ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಸೂಯೆಯ ಅನಾಹುತ

Last Updated 17 ಡಿಸೆಂಬರ್ 2018, 20:15 IST
ಅಕ್ಷರ ಗಾತ್ರ

ಹಿಂದೆ ರಾಜಗೃಹದಲ್ಲಿ ಮಗಧ ನರೇಶ ರಾಜ್ಯಭಾರ ಮಾಡುವಾಗ ಬೋಧಿಸತ್ವ ಆನೆಯಾಗಿ ಜನಿಸಿದ. ಅದೆಂಥ ಅಪರೂಪದ ಆನೆ! ಅದರ ಇಡೀ ಶರೀರ ದಂತವರ್ಣದ್ದಾಗಿ ಥಳಥಳ ಹೊಳೆಯುತ್ತಿತ್ತು. ಅದರ ದೇಹದಲ್ಲಿ ಮೂವತ್ತೆರಡು ಮಹಾಪುರುಷ ಲಕ್ಷಣಗಳಿದ್ದವು. ಅದರ ದೇಹದಿಂದ ಶ್ರೀಮಂತವಾದ ಬುದ್ಧಕಿರಣಗಳು ಚಿಮ್ಮುತ್ತಿದ್ದವು. ಇದರ ಶ್ರೇಷ್ಠ ಸಲ್ಲಕ್ಷಣಗಳಿಂದ ರಾಜ ಬೋಧಿಸತ್ವನನ್ನು ಮಾಂಗಲಿಕ ಆನೆಯನ್ನಾಗಿ ಮಾಡಿಕೊಂಡ.

ಒಂದು ದಿನ ನಗರದ ದೇವಿ ಉತ್ಸವದಲ್ಲಿ ಮಗಧ ನರೇಶ ಈ ಮಾಂಗಲಿಕ ಆನೆಯನ್ನು ಏರಿ ನಗರ ಪ್ರದಕ್ಷಿಣೆ ಮಾಡುತ್ತಿದ್ದ. ಅತ್ಯಂತ ಸುಂದರವಾಗಿ ಅಲಂಕರಿಸಿದ ನಗರದಲ್ಲಿ ಸಾವಿರಾರು ಜನ ಸಂಭ್ರಮದಿಂದ ರಾಜ ಮೆರವಣಿಗೆಯಲ್ಲಿ ಬರುವುದನ್ನು ನೋಡುತ್ತ ನಿಂತಿದ್ದರು. ಸರ್ವಾಲಂಕಾರದಿಂದ ಕಂಗೊಳಿಸುತ್ತಿದ್ದ ಮಾಂಗಲಿಕ ಆನೆಯ ಮೇಲೆ ಆತ ಬಂದಾಗ ಜನ ಬೆರಗಾಗಿ ‘ಆಹಾ ಎಂಥ ಆನೆ! ಏನು ಅದರ ಗಾಂಭೀರ್ಯ! ಏನು ಅದರ ಲಕ್ಷಣ! ಅದರ ಕಣ್ಣುಗಳು ಹೇಗೆ ಮಿನುಗುತ್ತಿವೆಯಲ್ಲ? ಇಂಥ ಸುಲಕ್ಷಣವಾದ ಮಾಂಗಲಿಕ ಆನೆ ನಮ್ಮ ರಾಜನಿಗೆ ದೊರೆತದ್ದು ಅವನ ಪುಣ್ಯ’ ಎಂದೆಲ್ಲ ಅದನ್ನು ಹೊಗಳತೊಡಗಿದರು.

ಎಲ್ಲರೂ ಬರೀ ಆನೆಯನ್ನೇ ಹೊಗಳುತ್ತ ತನ್ನನ್ನು ಗಮನಿಸದೇ ಇರುವುದು ರಾಜನಿಗೆ ಸಹನೆಯಾಗಲಿಲ್ಲ. ಆತ ಅಸೂಯೆಯಿಂದ, ಕೋಪದಿಂದ ಕುದಿದು ಹೋದ. ಆನೆಯನ್ನು ಕೊಂದೇ ಬಿಡಬೇಕು ಎನ್ನಿಸಿತು. ಆದರೆ ತಾನೇ ಮಾಂಗಲಿಕ ಆನೆಯನ್ನು ಕೊಂದರೆ ಅದು ಅಪಶಕುನ ಮಾತ್ರವಲ್ಲ, ಜನಕ್ಕೆ ತನ್ನ ಮೇಲೆ ಸಿಟ್ಟು ಬಂದೀತು ಎನ್ನಿಸಿತು. ಹೇಗಾದರೂ ಮಾಡಿ ಇದನ್ನು ಪರ್ವತದ ಮೇಲಿಂದ ತಳ್ಳಿಸಿ ಅದು ಆಕಸ್ಮಿಕ ಎನ್ನುವಂತೆ ಮಾಡಬೇಕು ಎಂದು ಹೊಂಚು ಹಾಕಿದ.

ಮರುದಿನ ಮಾವಟಿಗನನ್ನು ಕರೆದು, ‘ಈ ಸುಂದರವಾದ ಆನೆಗೆ ಏನೇನು ವಿದ್ಯೆ ಕಲಿಸಿದ್ದೀಯಾ?’ ಎಂದು ಕೇಳಿದ. ಮಾವಟಿಗ ಹೇಳಿದ, ‘ಸ್ವಾಮಿ, ಈ ಆನೆ ಭಗವಂತನ ಕೃಪೆ. ಅದಕ್ಕೆ ಒಂದು ಸ್ವಲ್ಪ ಹೇಳಿದರೂ ಪೂರ್ತಿ ಕಲಿತುಬಿಡುತ್ತದೆ. ಅದಕ್ಕೆ ಒಳ್ಳೆಯದಾದ ಎಲ್ಲ ಕಲೆಗಳೂ ಗೊತ್ತಿವೆ. ಅಂತೆಯೆ ಯಾವ ಕೇಡನ್ನೂ ಮಾಡುವುದಿಲ್ಲ’.

‘ಹಾಗಾದರೆ ಆನೆಯನ್ನು ಪರ್ವತದ ತುದಿಯವರೆಗೂ ಕರೆದುಕೊಂಡು ಹೋಗು. ನಾನೂ ಬರುತ್ತೇನೆ’ ಎಂದ ರಾಜ.

ಅಂತೆಯೇ ಮಾವಟಿಗ ಆನೆಯನ್ನು ಪರ್ವತದ ತುತ್ತತುದಿಗೆ ಕರೆದೊಯ್ದ. ರಾಜ ಹೇಳಿದ, ‘ಆನೆಯನ್ನು ಮೂರು ಕಾಲಿನ ಮೇಲೆ ನಿಲ್ಲಿಸು’. ಆನೆ ಹಾಗೆಯೇ ಮಾಡಿತು ಆದರೆ ಬೀಳಲಿಲ್ಲ. ‘ಈಗ ಅದನ್ನು ಎರಡೂ ಹಿಂಗಾಲಿನ ಮೇಲೆ ನಿಲ್ಲಿಸು’ ಕೂಗಿದ ರಾಜ. ಆನೆ ಹಾಗೆಯೇ ನಿಂತಿತೇ ವಿನ: ಬೀಳಲಿಲ್ಲ. ಮತ್ತೆ ಕೂಗಿದ ರಾಜ, ‘ಈಗ ಅದನ್ನು ಒಂದೇ ಕಾಲಮೇಲೆ ನಿಲ್ಲಿಸು’. ಮಾವಟಿಗನಿಗೆ ರಾಜ ಆನೆಯನ್ನು ಕೊಲ್ಲಬೇಕೆಂದಿದ್ದಾನೆಂಬುದು ಅರ್ಥವಾಯಿತು. ಆನೆಯ ಕಿವಿಯಲ್ಲಿ ಹೇಳಿದ, ‘ಹಸ್ತಿರಾಜ, ರಾಜ ನಿನ್ನನ್ನು ಕೊಲ್ಲಬಯಸಿದ್ದಾನೆ. ನೀನು ದೇವ ಹಸ್ತಿ. ನಿನ್ನ ಶಕ್ತಿಯಿಂದ ಹಾರಿ ಆಕಾಶಮಾರ್ಗವಾಗಿ ವಾರಾಣಸಿಗೆ ಹಾರಿಬಿಡು. ಅಲ್ಲಿ ನಿನಗೆ ಕ್ಷೇಮವಾಗುತ್ತದೆ’. ಕ್ಷಣಮಾತ್ರದಲ್ಲಿ ಬೋಧಿಸತ್ವ ಮಾಂಗಲಿಕ ಆನೆ ಆಕಾಶದಲ್ಲಿ ಹಾರಿ ಮರುಕ್ಷಣದಲ್ಲಿ ವಾರಾಣಸಿಯ ಚಕ್ರವರ್ತಿಯ ಅರಮನೆಯ ಮುಂದೆ ಬಂದು ನಿಂತಿತು.

ಈ ದೇವ ಆನೆಯನ್ನು ಸ್ವತ: ರಾಜನೇ ಬಂದು ಆದರದಿಂದ ಸ್ವಾಗತಿಸಿ ತನ್ನ ಮಾಂಗಲಿಕ ಆನೆಯನ್ನಾಗಿ ಮಾಡಿಕೊಂಡ. ಕೆಲವೇ ಕಾಲದಲ್ಲಿ ವಾರಾಣಸಿ ರಾಜನ ದೇಶ ಸಮೃದ್ಧಿಯಾಯಿತು. ಆದರೆ ಅದೇ ಸಮಯದಲ್ಲಿ ಮಗಧ ನರೇಶನ ದೇಶದಲ್ಲಿ ಅಶಾಂತಿ ತಾಂಡವವಾಗಿ ರಾಜ ದೇಶಭ್ರ‌ಷ್ಟನಾಗಿ ಹೋದ. ಮುಂದೆ ಕಾಡಿನಲ್ಲೇ ಸತ್ತುಹೋದ.

ಅಸೂಯೆ ಯಾರ ಬಾಳನ್ನಾದರೂ ಹಾಳುಮಾಡುತ್ತದೆ. ಆದರೆ ಅದಕ್ಕೂ ಮೊದಲು ಅಸೂಯಾಪರನ ಬದುಕನ್ನೇ ಆಹುತಿ ತೆಗೆದುಕೊಳ್ಳುತ್ತದೆ. ಅಸೂಯೆ, ಅಸಹನೆ ಬೆಂಕಿ ಇದ್ದಂತೆ. ಅದು ಮೊದಲು ಎಲ್ಲಿ ಹುಟ್ಟುತ್ತದೋ, ಅದನ್ನೇ ಸುಟ್ಟು ಭಸ್ಮ ಮಾಡುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT