ಅಕ್ಷರ ದಾಸೋಹ ದಾಸ್ತಾನು ಕೊಠಡಿಯಲ್ಲೇ ತರಗತಿ!

7
ಬೆಳ್ತಂಗಡಿ ತಾಲ್ಲೂಕಿನ ಪಟ್ರಮೆ ಗ್ರಾಮದಲ್ಲಿರುವ ಮೂಲ ಸೌಕರ್ಯ ವಂಚಿತ ಶಾಲೆಯ ದುಃಸ್ಥಿತಿ

ಅಕ್ಷರ ದಾಸೋಹ ದಾಸ್ತಾನು ಕೊಠಡಿಯಲ್ಲೇ ತರಗತಿ!

Published:
Updated:
Deccan Herald

ನೆಲ್ಯಾಡಿ (ಉಪ್ಪಿನಂಗಡಿ): ಬೆಳ್ತಂಗಡಿ ತಾಲ್ಲೂಕಿನ ಪಟ್ರಮೆ ಗ್ರಾಮದ ಅನಾರು ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಒಂದು ಕಟ್ಟಡ ಕುಸಿದು ಬಿದ್ದಿದೆ. ಇನ್ನೊಂದು ಕುಸಿಯುವ ಹಂತದಲ್ಲಿದೆ. ಅಕ್ಷರ ದಾಸೋಹ ದಾಸ್ತಾನು ಕೊಠಡಿಯಲ್ಲಿ ಪಾಠ ನಡೆಯುತ್ತಿದೆ!

ರಂಗಮಂದಿರದಲ್ಲಿ ಒಂದು ತರಗತಿ, ಶಾಲಾ ಕಚೇರಿಯಲ್ಲಿ ಇನ್ನೊಂದು ತರಗತಿ ನಡೆಯುತ್ತಿದ್ದರೆ, ಕುಸಿದು ಬೀಳುವ ಸ್ಥಿತಿಯಲ್ಲಿರುವ ಕಟ್ಟಡದಲ್ಲಿ ಮೂರು ತರಗತಿಗಳು ನಡೆಯುತ್ತಿವೆ.

ಶಾಲೆಯ ಹೆಸರಿನೊಂದಿಗೆ ಎ–ಗ್ರೇಡ್, ‘ಉನ್ನತೀಕರಿಸಿದ ಶಾಲೆ’ ಎಂಬ ಹೆಗ್ಗಳಿಕೆ ಇದೆ. ಆದರೆ ಮೂಲಸೌಲಭ್ಯ ಮಾತ್ರ ಇಲ್ಲ.

1954ರಲ್ಲಿ ಪಟ್ರಮೆ ಗ್ರಾಮದ ದೇವಸ್ಥಾನದ ಜಗುಲಿಯಲ್ಲಿ ಪ್ರಾರಂಭ ಆದ ಶಾಲೆ ಇದು. ಜನರ ಸಹಕಾರದಿಂದ ಶಾಲೆಗೆಂದು 3 ಎಕರೆ ಜಾಗ ಗುರುತಿಸಲಾಗಿ ಸಣ್ಣ ಗುಡಿಸಲು ರೀತಿಯಲ್ಲಿ ಮಣ್ಣಿನ ಗೋಡೆ ನಿರ್ಮಿಸಿ ಇಳಿಸಿ ಕಟ್ಟಲಾದ ಕಟ್ಟಡದಲ್ಲಿ ಶಾಲೆ ಆರಂಭವಾಗಿತ್ತು. 1956ರಲ್ಲಿ, 1975ರಲ್ಲಿ, 1985ರಲ್ಲಿ ಈ ಶಾಲೆಗೆ ಒಟ್ಟು 3 ಕೊಠಡಿ ಮಂಜೂರಾಗಿತ್ತು.

1985ರಲ್ಲಿ ನಿರ್ಮಾಣ ಆಗಿರುವ ಕೊಠಡಿ 4 ವರ್ಷದ ಹಿಂದೆ ಕುಸಿದು ಬಿದ್ದಿತ್ತು. 1975ರಲ್ಲಿ ನಿರ್ಮಾಣ ಆಗಿದ್ದ ಕೊಠಡಿಯ ಗೋಡೆಯಲ್ಲಿ 2011ರಲ್ಲಿ ಬಿರುಕು ಕಾಣಿಸಿಕೊಂಡಿತ್ತು. ಇದೇ ಜುಲೈ 25ರಂದು ರಾತ್ರಿ ಅದು ಕುಸಿದು ಬಿದ್ದಿದೆ.

1956ರಲ್ಲಿ ನಿರ್ಮಾಣವಾಗಿದ್ದ ಕೊಠಡಿ ಮಾತ್ರ ಈಗ ಉಳಿದಿದ್ದು, ಅದರ ಗೋಡೆಯೂ ಬಿರುಕು ಬಿಟ್ಟಿದೆ. ಈ ಕೊಠಡಿಯಲ್ಲಿ ಇದೀಗ ನಲಿಕಲಿ ಸೇರಿದಂತೆ 3 ತರಗತಿಗಳು ನಡೆಯುತ್ತಿದ್ದು, ಇಲ್ಲಿ ಮಕ್ಕಳನ್ನು ಕೂರಿಸುವುದಕ್ಕೆ ಭೀತಿ ಎದುರಾಗುತ್ತಿದೆ.

ವಿದ್ಯಾರ್ಥಿಗಳ ಸಂಖ್ಯೆ ಇಳಿಕೆ: ಹಿಂದೆ ಈ ಶಾಲೆಯಲ್ಲಿ 200 ವಿದ್ಯಾರ್ಥಿಗಳು ಇದ್ದರು. ಆದರೆ ಇಲ್ಲಿ ಮೂಲ ಸೌಕರ್ಯದ ಕೊರತೆ ಎದುರಾಗುತ್ತಿದ್ದಂತೆ ವರ್ಷದಿಂದ ವರ್ಷಕ್ಕೆ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಆಗತೊಡಗಿತು. ಇದೀಗ ವಿದ್ಯಾರ್ಥಿಗಳ ಸಂಖ್ಯೆ 67ಕ್ಕೆ ಇಳಿಕೆಯಾಗಿದೆ.

‘ಮಂಜೂರು ಆಗಿದ್ದ ಕೊಠಡಿಯೂ ಇಲ್ಲವಾಯಿತು’

‘ಬಹಳ ವರ್ಷಗಳಿಂದ ಕೊಠಡಿ ಮಂಜೂರು ಮಾಡಬೇಕು ಎಂದು ಜನಪ್ರತಿನಿಧಿಗಳಿಂದ ಹಿಡಿದು ಇಲಾಖಾ ಅಧಿಕಾರಿಗಳಿಗೆ ಮನವಿ ಮಾಡುತ್ತಲೇ ಬಂದಿದ್ದೇವೆ’ ಎಂದು ಎಸ್‌ಡಿಎಂಸಿ ಅಧ್ಯಕ್ಷ ಶ್ಯಾಮರಾಜ್ ‘ಪ್ರಜಾವಾಣಿಗೆ’ಗೆ ತಿಳಿಸಿದರು.

2017-18ನೇ ಸಾಲಿನಲ್ಲಿ 2 ಕೊಠಡಿ ನಿರ್ಮಾಣಕ್ಕಾಗಿ ₹ 17 ಲಕ್ಷ ಮಂಜೂರು ಆಗಿದೆ ಎಂದು ಇಲಾಖಾ ಅಧಿಕಾರಿಗಳು ತಿಳಿಸಿದ್ದರು. ಈ ಬಗ್ಗೆ ತಿಳಿಯುವ ಸಲುವಾಗಿ ಕಚೇರಿಗೆ ಹೋದಾಗ ಆ ಅನುದಾನವನ್ನು ಬೇರೆ ಶಾಲೆಗೆ ವರ್ಗಾವಣೆ ಮಾಡಲಾಗಿತ್ತು ಎಂದು ಅವರು ಹೇಳಿದರು.

* ಪಟ್ರಮೆ ಅನಾರು ಶಾಲೆಯನ್ನು ಪರಿಶೀಲಿಸಿದ್ದೇನೆ. ಈ ಶಾಲೆಗೂ ಕೊಠಡಿ ಮಂಜೂರು ಬಗ್ಗೆ ಆದ್ಯತಾ ಪಟ್ಟಿಯಲ್ಲಿ ಸೇರಿಸಲಾಗಿದೆ. ಈ ವರ್ಷವೇ ಮಂಜೂರಾಗಲಿದೆ

-ವೈ.ಶಿವರಾಮಯ್ಯ, ಡಿಡಿಪಿಐ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 1

  Sad
 • 1

  Frustrated
 • 0

  Angry

Comments:

0 comments

Write the first review for this !