ಭಾನುವಾರ, ಡಿಸೆಂಬರ್ 8, 2019
21 °C
ಕಾಗವಾಡ ಅಥವಾ ಅಥಣಿಯಿಂದ ‘ಕೈ’ ಅಭ್ಯರ್ಥಿಯಾಗುವ ಸಾಧ್ಯತೆ

ಬಿಜೆಪಿಗೆ ತಲೆನೋವಾದ ‘ಕಾಗೆ’

ಎಂ. ಮಹೇಶ Updated:

ಅಕ್ಷರ ಗಾತ್ರ : | |

ಭರಮಗೌಡ ಕಾಗೆ

ಬೆಳಗಾವಿ: ಕಾಗವಾಡ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ತಮಗೆ ಬಿಜೆಪಿ ಟಿಕೆಟ್‌ ದೊರೆಯುವುದಿಲ್ಲ ಎನ್ನುವುದು ಖಾತ್ರಿಯಾಗುತ್ತಿದ್ದಂತೆಯೇ ಭರಮಗೌಡ (ರಾಜು) ಕಾಗೆ ರಾಜಕೀಯವಾಗಿ ಹೂಡುತ್ತಿರುವ ‘ದಾಳ’ಗಳು ಪಕ್ಷದ ವರಿಷ್ಠರಿಗೆ ತಲೆನೋವಾಗಿ ಪರಿಣಮಿಸಿದೆ.

2018ರ ಚುನಾವಣೆಯಲ್ಲಿ ಸೋಲು ಅನುಭವಿಸಿದ್ದ ಅವರು, ಉಪ ಚುನಾವಣೆ ನಿಗದಿಯಾಗುತ್ತಿದ್ದಂತೆಯೇ ಟಿಕೆಟ್‌ಗೆ ಪ್ರಬಲ ಆಕಾಂಕ್ಷಿಯಾಗಿದ್ದರು. ಆದರೆ, ‘ಬಿಜೆಪಿ ಸರ್ಕಾರ ರಚನೆಗೆ ಕಾರಣವಾದವರಲ್ಲೊಬ್ಬರು’ ಎನ್ನಲಾದ ಅನರ್ಹ ಶಾಸಕ ಶ್ರೀಮಂತ ಪಾಟೀಲರ ‘ಋಣ ಸಂದಾಯ’ ಮಾಡಬೇಕಿರುವುದರಿಂದಾಗಿ ನಿಮಗೆ ಟಿಕೆಟ್‌ ಕೊಡಲು ಸಾಧ್ಯವಾಗುವುದಿಲ್ಲ’ ಎನ್ನುವ ಮಾತುಗಳನ್ನು ವರಿಷ್ಠರು ಸ್ಪಷ್ಟವಾಗಿ ತಿಳಿಸಿರುವುದರಿಂದ ಕಾಗೆ ತೀವ್ರ ಅಸಮಾಧಾನಗೊಂಡಿದ್ದಾರೆ. ಸರ್ಕಾರ ನೀಡಿದ ‘ಕಾಡಾ’ ಅಧ್ಯಕ್ಷ ಸ್ಥಾನ ತಿರಸ್ಕರಿಸಿ ಬಂಡಾಯವೆದ್ದಿದ್ದಾರೆ.

ಒಂದೇ ಕಲ್ಲಿನಲ್ಲಿ 2 ಹಕ್ಕಿಗಳು:

ತಮ್ಮ ಬೇಡಿಕೆ ಈಡೇರದೇ ಇರುವುದರಿಂದಾಗಿ, ಬಿಜೆಪಿ ವಿರುದ್ಧವೇ ತೊಡೆ ತಟ್ಟಲು ನಿರ್ಧರಿಸಿ ಕಾಂಗ್ರೆಸ್‌ ಟಿಕೆಟ್‌ಗಾಗಿ ಆ ಪಕ್ಷದ ವರಿಷ್ಠರನ್ನು ಭೇಟಿಯಾಗಿದ್ದಾರೆ. ಒಂದೇ ಕಲ್ಲಿನಲ್ಲಿ 2 ಹಕ್ಕಿಗಳನ್ನು ಬೀಳಿಸಲು (ಬಿಜೆಪಿ ಸೋಲಿಸುವುದು ಹಾಗೂ ಅನರ್ಹ ಶಾಸಕಗೆ ತಕ್ಕಪಾಠ ಕಲಿಸುವುದು) ‘ಅವಕಾಶ’ ಕೊಡುವಂತೆ ಮನವರಿಕೆ ಮಾಡಿಕೊಟ್ಟಿದ್ದಾರೆ ಎನ್ನಲಾಗುತ್ತಿದೆ.

ಕಾಗವಾಡ ಅಥವಾ ಅಥಣಿ ಎರಡರಲ್ಲೊಂದು ಕ್ಷೇತ್ರದಿಂದ ಟಿಕೆಟ್‌ ಕೊಟ್ಟರೂ ಸ್ಪರ್ಧಿಸಲು ಸಿದ್ಧವಿದ್ದೇನೆ ಎನ್ನುವ ಭರವಸೆಯನ್ನು ಕಾಂಗ್ರೆಸ್‌ ಮುಖಂಡರಾದ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್‌ ಮೊದಲಾದವರಿಗೆ ನೀಡಿದ್ದಾರೆ. ಕ್ಷೇತ್ರ ಪುನರ್‌ವಿಂಗಡೆಣೆ ನಂತರ, ಕಾಗವಾಡ ಕ್ಷೇತ್ರದಲ್ಲಿದ್ದ ದರೂರ ಹಾಗೂ ಸತ್ತಿ ಜಿಲ್ಲಾ ಪಂಚಾಯ್ತಿ ಕ್ಷೇತ್ರಗಳು ಅಥಣಿ ವಿಧಾನಸಭಾ ಕ್ಷೇತ್ರಕ್ಕೆ ಸೇರಿವೆ. ಹೀಗಾಗಿ, ಅಲ್ಲಿಯೂ ನನ್ನ ಪ್ರಾಬಲ್ಯವಿದೆ ಎನ್ನುವುದನ್ನು ತಿಳಿಸಿದ್ದಾರೆ ಎಂದು ಗೊತ್ತಾಗಿದೆ.

ಪ್ರಾಬಲ್ಯ ಹೊಂದಿದ್ದಾರೆ: ಒಮ್ಮೆ ಸಂಯುಕ್ತ ಜನತಾದಳ (ಜೆಡಿಯು) ಹಾಗೂ ಸತತ 3 ಬಾರಿ ಬಿಜೆಪಿಯಿಂದ ಶಾಸಕರಾಗಿ ಆಯ್ಕೆಯಾಗಿದ್ದ, ಕಾಗೆ ಕಾಗವಾಡವನ್ನು ಬಿಜೆಪಿಯ ಭದ್ರಕೋಟೆಯನ್ನಾಗಿ ಮಾಡಿದ್ದರು. ತಮ್ಮದೇ ಆದ ವೋಟ್‌ಬ್ಯಾಂಕ್‌ ಹೊಂದಿರುವ ವಿಶ್ವಾಸ ಅವರದು. 2018ರ ಚುನಾವಣೆಯಲ್ಲಿ ಕಾಂಗ್ರೆಸ್‌ ಮುಖಂಡರ ‘ಸಂಘಟಿತ’ ಯತ್ನದಿಂದಾಗಿ ಶ್ರೀಮಂತ ಪಾಟೀಲ ವಿರುದ್ಧ ಸೋಲು ಅನುಭವಿಸಿದ್ದರು. ಶ್ರೀಮಂತ ಪಾಟೀಲ ಅವರನ್ನು ಸ್ಪೀಕರ್‌ ಅನರ್ಹಗೊಳಿಸಿರುವುದರಿಂದ ಉಪಚುನಾವಣೆ ನಡೆಯುತ್ತಿದೆ. ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಕಾಗೆ ಕಾಂಗ್ರೆಸ್‌ ಮನೆಯ ಹೊಸ್ತಿಲಲ್ಲಿ ನಿಂತಿದ್ದಾರೆ. ಇಷ್ಟೆಲ್ಲಾ ನಡೆದರೂ ಬಿಜೆಪಿಯವರು ಅವರ ಮನವೊಲಿಕೆಗೆ ಮುಂದಾಗಿಲ್ಲದಿರುವುದು ಅಚ್ಚರಿ ಮೂಡಿಸಿದೆ.

ಶ್ರೀಮಂತ ಪಾಟೀಲರ ರಾಜಕೀಯ ಭವಿಷ್ಯ ಇದೇ 13ರಂದು ಸುಪ್ರೀಂ ಕೋರ್ಟ್ ಪ್ರಕಟಿಸಲಿರುವ ತೀರ್ಪನ್ನು ಆಧರಿಸಿದೆ. ಹೀಗಾಗಿ, ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಯಾರಾಗುತ್ತಾರೆ ಎನ್ನುವುದು ಕೂಡ ಕುತೂಹಲಕ್ಕೆ ಕಾರಣವಾಗಿದೆ. ಅಲ್ಲದೇ, ಪಕ್ಷದ ಕಾರ್ಯಕರ್ತರ ಗೊಂದಲಕ್ಕೂ ಎಡೆ ಮಾಡಿಕೊಟ್ಟಿದೆ.

ವ್ಯತಿರಿಕ್ತವಾದರೆ: ಸುಪ್ರೀಂ ಕೋರ್ಟ್‌ನಲ್ಲಿ ತಮಗೆ ವ್ಯತಿರಿಕ್ತವಾಗಿ ತೀರ್ಪು ಬಂದಲ್ಲಿ, ಪುತ್ರ ಹಾಗೂ ಕೆಂಪವಾಡದ ಅಥಣಿ ಫಾರ್ಮರ್ಸ್‌ ಸಕ್ಕರೆ ಕಾರ್ಖಾನೆ ವ್ಯವಸ್ಥಾಪಕ ನಿರ್ದೇಶಕ ಶ್ರೀನಿವಾಸ ಪಾಟೀಲಗೆ ಬಿಜೆಪಿ ಟಿಕೆಟ್‌ ಕೊಡಿಸುವುದು ಶ್ರೀಮಂತ ಪಾಟೀಲ ಯೋಜನೆಯಾಗಿದೆ.

ಕಾಂಗ್ರೆಸ್‌ನಿಂದ, ಚಿಕ್ಕೋಡಿ ಕ್ಷೇತ್ರದ ಮಾಜಿ ಸಂಸದ ಪ್ರಕಾಶ ಹುಕ್ಕೇರಿ, ದಿಗ್ವಿಜಯ ಪವಾರ್‌ ಮೊದಲಾದವರು ಆಕಾಂಕ್ಷಿಗಳಾಗಿದ್ದಾರೆ. ಹೀಗಾಗಿ, ಪ್ರಮುಖ ಪಕ್ಷಗಳಿಂದ ಅಭ್ಯರ್ಥಿಗಳಾಗುವವರು ಯಾರು ಎನ್ನುವ ಕುತೂಹಲ ಕ್ಷೇತ್ರದ ಜನರಲ್ಲೂ ಇದೆ.

ಸುಪ್ರೀಂ ಕೋರ್ಟ್‌ ತೀರ್ಪಿನ ನಂತರ ‘ಚಿತ್ರಣ’ ಬದಲಾಗುವ ಸಾಧ್ಯತೆ ಇದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು