ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮನ್ವಯತೆಯ ಸಿದ್ಧಿ

Last Updated 19 ಡಿಸೆಂಬರ್ 2018, 19:37 IST
ಅಕ್ಷರ ಗಾತ್ರ

ಹೆಸರನರಿಯದ ಸಸಿಯೊಳಿರವೆ ರಸಗಂಧಗಳು |
ಬಿಸಿಲದನು ಪಕ್ವಗೊಳಿಸುತೆ ಬಿಡಿಸದಿಹುದೆ? ||
ಪಸರಿಸದೆ ಗಾಳಿಯದನೊಯ್ದು ದಿಸೆದಿಸೆಗಳೊಳು ? |
ಉಸಿರುತಿಹೆವದ ನಾವು – ಮಂಕುತಿಮ್ಮ || 69 ||

ಪದ-ಅರ್ಥ: ಹೆಸರನರಿಯದ=ಹೆಸರನ್ನು+ಅರಿಯದ, ಸಸಿಯೊಳಿರವೆ=ಸಸಿಯೊಳು+ಇರವೇ, ಗಾಳಿಯದನೊಯ್ದು=ಗಾಳಿ+ಅದನ್ನು+ಒಯ್ದು, ಉಸಿರುತೆಹೆವದ=ಉಸಿರುತಿಹೆವು+ಅದನ್ನು.

ವಾಚ್ಯಾರ್ಥ: ನಮಗೆ ಹೆಸರು ಗೊತ್ತಿಲ್ಲದ ಸಸಿಯಲ್ಲಿ ರಸಗಂಧಗಳು ಇರಲಾರವೆ? ಬಿಸಿಲು ಅದನ್ನು ತನ್ನ ಕಾವಿನಿಂದ ಪಕ್ವಗೊಳಿಸದೆ ಇರಿಸುವುದೇ? ಗಾಳಿ ಅದರ ವಾಸನೆಯನ್ನು ದಿಸೆದಿಸೆಗಳಿಗೆ ಒಯ್ದು ಹರಡದಿಹುದೆ? ಅದನ್ನೇ ನಾವು ಉಸಿರಾಡುತ್ತಿದ್ದೇವೆ.

ವಿವರಣೆ: ಎಷ್ಟು ಸುಂದರ ಸಮನ್ವಯತೆಯನ್ನು ಸಾರುವ ಚೌಪದಿ ಇದು! ಈ ವಿಶ್ವ ಒಂದು ಮಹಾನ್ ಯಂತ್ರ. ಮಹಾನ್ ಯಂತ್ರದ ಎಲ್ಲ ಭಾಗಗಳೂ ದೊಡ್ಡದಾಗಿಯೇ ಇರಬೇಕೆಂದಿಲ್ಲ. ಎಲ್ಲೋ ಮೂಲೆಯಲ್ಲಿದ್ದ ವಾಶರ್ ಆಗಲಿ, ಒಂದು ಬುಶ್ ಆಗಲಿ ಕಣ್ಣಿಗೆ ಕಾಣಲಿಕ್ಕಿಲ್ಲ. ಆದರೆ ಅದೂ ಯಂತ್ರದ ಒಟ್ಟು ಕಾರ್ಯಕ್ಷಮತೆಗೆ ಕಾರಣವಾಗುತ್ತದೆ. ತಾವು ದೊಡ್ಡ ವಾದ್ಯವೃಂದವನ್ನು ಕಂಡಿರಬಹುದು. ನಾನೊಂದು ಅಂಥದ್ದನ್ನು ಕಂಡಿದ್ದೆ. ಅದರಲ್ಲಿ ವೇದಿಕೆಯ ಮೇಲೆ ನೂರಾರು ಜನ ವಾದಕರು! ಹತ್ತಾರು ಪಿಟೀಲು ನುಡಿಸುವವರು, ನಾಲ್ಕಾರು ಜನ ಸಿತಾರ್ ನುಡಿಸುವವರು, ನಾಲ್ಕು ತಬಲಾವಾದಕರು, ಕೀ ಬೋರ್ಡ್‌ ಕಲಾವಿದರು, ಎಲೆಕ್ಟ್ರಿಕ್ ಗಿಟಾರ್ ನುಡಿಸುವವರು, ಮತ್ತೆ ಹತ್ತಾರು ವಿಧವಿಧದ ವಾದ್ಯಗಳನ್ನು ಬಳಸುವ ಕಲಾವಿದರಿದ್ದರು. ಅಲ್ಲಿ ಮೂಲೆಯಲ್ಲಿ ಒಬ್ಬ ಕಲಾವಿದ ನೆಲದ ಮೇಲೆ ಕುಳಿತು ಒಂದು ಪುಟ್ಟ ತಾಳವನ್ನು ಸರಿಯಾದ ಸಮಯಕ್ಕೆ ಮೃದುವಾಗಿ ‘ಟಣ್’ ಎಂಬ ಶಬ್ದವನ್ನು ಉತ್ತತ್ತಿ ಮಾಡುತ್ತಿದ್ದ.

ಇಷ್ಟು ದೊಡ್ಡ ದೊಡ್ಡ ವಾದ್ಯಗಳ ಅಬ್ಬರದಲ್ಲಿ ಈ ವಾದ್ಯ ಯಾರಿಗೆ ಕೇಳಿಸೀತು ಎಂದುಕೊಂಡಿದ್ದೆ. ಆದರೆ ಕಣ್ಣು ಮುಚ್ಚಿ ಆ ಸಂಗೀತವನ್ನು ಆಸ್ಪಾದಿಸಿದಾಗ ಆ ಪುಟ್ಟ ಸದ್ದು ಒಟ್ಟು ಸಂಗೀತದಲ್ಲಿ ಬಹು ಪರಿಣಾಮಕಾರಿಯಾಗಿತ್ತು. ಇಡೀ ಸಂಗೀತದ ಅಸ್ತಿತ್ವದಲ್ಲಿ ಅದರ ಪಾತ್ರವೂ ಮುಖ್ಯವಾಗಿತ್ತು. ಇದೇ ಪ್ರಪಂಚದ ಸಮನ್ವಯತೆಯ ಶಕ್ತಿ.

ಕಾಡಿನಲ್ಲಿ ನಡೆಯುವಾಗ ಒಂದು ವಿಶಿಷ್ಠವಾದ ವಾಸನೆ ನುಗ್ಗಿ ಬರುತ್ತದೆ. ಅದು ಯಾವುದರದು? ನಮಗೆ ಗೊತ್ತಿರದ ದೊಡ್ಡ ಮರಗಳ, ಪುಟ್ಟ ಸಸ್ಯಗಳ ವಾಸನೆ. ನಮಗೆ ಆ ಸಸಿಗಳ ಹೆಸರು ಗೊತ್ತಿಲ್ಲದಿರಬಹುದು. ಆದರೆ ಬಿಸಿಲು ಅದರ ಎಲೆಗಳನ್ನು ಹೂಗಳನ್ನು, ಹಣ್ಣುಗಳನ್ನು ಮಾಗಿಸಿದಾಗ ಅದರ ಮೇಲೆ ಹಾಯ್ದುಬರುವ ಸುಳಿಗಾಳಿ ಅದನ್ನು ಎಲ್ಲೆಡೆಗೆ ಹರಡುತ್ತದೆ. ಆ ಒಟ್ಟು ದೊರೆತ ವಾಸನೆಯೇ ನಮ್ಮ ಉಸಿರಾಗುತ್ತದೆ. ಅಂದರೆ ನಮ್ಮ ಉಸಿರಿಗೆ ಆ ಹೆಸರು ಗೊತ್ತಿರದ ಸಸಿ ಕೊಡಮಾಡಿದ ವಾಸನೆಯೂ ಸೇರಿದೆ. ನನ್ನ ಬದುಕಿಗೆ ಅದರ ಕಾಣಿಕೆಯೂ ಸಂದಿದೆ. ಅದಕ್ಕಾಗಿ ನನ್ನ ಕೃತಜ್ಞತೆ ಇರಬೇಕು. ಇದೇ ಈ ಅಗಾಧವಾದ ವಿಶ್ವದ ಸಮನ್ವಯತೆಯ ಸಿದ್ಧಿ. ಯಾರೂ ಚಿಕ್ಕವರಲ್ಲ, ಯಾರೂ ದೊಡ್ಡವರಲ್ಲ. ಪ್ರತಿಯೊಬ್ಬರ ಬದುಕಿನಲ್ಲಿ ನಮಗರಿವಿಲ್ಲದಂತೆ, ಆಕಸ್ಮಿಕವಾಗಿಯೇ, ಅನಿವಾರ್ಯವಾಗಿಯೇ ಮತ್ತೊಬ್ಬರ ಬದುಕು ಹೊಸೆದುಕೊಂಡಿದೆ. ಅದನ್ನು ಅರಿಯಬೇಕು, ಮೆಚ್ಚಬೇಕು, ಕೃತಜ್ಞತೆ ತೋರಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT