ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಹಸಿರು ಕಲಬುರ್ಗಿ’ಗೆ ನೀವೂ ಕೈಜೋಡಿಸಿ

ಮೂರು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಪರಿಸರ ಪ್ರೇಮಿ ಸಂಘಟನೆ
Last Updated 6 ಜೂನ್ 2018, 6:55 IST
ಅಕ್ಷರ ಗಾತ್ರ

ಕಲಬುರ್ಗಿ: ಸಸಿನೆಟ್ಟು ಹಸಿರು ಬೆಳೆಸಿ ಪರಿಸರ ಉಳಿಸುವ ಉದಾತ್ತ ಉದ್ದೇಶದೊಂದಿಗೆ ‘ಹಸಿರು ಕಲಬುರ್ಗಿ’ ಪಡೆ ಮೂರು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದೆ.

ಉದ್ಯಮಿ ಸಿದ್ದು ಪಾಟೀಲ ತೆಗನೂರ ಹಾಗೂ ಅವರ ಸ್ನೇಹಿತರು ಆರಂಭಿಸಿರುವ ಈ ಪಡೆಯಲ್ಲಿ ಈಗ ಸಾವಿರ ಜನರು ಇದ್ದಾರೆ. ಸ್ಥಳೀಯ ನಾಗರಿಕರ ಸಹಯೋಗದಲ್ಲಿ ಅರಣ್ಯ ಇಲಾಖೆ, ಮಹಾನಗರ ಪಾಲಿಕೆ ಹಾಗೂ ದಾನಿಗಳ ನೆರವಿನಿಂದ ಸಸಿಗಳನ್ನು ನೆಡಲಾಗುತ್ತದೆ. ಆಯಾ ಪ್ರದೇಶದ ನಿವಾಸಿಗಳೇ ಆ ಸಸಿಗಳನ್ನು ಪಾಲನೆ ಮಾಡುತ್ತಾರೆ.

‘ಅದು 2016ರ ಏಪ್ರಿಲ್‌ ತಿಂಗಳು. ಬಹಳಷ್ಟು ಬಿಸಿಲು ಇತ್ತು. ನಾವು ಎ.ಸಿ ಹಚ್ಚಿಕೊಂಡು ಕುಳಿತರೆ ಸಾಲದು. ಈ ಉರಿಬಿಸಿಲಿಗೆ ಪರಿಹಾರ ಕಂಡುಕೊಳ್ಳಬೇಕಾದರೆ ಮರ ಬೆಳೆಸಬೇಕು ಎಂಬ ಯೋಚನೆ ಬಂತು. ಅದನ್ನು ಕಾರ್ಯರೂಪಕ್ಕೆ ತರಲು ಮಿತ್ರರು ಸೇರಿಕೊಂಡು ವಾಟ್ಸ್‌ ಆ್ಯಪ್‌ ಗ್ರೂಪ್‌ ರಚಿಸಿ ವಿಷಯ ಹಂಚಿಕೊಂಡೆವು. ಸಭೆ ಕರೆದಾಗ ನಿರೀಕ್ಷೆಗೂ ಮೀರಿ ಜನ ಬಂದರು. ಎಲ್ಲರೂ ಸೇರಿ ಸಸಿ ನೆಡಲು ಕಾರ್ಯೋನ್ಮುಖರಾದೆವು’ ಎಂದು ಈ ಪಡೆ ರಚನೆಯಾದ ಬಗೆಯನ್ನು ವಿವರಿಸಿದರು ಸಿದ್ದು ಅವರು.

‘ಪ್ರಥಮ ವರ್ಷ 10 ಸಾವಿರ ಸಸಿ ನೆಡಲು ನಿರ್ಧರಿಸಿದೆವು. 5 ಸಾವಿರ ಸಸಿಗಳನ್ನು ಅರಣ್ಯ ಇಲಾಖೆಯವರು ನೀಡಿದರೆ, ನರ್ಸರಿಯವರು 3 ಸಾವಿರ ಸಸಿಗಳನ್ನು ಉಚಿತವಾಗಿ ಕೊಟ್ಟರು. ನಮ್ಮ ಪಡೆಯ ಸದಸ್ಯರು ಸ್ವಲ್ಪ ಹಣ ಸೇರಿಸಿ ಸಸಿ ಖರೀದಿಸಿದೆವು. ಸ್ವಸ್ತಿಕ್‌ ನಗರ, ಕಾರ್ತಿಕ್‌ ಹೈಟ್ಸ್‌ ಪ್ರದೇಶ, ಶರಣಸಿರಸಗಿ, ಕರುಣೇಶ್ವರ ನಗರ, ಗಾಬ್ರೆ ಲೇಔಟ್‌, ಸದಾಶಿವ ನಗರ, ಗುಬ್ಬಿ ಕಾಲೊನಿ, ಖೂಬಾ ಪ್ಲಾಟ್‌, ಮಹಾವೀರ ನಗರ, ಬಸವೇಶ್ವರ ಕಾಲೊನಿ, ದತ್ತ ನಗರ, ಜಿಲ್ಲಾ ಕ್ರೀಡಾಂಗಣ ಮತ್ತಿತರೆಡೆ ಸಸಿ ನೆಟ್ಟೆವು. ಅವು ಶೇ 95ರಷ್ಟು ಬದುಕಿವೆ’ ಎಂದು ಅವರು ಹೆಮ್ಮೆಯಿಂದ ಹೇಳಿದರು.

‘ತಲಾ 250 ಜನರು ಇರುವ ನಾಲ್ಕು ವಾಟ್ಸ್‌ ಆ್ಯಪ್‌ ಗ್ರೂಪ್‌ಗಳಿವೆ. ಇವುಗಳಲ್ಲಿ ವೈದ್ಯರು, ವಕೀಲರು, ವಿವಿಧ ವೃತ್ತಿಯಲ್ಲಿರುವವರು,  ಉತ್ಸಾಹಿ ಯುವಕರು ಇದ್ದಾರೆ. ಅರಣ್ಯ ಇಲಾಖೆ, ಮಹಾನಗರ ಪಾಲಿಕೆಯವರೊಂದಿಗೆ ನಾವು ಸಂಪರ್ಕ ಸಾಧಿಸಿ ಸಸಿಗಳ ಲಭ್ಯತೆಯ ಮಾಹಿತಿ ಪಡೆಯುತ್ತೇವೆ. ಅದನ್ನು ವಾಟ್ಸ್‌ ಆ್ಯಪ್‌ ಗ್ರೂಪ್‌ಗಳಲ್ಲಿ ಹಂಚಿಕೊಳ್ಳುತ್ತೇವೆ. ಆಸಕ್ತರು ತಮ್ಮ ಮನೆ, ತಮ್ಮ ಪ್ರದೇಶದ ಉದ್ಯಾನಗಳಲ್ಲಿ ಸಸಿಗಳನ್ನು ನೆಡಲು ಮುಂದೆ ಬರುತ್ತಾರೆ. ಅದನ್ನು ಸಂಬಂಧಿಸಿದ ಇಲಾಖೆಗೆ ತಿಳಿಸಿ ಅಲ್ಲಿ ಸಸಿ ನೆಡುವ ವ್ಯವಸ್ಥೆ ಮಾಡುತ್ತೇವೆ. ನೆಟ್ಟ ಸಸಿಗಳ ಪಾಲನೆಯನ್ನು ಆಯಾ ಪ್ರದೇಶದವರು ಮಾಡುತ್ತಾರೆ. ನಮ್ಮ ಗ್ರೂಪ್‌ನಲ್ಲಿರುವ ಆ ಪ್ರದೇಶದ 10– 20 ಜನರು ಅವುಗಳ ಪೋಷಣೆಯ ಮೇಲ್ವಿಚಾರಣೆ ನೋಡಿಕೊಳ್ಳುತ್ತಾರೆ’ ಎಂದು ಅವರು ತಿಳಿಸಿದರು.

‘ಕಳೆದ ವರ್ಷ ಮಹಾನಗರ ಪಾಲಿಕೆಯೊಂದಿಗೆ ಕೈಜೋಡಿಸಿ ಸಸಿ ನೆಟ್ಟೆವು. ಆದರೆ, ಸಸಿಗಳ ಗುಣಮಟ್ಟ ಸರಿ ಇಲ್ಲದ ಕಾರಣ ಶೇ 50ಕ್ಕಿಂತ ಕಡಿಮೆ ಸಸಿಗಳು ಬದುಕುಳಿದಿವೆ. ಈ ವರ್ಷ 50 ಸಾವಿರ ಸಸಿ ನೆಡುವ ಉದ್ದೇಶವಿದೆ. ಅರಣ್ಯ ಇಲಾಖೆಯವರು ಸಸಿ ನೀಡಲು ಮುಂದೆ ಬಂದಿದ್ದಾರೆ. ಇಲ್ಲಿಯ ಮಹಾಲಕ್ಷ್ಮಿ ಲೇಔಟ್‌, ಎನ್‌ಜಿಒ ಕಾಲೊನಿ, ಜೇವರ್ಗಿ ಕಾಲೊನಿ, ಶಕ್ತಿನಗರ, ಕೋತಂಬರಿ ಲೇಔಟ್‌, ಬಿದ್ದಾಪುರ ಕಾಲೊನಿ, ಬನಶಂಕರಿ ನಗರ, ಬಡೇಪುರ ಕಾಲೊನಿ, ಕಾರ್ತಿಕ್‌ ಹೈಟ್ಸ್‌ ಅಪಾರ್ಟ್‌ಮೆಂಟ್‌ ಪ್ರದೇಶ, ಲಾಲಗೇರಿ ಕ್ರಾಸ್‌ನಿಂದ ಎಂಎಸ್‌ಕೆ ಮಿಲ್‌ ರಸ್ತೆ ಮತ್ತಿತರ ಪ್ರದೇಶಗಳಲ್ಲಿ ಸಸಿ ನೆಡಲು ನಿರ್ಧರಿಸಿದ್ದೇವೆ’ ಎಂದು ಅವರು ಹೇಳಿದರು.

ನಿರಂತರ ಅರಿವು

ಜನರಲ್ಲಿ ಅರಿವು ಮೂಡಿಸುವ ಕೆಲಸವನ್ನು ಈ ಪಡೆ ಮಾಡುತ್ತಿದೆ. ಕ್ರೆಡಾಯ್‌ ಏರ್ಪಡಿಸುವ ಪ್ರದರ್ಶನ ಮೇಳದಲ್ಲಿ ಒಬ್ಬ ವ್ಯಕ್ತಿಗೆ ಆಮ್ಲಜನಕ ಸಿಲಿಂಡರ್‌ ಅಳವಡಿಸಿ, ಮರ ಬೆಳೆಸದಿದ್ದರೆ ಮುಂದೆ ನಿಮಗೂ ಇಂತಹ ಸ್ಥಿತಿ ಬರಬಹುದು ಎಂದು ಅಲ್ಲಿಗೆ ಬರುವವರಿಗೆ ಅರಿವು ಮೂಡಿಸಲಾಗುತ್ತಿದೆ. ಈಗ ಆಟೊಕ್ಕೆ ಧ್ವನಿವರ್ಧಕ ಅಳವಡಿಸಿ ಪರಿಸರದ ಅರಿವು ಮೂಡಿಸಲಾಗುತ್ತಿದೆ. ನಗರದ ಉದ್ಯಾನಗಳಲ್ಲಿ ಸಸಿ ನೆಡುವ ಯೋಜನೆಯನ್ನು ರೂಪಿಸುತ್ತಿದೆ. ಈ ಯತ್ನಕ್ಕೆ ಕೈಜೋಡಿಸುವವರು ಸಿದ್ದು ಪಾಟೀಲ ಮೊ. 90081 81190 ಅವರನ್ನು ಸಂಪರ್ಕಿಸಹುದು.

**
‘ಗಿಡ ಬೆಳಸಿ; ಕಲಬುರ್ಗಿ ಉಳಿಸಿ’ ಎಂಬುದು ನಮ್ಮ ಮನವಿ. ಐದು ವರ್ಷಗಳಲ್ಲಿ ನಗರದಲ್ಲಿ 1 ಲಕ್ಷ ಸಸಿ ನೆಟ್ಟು ಬೆಳೆಸುವ ಉದ್ದೇಶವಿದೆ. ನಾಗರಿಕರು ನಮ್ಮ ಜೊತೆ ಕೈಜೋಡಿಸಬೇಕು
ಸಿದ್ದು ಪಾಟೀಲ (ತೆಗನೂರ)‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT