ಭಾನುವಾರ, ಸೆಪ್ಟೆಂಬರ್ 20, 2020
21 °C
ಮಾನವ ಬಂಧುತ್ವ ವೇದಿಕೆಯಿಂದ ದಿನವಿಡೀ ಕಾರ್ಯಕ್ರಮ

ಅಂಬೇಡ್ಕರ್‌ ಮಹಾಪರಿನಿರ್ವಾಣ ದಿನ: ಸ್ಮಶಾನದಲ್ಲಿ ಅಂತರ್ಜಾತಿ ವಿವಾಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಬೆಳಗಾವಿ: ‌ಡಾ.ಬಿ.ಆರ್. ಅಂಬೇಡ್ಕರ್‌ ಮಹಾಪರಿನಿರ್ವಾಣ ದಿನದ ಅಂಗವಾಗಿ ಇಲ್ಲಿನ ಸದಾಶಿವನಗರದ ಸ್ಮಶಾನದಲ್ಲಿ ಮಾನವ ಬಂಧುತ್ವ ವೇದಿಕೆಯಿಂದ ಗುರುವಾರ ಆಯೋಜಿಸಿದ್ದ ಮೌಢ್ಯ ವಿರೋಧಿ ಪರಿವರ್ತನಾ ದಿನಾಚರಣೆ ಕಾರ್ಯಕ್ರಮದಲ್ಲಿ ಸೋಪಾನ ಬಾಳಕೃಷ್ಣ ಜಾಂಬೋಟಿ– ರೇಖಾ ಹಿರೇಬಾಗೇವಾಡಿ ಜೋಡಿ ಕುವೆಂಪು ಮಂತ್ರಮಾಂಗಲ್ಯದ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ಮಹಾಪರಿನಿರ್ವಾಣ ದಿನದಂದು 2014ರಿಂದಲೂ ಸ್ಮಶಾನದಲ್ಲಿ ಸಾಮೂಹಿಕ ಭೋಜನ, ಚಿಂತನ–ಮಂಥನ ಹಾಗೂ ವಾಸ್ತವ್ಯ ಕಾರ್ಯಕ್ರಮ ನಡೆಸಿಕೊಂಡು ಬರಲಾಗುತ್ತಿದೆ. ಈ ಬಾರಿ, ಅಂತರ್ಜಾತಿ ಸರಳ ವಿವಾಹ ಮಾಡಿಸಿದ್ದು ವಿಶೇಷವಾಗಿತ್ತು.

‘ಸ್ಮಶಾನದಲ್ಲಿ ಮದುವೆ ಮಾಡಿಸಿರುವುದು ದೇಶದಲ್ಲಿಯೇ‌ ಮೊದಲು. ಇದೊಂದು ಕ್ರಾಂತಿಕಾರಕ ಹೆಜ್ಜೆಯಾಗಿದೆ. ಈ ಮೂಲಕ ನಾವು, ಮೌಢ್ಯತೆಯ ವಿರುದ್ಧ ದಾಪುಗಾಲು ಇಟ್ಟಿದ್ದೇವೆ’ ಎಂದು ಶಾಸಕ, ಕಾರ್ಯಕ್ರಮದ ರೂವಾರಿ ಸತೀಶ ಜಾರಕಿಹೊಳಿ ಹೇಳಿದರು.

‘ಸ್ಮಶಾನದಲ್ಲಿ ಮದುವೆ ಮಾಡಿಕೊಳ್ಳುವವರಿಗೆ ₹ 2 ಲಕ್ಷ ಪ್ರೋತ್ಸಾಹಧನ ನೀಡಬೇಕು. ಇದನ್ನು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಬೆಳಗಾವಿಯಲ್ಲಿ ನಡೆಯುವ ವಿಧಾನಮಂಡಲ ಅಧಿವೇಶನದಲ್ಲಿಯೇ ಘೋಷಿಸಬೇಕು. ಭಯಮುಕ್ತ ಸಮಾಜ ನಿರ್ಮಾಣಕ್ಕಾಗಿ ಇಂತಹ ಕಾರ್ಯಕ್ರಮಗಳನ್ನು ಪ್ರೋತ್ಸಾಹಿಸಬೇಕು’ ಎಂದು ಒತ್ತಾಯಿಸಿದರು.

ನವದಂಪತಿಗೆ ವೈಯಕ್ತಿಕವಾಗಿ ₹ 50 ಸಾವಿರ ನೀಡಿದರು

ಚಿಂತಕ ಬರಗೂರು ರಾಮಚಂದ್ರಪ್ಪ ಮಾತನಾಡಿ, ‘ದೇಶದಲ್ಲಿ ವಿಚಾರದ ಹೆಸರಲ್ಲಿ ವಿಕಾರ ತುಂಬುವ ಕೆಲಸ ನಡೆಯುತ್ತಿದೆ’ ಎಂದು ವಿಷಾದಿಸಿದರು.

‘ಇದು ವಿವೇಕಾನಂದರ ಕಾಲವಲ್ಲ. ವಿವಾದಾನಂದರ, ವಿಕಾರಾನಂದರ ಕಾಲದಲ್ಲಿದ್ದೇವೆ. ವಿಚಾರಗಳನ್ನು ವಿಕಾರಗಳನ್ನಾಗಿ ಮಾಡಲಾಗುತ್ತಿದೆ. ಕೆಲವರು ವಿವೇಕಾನಂದರನ್ನು ಹೈಜಾಕ್ ಮಾಡಿದ್ದು, ಅವರನ್ನು ವಿಮೋಚನೆಗೊಳಿಸಬೇಕಾಗಿದೆ. ಮತಕ್ಕಾಗಿ ಅಪಹರಣಕ್ಕೆ ಒಳಗಾಗಿರುವ ಅಂಬೇಡ್ಕರ್‌ ಅವರನ್ನೂ ಬಿಡುಗಡೆ ಮಾಡಬೇಕಾಗಿದೆ’ ಎಂದು ಹೇಳಿದರು.

ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನದಾಸ್ ಮಾತನಾಡಿ, ‘ದೇಶದ ಸಮಸ್ಯೆಗಳು ಹಾಗೂ ಸವಾಲುಗಳಿಗೆ ಸಂವಿಧಾನ ಕಾರಣ ಎಂದು ಕೆಲವರು ವಾದಿಸುತ್ತಿದ್ದಾರೆ. ಅದು ಸುಳ್ಳು. ದೋಷ ಇರುವುದು ಸಂವಿಧಾನದಲ್ಲಲ್ಲ; ಅದನ್ನು ಅನುಷ್ಠಾನಗೊಳಿಸುತ್ತಿರುವ ನಮ್ಮಲ್ಲಿ’ ಎಂದರು.

**

ಸ್ಮಶಾನದಲ್ಲಿ ಕಾರ್ಯಕ್ರಮ ಮಾಡಿದರೆ ಕೆಟ್ಟದಾಗುತ್ತದೆ ಎಂದು ಕೆಲವರು ಹೇಳಿದ್ದರು. ಆದರೆ, ನನಗೆ ಎಲ್ಲ ವಿಚಾರದಲ್ಲೂ ಲಾಭವೇ ಆಗಿದೆ
- ಸತೀಶ ಜಾರಕಿಹೊಳಿ, ಶಾಸಕ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು