ಬೆಳಗಾವಿ ಅಧಿವೇಶನಕ್ಕೆ ₹11. 24 ಕೋಟಿ ವೆಚ್ಚ

7

ಬೆಳಗಾವಿ ಅಧಿವೇಶನಕ್ಕೆ ₹11. 24 ಕೋಟಿ ವೆಚ್ಚ

Published:
Updated:

ಬೆಂಗಳೂರು: ಬೆಳಗಾವಿಯಲ್ಲಿ ಡಿಸೆಂಬರ್‌ 10ರಿಂದ 21ರವರೆಗೆ ನಡೆದ ವಿಧಾನಮಂಡಲ ಚಳಿಗಾಲ ಅಧಿವೇಶನಕ್ಕೆ ₹ 11.24 ಖರ್ಚು ಮಾಡಲಾಗಿದೆ. ಹಿಂದಿನ ಎರಡು ಚಳಿಗಾಲ ಅಧಿವೇಶನಗಳಿಗೆ ಹೋಲಿಸಿದರೆ ಆಗಿರುವ ಅತ್ಯಂತ ಕಡಿಮೆ ವೆಚ್ಚ ಇದಾಗಿದೆ! 

ಜಿಲ್ಲಾಡಳಿತ, 12 ದಿನಗಳ ಚಳಿಗಾಲ ಅಧಿವೇಶನಕ್ಕೆ ₹ 15.42ಕೋಟಿ ಅನುದಾನಕ್ಕೆ ಅಂದಾಜು ಪಟ್ಟಿ ಸಿದ್ಧಪಡಿಸಿ ವಿಧಾನಸಭೆ ಸಚಿವಾಲಯಕ್ಕೆ ಕಳುಹಿಸಿತ್ತು. ಅಧಿವೇಶನದ ಸಿದ್ಧತೆಗೆ ಮುಂಗಡವಾಗಿ ₹ 5 ಕೋಟಿ ಬಿಡುಗಡೆ ಆಗಿತ್ತು.  ಉಳಿದ ₹ 6.24ಕೋಟಿ ಬಿಡುಗಡೆ ಮಾಡುವಂತೆ ಬೆಳಗಾವಿ ಜಿಲ್ಲಾಧಿಕಾರಿ ಎಸ್‌.ಬಿ. ಬೊಮ್ಮನಹಳ್ಳಿ ವಿಧಾನಸಭೆ ಸಚಿವಾಲಯದ ಕಾರ್ಯದರ್ಶಿಗೆ ಪತ್ರ  ಬರೆದಿದ್ದಾರೆ.

2016ರ ನವೆಂಬರ್‌ 21ರಿಂದ ಡಿಸೆಂಬರ್‌ 3ರವರೆಗೆ ನಡೆದ ಅಧಿವೇಶನಕ್ಕೆ ಬಜೆಟ್‌ನಲ್ಲಿ ಕ್ರಮವಾಗಿ ₹20.55ಕೋಟಿ ಮತ್ತು 2017ರ ನವೆಂಬರ್‌ 13ರಿಂದ 24ರವರೆಗೆ ಸೇರಿದ್ದ ಅಧಿವೇಶನಕ್ಕೆ ₹29.39 ಕೋಟಿ ಅನುದಾನ ಒದಗಿಸಲಾಗಿತ್ತು. ಎರಡೂ ಅಧಿವೇಶನಗಳಿಗೆ ‘ಕರ್ನಾಟಕ ಸಾರ್ವಜನಿಕ ಸಂಗ್ರಹಣೆ ಪಾರದರ್ಶಕತೆ ಅಧಿನಿಯಮ’ (ಕೆಟಿಟಿಪಿ) 1999ರ ಕಲಂ 4 (ಜಿ) ಅಡಿ ಕ್ರಮವಾಗಿ ₹ 20 ಕೋಟಿ ಹಾಗೂ ₹ 21.57 ಕೋಟಿಗೆ ತೆರಿಗೆ ವಿನಾಯ್ತಿ ನೀಡಲಾಗಿತ್ತು. ಇದಕ್ಕಿಂತಲೂ ₹8.60 ಕೋಟಿ ಹೆಚ್ಚು ಖರ್ಚಾಗಿದೆ ಎನ್ನಲಾಗಿದೆ.

‘ಎರಡೂ ಅಧಿವೇಶನಗಳ ಖರ್ಚುವೆಚ್ಚಗಳಲ್ಲಿ ಅಕ್ರಮ ನಡೆದಿದೆ’ ಎಂದು ಕೇಳಿಬಂದ ಆರೋಪಗಳ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಸಿದ್ದ ರಾಜ್ಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆ ಅಧಿಕಾರಿಗಳ ತಂಡ ಖರ್ಚುವೆಚ್ಚಗಳನ್ನು ಕುರಿತು ಸಂದೇಶ ವ್ಯಕ್ತಪಡಿಸಿತ್ತು. ಇದರಿಂದ ಬೊಕ್ಕಸಕ್ಕೆ ₹ 10ರಿಂದ 12 ಕೋಟಿ ಹೊರೆಯಾಗಿದೆ ಎಂದೂ ಹೇಳಿತ್ತು. ಈ ವರದಿ ಆಧರಿಸಿ ವಿಧಾನಸಭೆಯ ಕಾರ್ಯದರ್ಶಿ ಎಸ್‌. ಮೂರ್ತಿ ಅವರನ್ನು ಅಮಾನತ್ ಮಾಡಲಾಗಿದೆ.

ಆದರೆ, ಈ ಸಲದ ಅಧಿವೇಶನದಲ್ಲಿ ಹಣಕಾಸು ದುರ್ಬಳಕೆ ಆಗದಂತೆ ವಿಧಾನಸಭಾಧ್ಯಕ್ಷ ಕೆ.ಆರ್. ರಮೇಶ್‌ ಕುಮಾರ್‌ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದರು.

ವಿಧಾನ ಪರಿಷತ್‌ ಸಭಾಪತಿ, ವಿಧಾನಸಭೆ ಸ್ಪೀಕರ್‌, ಸಚಿವರು, ಶಾಸಕರು, ಹಿರಿಯ ಅಧಿಕಾರಿಗಳು, ಸಿಬ್ಬಂದಿ, ಪತ್ರಕರ್ತರ ವಸತಿ, ಊಟ, ವಾಹನ ಸೌಕರ್ಯ, ಇಂಧನ, ಗುರುತಿನ ಚೀಟಿ, ಪೆಂಡಾಲ್‌ ಹಾಗೂ ಲೋಕೋಪಯೋಗಿ ಇಲಾಖೆ ಕಾಮಗಾರಿಗಳೂ ಸೇರಿದಂತೆ ಒಟ್ಟಾರೆ ₹ 11.42 ಕೋಟಿ ವೆಚ್ಚವಾಗಿದೆ.

ಹಿಂದಿನ ಎರಡೂ ಅಧಿವೇಶನಗಳಿಗೆ ಹೋಲಿಸಿದರೆ 2018ರ ಚಳಿಗಾಲದ ಅಧಿವೇಶನದಲ್ಲಿ ಸರ್ಕಾರಕ್ಕೆ ಕನಿಷ್ಠ ₹ 10 ಕೋಟಿ ಉಳಿತಾಯವಾಗಿದೆ ಎಂದು ವಿಧಾನಸಭೆ ಸಚಿವಾಲಯದ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ. 

**

ಖರ್ಚುವೆಚ್ಚ

* ವಸತಿ ವ್ಯವಸ್ಥೆ ₹ 4.55 ಕೋಟಿ

* ಊಟದ ವ್ಯವಸ್ಥೆ ₹ 65 ಲಕ್ಷ

* ವಾಹನ ಬಾಡಿಗೆ ಮತ್ತು ಇಂಧನ ₹ 43 ಲಕ್ಷ

* ಪ್ರತಿಭಟನೆ ಪೆಂಡಾಲ್‌, ಭದ್ರತಾ ವ್ಯವಸ್ಥೆ ₹ 4.42 ಕೋಟಿ

* ಸುವರ್ಭಸೌಧದ ವಿದ್ಯುತ್‌ ಕಾಮಗಾರಿ ₹ 47 ಲಕ್ಷ

* ಕಂಪ್ಯೂಟರ್, ಅಂತರ್ಜಾಲ, ಜೆರಾಕ್ಸ್‌ ಯಂತ್ರ ₹ 69 ಲಕ್ಷ

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !