ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: ಮಾಜಿ ಶಾಸಕನ ಪುತ್ರನಿಗೆ ಗುಂಡಿಕ್ಕಿ ಹತ್ಯೆ

ಆಸ್ತಿ ವಿವಾದ ಹತ್ಯೆ ಕಾರಣ: ಶಂಕೆ
Last Updated 20 ಮಾರ್ಚ್ 2019, 19:00 IST
ಅಕ್ಷರ ಗಾತ್ರ

ಬೆಳಗಾವಿ: ಮಾಜಿ ಶಾಸಕ ಪರಶುರಾಮ ನಂದಿಹಳ್ಳಿ ಅವರ ಪುತ್ರ ಅರುಣ (53) ಅವರನ್ನು ಇಲ್ಲಿಗೆ ಸಮೀಪದ ಧಾಮಣೆ– ಯಳ್ಳೂರ ರಸ್ತೆಯಲ್ಲಿ ಮಂಗಳವಾರ ರಾತ್ರಿ ಅಪರಿಚಿತ ವ್ಯಕ್ತಿಗಳು ಗುಂಡಿಟ್ಟು ಹತ್ಯೆ ಮಾಡಿದ್ದಾರೆ.

ನಗರದ ವಡಗಾಂವದಲ್ಲಿ ಇಬ್ಬರು ಪತ್ನಿಯರು ಹಾಗೂ 14 ವರ್ಷದ ಪುತ್ರನ ಜೊತೆ ಅರುಣ ವಾಸವಾಗಿದ್ದರು. ಧಾಮಣೆಯಲ್ಲಿರುವ ತಮ್ಮ ಎರಡನೇ ಪತ್ನಿ ಗೀತಾ ಅವರ ತವರು ಮನೆಗೆ ಭೇಟಿ ನೀಡಿ, ರಾತ್ರಿ ಒಬ್ಬರೇ ಬೆಳಗಾವಿಗೆ ಕಾರಿನಲ್ಲಿ ವಾಪಸ್ಸಾಗುತ್ತಿದ್ದರು.

ಧಾಮಣೆ– ಯಳ್ಳೂರ ರಸ್ತೆಯಲ್ಲಿ ಕಾರನ್ನು ಅಡ್ಡಗಟ್ಟಿದ ದುಷ್ಕರ್ಮಿಗಳು, ಅವರನ್ನು ಹೊರ
ಗೆಳೆದು ನಾಡಪಿಸ್ತೂಲ್‌ನಿಂದ ಗುಂಡು ಹಾರಿಸಿ ಪರಾರಿಯಾಗಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ಸಾರ್ವಜನಿಕರು ಆಸ್ಪತ್ರೆಗೆ ಸಾಗಿಸುತ್ತಿದ್ದ ವೇಳೆ ಮಾರ್ಗಮಧ್ಯದಲ್ಲಿ ಸಾವನ್ನಪ್ಪಿದ್ದಾರೆ.

ಆಸ್ತಿ ವಿವಾದ?: ತಂದೆ ಪರಶುರಾಮ ಅವರು 1967ರಲ್ಲಿ ಬೆಳಗಾವಿ ತಾಲ್ಲೂಕಿನ ಉಚಗಾಂವ ವಿಧಾನಸಭಾ ಕ್ಷೇತ್ರದಿಂದ (ಕ್ಷೇತ್ರ ಪುನರ್‌ ವಿಂಗಡಣೆ ನಂತರ ಬೆಳಗಾವಿ ಗ್ರಾಮೀಣ ಹಾಗೂ ಬೆಳಗಾವಿ ದಕ್ಷಿಣ ಕ್ಷೇತ್ರವಾಗಿ ವಿಭಜನೆಯಾಗಿದೆ) ಕಾಂಗ್ರೆಸ್‌ ಪಕ್ಷದಿಂದ ಆಯ್ಕೆಯಾಗಿದ್ದರು. ವಿಶ್ವ ಭಾರತ ಸೇವಾ ಸಮಿತಿ ಶಿಕ್ಷಣ ಸಂಸ್ಥೆಯನ್ನು ಹುಟ್ಟುಹಾಕಿದ್ದರು. ಈ ಸಂಸ್ಥೆಯಡಿ ಎರಡು ಪ್ರಾಥಮಿಕ ಹಾಗೂ 28 ಪ್ರೌಢಶಾಲೆಗಳನ್ನು ಆರಂಭಿಸಿದ್ದರು. ಪರಶುರಾಮ ಅವರಿಗೆ ವಿಜಯ, ಪ್ರಕಾಶ ಹಾಗೂ ಅರುಣ ಮೂವರು ಪುತ್ರ ಇದ್ದಾರೆ. ಶಿಕ್ಷಣ ಸಂಸ್ಥೆಯನ್ನು ಹಿರಿಯ ಅಣ್ಣ ವಿಜಯ ನೋಡಿಕೊಳ್ಳುತ್ತಿದ್ದರು. ಅದೇ ಸಂಸ್ಥೆಯಲ್ಲಿ ಅರುಣ ದೈಹಿಕ ಶಿಕ್ಷಣ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದರು.

‘ಶಿಕ್ಷಣ ಸಂಸ್ಥೆಗೆ ಸೇರಿದ ಆಸ್ತಿ ಹಂಚಿಕೆ ವಿಷಯದಲ್ಲಿ ಸಹೋದರರ ನಡುವೆ ವೈಮನಸ್ಸಿನ ಕಾರಣದಿಂದಾಗಿ ಕೊಲೆ ನಡೆದಿರುವ ಸಾಧ್ಯತೆ ಇದೆ ಎನ್ನುವುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ’ ಎಂದು ನಗರ ಪೊಲೀಸ್‌ ಆಯುಕ್ತ ಬಿ.ಎಸ್‌. ಲೋಕೇಶಕುಮಾರ್‌ ಸುದ್ದಿಗಾರರಿಗೆ ತಿಳಿಸಿದರು.‘

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT