ಕಲಬುರ್ಗಿ: ಬಂದ್‌ಗೆ ವ್ಯಾಪಕ ಬೆಂಬಲ 

7

ಕಲಬುರ್ಗಿ: ಬಂದ್‌ಗೆ ವ್ಯಾಪಕ ಬೆಂಬಲ 

Published:
Updated:

ಕಲಬುರ್ಗಿ: ತೈಲ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಹಾಗೂ ಎಡಪಕ್ಷಗಳು ಕರೆ ನೀಡಿರುವ ಭಾರತ ಬಂದ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಎನ್ಇಕೆಆರ್‌ಟಿಸಿ ಬಸ್ ಸಂಚಾರ ಸ್ಥಗಿತಗೊಳಿಸಿದೆ. ಖಾಸಗಿ ವಾಹನಗಳ ಸಂಚಾರವೂ ವಿರಳವಾಗಿದೆ. ಆದರೆ, ಆಟೊಗಳು ಎಂದಿನಂತೆ ಸಂಚರಿಸುತ್ತಿವೆ.

ಕೇಂದ್ರ ಬಸ್ ನಿಲ್ದಾಣ, ಸೇಡಂ ರಸ್ತೆ ಹಾಗೂ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತ ಸೇರಿದಂತೆ ಹಲವೆಡೆ ಪ್ರತಿಭಟನಾಕಾರರು ಬಲವಂತದಿಂದ ಅಂಗಡಿ- ಮುಂಗಟ್ಟುಗಳನ್ನು ಮುಚ್ಚಿಸಿದರು. ಜತೆಗೆ, ಹಲವೆಡೆ ಟೈರ್‌ಗಳನ್ನು ಸುಟ್ಟು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಸಂಸದ ಮಲ್ಲಿಕಾರ್ಜುನ ಖರ್ಗೆ ಅವರು ಪ್ರತಿಭಟನೆಯಲ್ಲಿ ಪಾಲ್ಗೊಂಡು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಕಾಂಗ್ರೆಸ್, ಜೆಡಿಎಸ್, ಸಿಪಿಐ(ಎಂ), ಎಸ್ಯುಸಿಐ, ಕಾರ್ಮಿಕ, ದಲಿತಪರ ಸಂಘಟನೆಗಳ ಮುಖಂಡರು ನಗರದ ಪ್ರಮುಖ ರಸ್ತೆಗಳಲ್ಲಿ ಬೈಕ್ ರ‍್ಯಾಲಿ ನಡೆಸಿದರು.

ಹೋರಾಟಗಾರ್ತಿ ನೀಲಾ ಕೆ. ಹಾಗೂ ಅವರ ಸಂಗಡಿಗರು ಸೇಡಂ ರಸ್ತೆಯ ಚಂದ್ರಶೇಖರ ಬಿಲಗುಂದಿ ವೃತ್ತದಲ್ಲಿ ಅಡುಗೆ ಮಾಡಿ ಅಡುಗೆ ಅನಿಲ ಏರಿಕೆಯನ್ನು ಖಂಡಿಸಿದರು.

ಹಲವಡೆ ‘ಮೋದಿ ಹಟಾವೋ, ದೇಶ ಬಚಾವೋ’ ಘೋಷಣೆಗಳು ಮಾರ್ದನಿಸಿದವು.

ಮುಂಜಾಗ್ರತಾ ಕ್ರಮವಾಗಿ ಹಾಗೂ ಶಾಂತಿ- ಸುವ್ಯವಸ್ಥೆ ಕಾಪಾಡಲು ಜಿಲ್ಲಾಡಳಿತ ಜಿಲ್ಲೆಯ ಎಲ್ಲಾ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿದೆ. ಖಾಸಗಿ ಶಾಲೆಗಳು ಕೂಡ ರಜೆ ಘೋಷಿಸಿವೆ.

ಪರಿಸ್ಥಿತಿ ನಿಯಂತ್ರಣದಲ್ಲಿದ್ದು, ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಶಶಿಕುಮಾರ್ ತಿಳಿಸಿದರು. ನಗರದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.
 

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !