ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಕ್ಷಿಣದಲ್ಲಿ ‘ನಿ’ ಬಿಟ್ಟ ಬಿಜೆಪಿ ವರಿಷ್ಠರು

ತೇಜಸ್ವಿನಿ ಬದಲು ತೇಜಸ್ವಿ ಸೂರ್ಯನಿಗೆ ಟಿಕೆಟ್: ಪಕ್ಷದೊಳಗೆ ಅಸಮಾಧಾನದ ಕುದಿ
Last Updated 26 ಮಾರ್ಚ್ 2019, 19:14 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ತೇಜಸ್ವಿನಿ ಅನಂತಕುಮಾರ್ ಅವರಿಗೆ ಟಿಕೆಟ್‌ ಕೈತಪ್ಪಿದ್ದು ಹೇಗೆ, ಏಕೆ ಎಂಬ ಚರ್ಚೆ ಪಕ್ಷದ ಆಂತರ್ಯದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.

ಕೇಂದ್ರ ಸಚಿವರಾಗಿದ್ದ ಎಚ್‌.ಎನ್‌. ಅನಂತಕುಮಾರ್ ಪ್ರಭಾವಿ ನಾಯಕರಾಗಿದ್ದರು. ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಹಾಗೂ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದರು.

ಅವರ ಪತ್ನಿಗೆ ಪಕ್ಷ ಟಿಕೆಟ್‌ ನೀಡಿಲ್ಲ. ನಿಧನರಾದ ನಾಲ್ಕೇ ತಿಂಗಳಲ್ಲಿ ಅನಂತಕುಮಾರ್ ಅವರನ್ನು ಪಕ್ಷ ಮರೆತಿದೆ ಎಂಬ ಅಸಹನೆಯ ಕುದಿ ಪಕ್ಷದೊಳಗೆ ವ್ಯಕ್ತವಾಗಿದೆ.

ಅನಂತಕುಮಾರ್ ಎಲ್ಲ ಪಕ್ಷದ ನಾಯಕರ ಜತೆಗೆ ಉತ್ತಮ ಬಾಂಧವ್ಯ ಹೊಂದಿದ್ದರು. ಯಾರ ವಿರೋಧವನ್ನೂ ಕಟ್ಟಿಕೊಂಡವರು ಅಲ್ಲ. ಅವರ ಪತ್ನಿಗೆ ಟಿಕೆಟ್‌ ಕೈ ತಪ್ಪಿರುವುದು ಬಿಜೆಪಿ ಮಾತ್ರವಲ್ಲ, ಜೆಡಿಎಸ್‌ ಹಾಗೂ ಕಾಂಗ್ರೆಸ್‌ ವಲಯದಲ್ಲಿ ಅಚ್ಚರಿಗೆ ಕಾರಣವಾಗಿದೆ.

ಟಿಕೆಟ್‌ ಸಿಗುವ ಅಮಿತ ವಿಶ್ವಾಸದಲ್ಲಿದ್ದ ತೇಜಸ್ವಿನಿ ಅವರು ಚುನಾವಣಾ ಕಚೇರಿಯನ್ನು ತೆರೆದಿದ್ದರು. ಪ್ರಚಾರಕ್ಕೆ ಚಾಲನೆ ನೀಡಿದ್ದರು. ಪ್ರಚಾರ ಆರಂಭಿಸುವಂತೆ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ 15 ದಿನಗಳ ಹಿಂದೆ ಸೂಚಿಸಿದ್ದರು ಎಂದು ಮೂಲಗಳು ತಿಳಿಸಿವೆ.

ಯತ್ನಾಳ ಕಿಡಿ: ‘ತೇಜಸ್ವಿನಿಗೆ ಟಿಕೆಟ್‌ ತಪ್ಪಿದೆ ಎಂದು ‘ಸಂತೋಷ’ಪಟ್ಟವರು ಶೀಘ್ರ ಅಸಂತೋಷ ಪಡುತ್ತಾರೆ’ ಎಂದು ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಕಿಡಿಕಾರಿದರು.

ಮಂಗಳವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕುತಂತ್ರದಿಂದ ಯಾರೂ ನಾಯಕರಾಗಲು ಸಾಧ್ಯವಿಲ್ಲ. ರಾಜ್ಯದಲ್ಲಿ ಎಂತೆಂತಹ ನಾಯಕರಿಗೆ ಅಪಮಾನವಾಗಿದೆ ಎಂಬುದನ್ನು ನೋಡಿಕೊಂಡು ಬಂದಿದ್ದೇವೆ. ಪ್ರಧಾನಿ ನರೇಂದ್ರ ಮೋದಿ ಅವರ ಮುಖ ನೋಡಿ ನಮಗೆ ಜನ ಮತ ಹಾಕುತ್ತಾರೆ. ನಮ್ಮಲ್ಲೂ ಅಯೋಗ್ಯರಿದ್ದಾರೆ. ಸತ್ಯ ಒಪ್ಪಿಕೊಳ್ಳಲು ಹಿಂಜರಿಕೆ ಇಲ್ಲ’ ಎಂದರು.

ತೇಜಸ್ವಿನಿ ಹೆಸರಷ್ಟೇ ಶಿಫಾರಸು– ಯಡಿಯೂರಪ್ಪ: ಬೆಂಗಳೂರು ದಕ್ಷಿಣ ಕ್ಷೇತ್ರಕ್ಕೆ ತೇಜಸ್ವಿನಿ ಅನಂತಕುಮಾರ ಹೆಸರನ್ನು ಮಾತ್ರ ರಾಜ್ಯ ಕೋರ್ ಕಮಿಟಿ ಶಿಫಾರಸು ಮಾಡಿತ್ತು ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ತಿಳಿಸಿದರು.

‘ತೇಜಸ್ವಿನಿ ಹೊರತು ಬೇರೆ ಯಾವ ಹೆಸರೂ ಸಮಿತಿ ಎದುರು ಇರಲಿಲ್ಲ. ತೇಜಸ್ವಿ ಸೂರ್ಯ ಹೆಸರನ್ನು ಶಿಫಾರಸು ಮಾಡಿದ್ದು ಯಾರು ಎಂಬುದು ಗೊತ್ತಿಲ್ಲ. ಅವರನ್ನು ಕಣಕ್ಕೆ ಇಳಿಸಿರುವುದು ಹೈಕಮಾಂಡ್‌’ ಎಂದರು.

ಹರಿಪ‍್ರಸಾದ್‌ಗೆ ಸೋನಿಯಾ ಗಾಂಧಿ ಕೃಪೆ

ಬೆಂಗಳೂರು ಕೇಂದ್ರ ಅಥವಾ ದಕ್ಷಿಣ ಕನ್ನಡದಿಂದ ಟಿಕೆಟ್ ಬಯಸಿದ್ದ ರಾಜ್ಯಸಭಾ ಸದಸ್ಯ ಬಿ.ಕೆ. ಹರಿಪ್ರಸಾದ್‌ ಅವರಿಗೆ ‘ದಕ್ಷಿಣ’ ಒಲಿಯಲು ಕಾಂಗ್ರೆಸ್‌ ನಾಯಕಿ ಸೋನಿಯಾಗಾಂಧಿ ಕಾರಣ ಎಂದು ಆ ಪಕ್ಷದ ಮೂಲಗಳು ಹೇಳಿವೆ.

‘ಕೇಂದ್ರ’ದಲ್ಲಿ ಟಿಕೆಟ್‌ ಕೈತಪ್ಪುತ್ತಿದ್ದಂತೆ ಬೇಸರಗೊಂಡ ಹರಿಪ್ರಸಾದ್‌, ಹೈದರಾಬಾದ್‌ನತ್ತ ಹೊರಟಿದ್ದರು. ಆ ಹಂತದಲ್ಲಿ ಅವರಿಗೆ ಕರೆ ಮಾಡಿದ ಸೋನಿಯಾಗಾಂಧಿ ಅವರು, ‘ನೀವು ದಕ್ಷಿಣದಲ್ಲಿ ಸ್ಪರ್ಧಿಸಿ. ಮೈತ್ರಿ ಸರ್ಕಾರ ಅಸ್ತಿತ್ವದಲ್ಲಿದ್ದು ಸರ್ಕಾರದ ಸಾಧನೆ, ಸಿದ್ದರಾಮಯ್ಯನವರ ನೆರವು ಕೈ ಹಿಡಿಯಲಿದೆ. ದೇವೇಗೌಡರು ನಿಮ್ಮ ಬೆಂಬಲಕ್ಕೆ ನಿಲ್ಲಲಿದ್ದಾರೆ. ನಮ್ಮ ಪಕ್ಷದ ಶಾಸಕರು ನಿಮ್ಮ ಗೆಲುವಿಗೆ ಶ್ರಮಿಸಲಿದ್ದಾರೆ. ನಾವು ನಿಮ್ಮ ಜತೆಗಿದ್ದೇವೆ’ ಎಂದು ಧೈರ್ಯ ತುಂಬಿದರು ಎಂದು ಮೂಲಗಳು ವಿವರಿಸಿವೆ.

* ನರೇಂದ್ರ ಮೋದಿ ಅವರನ್ನು ಮತ್ತೆ ಪ್ರಧಾನಿಯನ್ನಾಗಿ ಮಾಡಬೇಕಿದೆ. ಹಾಗಾಗಿ, ಪ್ರಚಾರಕ್ಕೆ ಹೋಗುವೆ. ಟಿಕೆಟ್‌ ಕೈತಪ್ಪಿದ್ದು ಏಕೆ ಎಂಬುದು ಗೊತ್ತಿಲ್ಲ. ಈ ಬಗ್ಗೆ ರಾಜ್ಯ ಅಥವಾ ಕೇಂದ್ರ ನಾಯಕರನ್ನು ಕೇಳಿ

- ತೇಜಸ್ವಿನಿ ಅನಂತಕುಮಾರ್‌

*ತೇಜಸ್ವಿನಿ ಅವರನ್ನು ಕಣಕ್ಕೆ ಇಳಿಸುವಂತೆ ನಾವೆಲ್ಲ ವರಿಷ್ಠರಿಗೆ ಶಿಫಾರಸು ಮಾಡಿದ್ದೇವೆ. ಈಗ ಟಿಕೆಟ್ ಸಿಗದೇ ಇರುವುದಕ್ಕೆ ನಮಗೆಲ್ಲ ನೋವಾಗಿದೆ

- ಆರ್. ಅಶೋಕ್, ದಕ್ಷಿಣ ಕ್ಷೇತ್ರದ ಬಿಜೆಪಿ ಉಸ್ತುವಾರಿ, ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT