ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಳ್ಳಾರಿ: ಸಮುದಾಯಕ್ಕೆ ಕೊರೊನಾ ಹಬ್ಬದಂತೆ ‘ಜಾಗೃತಿ‘

ಗ್ರಾಮೀಣಾಭಿವೃದ್ಧಿ– ಪಂಚಾಯತ್‌ ರಾಜ್‌ ಇಲಾಖೆ ಸಿದ್ಧತೆ
Last Updated 10 ಜೂನ್ 2020, 10:50 IST
ಅಕ್ಷರ ಗಾತ್ರ

ಬಳ್ಳಾರಿ: ಗ್ರಾಮ ಸಮುದಾಯಕ್ಕೆ ಕೊರೊನಾ ಹಬ್ಬದಂತೆ ಜನರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನಕ್ಕೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ಮುಂದಾಗಿದೆ.

ವೈಯಕ್ತಿಕ ನೆಲೆಯಲ್ಲಿ ಸೋಂಕು ಹಬ್ಬುವ ಸನ್ನಿವೇಶವು ಈಗ ಬದಲಾಗಿದ್ದು, ಇಡೀ ಸಮುದಾಯಕ್ಕೆ ಸೋಂಕು ತಗುಲುವ ಹಂತಕ್ಕೆ ಬಂದಿದೆ. ಈ ಹಂತದಲ್ಲಿ ಹೆಚ್ಚು ಜಾಗ್ರತೆ ಅತ್ಯವಶ್ಯ ಎಂಬ ಹಿನ್ನೆಲೆಯಲ್ಲೇ ಇಡೀ ರಾಜ್ಯದ ಎಲ್ಲ ಪಂಚಾಯ್ತಿಗಳಲ್ಲೂ ಜಾಗೃತಿ ಮೂಡಿಸುವ ಕಾರ್ಯಕ್ರಮ ಕೆಲವೇ ದಿನಗಳಲ್ಲಿ ರೂಪುಗೊಳ್ಳಲಿದೆ. ಬಹಳಷ್ಟು ಜಿಲ್ಲೆಗಳಲ್ಲಿ ಭಾರತೀಯ ರೆಡ್‌ ಕ್ರಾಸ್‌ ಸಂಸ್ಥೆಯೇ ನೇತೃತ್ವ ವಹಿಸಲಿದೆ.

ಜಾಗೃತಿ ಸಲುವಾಗಿಯೇ ಇಲಾಖೆಯ ಪ್ರಧಾನ ಕಾರ್ಯದರ್ಶಿ ಉಮಾಮಹಾದೇವನ್‌ ಅವರು ಎಲ್ಲಾ ಜಿಲ್ಲೆಗಳ ನೋಡಲ್‌ ಅಧಿಕಾರಿಗಳೊಂದಿಗೆ ಬುಧವಾರ ವೀಡಿಯೋ ಸಂವಾದ ನಡೆಸಿದರು.

ಸಂವಾದದ ಕುರಿತು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ ಜಿಲ್ಲೆಯ ನೋಡಲ್‌ ಅಧಿಕಾರಿ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ರಾಜಪ್ಪ, ‘ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಜಾಗೃತಿ ಮೂಡಿಸಲು ತಲಾ ಐವರು ಸ್ವಯಂಸೇವಕರನ್ನು ಆಯ್ಕೆ ಮಾಡಿ ಅವರಿಗೆ ತರಬೇತಿ ನೀಡುವುದು ಮುಖ್ಯ ಉದ್ದೇಶ. ಅವರು ಗ್ರಾಮಗಳಲ್ಲಿ ಸಂಚರಿಸಿ ಜಾಗೃತಿ ಮೂಡಿಸಲಿದ್ದಾರೆ’ ಎಂದು ಹೇಳಿದರು.

‘ವಿವಿಧ ಜಿಲ್ಲೆಗಳ ನೋಡಲ್‌ ಏಜೆನ್ಸಿಗಳ ಪ್ರಮುಖರಿಗೆ ಬೆಂಗಳೂರಿನಲ್ಲಿ ಇಲಾಖೆಯೇ ತರಬೇತಿ ನೀಡುತ್ತದೆ. ಅವರು ಜಿಲ್ಲೆಗಳಲ್ಲಿ ಸ್ವಯಂಸೇವಕರಿಗೆ ತರಬೇತಿ ನೀಡುತ್ತಾರೆ. ಸ್ವಯಂಸೇವಕರನ್ನು ಗುರುತಿಸುವ ಕೆಲಸ ಶುರು ಮಾಡಲಿದ್ದೇವೆ’ ಎಂದರು.

ಸ್ವಯಂಸೇವಕರ ಆಯ್ಕೆ ಬಗ್ಗೆ ಮಾತನಾಡಿದ ರೆಡ್‌ ಕ್ರಾಸ್‌ ಸಂಸ್ಥೆಯ ಕಾರ್ಯದರ್ಶಿ ಎಂ.ಎಷಕೀಬ್‌, ‘ನೆಹರು ಯುವ ಕೇಂದ್ರದ ಮೂಲಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವ ಯುವಕ ಸಂಘಗಳಿಂದಲೇ ಸ್ವಯಂಸೇವಕರನ್ನು ಆಯ್ಕೆ ಮಾಡುವ ಚಿಂತನೆ ನಡೆದಿದೆ. ಗ್ರಾಮ ಮಟ್ಟದಲ್ಲಿ ಈ ಸಂಘಗಳ ಮುಖಂಡರಿಗ ಹೆಚ್ಚಿನ ಜನರ ಸಂಪರ್ಕ ಇರುವುದರಿಂದ ಜಾಗೃತಿ ಮೂಡಿಸುವುದು ಸುಲಭವಾಗುತ್ತದೆ’ ಎಂದು ಅಭಿಪ್ರಾಯಪಟ್ಟರು.

‘ಸಮುದಾಯಕ್ಕೆ ಸೋಂಕು ತಲುಗಿದರೆ ಅದರ ಮೂಲಪತ್ತೆ ಹಚ್ಚುವುದು ಕಷ್ಟಕರವಾಗುತ್ತದೆ. ಸೋಂಕು ನಿಯಂತ್ರಣವೂ ಕಷ್ಟಸಾಧ್ಯ. ಹೀಗಾಗಿ ಸಮುದಾಯಕ್ಕೆ ಜಾಗೃತಿ ಮೂಡಿಸುವುದು ಅತ್ಯವಶ್ಯ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT