ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತ್ರಿಕಾಲಗಳು

Last Updated 18 ನವೆಂಬರ್ 2018, 19:20 IST
ಅಕ್ಷರ ಗಾತ್ರ

ಮೇಲಿಂದ ನಕ್ಷತ್ರ ಜಯಘೋಷ ಸುತ್ತಣಿಂ |
ಭೂಲೋಕದರಚು ಕೆಳಗಿಂ ಮೂಳೆಯಳುವು ||
ಕೇಳಿಬರುತೀ ಮೂರು ಕೂಗೆನ್ನ ಹೃದಯದಲಿ |
ಮೇಳಯಿಸುತಿದೆ ಸಂತೆ – ಮಂಕುತಿಮ್ಮ || 56 ||

ಪದ-ಆರ್ಥ: ಭೂಲೋಕದರಚು=ಭೂಲೋಕದ+ಅರಚು(ಕೂಗಾಟ), ಮೂಳೆಯಳುವು=ಮೂಳೆಯ+ಅಳುವು, ಮೇಳಯಿಸುತಿದೆ=ನೆರೆದಿದೆ.

ವಾಚ್ಯಾರ್ಥ: ಮೇಲಿನ ನಕ್ಷತ್ರಗಳಿಂದ ಜಯಘೋಷ, ಸುತ್ತಲಿನ ಭೂಲೋಕದ ಕೂಗಾಟ, ಕೆಳಗಿನಿಂದ ಮೂಳೆಗಳ ಅಳುಧ್ವನಿ ಕೇಳಿ ಬರುತ್ತಿದೆ. ಈ ಮೂರೂ ಕೂಗುಗಳು ನನ್ನ ಹೃದಯದಲ್ಲಿ ಸಂತೆಯನ್ನು ನೆರೆಯಿಸಿಬಿಟ್ಟಿವೆ.

ವಿವರಣೆ: ಇದು ಅತ್ಯಂತ ಆಳದ ಚಿಂತನೆಯನ್ನು ಪ್ರಚೋದಿಸುವ ಕಗ್ಗ. ಇಲ್ಲಿ ಮೂರು ಲೋಕಗಳ ಪ್ರಸ್ತಾಪವಿದೆ. ಮೇಲಿನದು ನಕ್ಷತ್ರಗಳ ಲೋಕ, ಅದನ್ನು ಸ್ವರ್ಗ ಎಂದಿಟ್ಟುಕೊಳ್ಳಬಹುದು. ಸುತ್ತಲಿನದು, ನಾವಿರುವ ಲೋಕ, ಭೂಲೋಕ. ಕೆಳಗಿನದು ಪಾತಳಲೋಕ. ನಕ್ಷತ್ರದ ಲೋಕದಿಂದ ಜಯಘೋಷ ಕೇಳಿಬರುತ್ತಿದೆ. ಇದು ಸಂಭ್ರಮದ, ಸಂತೋಷದ ಮತ್ತು ಆಶಾದಾಯಕವಾದ ಧ್ವನಿ. ಭೂಲೋಕದಿಂದ ಕೂಗಾಟ ಕೇಳಿಸುತ್ತಿದೆ. ಅದು ನನ್ನ ಸುತ್ತಮುತ್ತಲಿನ ಲೋಕದಲ್ಲಿ ನಡೆಯುವ ಚಟುವಟಿಕೆಗಳ ಸದ್ದು. ಅದು ಅರಚಾಟ. ಮನಸ್ಸಿಗೆ ಕಿರಿಕಿರಿ ಮಾಡುವಂಥದ್ದು, ಸಂತೋಷವನ್ನುಂಟು ಮಾಡುವುದಿಲ್ಲ. ಕೆಳಗಿನಿಂದ ಅಂದರೆ ಪಾತಾಳದಿಂದ ಮೂಳೆಗಳು ಅಳುವ ಶಬ್ದ ಕೇಳುತ್ತಿದೆ. ಇದರ ಒಳಾರ್ಥವನ್ನು ಹೀಗೆ ಗಮನಿಸಬಹುದು. ಈ ಕಗ್ಗ ಕಾಲಗಳ ಬಗ್ಗೆ ಹೇಳುತ್ತಿದೆ. ನಕ್ಷತ್ರಗಳ ಲೋಕ ಭವಿಷ್ಯವನ್ನು ಕುರಿತು ಹೇಳುತ್ತದೆ. ಭವಿಷ್ಯದ ಬಗ್ಗೆ ಎಂದಿಗೂ, ಯಾವತ್ತಿಗೂ ಭರವಸೆ, ಆಶಾವಾದ ಇರಬೇಕು. ಅಲ್ಲಿಂದ ಜಯಘೋಷವನ್ನೇ ನಿರೀಕ್ಷಿಸಬೇಕು. ಒಳ್ಳೆಯದೇ ಆಗುತ್ತದೆ ಎಂಬ ಸಂಭ್ರಮದಿಂದ ಮುಂದುವರೆದಾಗ ಜೀವನ ಸಮೃದ್ಧಿ. ಭೂಲೋಕದ ಅರಚು ನಮ್ಮ ಇಂದಿನ ಬದುಕು-ವರ್ತಮಾನ.

ವರ್ತಮಾನವನ್ನು ಬಿಟ್ಟೋಡಲು ಸಾಧ್ಯವಿಲ್ಲ. ಅದು ಸಾಧುವೂ ಅಲ್ಲ. ಈ ಪ್ರಪಂಚದ ಭರಾಟೆ, ಹಾಹಾಕಾರ, ಸಂತೋಷ, ಸಾಧನೆಗಳ ಅಬ್ಬರ ಕಿವಿ ತುಂಬುತ್ತದೆ. ಸುಖದುಃಖಗಳ, ಗೆಲುವು-ಸೋಲುಗಳ, ಮನುಷ್ಯನ ಪ್ರಯತ್ನ ಸಾಹಸಗಳ ಒಟ್ಟು ಮೊತ್ತ ಈ ಕಿರಿಚಾಟ. ಅದಕ್ಕೆ ನಾವು ಸಾಕ್ಷಿಗಳು ಮಾತ್ರವಲ್ಲ ಪಾತ್ರಧಾರಿಗಳು ಕೂಡ. ಕೆಳಗಿನಿಂದ ಕೇಳಿ ಬರುವ ಮೂಳೆಯ ಅಳು-ಭೂತಕಾಲವನ್ನು ಪ್ರತಿನಿಧಿಸುತ್ತದೆ. ಮೂಳೆ ಒಬ್ಬ ವ್ಯಕ್ತಿ ಜೀವಂತವಾಗಿದ್ದವನ ಅವಶೇಷ. ಭೂತಕಾಲವನ್ನು, ಆಗ ಆದಂಥ ಘಟನೆಗಳನ್ನು ಬದಲಾಯಿಸಲು ಸಾಧ್ಯವಿಲ್ಲ. ನಾವು ವ್ಯಕ್ತಿಯಾಗಿ ಸಮಾಜವಾಗಿ ಮಾಡಿದ ಕರ್ಮಗಳು ಇಂದು ಮೂಳೆಗಳಾಗಿವೆ. ಅವು ನಮ್ಮ ಕಣ್ಣಿಗೆ ಕಾಣಲಿಕ್ಕಿಲ್ಲ. ಆದರೆ ಅವುಗಳ ಪರಿಣಾಮಗಳು ನಮ್ಮನ್ನು ಇಂದಿಗೂ ಕುಕ್ಕಿ, ಕುಕ್ಕಿ ಕಾಡಿಸುತ್ತವೆ.

ರಾಜ ಡಂಕನ್‌ನನ್ನು ತನ್ನ ಗಂಡ ಮ್ಯಾಕಬೆಥ್‌ನಿಂದ ಕೊಲ್ಲಲು ಪ್ರೆÃರೇಪಿಸಿದ ಲೇಡಿ ಮ್ಯಾಕ್‌ಬೆಥ್, ತನ್ನ ಕೈಗಳನ್ನು ನೋಡಿಕೊಂಡು ಹೇಳುತ್ತಾಳೆ, “ಅರೇಬಿಯಾದ ಎಲ್ಲ ಸುಗಂಧ ದ್ರವ್ಯಗಳೂ ನನ್ನ ಪುಟ್ಟ ಕೈಗಳ ರಕ್ತವನ್ನು ಒರೆಸಿ ಸ್ವಚ್ಛಮಾಡಲಾರವು”. ಆಕೆ ಕೈಗಳು ನಿಜವಾಗಿಯೂ ಸ್ವಚ್ಛವಾಗಿವೆ. ಆದರೆ ತಾನು ಮಾಡಿದ ಕೆಲಸದÀ ಪಾಪ ಪ್ರಜ್ಞೆ ಆಕೆಗೆ ಭ್ರಮೆ ಹುಟ್ಟಿಸಿ ಕೈಗಳು ರಕ್ತಮಯವಾಗಿದ್ದಂತೆಯೇ ಭಾಸವಾಗುತ್ತದೆ. ಇದು ನಮ್ಮ ಕರ್ಮಫಲ, ನಮ್ಮ ಮೂಳೆಗಳು ಅಳುವ ಧ್ವನಿ.

ನಮ್ಮ ಬದುಕಿನಲ್ಲಿ, ಭೂತಕಾಲದಲ್ಲಿ ನಾವು ಸಂಪಾದಿಸಿಕೊಂಡ ಪ್ರಾರಬ್ಧದ ಫಲ, ಇಂದಿನ ವರ್ತಮಾನದಲ್ಲಿ ನಾವು ಮಾಡುವ ಪಾಪ-ಪುಣ್ಯಗಳ ಕರ್ತವ್ಯದ ಫಲ, ಹಾಗೂ ಭವಿಷ್ಯತ್ತಿನ ಬಗ್ಗೆ ಇರುವ ಆಶಾವಾದದ, ಸಂಭ್ರಮದ ಅಪೇಕ್ಷೆಗಳು ನಮ್ಮ ಬದುಕಿನಲ್ಲಿ ಒಂದು ಮಿಶ್ರವಾದ ಸಂತೆಯನ್ನು ನೆರೆಸಿವೆ. ನಾವು ಈ ಮೂರೂ ಕಾಲಗಳ ಮೂರ್ತರೂಪ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT