ಸೋಮವಾರ, ಮಾರ್ಚ್ 1, 2021
29 °C
ಗಂಜಿ ಕೇಂದ್ರದಲ್ಲಿರುವ ಮಂದಿಗೆ ಅನಾರೋಗ್ಯ ಭೀತಿ

ಕತ್ತಲಲ್ಲೇ ಊಟ; ಸೌಲಭ್ಯಗಳಿಗೆ ಪರದಾಟ

ಎಂ. ಮಹೇಶ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ಮಹಾರಾಷ್ಟ್ರದ ಜಲಾಶಯಗಳಿಂದ ಭಾರಿ ಪ್ರಮಾಣದಲ್ಲಿ ನೀರು ಹೊರಬಿಡುತ್ತಿರುವುದರಿಂದ ಜಿಲ್ಲೆಯ ಸಾವಿರಾರು ಜನರು ನಿರಾಶ್ರಿತರಾಗಿದ್ದಾರೆ. ಅವರ ಸಲುವಾಗಿಯೇ ಗಂಜಿ (ಪರಿಹಾರ) ಕೇಂದ್ರಗಳನ್ನು ಸ್ಥಾಪಿಸಿದ್ದು, ಅಲ್ಲಿ ಸೌಲಭ್ಯಗಳಿಲ್ಲದ ಕಾರಣ ಜನರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ.

ಜಿಲ್ಲೆಯಾದ್ಯಂತ 323 ಗ್ರಾಮಗಳಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿದ್ದು, 1.45 ಲಕ್ಷ ಜನರನ್ನು ಅಲ್ಲಿಂದ ಸ್ಥಳಾಂತರಿಸಲಾಗಿದೆ. ಈ ಪೈಕಿ 82,425 ಮಂದಿ 327 ಪರಿಹಾರ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದಾರೆ. ಇವುಗಳಲ್ಲಿ ಬಹುತೇಕ ಕೇಂದ್ರಗಳಲ್ಲಿ ಕನಿಷ್ಠ ಸೌಲಭ್ಯಗಳು ದೊರೆಯುತ್ತಿಲ್ಲ ಎನ್ನುವ ದೂರು ಕೇಳಿಬಂದಿದೆ.

ಸರ್ಕಾರಿ ಶಾಲೆ, ಸಮುದಾಯ ಭವನಗಳಲ್ಲಿ ಗಂಜಿ ಕೇಂದ್ರಗಳನ್ನು ಆರಂಭಿಸಲಾಗಿದೆ. ಅಲ್ಲಿ ಊಟ ಹಾಗೂ ಉಪಾಹಾರ ವ್ಯವಸ್ಥೆ ಪರವಾಗಿಲ್ಲ. ಆದರೆ, ಶುದ್ಧ ಕುಡಿಯುವ ನೀರಿನ ಪೂರೈಕೆ ಆಗುತ್ತಿಲ್ಲ. ಹಾಸಿಗೆ– ಹೊದಿಕೆಗಳನ್ನು ಪೂರೈಸಿಲ್ಲ. ಮೈಕೊರೆಯುವ ಚಳಿಯಲ್ಲಿ ಚಾಪೆಯ ಮೇಲೆ ಮಲಗಬೇಕಾದ ಸ್ಥಿತಿ. ರಾತ್ರಿ ವೇಳೆ ಅಂಗನವಾಡಿ ಕಾರ್ಯಕರ್ತೆಯರನ್ನು ಬಿಟ್ಟರೆ ಬೇರೆ ಯಾರನ್ನೂ ಮೇಲ್ವಿಚಾರಣೆಗೆ ವಹಿಸಿಲ್ಲ. ಗ್ರಾಮ ಲೆಕ್ಕಾಧಿಕಾರಿಗಳು ಸ್ಥಳದಲ್ಲಿ ಇರುವುದಿಲ್ಲ. ಇದರಿಂದಾಗಿ ತುರ್ತು ಸಂದರ್ಭಗಳಲ್ಲಿ ಈ ಜನರಿಗೆ ಸ್ಪಂದಿಸುವವರು ಇಲ್ಲವಾಗಿದ್ದಾರೆ.

ಅನಾರೋಗ್ಯದ ಭೀತಿ: ಅದರಲ್ಲೂ ಹಳ್ಳಿಗಳ ಕೇಂದ್ರಗಳಲ್ಲಿ ಕನಿಷ್ಠ ಸೌಲಭ್ಯಗಳಾದ ಬೆಳಕಿನ ವ್ಯವಸ್ಥೆ, ಮೊಬೈಲ್ ಶೌಚಾಲಯ, ವೈದ್ಯಕೀಯ ಸೌಲಭ್ಯ ಮೊದಲಾದವು ದೊರೆಯುತ್ತಿಲ್ಲ. ಬಹಳಷ್ಟು ಕೇಂದ್ರಗಳಲ್ಲಿ ಈ ಸ್ಥಿತಿ ಇರುವುದು ಕಂಡುಬಂದಿದೆ. ಇನ್ನು ಸೊಳ್ಳೆಗಳ ಕಾಟವಂತೂ ಹೇಳತೀರದು. ಇದರಿಂದಾಗಿ ಅಲ್ಲಿನವರು ಸಾಂಕ್ರಾಮಿಕ ರೋಗಗಳಿಗೆ ತುತ್ತಾಗುವ ಆತಂಕ ಎದುರಾಗಿದೆ.

‘ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ನಗರ, ಪಟ್ಟಣಗಳ ಕಡೆಗೆ ಗಮನ ಕೊಡುತ್ತಿದ್ದಾರೆ. ಹಳ್ಳಿಗಳ ಕಡೆಗೆ ಬರುತ್ತಿಲ್ಲ. ಶೌಚಕ್ರಿಯೆ, ಸ್ನಾನಕ್ಕೆ ಸರಿಯಾದ ವ್ಯವಸ್ಥೆ ಇಲ್ಲ. ಟೂತ್ ಪೇಸ್ಟ್, ಬ್ರಶ್‌, ಸಾಬೂನು ಕೊಡುತ್ತಿಲ್ಲ. ಬಟ್ಟೆ– ಬರೆಗಳೆಲ್ಲಾ ನೀರು ಪಾಲಾಗಿವೆ. ಕೆಲವು ಕಡೆಗಳಲ್ಲಿ ಚಾಪೆಗಳ ವ್ಯವಸ್ಥೆಯೂ ಇಲ್ಲ. ಅದರಲ್ಲೂ ವೃದ್ಧರ ನರಳಾಟ ನೋಡಲಾಗುತ್ತಿಲ್ಲ. ಜಾನುವಾರುಗಳಿಗೆ ಮೇವು ಪೂರೈಕೆಯಾಗುತ್ತಿಲ್ಲ’ ಎಂದು ಹಲವು ಕೇಂದ್ರಗಳಿಗೆ ಭೇಟಿ ನೀಡಿದ್ದ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

**

ಪರಿಹಾರ ಕೇಂದ್ರಗಳಲ್ಲಿ ಅಗತ್ಯ ಸೌಲಭ್ಯ ಕಲ್ಪಿಸಲು ಸೂಚಿಸಲಾಗಿದೆ. ಸಮಸ್ಯೆಗಳಿದ್ದಲ್ಲಿ ಪರಿಶೀಲಿಸಲಾಗುವುದು.
– ಎಸ್.ಬಿ. ಬೊಮ್ಮನಹಳ್ಳಿ, ಜಿಲ್ಲಾಧಿಕಾರಿ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು