ಬೆಳಗಾವಿ ಘಟನೆಗಳು ಕಾಂಗ್ರೆಸ್ ಸ್ಥಿತಿಯ ದ್ಯೋತಕ: ಕೆ.ಎಸ್.ಈಶ್ವರಪ್ಪ

7

ಬೆಳಗಾವಿ ಘಟನೆಗಳು ಕಾಂಗ್ರೆಸ್ ಸ್ಥಿತಿಯ ದ್ಯೋತಕ: ಕೆ.ಎಸ್.ಈಶ್ವರಪ್ಪ

Published:
Updated:
Deccan Herald

ಶಿವಮೊಗ್ಗ: ಬೆಳಗಾವಿ ಘಟನೆಗಳು, ಅಲ್ಲಿನ ಗೊಂದಲಗಳು ಕಾಂಗ್ರೆಸ್‌ ಹೀನಾಯ ಸ್ಥಿತಿ ತಲುಪಿರುವುದಕ್ಕೆ ನಿದರ್ಶನ. ಒಂದು ರಾಷ್ಟ್ರೀಯ ಪಕ್ಷ ಇಂತಹ ಹೀನಾಯ ಸ್ಥಿತಿಗೆ ತಲುಪಬಾರದಿತ್ತು ಎಂದು ಶಾಸಕ ಕೆ.ಎಸ್. ಈಶ್ವರಪ್ಪ ಮರುಕ ವ್ಯಕ್ತಪಡಿಸಿದರು.

ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಕುರಿತು ಜಾರಕಿಹೊಳಿ ನೀಡಿರುವ ಹೇಳಿಕೆ ಮಹಿಳಾ ಕುಲಕ್ಕೆ, ಚುನಾಯಿತ ಪ್ರತಿನಿಧಿಗಳಿಗೆ ಮಾಡಿದ ಅಪಮಾನ. ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಆದೇಶಕ್ಕೂ ಆ ಪಕ್ಷದಲ್ಲಿ ಮನ್ನಣೆ ಇಲ್ಲ. ಮುಂದೆ ಕಾಂಗ್ರೆಸ್ ಸ್ಥಿತಿ ಯಾವ ಮಟ್ಟಕ್ಕೆ ಹೋಗುತ್ತದೆ ಎನ್ನುವುದಕ್ಕೆ ಈ ಘಟನೆಗಳು ದಿಕ್ಸೂಚಿ ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದರು.

ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹಾಗೂ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ನಡುವೆ ಹೊಂದಾಣಿಕೆ ಇಲ್ಲ. ಒಬ್ಬರ ಮುಖ ಕಂಡರೆ ಮತ್ತೊಬ್ಬರಿಗೆ ಆಗುವುದಿಲ್ಲ. ಜನರ ಗಮನ ಇಂತಹ ವಿಷಯಗಳಿಂದ ಬೇರೆಡೆ ಸೆಳೆಯಲು ವಿಧಾನಸಭೆ ವಿರೋಧ ಪಕ್ಷದ ನಾಯಕ ಬಿ.ಎಸ್. ಯಡಿಯೂರಪ್ಪ ಹಾಗೂ ಅವರ ಮಕ್ಕಳ ಹೆಸರು ಬಳಸಿಕೊಳ್ಳುತ್ತಿದ್ದಾರೆ. ಆದಾಯ ತೆರಿಗೆ ಅಧಿಕಾರಿಗಳ ಭೇಟಿ ವದಂತಿ ಹಬ್ಬಿಸುತ್ತಿದ್ದಾರೆ. ಯಡಿಯೂರಪ್ಪ ಪುತ್ರರು ಐಟಿ ಅಧಿಕಾರಿ ಭೇಟಿ ಮಾಡಿದ್ದಾರೆ ದಾಖಲೆ ಬಿಡುಗಡೆ ಮಾಡಲಿ. ಇಲ್ಲವೇ, ಪ್ರಕರಣ ಸಿಬಿಐಗೆ ವಹಿಸಲಿ. ಒಬ್ಬ ಮುಖ್ಯಮಂತ್ರಿ ಬೇಜವಾಬ್ದಾರಿ ಹೇಳಿಕೆ ನೀಡುವುದು ಸಲ್ಲದು ಎಂದು ವ್ಯಕ್ತಪಡಿಸಿದರು.

ಬಿಜೆಪಿಗೆ ಪಾಲಿಕೆ, ಸಮಗ್ರ ಅಭಿವೃದ್ಧಿ

ಪಾಲಿಕೆಯಲ್ಲಿ ಬಿಜೆಪಿಗೆ ಬಹುಮತ ದೊರೆತ ಕಾರಣ ಶಿವಮೊಗ್ಗ ನಗರದ ಸಮಗ್ರ ಅಭಿವೃದ್ಧಿಗೆ ಸಹಕಾರಿಯಾಗಿದೆ. ಮಾದರಿ ನಗರವಾಗಿ ಅಭಿವೃದ್ಧಿಪಡಿಸಲು ಎಲ್ಲ ರೀತಿಯ ಪ್ರಯತ್ನ ಮಾಡಲಾಗುವುದು ಎಂದರು.

ಕಳೆದ 5 ವರ್ಷಗಳಲ್ಲಿ ಅಭಿವೃದ್ಧಿ ಕುಂಠಿತವಾಗಿತ್ತು. ಅಧಿಕಾರಿಗಳು ಜನರ ಸಮಸ್ಯೆಗಳಿಗೆ ಸ್ಪಂದಿಸಲಿಲ್ಲ. ಪಾಲಿಕೆ ವ್ಯಾಪ್ತಿಯ ರಸ್ತೆಗಳು ಸಂಪೂರ್ಣ ಹಾಳಾಗಿದೆ. ಬೀದಿದೀಪ ನಿರ್ವಹಣೆ ಸರಿ ಇಲ್ಲ. ಗುತ್ತಿಗೆದಾರರಿಗೆ ಹಣ ಮಾತ್ರ ನೀಡಲಾಗುತ್ತಿದೆ. 35 ವಾರ್ಡ್‌ಗಳಲ್ಲೂ ಅಭಿವೃದ್ಧಿ ಕಾಮಗಾರಿ ಕೈಗೊಂಡು ಮಾದರಿ ನಗರವಾಗಿ ರೂಪಿಸಲಾಗುವುದು ಎಂದು ಭರವಸೆ ನೀಡಿದರು.

ಬಡವರಿಗೆ ವಸತಿ, ಯುಜಿಡಿ ಕಾಮಗಾರಿ ಪೂರ್ಣಗೊಳಿಸುವುದು. 24 ಗಂಟೆ ಕುಡಿಯುವ ನೀರು ಪೂರೈಕೆ. ಕೆರೆ, ಉದ್ಯಾನ, ಅಭಿವೃದ್ಧಿ ಕಾರ್ಯ ನಡೆಯಬೇಕಿದೆ. ಹಳೆ ಜೈಲು ಜಾಗದಲ್ಲಿ ವಿಜಯದಶಮಿ ಉತ್ಸವ ಆಚರಿಸಲು ನಿರ್ಧರಿಸಲಾಗಿದೆ. ಮುಖ್ಯಮಂತ್ರಿ ಅನುದಾನ ನೀಡುವ ಭರವಸೆ ನೀಡಿದ್ದಾರೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಪಾಲಿಕೆ ಸದಸ್ಯರಾದ ಎಸ್.ಎನ್. ಚನ್ನಬಸಪ್ಪ, ಎಸ್. ಜ್ಞಾನೇಶ್ವರ್, ಸುನಿತಾ ಅಣ್ಣಪ್ಪ, ಮಧುಸೂದನ್, ಎಂ. ಶಂಕರ್, ನಾಗರಾಜ್, ಶಂಕರ್ ನಾಯ್ಕ, ಹಿರಣ್ಣಯ್ಯ, ಅಣ್ಣಪ್ಪ ಉಪಸ್ಥಿತರಿದ್ದರು. 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !