ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನಂತವಾದ ದೀಪದ ಕಿಡಿಗಳು

Last Updated 11 ಮಾರ್ಚ್ 2019, 19:34 IST
ಅಕ್ಷರ ಗಾತ್ರ

ಕಾಲವಕ್ಷಯದೀಪವದರ ಪಾತ್ರೆಯಪಾರ |
ಬಾಳ್ ಅದರಿನಾದೊಂದು ಕಿರುಹಣತೆ ಮಿಣುಕು ||
ಗಾಳಿಯಾರಿಪುದೊಂದನಿನ್ನೊಂದ ಹೊತ್ತಿಪುದು |
ತೈಲಧಾರೆಯಖಂಡ – ಮಂಕುತಿಮ್ಮ || 104 ||

ಪದ-ಅರ್ಥ: ಕಾಲವಕ್ಷಯದೀಪವದರ=ಕಾಲ+ಅಕ್ಷಯ+ದೀಪ+ಅದರ, ಪಾತ್ರೆಯಪಾರ=ಪಾತ್ರೆ+ಅಪಾರ, ಅದರಿನಾದೊಂದು=ಅದರಿಂ+ಆದ+ಒಂದು, ಗಾಳಿಯಾರಿಪುದೊಂದನಿನ್ನೊಂದ=ಗಾಳಿ+ಆರಿಪುದು(ಆರಿಸುವುದು)+ಒಂದನು+ಇನ್ನೊಂದ, ತೈಲಧಾರೆಯಖಂಡ=ತೈಲಧಾರೆ(ಎಣ್ಣೆಯ ಸುರಿತ)+ಅಖಂಡ.

ವಾಚ್ಯಾರ್ಥ: ಕಾಲವೆಂಬುದು ಎಂದಿಗೂ ಮುಗಿಯದ ಒಂದು ದೀಪ, ಅದರ ಪಾತ್ರೆಯೂ ಅಪಾರವಾದದ್ದು. ಮನುಷ್ಯನ ಬಾಳು ಆ ದೀಪದಿಂದ ಆದ ಒಂದು ಪುಟ್ಟ ಹಣತೆಯ ಮಿಣುಕು ಇದ್ದ ಹಾಗೆ. ಗಾಳಿ ಇಂಥ ಒಂದು ಪುಟ್ಟ ದೀಪವನ್ನು ಆರಿಸುತ್ತ ಮತ್ತೊಂದನ್ನು ಹೊತ್ತಿಸುವುದು. ಆದರೆ ಈ ತೈಲಧಾರೆ ನಿರಂತರವಾದದ್ದು.

ವಿವರಣೆ: ಸ್ವಾಮಿ ವಿವೇಕಾನಂದರು ಬೆಳಗಾವಿಯಲ್ಲಿ ಅರಣ್ಯಾಧಿಕಾರಿಯಾಗಿದ್ದ ಹರಿಪದ ಮಿತ್ರಾರವರೊಡನೆ ಮಾತನಾಡುತ್ತ ಹೇಳುತ್ತಾರೆ. “ಕಾಲ ಎಂದರೆ ಏನು? ಅದು ಎಷ್ಟು ಎಂದು ಕೇಳಿದರೆ ಗಡಿಯಾರ ನೋಡುತ್ತೇವೆ. ಈ ಗಡಿಯಾರ ನಿರ್ಮಾಣವಾಗಿರುವುದೇ ಭೂಮಿ ಸೂರ್ಯನ ಸುತ್ತ ಸುತ್ತುವ ವೇಗದ ಆಧಾರದ ಮೇಲೆ. ಭೂಮಿ ಒಂದು ಸುತ್ತು ಹಾಕಲು ಬೇಕಾದ ಸಮಯ ಇಪ್ಪತ್ನಾಲ್ಕು ಗಂಟೆಗಳನ್ನು ವಿಭಜಿಸಿ ತಾಸು, ನಿಮಿಷ, ಸೆಕೆಂಡುಗಳನ್ನಾಗಿ ಮಾಡಿಕೊಂಡಿದ್ದೇವೆ. ಆದರೆ ಹಿಂದೆ ಒಂದು ಸಮಯದಲ್ಲಿ ಈ ಸೂರ್ಯಮಂಡಲವೇ ಇರಲಿಲ್ಲವಲ್ಲ! ಆಗ ಸಮಯ ಇರಲಿಲ್ಲವೇ? ಆದರೆ ಸಮಯ ಎಂದೆಂದಿಗೂ ಇರುವಂಥದ್ದು, ಅನಂತವಾದದ್ದು, ಅನಾದಿಯಾದದ್ದು”. ಈ ಮಾತನ್ನೇ ಕಗ್ಗ ಕಾವ್ಯಮಯವಾಗಿ ಹೇಳುತ್ತದೆ. ಕಾಲ ಎನ್ನುವುದು ಒಂದು ಅಕ್ಷಯವಾದ, ಎಂದಿಗೂ ಇಲ್ಲದಾಗದಿರುವ ದೀಪವಿದ್ದಂತೆ. ಅಂಥ ದೀಪಕ್ಕೆ ಪಾತ್ರೆ ಎಂಥದ್ದಿರಬೇಕು? ಅದೂ ಅಪಾರವಾದ ಪಾತ್ರೆ. ಹೀಗೆ ದೀಪ, ಬಹುದೊಡ್ಡ ಪಾತ್ರೆಯಲ್ಲಿ ಅನಂತವಾಗಿ ಉರಿಯಬೇಕಾಗಿದ್ದರೆ, ಎಣ್ಣೆ ಎಷ್ಟು ಬೇಕಾಗಬಹುದು? ಅದೂ ಅಖಂಡವಾದದ್ದು. ಅಂದರೆ ಈ ಅನಂತವಾದ ದೀಪ ಸರ್ವಕಾಲಕ್ಕೂ ಉರಿಯುತ್ತಲೇ ಇರುವಂಥದ್ದು. ಆದರೆ ಈ ಕಾಲಗರ್ಭದಲ್ಲಿ ಕೋಟ್ಯಾಂತರ ಜೀವಿಗಳು ಬಂದು ಹೋಗುತ್ತವಲ್ಲವೇ? ಅವೆಲ್ಲ ಈ ಅನಂತವಾದ ದೀಪದ ಒಂದು ಕಿಡಿಯಿಂದ ಹೊತ್ತಿಕೊಂಡ ಕಿರುಹಣತೆಗಳು. ಕಾಲ ತಿರುಗಿದಂತೆ ಈ ಪುಟ್ಟ ಹಣತೆಗಳು ಒಂದೊಂದಾಗಿ ನಂದಿಹೋಗುತ್ತವೆ, ಮತ್ತೆ ಕೆಲ ಹೊಸ ಹಣತೆಗಳು ಹೊತ್ತಿಕೊಳ್ಳುತ್ತವೆ. ಈ ಪುಟ್ಟ ಹಣತೆಗಳ ಕ್ಷಣಕಾಲದ ಬದುಕಿನ ಬಗ್ಗೆ ನಿರಾಸೆ ಬೇಡ. ಅವು ಸಣ್ಣವೇ ಆಗಿರಬಹುದು, ಆದರೆ ಅವು ಅನಂತವಾದ, ಮಹಾ ದೀಪದ ಒಂದಂಶಗಳೇ ಎನ್ನುವುದು ಮುಖ್ಯ. ಒಂದು ಹಣತೆ ಆರಬಹುದು ಆದರೆ ಮತ್ತೊಂದು ಹುಟ್ಟಿಕೊಳ್ಳುತ್ತದೆ. ಅಂದರೆ ಈ ಮಿಣುಕುದೀಪಗಳ ಪರಂಪರೆಯೂ ಅನಂತವಾಗಿ ಮುಂದುವರೆಯುತ್ತದೆ. ಉಪನಿಷತ್ತುಗಳು ಹೇಳುವುದು ಇದನ್ನೇ. ಇಡೀ ಪ್ರಪಂಚವನ್ನೇ ಸೃಷ್ಟಿಸಿ, ರಕ್ಷಿಸಿ, ಸಮಯ ಬಂದಾಗ ಅದನ್ನು ಲಯಗೊಳಿಸುವ ಶಕ್ತಿ ಅನಂತ, ಅನಾದಿಯಾದದ್ದು. ಅದೇ ಪ್ರದೀಪ. ಪ್ರತಿಯೊಂದು ಜೀವವೂ ಆ ಪ್ರದೀಪದ ಒಂದಂಶದ ಕಿಡಿ. ಜೀವಿಯ ಬದುಕು ಕ್ಷಣಕಾಲವಾದರೂ ಜೀವಿಗಳ ಪರಂಪರೆ ದೀರ್ಘಕಾಲದ್ದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT