ಬಹಿರಂಗದ ಅಲಂಕಾರ

7

ಬಹಿರಂಗದ ಅಲಂಕಾರ

ಗುರುರಾಜ ಕರಜಗಿ
Published:
Updated:

ಹಿಂದೆ ಬ್ರಹ್ಮದತ್ತ ರಾಜ್ಯಭಾರಮಾಡುವಾಗ ಬೋಧಿಸತ್ವ ಒಂದು ಉಡದ ಜನ್ಮದಲ್ಲಿ ಹುಟ್ಟಿದ್ದ. ಹಳ್ಳಿಗೆ ಸಮೀಪದ ಅರಣ್ಯದ ಒಂದು ಬಿಲದಲ್ಲಿ ನೆಲೆಸಿದ್ದ. ಅದರ ಹತ್ತಿರದಲ್ಲೇ ಒಬ್ಬ ಉಗ್ರ ತಪಸ್ವಿ ಪರ್ಣಕುಟಿಯನ್ನು ಕಟ್ಟಿಕೊಂಡು ವಾಸವಾಗಿದ್ದ. ಹಳ್ಳಿಯ ಜನರು ಅವನಿಗೆ ಸೇವೆ ಮಾಡುತ್ತಿದ್ದರು. ಉಡವಾಗಿದ್ದ ಬೋಧಿಸತ್ವ ದಿನಕ್ಕೆ ಎರಡು ಮೂರು ಬಾರಿ ಸನ್ಯಾಸಿಯ ಮುಂದೆ ಹೋಗಿ ಕುಳಿತುಕೊಳ್ಳುತ್ತಿದ್ದ. ಸನ್ಯಾಸಿಯಿಂದ ಧರ್ಮದ ಹಾಗೂ ಅರ್ಥಪೂರ್ಣವಾದ ಮಾತುಗಳನ್ನು ಕೇಳಿ ವಂದಿಸಿ ಮರಳಿ ಬಿಲಕ್ಕೆ ಹೋಗುತ್ತಿದ್ದ. ಕೆಲವು ದಿನಗಳ ನಂತರ ಆ ಸನ್ಯಾಸಿ ಬೇರೆ ಸ್ಥಳಕ್ಕೆ ಹೋಗಿಬಿಟ್ಟ. ಅದೇ ಸ್ಥಳಕ್ಕೆ ಮತ್ತೊಬ್ಬ ಸನ್ಯಾಸಿ ಬಂದು ವಾಸ ಮಾಡಿದ. ಅವನು ಕಪಟ ಸನ್ಯಾಸಿ. ಆದರೆ ಬೋಧಿಸತ್ವ ಅವನನ್ನು ಹಿಂದಿನ ಸನ್ಯಾಸಿಯಂತೆಯೇ ಸದ್ಧರ್ಮಿ, ಸದಾಚಾರಿ ಎಂದು ಭಾವಿಸಿ ಹೋಗಿ ಅವನ ಮುಂದೆ ಕುಳಿತುಕೊಳ್ಳುತ್ತಿದ್ದ. ಆದರೆ ಆತನಿಂದ ಯಾವ ಬೋಧೆಯೂ ದೊರೆಯಲಿಲ್ಲ.

ಗ್ರೀಷ್ಮ ಋತುವಿನಲ್ಲಿ ಅಕಾಲವಾದ ಮಳೆಯಾಯಿತು. ಆಗ ನೆಲದಲ್ಲಿ ಅಡಗಿದ್ದ ಗೊದ್ದಗಳೆಲ್ಲ ಹೊರಬಂದು ಹರಿದಾಡತೊಡಗಿದವು. ಅವುಗಳನ್ನು ಹಿಡಿದು ತಿನ್ನಲು ಉಡಗಳೆಲ್ಲ ಹೊರಬಂದವು. ಹಳ್ಳಿಯ ಜನ ಈ ಉಡಗಳನ್ನು ಹಿಡಿದು ಕೊಂದು ಅದರ ಮಾಂಸದಿಂದ ವಿವಿಧ ರೀತಿಯ ಆಹಾರವನ್ನು ಮಾಡಿಕೊಳ್ಳುತ್ತಿದ್ದರು. ಹಾಗೆಯೇ ಹೊಸತರದ ಅಡುಗೆಯನ್ನು ಮಾಡಿ ಈ ಕಪಟ ಸನ್ಯಾಸಿಗೂ ಕೊಟ್ಟರು. ಅವನಿಗೆ ಅದರ ರುಚಿ ಹತ್ತಿತು. ದಿನಾಲು ಹಳ್ಳಿಗರನ್ನು ಈ ಮಾಂಸಕ್ಕಾಗಿ ಕೇಳತೊಡಗಿದ. ತಾನೂ ಯೋಚನೆ ಮಾಡಿದ, ದಿನಾಲು ತನ್ನ ಮುಂದೆ ಒಂದು ದೊಡ್ಡ ಉಡ ಬಂದು ಕುಳಿತುಕೊಳ್ಳುತ್ತದೆ. ಅದನ್ನು ದೊಣ್ಣೆಯಿಂದ ಹೊಡೆದು ಕೊಂದು ಆಹಾರ ಮಾಡಿಕೊಳ್ಳುತ್ತೇನೆ. ಹೀಗೆಂದುಕೊಂಡು ತನ್ನ ಹಿಂದೆ ಒಂದು ಭಾರೀ ದೊಣ್ಣೆಯನ್ನು ಇಟ್ಟುಕೊಂಡು ಕುಳಿತ.

ದಿನದಂತೆಯೇ ಸಾಯಂಕಾಲ ಬೋಧಿಸತ್ವ ಸನ್ಯಾಸಿಯ ಬಳಿಗೆ ಹೊರಟ. ಸನ್ಯಾಸಿ ಇವನನ್ನೇ ನೋಡುತ್ತಿದ್ದ. ಅವನ ಕಣ್ಣುಗಳನ್ನು ನೋಡುತ್ತಲೇ ಬೋಧಿಸತ್ವನಿಗೆ ಅವನ ಮನಸ್ಸಿನಲ್ಲಿಯ ಕ್ರೂರತೆ ಕಂಡಿತು. ಈ ತಪಸ್ವಿ ದಿನದಂತೆ ಕುಳಿತಿಲ್ಲ, ಮನಸ್ಸಿನಲ್ಲಿ ಏನೋ ಕಲ್ಮಷ ತುಂಬಿದೆ ಎಂದು ದೂರ ನಿಂತು ಸೂಕ್ಷ್ಮವಾಗಿ ಗಮನಿಸಿದ. ಅವನು ಹಿಂದೆ ಇಟ್ಟುಕೊಂಡಿದ್ದ ದೊಣ್ಣೆ ಕಂಡಿತು. ಓಹೋ! ಈ ಕಪಟ ಸನ್ಯಾಸಿ ತನ್ನನ್ನು ಕೊಲ್ಲಬೇಕೆಂದಿದ್ದಾನೋ ಏನೋ ಪರೀಕ್ಷೆ ಮಾಡುತ್ತೇನೆ ಎಂದು ಸರಿದು ಸನ್ಯಾಸಿಯ ಮೈಮೇಲಿನ ಗಾಳಿ ತನ್ನಡೆಗೆ ಸಾಗಿ ಬರುವಂತೆ ಕುಳಿತ. ಸನ್ಯಾಸಿಯ ಮೈಯಿಂದ ಉಡದ ಮಾಂಸದ ಆಹಾರದ ವಾಸನೆ ಬರುತ್ತಿತ್ತು. ಆಹಾ! ಈ ಸನ್ಯಾಸಿಗೆ ಉಡದ ಮಾಂಸದ ರುಚಿ ಅಂಟಿದೆ. ಅದಕ್ಕೇ ತನ್ನನ್ನು ಕೊಲ್ಲಲು ಹೊಂಚು ಹಾಕಿದ್ದಾನೆ ಎಂದುಕೊಂಡು ಸರಸರನೆ ಸರಿದು ಬಿಲವನ್ನು ಸೇರಲು ಹೊರಟ. ಅರೆ, ಈ ಉಡ ತಪ್ಪಿಸಿಕೊಂಡು ಹೋಗುತ್ತಿದೆ, ಅದನ್ನು ಬಿಡಬಾರದು ಎಂದು ಸನ್ಯಾಸಿ ದೊಣ್ಣೆಯನ್ನು ಬೀಸಿ ಒಗೆದ. ಅದು ಬೋಧಿಸತ್ವನ ಬಾಲಕ್ಕೆ ಮಾತ್ರ ತಗುಲಿ ಹೋಯಿತು. ಬಿಲವನ್ನು ಸೇರಿ ಮತ್ತೊಂದು ತೂತಿನಿಂದ ತಲೆಯನ್ನು ಹೊರಗೆ ಚಾಚಿ ಬೋಧಿಸತ್ವ ಹೇಳಿದ, ‘ಏ ಕಪಟ ಸನ್ಯಾಸಿ, ನೀನೊಬ್ಬ ಸದಾಚಾರಿ, ತಪಸ್ವಿ ಎಂದು ನಿನ್ನೆಡೆಗೆ ಬಂದೆ. ನೀನೊಬ್ಬ ಕುಟಿಲ, ಕಪಟ ಸನ್ಯಾಸಿ ವೇಷಧಾರಿ. ನೀನು ಬದುಕಿರುವ ವರೆಗೆ ವೇಷಧಾರಿಯಾಗಿಯೇ ಉಳಿಯುತ್ತೀ. ಎಂದಿಗೂ ಅರ್ಹತನಾಗಲಾರೆ’ ಹೀಗೆ ಹೇಳಿ ಬಿಲವನ್ನು ಸೇರಿಬಿಟ್ಟಿತು.

ಜಟೆ, ಕಾವಿಬಟ್ಟೆ, ಕೃಷ್ಣಾಜಿನ ಇವುಗಳು ವೇಷಗಳನ್ನು ಕೊಡುತ್ತವೆ, ಭ್ರಮೆ ಹುಟ್ಟಿಸುತ್ತವೆ. ಅಂತರಂಗ ಶುದ್ಧಿಯಾಗದೇ, ಬಹಿರಂಗದ ಅಲಂಕಾರ ಕೇವಲ ವೇಷಧಾರಿಗಳನ್ನು ಸೃಷ್ಟಿಸುತ್ತದೆಯೇ ಹೊರತು, ತಪಸ್ವಿಗಳನ್ನಲ್ಲ, ಜ್ಞಾನಿಗಳನ್ನಲ್ಲ.

ಬರಹ ಇಷ್ಟವಾಯಿತೆ?

 • 11

  Happy
 • 2

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !