ಪ್ರಯಾಸದ ಹಾಗೂ ಸಂತೋಷದ ಕಾರ್ಯಸೃಷ್ಟಿ ರಚನೆ

7

ಪ್ರಯಾಸದ ಹಾಗೂ ಸಂತೋಷದ ಕಾರ್ಯಸೃಷ್ಟಿ ರಚನೆ

ಗುರುರಾಜ ಕರಜಗಿ
Published:
Updated:

ಬರೆವ ಹಲಗೆಯನೊಡೆದು ಬಾಲಕನು ತಾನದನು |
ಮರಳಿ ಜೋಡಿಪೆನೆನ್ನುತಾಯಾಸಗೊಳುತ ||
ಸರಿಚೌಕಗೈವಾಟದಲಿ ಜಗವ ಮರೆವಂತೆ |
ಪರಬೊಮ್ಮ ಸೃಷ್ಟಿಯಲಿ - ಮಂಕುತಿಮ್ಮ || 79 ||

ಪದ-ಅರ್ಥ: ಹಲಗೆಯನೊಡೆದು=ಹಲಗೆಯನು+ಒಡೆದು, ಜೋಡಿಪೆನೆನ್ನುತಾಯಾಸಗೊಳುತ=ಜೋಡಿಪೆನು+ಎನ್ನುತ+ಆಯಾಸಗೊಳುತ, ಸರಿಚೌಕ=ಹೊತ್ತುಹೋಗಲು ಮಕ್ಕಳು ಆಡುವ ಆಟ.

ವಾಚ್ಯಾರ್ಥ: ಬಾಲಕ ಬರೆಯುವ ಹಲಗೆಯನ್ನು ಒಡೆದು ತಾನೇ ಅದನ್ನು ಮತ್ತೆ ಜೋಡಿಸುವೆನು ಎನ್ನುತ ಆಯಾಸಗೊಳುವಂತೆ ಮತ್ತು ಸಂಭ್ರಮದಲ್ಲಿ ಸರಿಚೌಕದ ಆಟದಲ್ಲಿ ಜಗತ್ತನ್ನೇ ಮರೆತಂತೆ ಪರಬ್ರಹ್ಮ ಸೃಷ್ಟಿಯಲ್ಲಿ ಮೈಮರೆತಿದ್ದಾನೆ.

ವಿವರಣೆ: ಸೃಷ್ಟಿಕರ್ತನ ಅವಸ್ಥೆಯನ್ನು ಕಣ್ಣಿಗೆ ಕಟ್ಟುವಂತೆ ಈ ಕಗ್ಗದಲ್ಲಿ ಸುಂದರವಾದ ಉಪಮೆಗಳೊಂದಿಗೆ ವಿವರಿಸಲಾಗಿದೆ.

ಮೊದಲನೆಯ ಉದಾಹರಣೆ ಬರೆಯುವ ಹಲಗೆಯನ್ನು ಒಡೆದು ಅದನ್ನು ಜೋಡಿಸಲು ಹೆಣಗುವ ಬಾಲಕನ ಚಿತ್ರ. ಈಗ ಟ್ಯಾಬ್ ಹಾಗೂ ಕಂಪ್ಯೂಟರ್‍ಗಳನ್ನು ಬಳಸುವ ಮಕ್ಕಳಿಗೆ ಹಲಗೆಯ ಸೌಕರ್ಯ ಹಾಗೂ ಸಮಸ್ಯೆಗಳ ಅರಿವು ಇರಲಾರದು. ಹಲಗೆ, ಬಳಪಗಳನ್ನು ಬಳಸುವ ಸುಖವೇ ಬೇರೆ. ಹಲಗೆ ಮೂಲತ: ಆದದ್ದು ಮೃದುವಾದ ಕಲ್ಲುಗಳ ಪದರಗಳಿಂದ. ಅದನ್ನು ಎಷ್ಟು ಬಾರಿಯಾದರೂ ಬಳಸಬಹುದು, ಅದನ್ನು ಒರೆಸಬಹುದು, ತೊಳೆಯಬಹುದು. ಆದರೆ ಹಲಗೆ ನಾಜೂಕಾದದ್ದೂ ಉಂಟು. ಕೆಳಗೆ ಬಿದ್ದರೆ ಒಡೆದುಹೋಗುತ್ತದೆ. ಒಡೆದ ಹಲಗೆಯನ್ನು ಮತ್ತೆ ಜೋಡಿಸಲು ಸಾಧ್ಯವಿಲ್ಲ. ಆದರೆ ನಾವು ಹುಡುಗರಾಗಿದ್ದಾಗ ಹಲಗೆ ಒಡೆದರೆ ಮನೆಯಲ್ಲಿ ಎಲ್ಲಿ ಶಿಕ್ಷೆ ಕೊಡುತ್ತಾರೋ ಎಂದು ಭಯದಿಂದ ಆ ತುಂಡುಗಳನ್ನು ಜೋಡಿಸಲು ಹೆಣಗುತ್ತಿದ್ದೆವು. ಹಾಗೆ ಜೋಡಿಸಲು ಯತ್ನಿಸುವಾಗ ಅದು ಮತ್ತಷ್ಟು ಒಡೆದುಹೋಗುತ್ತಿತ್ತು. ಅದನ್ನು ಜೋಡಿಸಲು ಪ್ರಯತ್ನಿಸಿದ್ದು ಕೇವಲ ಆಯಾಸವನ್ನು ಮಾತ್ರ ನೀಡುತ್ತಿತ್ತು. ಅದು ಪರಿಶ್ರಮದ ಕೆಲಸ.

ಹಿಂದಿನ ಕಾಲದ ಮಕ್ಕಳಿಗೆ ಇನ್ನೊಂದು ಅತ್ಯಂತ ಸಂತೋಷದ ಕೆಲಸವೆಂದರೆ ಸರಿಚೌಕದ ಆಟವಾಡುವುದು. ಉಳಿದೆಲ್ಲ ಆಟಗಳಿಗಿಂತ ಭಿನ್ನವಾಗಿ, ಬುದ್ಧಿಯನ್ನು ಅಪೇಕ್ಷಿಸುವ ದೈವದಾಟ ಅದು. ಅದರ ಸೆಳೆತ ಎಂತಹುದೆಂದರೆ ಮಕ್ಕಳ ಮೈಮರೆಸಿಬಿಡುತ್ತದೆ.

ಈಗ ಎರಡೂ ಉಪಮೆಗಳನ್ನು ಬಳಸಿ ಪರಬ್ರಹ್ಮ ಆ ಬಾಲಕನ ಹಾಗಿದ್ದಾನೆ ಎನ್ನುತ್ತದೆ ಕಗ್ಗ. ಅಂದರೆ ಭಗವಂತನಿಗೆ ಈ ಸೃಷ್ಟಿಯನ್ನು ನಿರ್ಮಿಸಿ ಸಲಹುವುದು ಆಯಾಸದ ಕೆಲಸವೂ ಹೌದು, ಮೈಮರೆಯುವಷ್ಟು ಸಂತೋಷದ ಕೆಲಸವೂ ಹೌದು. ಎಷ್ಟು ಪ್ರಯತ್ನಿಸಿದರೂ ಜೋಡಿಸಲಾಗದ ವಸ್ತು ಹಲಗೆ. ಅಂತೆಯೇ ಎಷ್ಟು ವ್ಯವಸ್ಥೆ ಮಾಡಿದರೂ ಅವ್ಯವಸ್ಥೆಯಾಗಿಯೇ ಉಳಿಯುವ ಪ್ರಪಂಚ. ಅದನ್ನು ಸರಿಮಾಡುವುದು ಅಪಾರ ಆಯಾಸವೇ ಸರಿ. ಹಾಗೆಯೆ ಕ್ಷಣಕ್ಷಣಕ್ಕೂ ಬದಲಾಗುವ, ಹೊಸದಾಗುವ ವಿಶ್ವ. ಸೃಷ್ಟಿಸಿದ ಪ್ರಪಂಚವನ್ನು ಸರಿಮಾಡುವ ಆಯಾಸ ಹಾಗೂ ಅದನ್ನು ಸೃಷ್ಟಿಸುವಾಗ ಇರುವ ಸಂತೋಷ ಪರಬ್ರಹ್ಮನಿಗೆ ಆಗಿರಬಹುದು ಎನ್ನುವುದು ಸುಂದರ ಕಲ್ಪನೆ.

ಬರಹ ಇಷ್ಟವಾಯಿತೆ?

 • 7

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !