ಶುಕ್ರವಾರ, ನವೆಂಬರ್ 22, 2019
20 °C
ಉತ್ಸವದಲ್ಲಿ ಲಕ್ಷ್ಮಣ ಸವದಿ

ಬಳ್ಳಾರಿ: ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಯೋಜನೆ ಅಡಿ ₹422 ಕೋಟಿ ವೆಚ್ಚ

Published:
Updated:

ಬಳ್ಳಾರಿ: ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಯೋಜನೆ ಅಡಿ 2013-14ನೇ ಸಾಲಿನಿಂದ 2019-20 ರವರೆಗೆ ₹832 ಕೋಟಿ ಅನುದಾನ ಹಂಚಿಕೆಯಾಗಿದ್ದು ಆ ಪೈಕಿ ₹422 ಕೋಟಿ ವೆಚ್ಚ ಮಾಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ ಸವದಿ ಹೇಳಿದರು.

ನಗರದ ಮುನ್ಸಿಪಲ್ ಕಾಲೇಜು ಮೈದಾನದಲ್ಲಿ ಮಂಗಳವಾರ ಕಲ್ಯಾಣ ಕರ್ನಾಟಕ ಉತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಅವರು,
ಇಷ್ಟು ವರ್ಷಗಳಲ್ಲಿ 3255 ಕಾಮಗಾರಿಗಳ ಪೈಕಿ  2104 ಪೂರ್ಣ ಗೊಂಡಿವೆ ಎಂದು ಮಾಹಿತಿ ನೀಡಿದರು.

ಪ್ರವಾಹ ಪೀಡಿತ ತಾಲ್ಲೂಕುಗಳಾದ ಹರಪನಹಳ್ಳಿ ಮತ್ತು ಹಡಗಲಿ ತಾಲ್ಲೂಕಿನಲ್ಲಿ 802 ಕುಟುಂಬಗಳಿಗೆ ₹ 80.20 ಲಕ್ಷ ಪರಿಹಾರ ವಿತರಿಸಲಾಗಿದೆ. ಮನೆ ಕಳೆದುಕೊಂಡವರಿಗೆ ₹2 ಕೋಟಿ ಪರಿಹಾರ ಧನ ನೀಡಲಾಗಿದೆ ಎಂದರು.

ಕಲ್ಯಾಣ ಕರ್ನಾಟಕದ ಸರ್ವತೋಮುಖ ‌ಅಭಿವೃದ್ಧಿಗೆ ಎಲ್ಲರೂ ಒಟ್ಟಾಗಿ ದುಡಿಯಬೇಕಾಗಿದೆ ಎಂದು ಕರೆ ನೀಡಿದರು.

ಶಾಸಕರಾದ ಕೆ.ಸಿ.ಕೊಂಡಯ್ಯ, ಈ.ತುಕಾರಾಂ, ಅಲ್ಲಂ ‌ವೀರಭದ್ರಪ್ಪ, ಜಿಲ್ಲಾಧಿಕಾರಿ ಎಸ್.ಎಸ್.ನಕುಲ, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ನಿತೀಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಕೆ.ಬಾಬಾ ಇದ್ದರು. ವಿವಿಧ ಶಾಲೆ- ಕಾಲೇಜುಗಳ ಸಾವಿರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ನಾವು ರಸ್ತೆಗಿಳಿದಾಗ ನೀವು ಬಂದಿರಿ!

'ಬಳ್ಳಾರಿಯನ್ನು ಹೈದರಾಬಾದ್ ಕರ್ನಾಟಕ ಪ್ರದೇಶ ‌ಅಭಿವೃದ್ಧಿ ಮಂಡಳಿ ವ್ಯಾಪ್ತಿಗೆ ಸೇರಿಸಲು ನಡೆದ ಹೋರಾಟದಲ್ಲಿ ನಾವು ಮಂಚೂಣಿಯಲ್ಲಿದ್ದು ‌ಬೀದಿಗಿಳಿದು ಹೋರಾಟ ಮಾಡಿದಾಗ ನೀವು ಬಂದಿರಿ' ಎಂದು ಹೋರಾಟಗಾರ ಸಿರಿಗೇರಿ ಪನ್ನರಾಜ್ ಅವರು ಶಾಸಕ ಅಲ್ಲಂ‌ ವೀರಭದ್ರಪ್ಪ ಅವರನ್ನು ಕುರಿತು ಹೇಳಿದ ಘಟನೆ ನಡೆಯಿತು.

ವಿಶೇಷ ಉಪನ್ಯಾಸ ನೀಡುವ ಸಂದರ್ಭದಲ್ಲಿ ಅವರು, ' ಹೋರಾಟದಲ್ಲಿ ಮುಂಚೂಣಿಯಲ್ಲಿದ್ದವರ ಪೈಕಿ ಈಗ ಬದುಕಿರುವವರು ನಾನು ಮತ್ತು ಪತ್ರಕರ್ತ ಕೆ.ಮಧುಸೂದನ್ ಇಬ್ಬರೇ' ಎಂದು ಹೇಳಿದ್ದರು. ವೇದಿಕೆಯಲ್ಲಿದ್ದ ಅಲ್ಲಂ ವೀರಭದ್ರಪ್ಪ ಅವರು ತಾವೂ ಹೋರಾಟದಲ್ಲಿದ್ದುದಾಗಿ ಹೇಳಿದಾಗ, ಪನ್ನರಾಜ್, 'ನಾವು ರಸ್ತೆಗಿಳಿದಾಗ ನೀವು ಬಂದು ನಮ್ಮ ಜೊತೆ ಸೇರಿಕೊಂಡಿರಿ' ಎಂದರು.

ಪ್ರತಿಕ್ರಿಯಿಸಿ (+)