ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಭಯ ಸದನಗಳ ಕಲಾಪ ನುಂಗಿದ ಸಾಲ

ಸಾಲ ಮನ್ನಾ ದಿನಾಂಕ ಪ್ರಕಟಿಸುವಂತೆ ವಿಧಾನಸಭೆಯಲ್ಲಿ ಬಿಜೆಪಿ ಪಟ್ಟು: ಸಿ.ಎಂ ಕ್ಷಮೆಯಾಚನೆಗೆ ಆಗ್ರಹ
Last Updated 20 ಡಿಸೆಂಬರ್ 2018, 19:49 IST
ಅಕ್ಷರ ಗಾತ್ರ

ಬೆಳಗಾವಿ: ರಾಷ್ಟ್ರೀಕೃತ ಬ್ಯಾಂಕ್‌ಗಳ ಸಾಲ ಮನ್ನಾ ದಿನಾಂಕವನ್ನು ಪ್ರಕಟಿಸಬೇಕು ಹಾಗೂ ಅವಹೇಳನಕಾರಿ ಹೇಳಿಕೆ ನೀಡಿರುವ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿ ಬಿಜೆಪಿ ಶಾಸಕರು ವಿಧಾನಸಭೆಯಲ್ಲಿ ಗುರುವಾರ ಧರಣಿ ನಡೆಸಿದರು. ಪರಿಣಾಮವಾಗಿ, 25 ನಿಮಿಷವಷ್ಟೇ ಕಲಾಪ ನಡೆಯಿತು.

ಬರ ಮೇಲಿನ ಚರ್ಚೆಗೆ ಬುಧವಾರ ಉತ್ತರ ನೀಡುವ ವೇಳೆ ಕುಮಾರಸ್ವಾಮಿ, ‘ಯಡಿಯೂರ‍ಪ್ಪ ಹಾಗೂ ರಾಷ್ಟ್ರೀಕೃತ ಬ್ಯಾಂಕ್‌ಗಳ ಸಂಬಂಧ ಎಂತಹುದು ಎಂಬುದು ಗೊತ್ತಿದೆ’ ಎಂದು ವ್ಯಂಗ್ಯವಾಡಿದ್ದರು. ಮುಖ್ಯಮಂತ್ರಿ ಹೇಳಿಕೆಯನ್ನು ಖಂಡಿಸಿ ಬಿಜೆಪಿ ಸದಸ್ಯರು ಧರಣಿ ನಡೆಸಿದ್ದರು. ಗುರುವಾರ ಬೆಳಿಗ್ಗೆ 11ಕ್ಕೆ ಕಲಾಪ ಆರಂಭವಾಗುತ್ತಿದ್ದಂತೆ ಧರಣಿ ಮುಂದುವರಿಸಿದ್ದರು.

ಬಿಜೆಪಿಯ ಜೆ.ಸಿ.ಮಾಧುಸ್ವಾಮಿ, ‘ರಾಹು ಕಾಲ ಗುಳಿಕ ಕಾಲ ನೋಡಿಕೊಂಡು ಮೈತ್ರಿ ಸರ್ಕಾರದವರು ಸದನ ನಡೆಸುತ್ತಿದ್ದಾರೆ. ಇದು ನಾಚಿಕೆಗೇಡು. ಮುಖ್ಯಮಂತ್ರಿ ಹೇಳಿಕೆ ಅಕ್ಷಮ್ಯ. ನಮ್ಮ ನಾಯಕರನ್ನು ಅವಮಾನಿಸಿದ್ದಾರೆ. ಜತೆಗೆ, ಅವರಿಗೆ ಸಾಲ ಮನ್ನಾದ ಕುರಿತು ಸ್ಪಷ್ಟತೆ ಇಲ್ಲ. ಸಾಲ ಮನ್ನಾದ ದಿನಾಂಕವನ್ನು ಪ್ರಕಟಿಸಬೇಕು’ ಎಂದು ಆಗ್ರಹಿಸಿದರು.

‘ಮುಖ್ಯಮಂತ್ರಿ ಉತ್ತರ ಪೂರ್ಣವಾಗಿರಲಿಲ್ಲ. ನಮ್ಮ ಶಾಸಕರಿಗೆ ಅನೇಕ ಪ್ರಶ್ನೆಗಳನ್ನು ಕೇಳಬೇಕಿತ್ತು. ಆದರೆ, ಇವತ್ತಿನ ಅಜೆಂಡಾದಲ್ಲಿ ಈ ವಿಷಯದ ಪ್ರಸ್ತಾಪವೇ ಇಲ್ಲ’ ಎಂದರು.

ವಿರೋಧ ಪಕ್ಷದ ನಾಯಕ ಬಿ.ಎಸ್‌.ಯಡಿಯೂರಪ್ಪ, ‘ಅಧಿವೇಶನ ಸುಗಮವಾಗಿ ನಡೆಯಬೇಕು ಎಂದು ನಾವು ಎಲ್ಲ ರೀತಿಯ ಸಹಕಾರ ನೀಡಿದ್ದೇವೆ. ಹಣಕಾಸು ಮಸೂದೆಗೂ ಒಪ್ಪಿಗೆ ನೀಡಿದ್ದೇವೆ. ರಾಜ್ಯದಲ್ಲಿ ಆರು ತಿಂಗಳಲ್ಲಿ 377 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ₹50 ಕೋಟಿ ಮಾತ್ರ ಸಾಲ ಮನ್ನಾ ಆಗಿದೆ. ಯಾವಾಗ ಸಾಲ ಮನ್ನಾ ಆಗುತ್ತದೆ ಎಂಬುದನ್ನು ಮುಖ್ಯಮಂತ್ರಿ ಸ್ಪಷ್ಟಪಡಿಸಬೇಕಿತ್ತು. ಆದರೆ, ಅವರು ಹಾರಿಕೆಯ ಉತ್ತರ ನೀಡಿದ್ದಾರೆ’ ಎಂದು ಟೀಕಿಸಿದರು.

ವಿಧಾನಸಭಾಧ್ಯಕ್ಷ ಕೆ.ಆರ್‌.ರಮೇಶ್‌ ಕುಮಾರ್‌, ‘ಕಣ್ತಪ್ಪಿನಲ್ಲಿ ಸಭೆಯ ನಡಾವಳಿಯಲ್ಲಿ ಮುಖ್ಯಮಂತ್ರಿ ಉತ್ತರದ ಪ್ರಸ್ತಾಪ ಆಗಿಲ್ಲ. ಅಚಾತುರ್ಯ ಆಗಿದೆ. ಅವರು ಉತ್ತರ ನೀಡಲಿದ್ದಾರೆ’ ಎಂದರು.

ರಾಜ್ಯ ಸರ್ಕಾರ ಸಾಲ ಮನ್ನಾ ಮಾಡಬೇಕು ಎಂದು ಬಿಜೆಪಿ ಸದಸ್ಯರು ಘೋಷಣೆ ಕೂಗಿದರು. ಸರ್ಕಾರ ಬುರುಡೆ ಬಿಡುತ್ತಿದೆ ಎಂದೂ ಟೀಕಿಸಿದರು. ರಮೇಶ್‌ ಕುಮಾರ್ ಅವರು ಕಲಾಪವನ್ನು ಅರ್ಧ ಗಂಟೆ ಮುಂದೂಡಿದರು. ಮಧ್ಯಾಹ್ನ 1 ಗಂಟೆಗೆ ಕಲಾಪ ಆರಂಭವಾಯಿತು. ಬಿಜೆಪಿ ಸದಸ್ಯರ ಧರಣಿ ಮುಂದುವರಿಯಿತು. ಮಧ್ಯಾಹ್ನ 3ಕ್ಕೆ ಮುಂದೂಡಿಕೆಯಾಯಿತು. ಕಲಾಪ ಮತ್ತೆ ಆರಂಭವಾದಾಗ ಬಿಜೆಪಿ ಸದಸ್ಯರು ಘೋಷಣೆ ಕೂಗಿದರು. ಕಲಾಪವನ್ನು ಶುಕ್ರವಾರಕ್ಕೆ ಮುಂದೂಡಿದರು.

**

ಉ.ಕ. ಸಮಸ್ಯೆಗಳ ಚರ್ಚೆಗೆ ಬಿಜೆಪಿ ಒತ್ತಾಯ

ಬೆಳಗಾವಿ: ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳ ಬಗ್ಗೆ ಚರ್ಚೆಗೆ ಅವಕಾಶ ನೀಡಬೇಕು ಎಂದು ಆಗ್ರಹಿಸಿ ಸಭಾಪತಿ ಪೀಠದ ಎದುರು ಬಿಜೆಪಿ ಸದಸ್ಯರು ಧರಣಿ ನಡೆಸಿದ್ದರಿಂದ ಗುರುವಾರ ಇಡೀ ದಿನ ವಿಧಾನ ಪರಿಷತ್‌ ಕಲಾಪ ನಡೆಯಲಿಲ್ಲ.

ಪ್ರಶ್ನೋತ್ತರ ರದ್ದುಪಡಿಸಿ ಚರ್ಚೆಗೆ ಅವಕಾಶ ನೀಡಬೇಕು ಎಂದು ಬಿಜೆಪಿ ಸದಸ್ಯರು ಪಟ್ಟು ಹಿಡಿದರು. ‘ನಿಯಮದ ಪ್ರಕಾರ ಪ್ರಶ್ನೋತ್ತರ ನಂತರ ಚರ್ಚೆ ಮಾಡಲಿ. ಉತ್ತರ ನೀಡಲು ಸಿದ್ಧರಿದ್ದೇವೆ’ ಎಂದು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಹೇಳಿದರು. ಉಭಯ ಪಕ್ಷದವರು ಪ್ರತಿಷ್ಠೆಗೆ ಪಕ್ಕಾಗಿದ್ದರಿಂದಾಗಿ ನಾಲ್ಕು ಬಾರಿ ಮುಂದೂಡಿ, ಮತ್ತೆ ಮತ್ತೆ ಆರಂಭ ಮಾಡಿದರೂ ಕಲಾಪ ನಡೆಯಲಿಲ್ಲ.

ಕಲಾಪ ಆರಂಭವಾಗುತ್ತಿದ್ದಂತೆಯೇ ಪ್ರಶ್ನೋತ್ತರ ಅವಧಿ ರದ್ದುಪಡಿಸಿ ಉತ್ತರ ಕರ್ನಾಟಕದ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚೆಗೆ ಅವಕಾಶ ನೀಡಬೇಕು ಎಂದು ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ ಆಗ್ರಹಿಸಿದರು. ಅದಕ್ಕೆ ವೈ.ಎ. ನಾರಾಯಣಸ್ವಾಮಿ, ತೇಜಸ್ವಿನಿಗೌಡ ಧ್ವನಿಗೂಡಿಸಿದರು.

ಜೆಡಿಎಸ್‌ನ ಮರಿತಿಬ್ಬೇಗೌಡರು ‘ಬಿಜೆಪಿಯವರ ಕೊನೆ ಗಳಿಗೆಯ ಕಾಳಜಿಯನ್ನು ಮೆಚ್ಚುತ್ತೇನೆ’ ಎನ್ನುತ್ತಿದ್ದಂತೆಯೇ ಬಿಜೆಪಿ ಸದಸ್ಯರು ಅವರ ಮೇಲೆ ಮುಗಿಬಿದ್ದರು. ಆಡಳಿತ ಸದಸ್ಯರು ಧ್ವನಿ ಏರಿಸಿದರು. ಕಲಾಪ ಗದ್ದಲದ ಗೂಡಾಯಿತು.

‘ಉತ್ತರ ಕರ್ನಾಟಕದ ಬಗ್ಗೆ ಚರ್ಚೆಗೆ ಮಾತ್ರ ಅಧಿವೇಶನ ನಡೆಸುತ್ತಿಲ್ಲ. ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕು ಎಂದು ಮಹಾರಾಷ್ಟ್ರದ ಜನಪ್ರತಿನಿಧಿಗಳು ಕೇಂದ್ರಕ್ಕೆ ನಿಯೋಗ ತೆಗೆದುಕೊಂಡು ಹೋಗಿದ್ದರು. ಬೆಳಗಾವಿ ರಾಜ್ಯದ ಅವಿಭಾಜ್ಯ ಅಂಗ. ಇದು ಕನ್ನಡಿಗರದ್ದು ಎಂಬ ಸಂದೇಶ ಕಳುಹಿಸಲು ಅಧಿವೇಶನ ನಡೆಸುವ ತೀರ್ಮಾನವನ್ನು ಆಗ ಕೈಗೊಂಡಿದ್ದೆ’ ಎಂದು ಮುಖ್ಯಮಂತ್ರಿ ನೆನಪಿಸಿಕೊಂಡರು.

‘ಸಾಲ ಮನ್ನಾಕ್ಕಾಗಿಉತ್ತರ ಕರ್ನಾಟಕ ಯೋಜನೆಗಳಿಗೆ ನೀಡಿದ ಅನುದಾನವನ್ನು ಬಳಸಲಾಗುತ್ತಿದೆ. ಯೋಜನೆಗಳನ್ನು ರದ್ದು ಪಡಿಸಲಾಗಿದೆ ಎಂದು ಹೊರಗಡೆ ಚರ್ಚೆ ಮಾಡಲಾಗುತ್ತಿದೆ. ಅನುದಾನ ಕಡಿತ ಮಾಡಿಲ್ಲ. ಯೋಜನೆಗಳನ್ನೂ ನಿಲ್ಲಿಸುವುದಿಲ್ಲ. ಸಾಲ ಮನ್ನಾಕ್ಕಾಗಿ ಪ್ರತ್ಯೇಕವಾಗಿ ಹಣ ತೆಗೆದಿರಿಸಲಾಗಿದೆ. ಈ ಬಗ್ಗೆ ಉತ್ತರ ಕೊಡಬೇಕಾಗಿರುವುದರಿಂದ ನಿಮಗಿಂತ ಹೆಚ್ಚಾಗಿ ಈ ಬಗ್ಗೆ ಚರ್ಚೆ ನಡೆಯುವುದು ನನಗೆ ಬೇಕಾಗಿದೆ’ ಎಂದು ಹೇಳಿದರು.

ಎಸ್‌.ಆರ್‌. ಪಾಟೀಲ ಮಾತನಾಡಿ, ಇವರಿಗೆ ಕಾಳಜಿ, ಕಕ್ಕುಲಾತಿ ಇಲ್ಲ. ಪಕ್ಷದ ವರಿಷ್ಠರ ಸೂಚನೆಗೆ ಮೇರೆಗೆ ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ಉತ್ತರ ಕರ್ನಾಟಕ ವಿರೋಧಿಗಳು ಎಂದು ಬಿಜೆಪಿಯವರು ಘೋಷಣೆ ಕೂಗಿದರೆ, ಬಿಜೆಪಿಗೆ ಧಿಕ್ಕಾರ ಎಂದು ಕಾಂಗ್ರೆಸ್‌ನ ಕೆಲವರು ಕೂಗಿದರು.

ಮೂರನೇ ಬಾರಿಗೆ ಸದನ ಆರಂಭವಾದಾಗಲೂ ವಿರೋಧ ಪಕ್ಷದವರು ಧರಣಿ ಮುಂದುವರಿಸಿದರು. ಆಗ ಮಧ್ಯ ಪ್ರವೇಶಿಸಿ ಕ್ರಿಯಾಲೋಪ ಎತ್ತಿದ ಜೆಡಿಎಸ್‌ನ ಬಸವರಾಜ ಹೊರಟ್ಟಿ, ಸದನದಲ್ಲಿ ಘೋಷಣೆ ಕೂಗುವಂತಿಲ್ಲ ಎಂದರು.

ಬಿಜೆಪಿ ಸದಸ್ಯರು ಆಗಲೂ ಘೋಷಣೆ ಮುಂದುವರಿಸಿದಾಗ, ‘ನಿಮಗೆ ಮಾನ, ಮರ್ಯಾದೆ ಇಲ್ಲ. ನಿಮಗೆ ನಾಚಿಕೆ ಆಗುವುದಿಲ್ಲವೇ’ ಎಂದು ಟೀಕಿಸಿದರು.

**

ಮುಖ್ಯಮಂತ್ರಿಗೆ ಮದ ನೆತ್ತಿಗೇರಿದೆ: ಬಿಎಸ್‌ವೈ

‘ಮುಖ್ಯಮಂತ್ರಿಗೆ ಮದ ನೆತ್ತಿಗೇರಿದೆ. ಅಧಿಕಾರದ ಅಹಂಕಾರದಿಂದ ಅವರು ವರ್ತಿಸುತ್ತಿದ್ದಾರೆ’ ಎಂದು ವಿರೋಧ ಪಕ್ಷದ ನಾಯಕ ಬಿ.ಎಸ್‌. ಯಡಿಯೂರಪ್ಪ ಆಕ್ರೋಶ ವ್ಯಕ್ತಪಡಿಸಿದರು.

‘ರಾಷ್ಟ್ರೀಯ ಬ್ಯಾಂಕುಗಳಲ್ಲಿರುವ ರೈತರ ಸಾಲ ಮನ್ನಾ ಯಾವಾಗ ಮಾಡುತ್ತೀರಿ ಎಂದು ಕೇಳಿದರೆ, ನಾನೇನೋ ಆ ಬ್ಯಾಂಕುಗಳ ಜೊತೆ ಒಪ್ಪಂದ ಮಾಡಿಕೊಂಡಿದ್ದೇನೆ ಎಂಬ ಅರ್ಥದಲ್ಲಿ ಹಗುರವಾಗಿ ಮುಖ್ಯಮಂತ್ರಿ ಮಾತನಾಡುತ್ತಾರೆ. ಸದನದ ಕಲಾಪ ನಡೆಸಲು ಸರ್ಕಾರಕ್ಕೆ ಇಷ್ಟವಿಲ್ಲ’ ಎಂದು ದೂರಿದರು. ‘ಕಲಾಪ ನಡೆಸಲು ನಮ್ಮ ಅಭ್ಯಂತರ ಇಲ್ಲ. ಆದರೆ, ಸೌಜನ್ಯಕ್ಕಾದರೂ ನಮ್ಮನ್ನು ಕರೆಸಿ ಮಾತನಾಡಲು ಸರ್ಕಾರ ಸಿದ್ಧವಿಲ್ಲ. ಕಲಾಪ ಮುಂದೂಡಿಕೆಯಾದ ಬಳಿಕ ಬುಧವಾರ ಸಂಜೆ ಸಭಾಧ್ಯಕ್ಷರು ನಮ್ಮ ಜೊತೆ ಚರ್ಚಿಸಿದ್ದು ಬಿಟ್ಟರೆ, ಇಂದು (ಗುರುವಾರ) ಪ್ರಯತ್ನ ಮಾಡಿಲ್ಲ ಎಂದು ಟೀಕಿಸಿದರು.

**

₹2 ಕೋಟಿ ವ್ಯರ್ಥ!

ವಿಧಾನಮಂಡಲ ಅಧಿವೇಶನದ ನಿಗದಿತ ಒಂದು ದಿನದ ಕಲಾಪ ನಡೆಯದಿದ್ದರೆ ಸರ್ಕಾರದ ಬೊಕ್ಕಸದಿಂದ ಬರೋಬ್ಬರಿ₹2 ಕೋಟಿ ವ್ಯರ್ಥ ವೆಚ್ಚ ಆಗಲಿದೆ.

ಪಟ್ಟು ಸಡಿಲಿಸದ ಬಿಜೆಪಿ ಮತ್ತು ಕಾಂಗ್ರೆಸ್–ಜೆಡಿಎಸ್‌ ಸದಸ್ಯರ ನಿಲುವಿನಿಂದಾಗಿ ಗುರುವಾರ ಇಡೀ ದಿನ ಎರಡೂ ಸದನಗಳಲ್ಲಿ ಕಾರ್ಯಕಲಾಪಗಳು ನಡೆಯಲಿಲ್ಲ. ಊಟ, ವಸತಿ, ವಾಹನ, ಬಂದೋಬಸ್ತ್‌, ಅವಶ್ಯ ವಸ್ತುಗಳ ಸರಬರಾಜು, ವಿದ್ಯುತ್ ಈ ಎಲ್ಲ ವೆಚ್ಚಗಳಿಗೆ ದಿನವಹಿ ₹2 ಕೋಟಿ ಬೇಕು. ಇದಲ್ಲದೇ ಶಾಸಕರು, ಅಧಿಕಾರಿ–ಸಿಬ್ಬಂದಿಯದಿನಭತ್ಯೆ, ಪ್ರವಾಸ ಭತ್ಯೆಗಳು ಪ್ರತ್ಯೇಕವಾಗಿದ್ದು, ಈ ಬಾಬ್ತು ₹10 ಲಕ್ಷ ದಾಟುತ್ತದೆ.

ಕಳೆದ ವರ್ಷ 10 ದಿನ ಬೆಳಗಾವಿಯಲ್ಲಿ ನಡೆದ ಅಧಿವೇಶನಕ್ಕೆ ಸರಿಸುಮಾರು ₹ 28 ಕೋಟಿ ಖರ್ಚು ಮಾಡಿತ್ತು.

**

ಇದೇನು ಮನೆಯಾ?: ಪ್ರತಾಪಚಂದ್ರ

‘ನೀವು ಹೇಳಿದಂತೆ ನಡೆಯಬೇಕು ಎಂದು ಹೇಳಲಿಕ್ಕೆ ಇದೇನು ಮನೆಯಾ’ ಎಂದು ಸಭಾಪತಿ ಕೆ. ಪ್ರತಾಪಚಂದ್ರ ಶೆಟ್ಟಿ ವಿಧಾನ ಪರಿಷತ್‌ನಲ್ಲಿ ಬಿಜೆಪಿ ಸದಸ್ಯರನ್ನು ಪ್ರಶ್ನಿಸಿದರು.

ಬಿಜೆಪಿ ಹಟಕ್ಕೆ ಬಿದ್ದ ರೀತಿಗೆ ಸಿಟ್ಟಾದ ಸಭಾಪತಿ, ‘ಕೆಟ್ಟ ಸಂಪ್ರದಾಯಕ್ಕೆ ನಾಂದಿ ಹಾಡಬೇಕಾ? ಪ್ರಶ್ನೋತ್ತರ ಮುಗಿಯಲಿ. ಆ ನಂತರ ಮಾತನಾಡಲು ಅವಕಾಶ ನೀಡಲಾಗುವುದು’ ಎಂದು ಹೇಳಿದರು.

ಮೂರು ಬಾರಿ ಮುಂದೂಡಿದ ನಂತರ ಸಭೆ ಆರಂಭವಾದಾಗಲೂ ಬಿಜೆಪಿ ಸದಸ್ಯರು ಧರಣಿ ಮುಂದುವರಿಸಿದಾಗ, ‘ರಾಜಕಾರಣಕ್ಕೂ ಒಂದು ಮಿತಿಯಿರಬೇಕು. ನಿಮ್ಮ ಸದನವನ್ನು ನೀವೇ ಹೀಗೆ ಮಾಡಿದರೆ ಏನು ಉಳಿಯುತ್ತದೆ. ಸಭೆಯಿಂದ ಹೊರಹಾಕಬೇಕಾಗುತ್ತದೆ. ಇಡೀ ಸದನವನ್ನು ಗುತ್ತಿಗೆ ತೆಗೆದುಕೊಂಡವರ ಹಾಗೆ ಆಡುವುದು ಸರಿಯಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT