ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಷತ್‌: ಸದನ ಸಮಿತಿಗಳ ನಡಾವಳಿಗೂ ಕಾಗದರಹಿತ ಸ್ಪರ್ಶ

ಸಭಾಪತಿ ಕೆ.ಪ್ರತಾಪಚಂದ್ರ ಶೆಟ್ಟಿ ಚಿಂತನೆ
Last Updated 20 ಡಿಸೆಂಬರ್ 2018, 19:32 IST
ಅಕ್ಷರ ಗಾತ್ರ

ಬೆಳಗಾವಿ: ವಿಧಾನಪರಿಷತ್ತಿನ ಕಲಾಪಗಳ ಕುರಿತ ಮಾಹಿತಿಯನ್ನು ಆನ್‌ಲೈನ್‌ ವ್ಯವಸ್ಥೆಯಲ್ಲಿ ಅಳವಡಿಸುವ ‘ಇ–ವಿಧಾನ’ ಯೋಜನೆ ಜಾರಿಗೊಳಿಸುವುದರೊಂದಿಗೆ ಇನ್ನೊಂದು ಹೆಜ್ಜೆ ಮುಂದೆ ಹೋಗಲು ನೂತನ ಸಭಾಪತಿ ಕೆ.ಪ್ರತಾಪಚಂದ್ರ ಶೆಟ್ಟಿ ಮುಂದಾಗಿದ್ದಾರೆ.

ಪರಿಷತ್ತಿನ ಕೆಲವು ಸದನ ಸಮಿತಿಗಳ ವಿಚಾರಣೆಗಳು ವರ್ಷಾನುಗಟ್ಟಲೆ ನಡೆಯುತ್ತಿದ್ದು, ಅವುಗಳ ಸಭೆಯ ನಡಾವಳಿಗೂ ಕಾಗದರಹಿತ ವ್ಯವಸ್ಥೆ ಅಳವಡಿಸಲು ಅವರು ಚಿಂತನೆ ನಡೆಸಿದ್ದಾರೆ.

‘ಪರಿಷತ್ತಿನ ಕಾರ್ಯವೈಖರಿಯಲ್ಲಿ ಅನೇಕ ಸುಧಾರಣೆಗಳಾಗಿವೆ. ನಾವು ಈ ಸದನಕ್ಕೆ ಬಂದ ಆರಂಭದಲ್ಲಿ ಪ್ರಶ್ನೆಯನ್ನು ಸಭಾಪತಿ ಕಚೇರಿಗೆ ಒಪ್ಪಿಸುವುದಕ್ಕಾಗಿಯೇ ಬೆಂಗಳೂರಿಗೆ ಬರಬೇಕಾದ ಪ್ರಮೇಯ ಇತ್ತು. ಈಗ ಇ–ಮೇಲ್‌ನಲ್ಲೇ ಪ್ರಶ್ನೆ ಕೇಳುವ ವ್ಯವಸ್ಥೆ ಇದೆ. ಸದನದಲ್ಲಿ ಕೇಳುವ ಪ್ರಶ್ನೆಗಳನ್ನೂ ಈಗ ಆಯಾ ದಿನ ವೆಬ್‌ಸೈಟ್‌ನಲ್ಲಿ ಹಾಕಲಾಗುತ್ತದೆ. ಇದೇ ರೀತಿ ಸದನ ಸಮಿತಿಗಳ ಕಾರ್ಯವೈಖರಿಯಲ್ಲೂ ಬದಲಾವಣೆ ತರುವ ಚಿಂತನೆ ಇದೆ’ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ವಿಧಾನಪರಿಷತ್ತಿನ ಅರ್ಜಿಗಳ ಸಮಿತಿಗೆ ಬಂದ ಅರ್ಜಿಗಳ ವಿಚಾರಣೆ ಕೆಲವೊಮ್ಮೆ ವರ್ಷಾನುಗಟ್ಟಲೆ ನಡೆಯುತ್ತದೆ. ಕೆಲವೊಮ್ಮೆ ಸಮಿತಿ ಸದಸ್ಯರು ನಿವೃತ್ತರಾಗಿ ಹೊಸ ಸದಸ್ಯರು ಬಂದರೂ ಅರ್ಜಿಯ ವಿಚಾರಣೆ ಮುಗಿದಿರುವುದಿಲ್ಲ. ಪ್ರತಿ ಬಾರಿ ಸಮಿತಿ ಮುಂದೆ ವಿಷಯ ಬಂದಾಗ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಹಾಜರಾಗಿ ಕ್ರಮಕೈಗೊಂಡ ಬಗ್ಗೆ ವಿವರಣೆ ನೀಡುತ್ತಾರೆ. ಅದು ಅಂದಿನ ನಡಾವಳಿಗೆ ಸೀಮಿತವಾಗಿರುತ್ತದೆ. ಮೂಲ ಅರ್ಜಿಗೂ ಅಂತಿಮ ಉತ್ತರಕ್ಕೂ ಒಂದಕ್ಕೊಂದು ತಾಳೆ ಆಗದ ಪರಿಸ್ಥಿತಿ ನಿರ್ಮಾಣವಾಗುವುದು ಉಂಟು’ ಎಂದುಪ್ರತಾಪಚಂದ್ರ ಶೆಟ್ಟಿ ತಿಳಿಸಿದರು.

‘ಸಮಿತಿಯ ಎಲ್ಲ ವಿಚಾರಣೆಗಳ ನಡಾವಳಿ ಆನ್‌ಲೈನ್‌ನಲ್ಲಿ ಲಭ್ಯವಾಗುವಂತೆ ನೋಡಿಕೊಂಡರೆ, ಮೂಲ ಅರ್ಜಿ ಏನಿತ್ತು, ಆ ಕುರಿತು ಏನೆಲ್ಲ ಬೆಳವಣಿಗೆಗಳು ನಡೆದಿವೆ ಎಂಬುದನ್ನು ನೋಡಿಕೊಂಡು ಸಮಿತಿ ಸದಸ್ಯರು ವಿಚಾರಣೆ ಮುಂದುವರಿಸಬಹುದು. ಅರ್ಜಿಗೂ ಉತ್ತರಕ್ಕೂ ತಾಳೆ ಇಲ್ಲದೇ ಆಭಾಸ ಉಂಟಾಗುವುದನ್ನು ತಪ್ಪಿಸಬಹುದು’ ಎಂದು ವಿವರಿಸಿದರು.

‘ಚುಕ್ಕೆ ಗುರುತಿಲ್ಲದ ಪ್ರಶ್ನೆಗಳಿಗೆ ಸದನದಲ್ಲಿ ಮಂಡನೆಯಾದ ಲಿಖಿತ ಉತ್ತರಗಳನ್ನು ಪರಿಷತ್ತಿನ ವೆಬ್‌ಸೈಟ್‌ನಲ್ಲಿ ಪ್ರಕಟಿಸುವುದಕ್ಕೆ ತಯಾರಿ ನಡೆಯುತ್ತಿದೆ. ಆದರೆ, ಚುಕ್ಕಿ ಗುರುತಿನ ಪ್ರಶ್ನೆ ಕೇಳಿದ ಸದಸ್ಯರು ಸಚಿವರು ನೀಡಿದ ಉತ್ತರಕ್ಕೆ ಸದನದಲ್ಲಿವಿವರಣೆ ಬಯಸುತ್ತಾರೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT