ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹ 982 ಕೋಟಿ ಮೌಲ್ಯದ ಆಸ್ತಿ ವಶ: ಸರ್ಕಾರ ಮೌನ

ವ್ಯವಸ್ಥೆಯ ಲೋಪವೆಂದು ಚಾಟಿ ಬೀಸಿದ ಜೆಡಿಎಸ್‌ನ ಎ.ಟಿ. ರಾಮಸ್ವಾಮಿ
Last Updated 17 ಡಿಸೆಂಬರ್ 2018, 20:24 IST
ಅಕ್ಷರ ಗಾತ್ರ

ಬೆಳಗಾವಿ: ‘ರಾಮನಗರ ಜಿಲ್ಲೆ ಬಿಡದಿ ಹೋಬಳಿಯ ಶಾನಮಂಗಲ, ಬಿಲ್ಲಕೆಂಪನಹಳ್ಳಿ ಮತ್ತು ಬಾಣಂದೂರು ಗ್ರಾಮಗಳಲ್ಲಿ ಚಾಮುಂಡೇಶ್ವರಿ ಬ್ಯುಲ್ಡ್ ಟೆಕ್ ಕಂಪೆನಿ ಒತ್ತುವರಿ ಮಾಡಿರುವ ಜಮೀನಿಗೆ ಸರ್ಕಾರ ನಿಗದಿಪಡಿಸಿರುವ ₹ 982 ಕೋಟಿ ಪಾವತಿಸದಿದ್ದರೆ ಜಮೀನನ್ನು ವಶಕ್ಕೆ ಪಡೆಯಲು ಕ್ರಮ ಕೈಗೊಳ್ಳಲಾಗುವುದು’ ಎಂದು ಕಂದಾಯ ಸಚಿವ ಆರ್.ವಿ. ದೇಶಪಾಂಡೆ ವಿಧಾನಸಭೆಯಲ್ಲಿ ಸೋಮವಾರ ಭರವಸೆ ನೀಡಿದರು.

ಈ ವಿಷಯದಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ಅಂತಿಮ ತೀರ್ಪಿನ ಹೊರತಾಗಿಯೂ ಸರ್ಕಾರದ ನಿಧಾನ ಗತಿಯ ನಡೆಯನ್ನು ಟೀಕಿಸಿದ ಜೆಡಿಎಸ್‌ನ ಎ.ಟಿ. ರಾಮಸ್ವಾಮಿ, ವ್ಯವಸ್ಥೆಯ ಲೋಪವನ್ನು ಪ್ರಸ್ತಾಪಿಸಿ ಹರಿಹಾಯ್ದರು. ಅವರ ಪ್ರಶ್ನೆಗೆ, ವಾಗ್ಝರಿಗೆ ಆಡಳಿತ ಪಕ್ಷದ ಸದಸ್ಯರೂ ಬೆಚ್ಚಿದರು. ಇತರ ಸಚಿವರು ತುಟಿಬಿಚ್ಚಲಿಲ್ಲ. ವಿರೋಧ ಪಕ್ಷದ ಸದಸ್ಯರೂ ಅವಕ್ಕಾದರು.

ಈಗಲ್ ಟನ್ ಸಂಸ್ಥೆಯ ಒತ್ತುವರಿಯ ತೆರವು ಬಗ್ಗೆ ಸರ್ಕಾರದ ನಿಲುವು ಸ್ಪಷ್ಟಪಡಿಸಬೇಕೆಂದು ಪಟ್ಟುಹಿಡಿದ ರಾಮಸ್ವಾಮಿ, ‘ಸುಪ್ರಿಂ ಕೋರ್ಟ್ ಆದೇಶ ಇಟ್ಟುಕೊಂಡು ಬಡವರ ಮನೆಗಳನ್ನು ತೆರವುಗೊಳಿಸುತ್ತೀರಿ. ಆದರೆ, ಈ ವಿಷಯದಲ್ಲಿ ಏಕೆ ಮೌನ ವಹಿಸುತ್ತೀರಿ, ಕಾಣದ ಕೈಗಳು ನಿಮ್ಮನ್ನು ನಿಯಂತ್ರಿಸುತ್ತಿವೆಯೇ, ಜನಪ್ರತಿನಿಧಿಯಾಗಿ ಕೈಕೊಟ್ಟಿಕೊಂಡು ಕುಳಿತುಕೊಳ್ಳಲು ಸಾಧ್ಯವೇ ಇಲ್ಲ’ ಎಂದು ಗುಡುಗಿದರು.

ಅದಕ್ಕೆ ಉತ್ತರಿಸಿದ ಸಚಿವರು, ‘ಈ ವಿಷಯ ನನ್ನ ಗಮನಕ್ಕೆ ಬಂದಿರಲಿಲ್ಲ. ರಾಮಸ್ವಾಮಿ ಪ್ರಶ್ನೆ ಹಾಕಿದ ನಂತರವೇ ಅರಿವಿಗೆ ಬಂದಿದೆ’ ಎಂದರು.

ಚಾಮುಂಡೇಶ್ವರಿ ಬ್ಯುಲ್ಡ್‌ಟೆಕ್ ಸಂಸ್ಥೆ ಈಗಲ್ ಟನ್ ಪ್ರಾಜೆಕ್ಟ್‌ಗಾಗಿ 106 ಎಕರೆ 12 ಗುಂಟೆ ಜಮೀನು ಒತ್ತುವರಿ ಮಾಡಿಕೊಂಡಿದ್ದು, ಇದರಲ್ಲಿ 20 ಎಕರೆ 33 ಗುಂಟೆ ಜಮೀನನ್ನು ಸರ್ಕಾರ ವಶಕ್ಕೆ ಪಡೆದಿದೆ. ಬಾಕಿ ಉಳಿದಿರುವ 77 ಎಕರೆ 19 ಗುಂಟೆ ಜಮೀನಿಗೆ ₹ 982,07,77480 ಮೌಲ್ಯ ನಿಗದಿಪಡಿಸಲಾಗಿದೆ. ಸರ್ಕಾರದ ನಿರ್ಧಾರದಂತೆ ಆದಷ್ಟು ಶೀಘ್ರ ಹಣ ಪಾವತಿಸಲು ಸೂಚಿಸಲಾಗುವುದು’’ ಎಂದರು.

‘ಈ ಪ್ರಕರಣ ಹೈಕೋರ್ಟ್‍ನಲ್ಲಿ ವಿಚಾರಣೆ ಬಾಕಿ ಇದ್ದು, ಯಾವುದೇ ತಡೆಯಾಜ್ಞೆ ಇಲ್ಲ. ಸರ್ಕಾರದಿಂದ ಯಾವುದೇ ಲೋಪ ಆಗಿಲ್ಲ’ ಎಂದು ಸಮರ್ಥಿಸಿಕೊಂಡರು.

ಪ್ರಕರಣದ ಬಗ್ಗೆ ವಿವರಣೆ ನೀಡಿದ ಸಚಿವರು, ‘ಸುಪ್ರೀಂ ಕೋರ್ಟ್‍ನ ಆದೇಶದ ಪ್ರಕಾರ ಸಂಪುಟ ಉಪಸಮಿತಿ ರಚಿಸಲಾಗಿದ್ದು, ಆ ಸಮಿತಿ ಒತ್ತುವರಿ ಭೂಮಿಗೆ ಪಾವತಿಸಬೇಕಾದ ಮೌಲ್ಯ ನಿಗದಿಪಡಿಸಿತ್ತು’ ಎಂದರು.

ಪ್ರಕರಣದ ಬಗ್ಗೆ ವಿವರಣೆ ನೀಡಿದ ಸಚಿವರು, ‘ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ 77 ಎಕರೆ 19 ಗುಂಟೆ ಭೂಮಿಗೆ ಸಂಪುಟ ಉಪ ಸಮಿತಿ ಬೆಲೆ ನಿಗದಿ ಮಾಡಿತು. ಬಳಿಕ ರಾಮನಗರ ಜಿಲ್ಲಾಧಿಕಾರಿ ₹ 982 ಕೋಟಿ ಪಾವತಿಗೆ ಚಾಮುಂಡೇಶ್ವರಿ ಬ್ಯುಲ್ಡ್ ಟೆಕ್‌ಗೆ ಆದೇಶಿಸಿದರು. ಈ ಆದೇಶ ಮೇಲೆ ಅವರು ತಡೆಯಾಜ್ಞೆ ತಂದರು. ಬಳಿಕ ಪುನಃ ಸಂಪುಟ ಉಪ ಸಮಿತಿ ಬೆಲೆ ಪುನರ್ ನಿಗದಿಗೆ ನ್ಯಾಯಾಲಯ ಸೂಚಿಸಿತು. ಸರ್ಕಾರ ಬೆಲೆ ಪುನರ್ ನಿಗದಿ ಸಾಧ್ಯವೇ ಇಲ್ಲ ಎಂಬ ನಿರ್ಧಾರಕ್ಕೆ ಬಂದಿದೆ’ ಎಂದರು.

ಈ ವೇಳೆ ವಿರೋಧ ಪಕ್ಷದ ಶಾಸಕರು ಸರ್ಕಾರದ ಮೇಲೆ ಮುಗಿಬಿದ್ದರು. ‘ಬಡವರ ಮನೆ ಬೇಲಿ ಗೂಟ ಕಿತ್ತು ತೆರವು ಮಾಡುವ ನೀವು, ಇಷ್ಟೊಂದು ದೊಡ್ಡ ಆಸ್ತಿ ಯಾಕೆ ರಕ್ಷಿಸುತ್ತಿಲ್ಲ. ಅಡ್ವೊಕೇಟ್ ಜನರಲ್ ಅವರು ಸರ್ಕಾರದ ಪರವಾಗಿದ್ದಾರೋ ಅಥವಾ ಎದುರು ಕಕ್ಷಿದಾರರ ದಾರರ ಪರವೋ’ ಎಂದೂ ತರಾಟೆಗೆ ತೆಗೆದುಕೊಂಡರು.

‘ದೂಳು ನಮ್ಮ ಮುಖದ ಮೇಲಿದೆ. ನಾವು ಕನ್ನಡಿಯನ್ನು ಒರೆಸುತ್ತಿದ್ದೇವೆ’ ಎಂದು ಮಾರ್ಮಿಕವಾಗಿ ಹೇಳಿ ಸಭಾಧ್ಯಕ್ಷರು ಚರ್ಚೆಗೆ ಅಂತ್ಯವಾಡಿದರು.

‘ಭೂಮಿ ದೋಚುವುದಕ್ಕೆ ಪ್ರೋತ್ಸಾಹ’
ಈಗಲ್‌ಟನ್‌ ರೆಸಾರ್ಟ್‌ ಒತ್ತುವರಿ ತೆರವಿನ ಸಂಬಂಧ ನ್ಯಾಯಾಲಯದ ನಿರ್ದೇಶನವನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಮಹಾಲೇಖಪಾಲರ (ಸಿಎಜಿ) ವರದಿಯಲ್ಲೂಆಕ್ಷೇಪ ವ್ಯಕ್ತವಾಗಿದೆ.

ಸೋಮವಾರ ಮಂಡಿಸಲಾದ ‘ಸರ್ಕಾರಿ ಭೂಮಿ ಮಂಜೂರಾತಿ, ಗುತ್ತಿಗೆ, ಒತ್ತುವರಿ ತೆರವುಗೊಳಿಸುವಿಕೆ’ ಕುರಿತ ವರದಿಯಲ್ಲಿ, ‘ಭೂಮಿಯ ಮೌಲ್ಯವನ್ನು ವಸೂಲಾತಿ ಮಾಡಿದ ನಂತರ ಮಂಜೂರು ಮಾಡುವಂತೆ ಸುಪ್ರೀಂಕೋರ್ಟ್‌ 2009ರಲ್ಲಿ ನಿರ್ದೇಶಿಸಿತು. ಸರ್ಕಾರದ ನಿಯಮಗಳಲ್ಲಿ ಭೂಮಿಯ ಮಂಜೂರಾತಿಗೆ ಅವಕಾಶ ಇರಲಿಲ್ಲ. ಹಾಗಿದ್ದರೂ ಸರ್ಕಾರವು ನ್ಯಾಯಾಲಯದ ನಿರ್ದೇಶನವನ್ನು ಭೂಮಿ ಮಂಜೂರಾತಿಗಾಗಿ ನಿರ್ದೇಶನ ಎಂಬುದಾಗಿ ತಪ್ಪಾಗಿ ಅರ್ಥೈಸಿ ಭೂಮಿಯನ್ನು ಮಂಜೂರು ಮಾಡಿತು.’ ‘ಒತ್ತುವರಿ ಮಾಡಿಕೊಂಡ ಭೂಮಿಯನ್ನು ಮಂಜೂರು ಮಾಡುವ ಸರ್ಕಾರದ ಇಂತಹ ವಿವೇಚನೆ ಇಲ್ಲದ ತೀರ್ಮಾನವು ನೀತಿ ನಿಷ್ಠೆಗಳಲ್ಲಿದ ಮಾರ್ಗಗಳ ಮೂಲಕ ಖಾಸಗಿ ವ್ಯಕ್ತಿಗಳು ಸರ್ಕಾರಿ ಭೂಮಿಯನ್ನು ದೋಚುವುದನ್ನು ಪ್ರೋತ್ಸಾಹಿಸಿದಂತಾಗುತ್ತದೆ’ ಎಂದು ಸಿಎಜಿ ವರದಿ ಅಭಿಪ್ರಾಯಪಟ್ಟಿದೆ.

ಅಕ್ರಮ ಸಕ್ರಮ: 1,055 ಎಕರೆ ಅಕ್ರಮ ಮಂಜೂರು
ಬೆಳಗಾವಿ:
ಅಕ್ರಮ ಸಕ್ರಮ ಯೋಜನೆಯಡಿ 2012ರಿಂದ 2107ರ ಅವಧಿಯಲ್ಲಿ ಅಕ್ರಮವಾಗಿ ಅನರ್ಹರಿಗೆ 1,055 ಎಕರೆ ಮಂಜೂರು ಮಾಡಲಾಗಿದೆ ಎಂದು ಮಹಾಲೇಖಪಾಲರ ವರದಿ ಆಕ್ಷೇಪಿಸಿದೆ.

ಈ ಪೈಕಿ ಆರು ತಾಲ್ಲೂಕುಗಳಲ್ಲಿ ಅರ್ಜಿಯೇ ಇಲ್ಲದಿದ್ದರೂ 585 ಎಕರೆ ಹಂಚಿಕೆ ಮಾಡಲಾಗಿದೆ. ಹಾಗೆಯೇ, 69 ಪ್ರಕರಣಗಳಲ್ಲಿ 18 ವರ್ಷ ತುಂಬದವರ ಅರ್ಜಿಗಳನ್ನು ಪರಿಗಣಿಸಿ 176 ಎಕರೆ ಹಂಚಲಾಗಿದೆ. ನಿಯಮ 108 (ಎಫ್‌) ಪ್ರಕಾರ, 18 ವರ್ಷ ತುಂಬದವರಿಗೆ ಭೂಮಿ ಮಂಜೂರು ಮಾಡಲು ಅವಕಾಶ ಇಲ್ಲ. ಅರ್ಜಿಗಳಲ್ಲಿನ ಹುಟ್ಟಿದ ದಿನಾಂಕ ಹಾಗೂ ವಯಸ್ಸನ್ನು ಪರಿಶೀಲಿಸಿದಾಗ ಹಂಚಿಕೆ ಪಡೆದ ಅರ್ಜಿದಾರರು ಭೂಮಿಯನ್ನು ಸಾಗುವಳಿ ಮಾಡುತ್ತಿದ್ದೇವೆ ಎಂದು ಹೇಳಿಕೊಳ್ಳುವ ವಯಸ್ಸಿನಲ್ಲಿ 8ರಿಂದ 17 ವಯಸ್ಸಿನವರು ಆಗಿದ್ದಾರೆ ಎಂದು ಕಂಡುಬಂದಿದೆ.

ಇನ್ನೊಂದು ಪ್ರಕರಣದಲ್ಲಿ, 179 ಎಕರೆ ಭೂಮಿ ಹಂಚಿಕೆಗಾಗಿ ಅರ್ಜಿಗಳು ಸಲ್ಲಿಕೆಯಾಗಿದ್ದವು. ಆದರೆ, ಅದಕ್ಕೆ ಪ್ರತಿಯಾಗಿ, 248 ಎಕರೆಗಳನ್ನು ಮಂಜೂರು ಮಾಡಲಾಗಿತ್ತು. 99 ಎಕರೆಗಳನ್ನು ಹೆಚ್ಚುವರಿಯಾಗಿ ನೀಡಲಾಗಿತ್ತು.

ಕಂದಾಯ ಇನ್‌ಸ್ಪೆಕ್ಟರ್‌ ಹಾಗೂ ತಹಶೀಲ್ದಾರ್‌ ಗೋಮಾಳ ಭೂಮಿ ಎಂಬ ಕಾರಣಕ್ಕೆ ಅರ್ಜಿ ತಿರಸ್ಕರಿಸುವಂತೆ ಶಿಫಾರಸು ಮಾಡಿದ್ದರು. ಆದರೆ, ಶಾಸಕರ ನೇತೃತ್ವದ ಅಕ್ರಮಸಕ್ರಮ ಸಮಿತಿ ಇದನ್ನು ಕಡೆಗಣಿಸಿ ಭೂಮಿ ಹಂಚಿತ್ತು.

ಈ ಪ್ರಕರಣಗಳು ಚಿಕ್ಕ ಮಗಳೂರು, ಚಿಕ್ಕಬಳ್ಳಾಪುರ, ಚಿಂತಾಮಣಿ, ದೊಡ್ಡಬಳ್ಳಾಪುರ, ಗುಬ್ಬಿ, ಹೊಸಕೋಟೆ, ಮೂಡಿಗೆರೆ, ರಾಮನಗರ, ತುಮಕೂರು, ಸೇಡಂ ಹಾಗೂ ಶಿರಾದಲ್ಲಿ ನಡೆದಿವೆ ಎಂದು ವರದಿಯಲ್ಲಿ ಬೆಳಕು ಚೆಲ್ಲಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT