏರ್‌ಇಂಡಿಯಾ ಕಾರ್ಯಾಚರಣೆ ಸ್ಥಗಿತಗೊಳಿಸಿದರೆ ಇಲ್ಲಿಂದ ಬೆಂಗಳೂರಿಗೆ 3 ವಿಮಾನಗಳಷ್ಟೇ ಇರಲಿವೆ. ‘ಉಡಾನ್‌’ ಯೋಜನೆಯಡಿ ಆಯ್ಕೆಯಾಗಿ ‘ಜೀವಕಳೆ’ ಪಡೆದುಕೊಂಡಿದ್ದ ಸಾಂಬ್ರಾ ವಿಮಾನನಿಲ್ದಾಣಕ್ಕೆ ಮಂಕು ಕವಿದಂತಾಗಿದೆ.

‘ಪ್ರಯಾಣಿಕರು ಅಲಯನ್ಸ್‌ ಏರ್ ಹಾಗೂ ಸ್ಟಾರ್ ಏರ್ ವಿಮಾನಗಳಿಗೆ ಟಿಕೆಟ್‌ ಬುಕ್ಕಿಂಗ್ ಮಾಡಬಹುದು. ಯಾವ ಕಾರಣಕ್ಕೆ ಏರ್ ಇಂಡಿಯಾ ಸೇವೆ ವಾಪಸ್ ಪಡೆಯುತ್ತಿದೆ ಎನ್ನುವುದು ಗೊತ್ತಿಲ್ಲ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ವಿಮಾನನಿಲ್ದಾಣದ ಅಧಿಕಾರಿಯೊಬ್ಬರು ತಿಳಿಸಿದರು.

ವಿಮಾನ ಸೇವೆ ಹಿಂಪಡೆದಿರುವುದಕ್ಕೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ‘ಬೆಳಗಾವಿಯಲ್ಲಿ ಉತ್ತಮ ಪ್ರತಿಕ್ರಿಯೆ ಇದ್ದರೂ ವಿಮಾನ ಕಳೆದುಕೊಳ್ಳುತ್ತಾ ಹೋದರೆ ಬೆಳಗಾವಿ ಅಭಿವೃದ್ಧಿಯಾಗುವುದಾದರೂ ಹೇಗೆ? ಉದ್ಯಮ ಸೇರಿದಂತೆ ವಿವಿಧ ಚಟುವಟಿಕೆಗಳಿಗೆ ತೊಂದರೆಯಾಗುತ್ತದೆ. ಬೆಳಗಾವಿಯಲ್ಲಿ ಅಂತರರಾಷ್ಟ್ರೀಯ ಪಂದ್ಯಗಳು ನಡೆಯುತ್ತಿರುವುದಕ್ಕೆ ವಿಮಾನಗಳು ಕಾರಣವಾಗಿವೆ. ಹೀಗಾಗಿ, ಸಂಬಂಧಿಸಿದ ಜನಪ್ರತಿನಿಧಿಗಳು ಕೂಡಲೇ ಎಚ್ಚೆತ್ತುಕೊಳ್ಳಬೇಕು’ ಎಂದು ಆಗ್ರಹಿಸಿದ್ದಾರೆ.

‘ಹುಬ್ಬಳ್ಳಿಗೆ ವಿಮಾನ ಪಡೆದುಕೊಳ್ಳುವುದಕ್ಕಾಗಿ ಬೆಳಗಾವಿಯನ್ನು ಬಲಿ ಕೊಡುವುದು ಸರಿಯಲ್ಲ. ಲಾಬಿಗೆ ಮಣಿಯಬಾರದು’ ಎಂಬ ಮಾತುಗಳು ಕೂಡ ಕೇಳಿಬಂದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT