ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನಸ್ಸಿನ ಆಟ

Last Updated 21 ಏಪ್ರಿಲ್ 2019, 20:30 IST
ಅಕ್ಷರ ಗಾತ್ರ

ಹಿಂದೆ ಬ್ರಹ್ಮದತ್ತ ರಾಜ್ಯಭಾರಮಾಡುವಾಗ ಬೋಧಿಸತ್ವ ಪಟ್ಟದ ರಾಣಿಯ ಮಗನಾಗಿದ್ದ. ಅವನಿಗೆ ಆರು ಸಹೋದರರು. ಅವರು ದೊಡ್ಡವರಾದ ಮೇಲೆ ಅವರಿಗೆಲ್ಲ ಮದುವೆಯಾಗಿ ಸುಖವಾಗಿದ್ದರು. ಒಮ್ಮೆ ರಾಜ ಯೋಚಿಸಿದ, ಇವರಲ್ಲಿ ಯಾರು ನಿಜವಾಗಿ ಸಮರ್ಥನೋ ಅವನೇ ರಾಜನಾಗಬೇಕು. ಆದ್ದರಿಂದ ಮಕ್ಕಳಿಗೆ ಹೇಳಿದ, “ನೀವೆಲ್ಲ ರಾಜ್ಯಬಿಟ್ಟು ಹೊರಗೆ ಸಾಮಾನ್ಯರ ಹಾಗೆ ಬದುಕಬೇಕು. ನಾನು ತೀರಿಹೋದೆ ಎಂಬ ವಿಷಯ ತಿಳಿದೊಡನೆ ಬಂದು ರಾಜ್ಯವನ್ನು ಪಡೆಯಬೇಕು. ಮೊದಲು ಬಂದವನಿಗೆ ಅಥವಾ ಅವರಲ್ಲಿ ಹಿರಿಯನಿಗೆ ರಾಜ್ಯ”. ಏಳೂ ಜನ ಮಕ್ಕಳು ತಮ್ಮ ಹೆಂಡಂದಿರೊಡನೆ ರಾಜ್ಯ ಬಿಟ್ಟು ನಡೆದರು. ಮುಂದೆ ದಟ್ಟವಾದ ಕಾಡು. ಹಸಿವೆಯಿಂದ ಕಂಗಾಲಾದರು. ರಾತ್ರಿ ಒಬ್ಬ ಸೂಚನೆ ಕೊಟ್ಟ. “ಬದುಕಿದ್ದರೆ ಮತ್ತೊಮ್ಮೆ ಮದುವೆಯಾಗಬಹುದು. ಆದ್ದರಿಂದ ದಿನಕ್ಕೊಬ್ಬರಂತೆ ಹೆಂಡಂದಿರನ್ನು ಕೊಂದು ತಿಂದುಬಿಡೋಣ”. ಅಂದು ರಾತ್ರಿಯೇ ಎಲ್ಲರೂ ಮಲಗಿದ್ದಾಗ ಹೆಂಡತಿಯನ್ನು ಕರೆದುಕೊಂಡು ಬೋಧಿಸತ್ವ ಅಲ್ಲಿಂದ ಓಡಿದ. ಅವಳಿಗೆ ನಡೆಯಲು ಕಷ್ಟವಾದಾಗ ಅವಳನ್ನು ಹೆಗಲ ಮೇಲೆ ಹೊತ್ತುಕೊಂಡು ನಡೆದ. ಅವಳು ದಾಹದಿಂದ, “ನೀರು, ನೀರು” ಎಂದು ಸಂಕಟಪಟ್ಟಾಗ ಹತ್ತಿರದಲ್ಲೆಲ್ಲೂ ನೀರಿಲ್ಲದಾಗ ತನ್ನ ಬಲತೊಡೆಯನ್ನೇ ಸೀಳಿಕೊಂಡು, “ಪ್ರಿಯೆ, ಈಗ ಇದನ್ನೇ ಕುಡಿದು ಬಾಯಾರಿಕೆಯನ್ನು ಕಳೆದುಕೋ” ಎಂದ. ಅವಳು ಹಾಗೆಯೇ ಮಾಡಿದಳು.

ಮುಂದೆ ಅವರು ಮಹಾನದಿಯ ದಂಡೆಗೆ ಬಂದು ಅಲ್ಲಿಯೇ ಒಂದು ಪರ್ಣಕುಟಿಯನ್ನು ಕಟ್ಟಿಕೊಂಡು ಬದುಕತೊಡಗಿದರು. ಒಂದು ದಿನ ನದೀ ತೀರಕ್ಕೆ ಹೋದಾಗ ರಾಜಭಟರು ಕಳ್ಳನೊಬ್ಬನನ್ನು ತಂದು ಅವನ ಕೈ, ಕಾಲು, ಮೂಗನ್ನು ಕತ್ತರಿಸಿ ಬಿಸಾಕಿ ಹೋಗಿದ್ದರು. ಬೋಧಿಸತ್ವ ಕರುಣೆಯಿಂದ ಅವನನ್ನು ಮನೆಗೆ ಕರೆತಂದು ಶುಶ್ರೂಷೆ ಮಾಡಿದ. ಅವನ ಹೆಂಡತಿ ತಿರಸ್ಕಾರದಿಂದ ಆ ಕಳ್ಳನಿಗೆ ಶಾಪಹಾಕುತ್ತಿದ್ದಳು. ಈಗ ಮೂರು ಜನರ ಹೊಟ್ಟೆ ತುಂಬಬೇಕಲ್ಲ. ಅದಕ್ಕೆ ಬೋಧಿಸತ್ವ ಹೊರಗಡೆ ಹೋಗಿ ಕೆಲಸ ಮಾಡಿ ಹಣ ತರುತ್ತಿದ್ದ. ಹೀಗಿರುವಾಗ ಬೋಧಿಸತ್ವನ ಹೆಂಡತಿ ಆ ಕೈಕಾಲು, ಮೂಗುಗಳಿಲ್ಲದ ಕಳ್ಳನಿಂದ ಆಕರ್ಷಿತಳಾಗಿ ಅನಾಚಾರ ಮಾಡಿದಳು. ಬೋಧಿಸತ್ವನನ್ನು ನಿವಾರಿಸಿಬಿಟ್ಟರೆ ಕಳ್ಳನೊಂದಿಗೆ ಸುಖವಾಗಿ ಬದುಕಬಹುದು ಎಂತು ತೀರ್ಮಾನಿಸಿ ಅರಣ್ಯದೇವತೆಯ ಪೂಜೆ ಎಂದು ನಂಬಿಸಿ ಬೋಧಿಸತ್ವನನ್ನು ಕಾಡಿನ ತುದಿಗೆ ಕರೆದೊಯ್ದಳು. ಪೂಜೆಯ ನೆಪದಲ್ಲಿ ಅವನ ಹಿಂದೆ ಬಂದು ಪ್ರಪಾತಕ್ಕೆ ತಳ್ಳಿಬಿಟ್ಟಳು. ಆತ ಕೆಳಗೆ ಬೀಳುತ್ತ ಭಗವಂತನ ಕೃಪೆಯಿಂದ ಎಲೆಗಳಿಂದ ತುಂಬಿದ ಅತ್ತಿಯ ಹಣ್ಣಿನ ಮರದ ಮೇಲೆ ಬಿದ್ದ. ದಿನವೂ ಒಂದು ಉಡ ಬಂದು ಅತ್ತಿಯ ಹಣ್ಣು ತಿನ್ನುತ್ತಿತ್ತು. ಇವನನ್ನು ನೋಡಿ, “ಇಲ್ಲಿಗೆ ಯಾಕೆ ಬಂದೆ?” ಎಂದು ಕೇಳಿತು. ಈತ ತನ್ನ ದು:ಖದ ಕಥೆಯನ್ನು ಹೇಳಿಕೊಂಡ. ಅದು ದೊಡ್ಡ ಉಡ. ಚಿಂತೆಬೇಡವೆಂದು ಹೇಳಿ ಬೋಧಿಸತ್ವನನ್ನು ತನ್ನ ಹೆಗಲಮೇಲೆ ಹೊತ್ತುಕೊಂಡು ನಿಧಾನವಾಗಿ ಪ್ರಪಾತವನ್ನು ಇಳಿದು ರಾಜಮಾರ್ಗದಲ್ಲಿ ಬಿಟ್ಟು ಹೋಯಿತು. ಆಗ ತಾನೇ ರಾಜ ಬ್ರಹ್ಮದತ್ತ ತೀರಿದ ಸುದ್ದಿ ಬಂದಿತು. ಬೋಧಿಸತ್ವ ವಾರಣಾಸಿಗೆ ಹೋಗಿ ರಾಜ್ಯವನ್ನು ಪಡೆದು ಪದುಮರಾಜ ಎಂಬ ಹೆಸರಿನಿಂದ ಧರ್ಮದಿಂದ ರಾಜ್ಯಭಾರ ಮಾಡತೊಡಗಿದ.

ಇತ್ತ ಅವನ ಹೆಂಡತಿ ಮನೆಗೆ ಬಂದು ಕಳ್ಳನನ್ನು ಒಂದು ಬುಟ್ಟಿಯಲ್ಲಿ ಕೂಡ್ರಿಸಿಕೊಂಡು ತಲೆಯ ಮೇಲೆ ಹೊತ್ತುಕೊಂಡು ಮನೆಮನೆಗೆ ಹೋಗಿ ಭಿಕ್ಷೆ ಬೇಡಿ ಜೀವನ ನಡೆಸುತ್ತಿದ್ದಳು. ಯಾರೋ ಆಕೆಗೆ, “ಪದುಮರಾಜ ಮಹಾದಾನಿ. ಅವನೆಡೆಗೆ ಹೋದರೆ ನಿಮಗೆ ರಕ್ಷಣೆ, ಪೋಷಣೆ ದೊರಕುತ್ತದೆ” ಎಂದಾಗ ಅಲ್ಲಿಗೆ ಹೋಗಿ ರಾಜನ ಮುಂದೆ ನಿಂತು, “ಬುಟ್ಟಿಯಲ್ಲಿರುವವನು ನನ್ನ ಗಂಡ. ನಾನು ಪತಿವೃತೆ. ಅವನನ್ನು ಹೊತ್ತು ಸಾಕುತ್ತಿದ್ದೇನೆ” ಎಂದು ಸಹಾಯಕ್ಕಾಗಿ ಬೇಡಿದಳು. ಆಗ ಬೋಧಿಸತ್ವ ಆಕೆಗೆ ಹಿಂದಿನದನ್ನೆಲ್ಲ ನೆನಪುಕೊಟ್ಟ. ಸೇವಕರಿಗೆ ಹೇಳಿ ಆಕೆಯ ತಲೆಗೆ ಮಂಕರಿಯನ್ನು ಬಿಡಿಸಲಾರದಂತೆ ಕಟ್ಟಿಸಿ ಅದರಲ್ಲಿ ಆ ಕಳ್ಳನನ್ನು ಕುಳ್ಳರಿಸಿ ರಾಜ್ಯದಿಂದ ಹೊರಗೆ ಅಟ್ಟಿದ. ನಂತರ ರಾಣಿಯಾಗಿರಬಹುದಾಗಿದ್ದಂತಹ ಹೆಣ್ಣುಮಗಳ ದುರ್ದಶೆಗೆ ಮರುಗಿದ.

ಯಾವಾಗ ಯಾರ ಮನಸ್ಸು ಹೇಗೆ ತಿರುಗೀತು ಎಂಬುದನ್ನು ಹೇಳುವುದು ಕಷ್ಟ. ಅದು ಮನುಷ್ಯನನ್ನು ಎಲ್ಲಿಂದೆಲ್ಲಿಗೋ ಒಯ್ದುಬಿಡುತ್ತದೆ. ಅದರ ಬಗ್ಗೆ ಎಷ್ಟು ಜಾಗರೂಕರಾಗಿದ್ದರೆ ಅಷ್ಟು ಒಳ್ಳೆಯದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT