ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾರ್ಡ್‌ನ ಅಭಿವೃದ್ಧಿಗಾಗಿ ವಿದ್ಯುತ್‌ ಕಂಬ ಏರಿ ಪಾಲಿಕೆ ಸದಸ್ಯೆ ಪ್ರತಿಭಟನೆ!

ಬೆಳಗಾವಿಯ ಸದಾಶಿವನಗರದಲ್ಲಿ ಘಟನೆ
Last Updated 30 ಅಕ್ಟೋಬರ್ 2018, 9:11 IST
ಅಕ್ಷರ ಗಾತ್ರ

ಬೆಳಗಾವಿ: ‘ನಾನು ಪ್ರತಿನಿಧಿಸುವ ವಾರ್ಡ್‌ನ ಅಭಿವೃದ್ಧಿಗೆ ಆದ್ಯತೆ ದೊರೆಯುತ್ತಿಲ್ಲ’ ಎಂದು ಆರೋಪಿಸಿ ನಗರಪಾಲಿಕೆಯ 41ನೇ ವಾರ್ಡ್ ಸದಸ್ಯೆ ಸರಳಾ ಹೇರೇಕರ ಮಂಗಳವಾರ ಸದಾಶಿವನಗರದಲ್ಲಿ ಏಣಿಯ ಸಹಾಯದಿಂದ ಹೈಮಾಸ್ಟ್‌ ವಿದ್ಯುತ್ ಕಂಬ ಏರಿ ವಿನೂತನವಾಗಿ ಪ್ರತಿಭಟನೆ ನಡೆಸಿದರು.

ಕಂಬ ಇಳಿಯುವಂತೆ ಎಪಿಎಂಸಿ ಠಾಣೆ ಪೊಲೀಸರು ಗಂಟೆವರೆಗೆ ಸಾಹಸಪಟ್ಟರು. ಆದರೆ, ಅಧಿಕಾರಿಗಳು ಸ್ಥಳಕ್ಕೆ ಬರಬೇಕು ಎಂದು ಪಟ್ಟುಹಿಡಿದ ಸದಸ್ಯೆ, ಏಣಿಯ ಮೇಲೆ ನಿಂತು ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

‘ಪಾಲಿಕೆ‌ ಅಧಿಕಾರಿಗಳು ನನ್ನ ವಾರ್ಡ್ ಅಭಿವೃದ್ಧಿ ಬಗ್ಗೆ ನಿರ್ಲಕ್ಷ್ಯ ತೋರುತ್ತಿದ್ದಾರೆ. ವಿದ್ಯುತ್ ಕಂಬಗಳಿಗೆ ದೀಪಗಳನ್ನು ಅಳವಡಿಸಿಲ್ಲ. ಸ್ಮಾರ್ಟ್ ಸಿಟಿ ಯೋಜನೆಗೆ ಆಯ್ಕೆಯಾಗಿರುವ ನಗರಕ್ಕೆ ಕೋಟ್ಯಂತರ ರೂಪಾಯಿ ಅನುದಾನ ಬರುತ್ತಿದೆ. ಆದರೂ ಸದಾಶಿವನಗರದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿ ಕಾರ್ಯ ನಡೆಯುತ್ತಿಲ್ಲ. ಕೌನ್ಸಿಲ್ ಸಭೆಯಲ್ಲಿ ಪ್ರಸ್ತಾಪಿಸಿದರೂ ಪ್ರಯೋಜನವಾಗಿಲ್ಲ. ಇದನ್ನೆಲ್ಲ ಸಾರ್ವಜನಿಕರ ಗಮನಕ್ಕೆ ತರುವುದಾಗಿ ಪ್ರತಿಭಟನೆ ಅನಿವಾರ್ಯವಾಯಿತು’ ಎಂದು ತಿಳಿಸಿದರು.

‘ಸ್ಮಶಾನದಲ್ಲಿ ವಿದ್ಯುತ್ ದೀಪ ಇಲ್ಲದ ಕಾರಣ ಮೊಬೈಲ್ ಬೆಳಕಿನಲ್ಲೇ ಅಂತ್ಯಸಂಸ್ಕಾರ ನಡೆಸುವ ಸ್ಥಿತಿ ಇದೆ. ಬಡಾವಣೆಯ ಅಲ್ಲಲ್ಲಿ ವಿದ್ಯುತ್‌ ದೀಪಗಳು ಇಲ್ಲದಿರುವುದರಿಂದ, ಸರಗಳವು ಪ್ರಕರಣಗಳು ಹೆಚ್ಚುತ್ತಿವೆ. ಮನವಿಗಳಿಗೆ ಅಧಿಕಾರಿಗಳಿಂದ ಸ್ಪಂದನೆ ದೊರೆಯುತ್ತಿಲ್ಲ. ನನ್ನನ್ನು ಆಯ್ಕೆ ಮಾಡಿದ ಜನರಿಗೆ ನಾನು ಸರಿಯಾಗಿ ಕೆಲಸ ನಿರ್ವಹಿಸುತ್ತಿಲ್ಲ ಎಂಬ ಭಾವನೆ ಮೂಡುತ್ತಿದೆ. ಅಧಿಕಾರಿಗಳು ಸ್ಥಳಕ್ಕೆ ಬಂದು ಕಂಬಗಳಿಗೆ ಬಲ್ಬ್‌ಗಳನ್ನು ಅಳವಡಿಸುವವರೆಗೂ ಇಳಿಯುವುದಿಲ್ಲ’ ಎಂದು ಹೇಳಿದರು.

ಪಾಲಿಕೆ ಆಯುಕ್ತ ಶಶಿಧರ ಕುರೇರ ಸ್ಥಳಕ್ಕೆ ಬಂದ ಬಳಿಕ ಕಂಬದಿಂದ ಇಳಿದರು.

‘ಸ್ಮಶಾನದಲ್ಲಿ ಹೆಚ್ಚಿನ ವಿದ್ಯುತ್‌ ಕಂಬಗಳನ್ನು ಅಳವಡಿಸಬೇಕು ಎಂದು ಸದಸ್ಯರು ಕೋರಿದ್ದಾರೆ. ವಾರ್ಡ್‌ನಾದ್ಯಂತ ಪರಿಶೀಲಿಸಿ, ತಕ್ಷಣವೇ ದೀಪಗಳನ್ನು ಅಳವಡಿಸಬೇಕು. ಅಗತ್ಯವಿರುವ ಕಡೆಗಳಲ್ಲಿ ಹೊಸದಾಗಿ ಕಂಬ ಹಾಕಬೇಕು ಎಂದು ಅಧಿಕಾರಿಗಳಿಗೆ ಸೂಚಿಸಲಾಗುವುದು’ ಎಂದು ಆಯುಕ್ತರು ಭರವಸೆ ನೀಡಿದರು. ನಂತರ ಸದಸ್ಯೆ ಪ್ರತಿಭಟನೆ ಅಂತ್ಯಗೊಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT