ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಗನ ಈಜುಪ್ರೀತಿಗೆ ಅಪ್ಪನ ಪೋಷಣೆ

Last Updated 1 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಮೂರು ವರ್ಷದವನಿದ್ದಾಗ ಆಕಸ್ಮಿಕವಾಗಿ ಈಜುಕೊಳಕ್ಕೆ ಬಿದ್ದಿದ್ದ. ಮುಂದೆ ಅದೇ ಆತನ ಹವ್ಯಾಸವಾಯಿತು ಎಂದು ಮಗನ ಈಜು ಪಯಣವನ್ನು ಬಿಚ್ಚಿಟ್ಟರು ಚಂದ್ರಕಾಂತ್‌. ಅವರ ಪುತ್ರ ರೇಣುಕಾಚಾರ್ಯ ಸಿ.ಹೊಡಮನಿ ಚಿಕ್ಕ ವಯಸ್ಸಿನಲ್ಲಿಯೇ ಈಜುಕೊಳದಲ್ಲಿ ಮೀನಿನಂತೆ ಈಜುತ್ತ ಪದಕ ಗೆಲ್ಲುತ್ತಿದ್ದಾನೆ. ಈ ಸಾಧನೆಯ ಹಿಂದೆ ಚಂದ್ರಕಾಂತ್ ಅವರ ಶ್ರಮ ದೊಡ್ಡದು.

ಕ್ರೀಡಾ ಸೌಲಭ್ಯಗಳ ಕೊರತೆ ಇರುವ ಹೈದರಾಬಾದ್ ಕರ್ನಾಟಕದಲ್ಲಿ ಮಗನನ್ನು ಈಜುಪಟುವನ್ನಾಗಿ ಬೆಳೆಸುವ ಛಲ ಅವರದ್ದು. ಅದಕ್ಕಾಗಿಯೇ ವಾಸ್ತವ್ಯವನ್ನು ಹುಮನಾಬಾದ್‌ನ ಹಳ್ಳಿಖೇಡ(ಬಿ)ದಿಂದ ಕಲಬುರ್ಗಿಗೆ ಬದಲಿಸಿದರು. ಅಷ್ಟೇ ಏಕೆ? ವಾರಕ್ಕೊಮ್ಮೆ ಅಥವಾ ಹದಿನೈದು ದಿನಗಳಿಗೊಮ್ಮೆ ಮಗನನ್ನು ಬೆಂಗಳೂರಿಗೆ ಕರೆದುಕೊಂಡು ಬಂದು ತರಬೇತಿ ಕೊಡಿಸುತ್ತಾರೆ. ಅದಕ್ಕೆ ತಕ್ಕಂತೆ ರೇಣುಕಾಚಾರ್ಯ ಕೂಡ  ಈಜುಕೊಳದಲ್ಲಿ ಸಾಧನೆಯ ಅಲೆಗಳನ್ನು ಎಬ್ಬಿಸುತ್ತಿದ್ದಾನೆ.

‘ನಾನು ಮುಗನೂರು ಶಾಲೆಯಲ್ಲಿ ಶಿಕ್ಷಕನಾಗಿದ್ದೇನೆ. ಅಲ್ಲಿಯೇ ಇದ್ದರೆ ಮಕ್ಕಳ ಕ್ರೀಡಾಭ್ಯಾಸಕ್ಕೆ ಅವಕಾಶಗಳು ಕಮ್ಮಿ. ನನ್ನ ಹಿರಿಯ ಮಗಳು ವಿಜಯಲಕ್ಷ್ಮಿಯನ್ನು ಅಥ್ಲೆಟಿಕ್ಸ್‌ ಅಭ್ಯಾಸಕ್ಕಾಗಿ ಚಂದ್ರಶೇಖರ ಪಾಟೀಲ ಕ್ರೀಡಾಂಗಣಕ್ಕೆ ಕರೆದುಕೊಂಡು ಹೋಗುತ್ತಿದ್ದೆ. ಆಗ ಮಗನೂ ಜತೆಗೆ ಬರುತ್ತಿದ್ದ. ಅಲ್ಲಿನ ಈಜುಕೊಳದಲ್ಲಿ ಮಕ್ಕಳು ಆಟವಾಡುವುದನ್ನು ನೋಡುತ್ತಿದ್ದ ಆತ ತಾನೂ ಈಜಬೇಕು ಎಂದು ಹಟ ಹಿಡಿಯುತ್ತಿದ್ದ. ಹೀಗಾಗಿ ಈಜು ತರಬೇತಿಗೆ ಸೇರಿಸಿದೆ’ ಎನ್ನುತ್ತಾರೆ ಚಂದ್ರಕಾಂತ್.

ಕೋಚ್ ಭರತ್ ಭೂಷಣ್ ಅವರು ಅವನಲ್ಲಿರುವ ಪ್ರತಿಭೆ ಗುರುತಿಸಿ ಸೂಕ್ತ ಮಾರ್ಗದರ್ಶನ ನೀಡಿದರು. ಸ್ಪರ್ಧೆಯೊಂದರಲ್ಲಿ ಈತನ ಪ್ರತಿಭೆಯನ್ನು ನೋಡಿದ್ದ ಮೈಸೂರಿನ ಈಜು ಕೋಚ್ ಶಿವು ಅವರು ಬೆಂಗಳೂರಿನ ಡಾಲ್ಫಿನ್ ಅಕಾಡೆಮಿಗೆ ಸೇರಿಸಿದರು. ದ್ರೋಣಾಚಾರ್ಯ ಪ್ರಶಸ್ತಿ ಪುರಸ್ಕೃತ ಈಜು ಕೋಚ್ ನಿಹಾರ್ ಅಮೀನ್ ಮತ್ತು ಮಧುಕುಮಾರ್ ಅವರ ಬಳಿ ತರಬೇತಿ ಪಡೆಯುತ್ತಿದ್ದಾನೆ. ಈಚೆಗೆ ಆರಂಭವಾಗಿರುವ ಪ್ರಕಾಶ್ ಪಡುಕೋಣೆ ಮತ್ತು ರಾಹುಲ್ ದ್ರಾವಿಡ್  ಕ್ರೀಡಾ ಕೇಂದ್ರದಲ್ಲಿ ತರಬೇತಿಗೆ ಸೇರಿದ್ದಾನೆ.

‘ವಾರಕ್ಕೆ ಒಮ್ಮೆ ಆಥವಾ ಹದಿನೈದು ದಿನಕ್ಕೆ ಒಮ್ಮೆ ಆತನನ್ನು ಬೆಂಗಳೂರಿಗೆ ಕರೆದುಕೊಂಡು ಹೋಗುತ್ತೇನೆ. ತರಬೇತಿ ಮುಗಿದ ಬಳಿಕ ಮತ್ತೆ ಕರೆದುಕೊಂಡು ಬರುತ್ತೇನೆ. ಇಲ್ಲಿಗೆ ಬಂದಾಗ ಅವನಿಗೆ ಹೋಂವರ್ಕ್ ಮಾಡಿಸುವುದು, ಈಜು ಅಭ್ಯಾಸದ ನಿಗಾ ನಾನೇ ವಹಿಸುತ್ತೇನೆ. ಓದಿನಲ್ಲಿಯೂ ಅವನು ಹಿಂದೆ ಬಿದ್ದಿಲ್ಲ. ಅದಕ್ಕೆ ಶಾಲೆಯವರೂ ಪ್ರೋತ್ಸಾಹ ನೀಡುತ್ತಿದ್ದಾರೆ. ನನ್ನ ಕೆಲಸದ ನಡುವೆ ಅವನನ್ನು ಬೆಂಗಳೂರಿಗೆ ಕರೆದುಕೊಂಡು ಹೋಗಿ ಬರಲು ಕಷ್ಟವಾಗುತ್ತದೆ. ಇಲ್ಲಿಯವರೆಗೆ ಅವನು ಸಾಧಿಸಿರುವುದು ಏನೂ ಅಲ್ಲ. ಇನ್ನೂ ಹೆಚ್ಚಿನ ಸಾಧನೆ ಮಾಡಬೇಕು ಎಂಬುವುದು ನನ್ನ ಆಸೆ’ ಎನ್ನುತ್ತಾರೆ.

ಸ್ಟೇಡಿಯಂಗೆ ತನ್ನ ತಂದೆ ಜತೆ ಬರುತ್ತಿದ್ದ ರೇಣುಕಾಚಾರ್ಯನಿಗೆ ಈಜು ಕಲಿಸಿದೆವು. ಕೇವಲ ಮೂರೇ ದಿನಗಳಲ್ಲಿ ಈಜು ಕಲಿತ. ಅದು ಅವನಲ್ಲಿರುವ ಆಸಕ್ತಿಗೆ ಸಾಕ್ಷಿ ಎನ್ನುತ್ತಾರೆ ಗುಲಬರ್ಗಾ ಅಕ್ವಾ ಅಸೋಸಿಯೇಷನ್ ಕಾರ್ಯದರ್ಶಿ ಭರತ್ ಭೂಷಣ್.

‘50 ಮೀಟರ್ ಸ್ವಿಮ್ಮಿಂಗ್ ಮಾಡಿಸಿ ಅವನ ಎದೆಬಡಿತ ಪರೀಕ್ಷಿಸಲಾಯಿತು. ಅವನ ವಯಸ್ಸಿನ ಎಲ್ಲರೂ ಏದುಸಿರು ಬಿಡುತ್ತಿದ್ದರೆ ಅವನ ಎದೆಬಡಿತ ಸಾಮಾನ್ಯವಾಗಿತ್ತು. ಅದು ಈಜಲು ಬಹಳ ಸಹಕಾರಿ. ಅವನಲ್ಲಿ ಆಸಕ್ತಿಯ ಜತೆಗೆ ಪ್ರತಿಭೆಯೂ ಇದೆ. ಹೈದರಾಬಾದ್ ಕರ್ನಾಟಕದ ಪ್ರತಿಭೆ ಈಜು ಸ್ಪರ್ಧೆಯಲ್ಲಿ ಭರವಸೆ ಮೂಡಿಸಿರುವುದು ವಿಶೇಷ‘ ಎನ್ನುತ್ತಾರೆ ಅವರು.

**

ರೇಣುಕಾಚಾರ್ಯನ ಸಾಧನೆಯ ಹಾದಿ...

* 2018ರ ಜನವರಿಯಲ್ಲಿ ಚೆನ್ನೈನಲ್ಲಿ ನಡೆದ 30ನೇ ದಕ್ಷಿಣ ವಲಯ ಈಜು ಚಾಂಪಿಯನ್‌ಷಿಪ್‌ನ 4X50 ಮೀಟರ್ಸ್ ಫ್ರೀಸ್ಟೈಲ್ ರಿಲೇಯಲ್ಲಿ ಚಿನ್ನದ ಪದಕ.

* 2017ರಲ್ಲಿ ಪುಣೆಯಲ್ಲಿ ನಡೆದ 34ನೇ ಸಬ್ ಜ್ಯೂನಿಯರ್ ರಾಷ್ಟ್ರೀಯ ಈಜು ಚಾಂಪಿಯನ್‌ಷಿಪ್‌ನಲ್ಲಿ (50 ಮೀ ಬಟರ್‌ಫ್ಲೈ) ಕಂಚಿನ ಪದಕ.

* 2017ರಲ್ಲಿ ನಡೆದ ರಾಜ್ಯ ಸಬ್ ಜ್ಯೂನಿಯರ್ ಮತ್ತು ಜ್ಯೂನಿಯರ್‌ ಈಜು ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕ.

* ಅದೇ ವರ್ಷ ಮೈಸೂರಿನಲ್ಲಿ 2ನೇ ಎಸ್‌ಎಫ್‌ಐ ಆಲ್ ಇಂಡಿಯಾ ಇಂಟರ್‌ ಕ್ಲಬ್ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿ ಪದಕ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT