ಶುಕ್ರವಾರ, ನವೆಂಬರ್ 15, 2019
21 °C
ನೆರೆ ಸಂತ್ರಸ್ತರ ಸಂಕಷ್ಟ ಆಲಿಸದ ಸಚಿವ ಶೆಟ್ಟರ್‌

ಬೆಳಗಾವಿ: ತಿಂಗಳಲ್ಲಿ 2 ಬಾರಿಯಷ್ಟೇ ಬಂದ ‘ಉಸ್ತುವಾರಿ’!

Published:
Updated:
Prajavani

ಬೆಳಗಾವಿ: ಜಗದೀಶ ಶೆಟ್ಟರ್‌ ಅವರು ಜಿಲ್ಲಾ ಉಸ್ತುವಾರಿ ಸಚಿವರಾಗಿ ನೇಮಕವಾಗಿ ಬುಧವಾರಕ್ಕೆ (ಅ.16) ತಿಂಗಳಾಗಲಿದೆ. ಈ ಅವಧಿಯಲ್ಲಿ ಅವರು ಜಿಲ್ಲೆಗೆ ಭೇಟಿ ನೀಡಿರುವುದು ಎರಡು ಬಾರಿಯಷ್ಟೇ!

ಸರ್ಕಾರವು ಸೆ. 16ರಂದು ಉಸ್ತುವಾರಿಗಳನ್ನು ನೇಮಿಸಿತು. ಪಕ್ಕದ ಹುಬ್ಬಳ್ಳಿಯವರಾದ ಶೆಟ್ಟರ್‌ ಅವರಿಗೆ ಜಿಲ್ಲೆಯ ಜವಾಬ್ದಾರಿ ವಹಿಸಲಾಗಿದೆ. ಸೆ. 20ರಂದು ಮೊದಲ ಭೇಟಿ ನೀಡಿದ್ದ ಅವರು ಅಧಿಕಾರಿಗಳು ಹಾಗೂ ರೈತ ಮುಖಂಡರ ಸಭೆ ನಡೆಸಿದ್ದರು. ಅಲ್ಲಿ ಯಾವುದೇ ಸ್ಪಷ್ಟ ಭರವಸೆ ನೀಡಲಿಲ್ಲವೆಂದು ರೈತ ಮುಖಂಡರು ‌‌‌‌ಘೇರಾವ್‌ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದರಿಂದ ಸಚಿವರು ‘ಪ್ರತಿಭಟನೆಯ ಸ್ವಾಗತ’ದಿಂದ ಮುಜುಗರಕ್ಕೆ ಒಳಗಾಗಿದ್ದರು.

ಮುಖ್ಯಮಂತ್ರಿ ಬಂದಾಗಲೂ ಬರಲಿಲ್ಲ: ಇದಾಗಿ 10 ದಿನಗಳ ಬಳಿಕ ಅಂದರೆ ಅ.1ರಂದು ಉದ್ಯಮಬಾಗ್‌ ಕೈಗಾರಿಕಾ ಪ್ರದೇಶಕ್ಕೆ ಭೇಟಿ ನೀಡಿ ಅಲ್ಲಿನ ಅವ್ಯವಸ್ಥೆಯನ್ನು ವೀಕ್ಷಿಸಿದ್ದರು. ಕೈಗಾರಿಕಾ ಸಚಿವರೂ ಆಗಿರುವ ಅವರು ಉದ್ಯಮಿಗಳೊಂದಿಗೆ ಚರ್ಚಿಸಿದ್ದರು. ನಂತರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಅಧಿಕಾರಿಗಳೊಂದಿಗೆ ನಗರೋತ್ಥಾನ ಯೋಜನೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿದ್ದರು. ಸಂಜೆ ಕಿತ್ತೂರಿನಲ್ಲಿ ಕಿತ್ತೂರು ಉತ್ಸವದ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡಿದ್ದರು. ಇದಾಗಿ 15 ದಿನಗಳೇ ಕಳೆದಿವೆ. ಆದರೆ, ಉಸ್ತುವಾರಿ ಸಚಿವರು ಇತ್ತ ಸುಳಿದಿಲ್ಲ. ಅ.3ರಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಜಿಲ್ಲಾ ಪ್ರವಾಸ ಕೈಗೊಂಡಿದ್ದಾಗಲೂ ಅವರು ಬಂದಿರಲಿಲ್ಲ. ಕಿತ್ತೂರು ಉತ್ಸವ ಸಮೀಪಿಸುತ್ತಿದ್ದರೂ ಪೂರ್ವಸಿದ್ಧತೆಯನ್ನು ಪರಿಶೀಲಿಸಿಲ್ಲ.

ನೆರೆಬಾಧಿತ ಪ್ರದೇಶಗಳಿಗೆ ಹೋಗಿಲ್ಲ: ಜಿಲ್ಲೆಯಾದ್ಯಂತ ಹಿಂದೆಂದೂ ಕಂಡರಿಯದ ರೀತಿಯಲ್ಲಿ ಪ್ರವಾಹ, ಅತಿವೃಷ್ಟಿ ಬಂದಿದೆ. ಬರೋಬ್ಬರಿ ₹ 11ಸಾವಿರ ಕೋಟಿ ಹಾನಿ ಸಂಭವಿಸಿದೆ. ಸಾವಿರಾರು ಮಂದಿ ಸಂತ್ರಸ್ತರಾಗಿದ್ದಾರೆ. ಉಸ್ತುವಾರಿ ಸಚಿವರು 2 ಬಾರಿ ಭೇಟಿ ನೀಡಿದಾಗಲೂ ಪ್ರವಾಹ ಸಂತ್ರಸ್ತರ ಅಹವಾಲು ಆಲಿಸುವ ಅಥವಾ ಅವರ ಸಮಸ್ಯೆಗಳ ಪರಿಹಾರಕ್ಕೆ ಸ್ಪಂದಿಸುವ ಕಾಳಜಿ ತೋರಿಲ್ಲ! ಅಧಿಕಾರಿಗಳ ಸಭೆಯನ್ನಷ್ಟೇ ನಡೆಸಿದ್ದಾರೆ; ಅವರಿಂದ ವರದಿಯನ್ನಷ್ಟೇ ಪಡೆದಿದ್ದಾರೆ. ಆದರೆ, ನೆರೆಬಾಧಿತ ಪ್ರದೇಶಗಳಿಗೆ ಭೇಟಿಯನ್ನೇ ನೀಡಿಲ್ಲ. ಇದು ಇಲ್ಲಿನವರ ಆಕ್ರೋಶಕ್ಕೆ ಕಾರಣವಾಗಿದೆ.

ಉಸ್ತುವಾರಿ ಸಚಿವರಾದವರು ಜಿಲ್ಲಾ ಕೇಂದ್ರವಾದ ನಗರದಲ್ಲಿ ಕಚೇರಿ ತೆರೆಯಬೇಕು. ಜನರ ಅಹವಾಲು, ಮನವಿಗಳನ್ನು ಸ್ವೀಕರಿಸಲು ಸಿಬ್ಬಂದಿ ನಿಯೋಜಿಸಬೇಕು. ಆದರೆ, ತಿಂಗಳಾದರೂ ಈ ಕಾರ್ಯ ನಡೆದಿಲ್ಲ. ಹೀಗಾಗಿ, ಜನರು ಸಮಸ್ಯೆ ಹೇಳಿಕೊಳ್ಳಲು ಅಧಿಕಾರಿಗಳನ್ನೇ ಅವಲಂಬಿಸುವಂತಾಗಿದೆ. ‘ಉಸ್ತುವಾರಿ ಸಚಿವರಿದ್ದರೂ ಇಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ’ ಎನ್ನಲಾಗುತ್ತಿದೆ.

ವಾರಕ್ಕೊಮ್ಮೆಯಾದರೂ ಬರಲಿ: ‘ಬಿಜೆಪಿಯವರಿಗೆ ಅಧಿಕಾರ ಪಡೆಯುವುದಷ್ಟೇ ಚಿಂತೆಯಾಗಿತ್ತು. ಜನರ ಬಗ್ಗೆ ಕಾಳಜಿ ಇಲ್ಲ. ಉಸ್ತುವಾರಿ ಸಚಿವರು ನೆರೆ ಸಂತ್ರಸ್ತರನ್ನು ಭೇಟಿಯಾಗಿ ಅಹವಾಲು ಆಲಿಸಲಿಲ್ಲ. ಇದು ದುರಂತ. ಶೆಟ್ಟರ್‌ ಅವರನ್ನು ಉಸ್ತುವಾರಿ ಮಾಡಿದ್ದಕ್ಕೆ ಇಲ್ಲಿನ ಅವರ ಪಕ್ಷದ ಮುಖಂಡರಲ್ಲಿಯೇ ಆಂತರಿಕವಾಗಿ ಭಿನ್ನಮತವಿದೆ. ಹೀಗಾಗಿ, ಉಸ್ತುವಾರಿ ಸಚಿವರು ಇಲ್ಲಿಗೆ ನಿಯಮಿತವಾಗಿ ಬರುತ್ತಿಲ್ಲದಿರಬಹುದು’ ಎಂದು ಕಾಂಗ್ರೆಸ್ ಜಿಲ್ಲಾ  ಘಟಕದ ಅಧ್ಯಕ್ಷ ವಿನಯ ನಾವಲಗಟ್ಟಿ ಪ್ರತಿಕ್ರಿಯಿಸಿದರು.

‘ಸಚಿವರು ವಾರಕ್ಕೊಮ್ಮೆಯಾದರೂ ಬಂದು ಜನರ ಅಹವಾಲು ಆಲಿಸಬೇಕು. ಜಿಲ್ಲಾ ಪ್ರವಾಸ ಮಾಡಿ, ಸಂತ್ರಸ್ತರಿಗೆ ಪರಿಹಾರ ವಿತರಣೆ ಬಗ್ಗೆ ಪರಿಶೀಲಿಸಬೇಕು. ವಾಸ್ತವ ಅರಿಯಬೇಕು. ಕೂಡಲೇ ಕಚೇರಿ ಆರಂಭಿಸಬೇಕು’ ಎಂದು ಒತ್ತಾಯಿಸಿದರು.

ಪ್ರತಿಕ್ರಿಯೆಗೆ ಸಚಿವರು ಲಭ್ಯವಾಗಲಿಲ್ಲ.

ಪ್ರತಿಕ್ರಿಯಿಸಿ (+)