ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತಗಟ್ಟೆ ಅಧಿಕಾರಿಗಳಿಗೆ ಮಾರ್ಗದರ್ಶಿ ಸೂತ್ರ

ಇಂದು ಆಯಾ ವಿಧಾನಸಭಾ ಕ್ಷೇತ್ರಗಳಲ್ಲಿ ಮಸ್ಟರಿಂಗ್‌ ಕಾರ್ಯ
Last Updated 11 ಮೇ 2018, 6:00 IST
ಅಕ್ಷರ ಗಾತ್ರ

ದಾವಣಗೆರೆ: ರಾಜ್ಯ ವಿಧಾನಸಭಾ ಚುನಾವಣೆಗೆ ಇದೇ 12ರಂದು (ಶನಿವಾರ) ಬೆಳಿಗ್ಗೆ 7ರಿಂದ ಸಂಜೆ 6ರವರೆಗೆ ಮತದಾನ ನಡೆಯಲಿದ್ದು, ಅಂದು ಮತಗಟ್ಟೆಗಳಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಗಳು ಯಾವ ರೀತಿಯ ಸಿದ್ಧತೆ ಮಾಡಿಕೊಳ್ಳಬೇಕು ಎಂಬ ಬಗ್ಗೆ ಚುನಾವಣಾ ಆಯೋಗ ಕೆಲವು ಮಾರ್ಗದರ್ಶಿ ಸೂತ್ರಗಳನ್ನು ನೀಡಿದೆ.

ಮತಗಟ್ಟೆ ಅಧಿಕಾರಿಗಳು ವಹಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳು, ಅನುಸರಿಸಬೇಕಾದ ನಿಯಮಗಳು ಇಲ್ಲಿವೆ.

ಅಣಕು ಮತದಾನ ಹೇಗೆ?

ಅಣಕು ಮತದಾನ ಮುಂಜಾನೆ ಸರಿಯಾಗಿ 6 ಗಂಟೆಗೆ ಮತಗಟ್ಟೆ ಏಜೆಂಟರ ಸಮಕ್ಷಮದಲ್ಲಿ ಮಾಡಬೇಕು. ಒಂದು ವೇಳೆ ಏಜೆಂಟರು ಸಮಯಕ್ಕೆ ಸರಿಯಾಗಿ ಹಾಜರಿಲ್ಲದಿದ್ದರೆ 15 ನಿಮಿಷ ಕಾಯ್ದು ನಂತರ ಮಾಡಬೇಕು. ಕಡ್ಡಾಯವಾಗಿ ಕನಿಷ್ಠ 50 ಮತಗಳನ್ನು ಚಲಾಯಿಸಬೇಕು. ಹಾಜರಿರುವ ಎಲ್ಲಾ ಏಜೆಂಟರಿಗೂ ಮತ ಹಾಕಲು ಅವಕಾಶ ನೀಡಿ.

ಅಣಕು ಮತದಾನ ಮುಗಿದ ಮೇಲೆ ಸಿಯುನ ಕ್ಲೋಸ್‌ ಬಟನ್‌ ಒತ್ತಿ, ನಂತರ ಫಲಿತಾಂಶದ ಬಟನ್‌ ಒತ್ತಿ ಅಣಕು ಮತದಾನವನ್ನು ಪರಿಶೀಲಿಸಿಕೊಳ್ಳಬೇಕು. ವಿ.ವಿ ಪ್ಯಾಟ್‌ ಡ್ರಾಪ್‌ ಬಾಕ್ಸ್‌ ತೆರೆದು ಎಲ್ಲಾ ಅಣಕು ಮತದಾನದ ಚೀಟಿ ಹೊರ ತೆಗೆದು ಅಭ್ಯರ್ಥಿವಾರು ವಿಂಗಡಿಸಿ, ಎಣಿಸಿ ಬರೆದುಕೊಳ್ಳಿ. ಸಿಯುನ ಫಲಿತಾಂಶದೊಂದಿಗೆ ತಾಳೆ ನೋಡಿ. ಸರಿಯಾಗಿ ಇರುವುದನ್ನು ಏಜೆಂಟರಿಗೆ ತೋರಿಸಿ ಖಚಿತಪಡಿಸಿಕೊಳ್ಳಿ. ಅಣಕು ಮತದಾನದ ಪ್ರಮಾಣಪತ್ರ ಸಿದ್ಧಪಡಿಸಿರಿ, ಫಲಿತಾಂಶ ತಾಳೆಯಾದದ್ದು ಖಾತ್ರಿಯಾದ ಮೇಲೆ ಸಿಯುನ ಮಾಕ್‌ಪೋಲ್ ಮತ ಅಳಿಸಲು ಕ್ಲಿಯರ್ ಬಟನ್‌ ಒತ್ತಿ. ನಂತರ ಸ್ವಿಚ್‌ ಆಫ್ ಮಾಡಿ. ಅಣಕು ಮತದಾನದ ಚೀಟಿಗಳನ್ನು ಸೀಲ್ ಮಾಡಿ. ನಂತರ ವಾಸ್ತವ ಮತದಾನಕ್ಕೆ ಯಂತ್ರಗಳನ್ನು ಸಿದ್ಧಪಡಿಸಿಕೊಳ್ಳಿ.

ಮತದಾನದ ಕೋಣೆಯಲ್ಲಿ ಮತದಾರರಿಗೆ, ಏಜೆಂಟರಿಗೆ ಮತ್ತು ಅಧಿಕಾರಿಗಳಿಗೆ ಮಾತ್ರ ಅವಕಾಶವಿದ್ದು, ಒಂದು ವೇಳೆ ಅದೇ ಕ್ಷೇತ್ರದಲ್ಲಿ ಸ್ಪರ್ಧಿಸುವ ಅಭ್ಯರ್ಥಿಯು ಮತದಾನ ಕೋಣೆಗೆ ಪ್ರವೇಶ ಮಾಡಿ ಮತದಾನ ಕೇಂದ್ರದಲ್ಲಿ ಕುಳಿತುಕೊಂಡರೆ ಈಗಾಗಲೇ ಮತದಾನ ಕೋಣೆಯಲ್ಲಿರುವ ಆ ಅಭ್ಯರ್ಥಿಯ ಏಜೆಂಟನನ್ನು ಅಲ್ಲಿಂದ ಹೊರಗೆ ಕಳುಹಿಸಬೇಕು.

ಮತಚಲಾವಣೆ ಮುಕ್ತಾಯ ಹೀಗಿರಲಿ.

ಸಂಜೆ 6ಗಂಟೆಗೆ ಸಾಲಿನಲ್ಲಿರುವ ಒಟ್ಟು ಮತ ಚಲಾಯಿಸಲು ಬಂದವರ ಸಂಖ್ಯೆ ಪಡೆದು ಕೊನೆಯ ಸಾಲಿನಲ್ಲಿರುವವರಿಗೆ ಕೊನೆಯ ಚೀಟಿ ಕೊಟ್ಟು ಅವರಿಗೆ ಮತ ಚಲಾಯಿಸಲು ಅನುವು ಮಾಡಿಕೊಡಬೇಕು. ಕೊನೆಯ ವ್ಯಕ್ತಿ ಮತ ಚಲಾಯಿಸಿದ ನಂತರ ಏಜೆಂಟರ ಸಮಕ್ಷಮ ಸಿಯುನ ಟೋಟಲ್ ಬಟನ್‌ ಒತ್ತಿ ಒಟ್ಟು ಚಲಾವಣೆಯಾದ ಮತಗಳ ಸಂಖ್ಯೆ ನಮೂದಿಸಿಕೊಳ್ಳಿ.

ಚುನಾವಣಾ ಆಯೋಗ ನೀಡಿದ ಕೈಪಿಡಿ, ಇವಿಎಂ, ವಿ.ವಿ ಪ್ಯಾಟ್‌ ಕೈಡಿಪಿಗಳನ್ನು ಹತ್ತು ಬಾರಿ ಓದಿ. ಸಂದೇಹ ಇಟ್ಟುಕೊಂಡು ಮತಗಟ್ಟೆಗೆ ಹೋಗಬೇಡಿ.

ನೀವು ಮನೆಯಿಂದ ಹೊರಡುವ ಮೊದಲು ಬೇಕಾದ ವಸ್ತುಗಳನ್ನು ಪ್ಯಾಕ್ ಮಾಡಿಕೊಳ್ಳಿ. ಉದಾಹರಣೆಗೆ: ಬಟ್ಟೆ, ಹೊದಿಕೆ, ಬ್ರಷ್, ಪೇಸ್ಟ್, ಹಣ, ಔಷಧಿ, ಮಾಹಿತಿ ಕೈಪಿಡಿ, ಮೊಬೈಲ್, ಚಾರ್ಜರ್, ಪವರ್ ಬ್ಯಾಂಕ್, ಅಗತ್ಯ ಕುಡಿಯುವ ನೀರು ಇತ್ಯಾದಿ ಮರೆಯಬಾರದು.

ಮಸ್ಟರಿಂಗ್‌ನಲ್ಲಿ ತಂಡದವರು ಎಲ್ಲಾ ವಸ್ತು ಸಂಗ್ರಹಿಸಿದ ಬಗ್ಗೆ ಖಚಿತ ಪಡಿಸಿಕೊಳ್ಳಿ.

ಮತಗಟ್ಟೆಯಲ್ಲಿಯೇ ರಾತ್ರಿ ವಾಸ್ತವ್ಯ ಮಾಡಬೇಕು ಎಂಬುದು ತಿಳಿದಿರಲಿ.

ಒಂದು ವೇಳೆ ಅಭ್ಯರ್ಥಿಗಳು ಊಟ, ಉಪಚಾರ ನೀಡಲು ಬಂದರೆ ಸ್ವೀಕರಿಸಬೇಡಿ.

ಮತಗಟ್ಟೆಯಲ್ಲಿ ಏಜೆಂಟರು, ಸಿಬ್ಬಂದಿ ಜೊತೆ ರಾಜಕೀಯ ಮಾತನಾಡಬೇಡಿ.

ಮತದಾರ ಮತದಾನ ಮಾಡುವಾಗ ಯಾರಿಗೆ ಹಾಕಿದ ಎಂಬ ಕುತೂಹಲ ಇರಲೇ ಬಾರದು.

ಅಳಿಸಲಾಗದ ಶಾಯಿ ಹಾಕುವಾಗ ಕೈ ಮುಟ್ಟುವ ಅಗತ್ಯ ಇಲ್ಲ.

ಪರಿಚಿತರು ಬಂದರೆ ಹೆಚ್ಚು ಮಾತನಾಡಬಾರದು.

ಮತದಾನದ ಕೊನೆಗೆ ಹರಿದು ಹೋದ ಪೇಪರ್ ಸೀಲು ಮುಂತಾದ ಅತಿ ಚಿಕ್ಕ ವಸ್ತುಗಳನ್ನು ಸಹ ಹಿಂದಕ್ಕೆ ಕೊಡಬೇಕು.

ಬಿಡುಗಡೆ ಪ್ರಮಾಣ ಪತ್ರ ಪಡೆಯದೇ ಮನೆಗೆ ಹೋಗಬಾರದು.

ಕರ್ತವ್ಯದಲ್ಲಿರುವಾಗ ಅನಾವಶ್ಯಕವಾಗಿ ಫೋನಿನಲ್ಲಿ ಮಾತನಾಡುವುದು, ಸೆಲ್ಪಿ ತೆಗೆಯಲು ಹೋಗಬಾರದು.

ಒಂದು ತಂಡವಾಗಿ ಕರ್ತವ್ಯ ನಿರ್ವಹಣೆ ಮಾಡಬೇಕು. ಮತಗಟ್ಟೆಯ ನಿಯೋಜಿತ ಅಧಿಕಾರಿ, ಸಿಬ್ಬಂದಿ ಜತೆ ಸೌಹಾರ್ದವಾಗಿ ನಡೆದುಕೊಳ್ಳಿ. ಎಷ್ಟು ಬಾರಿ ಚುನಾವಣಾ ಕರ್ತವ್ಯ ಮಾಡಿದರೂ ಎಲ್ಲಾ ಗೊತ್ತು ಎಂಬ ಪ್ರವೃತ್ತಿ ಬೇಡ.

ಬ್ಯಾಂಕ್‌ ಖಾತೆಗೆ ಸಂಭಾವನೆ

ಮತದಾನ ದಿನ ಕರ್ತವ್ಯ ನಿರ್ವಹಿಸುವ ಅಧಿಕಾರಿ/ ಸಿಬ್ಬಂದಿಗೆ ಚುನಾವಣಾ ಆಯೋಗ ಆನ್‌ಲೈನ್‌ ಮೂಲಕ ಸಂಭಾವನೆಯನ್ನು ಬ್ಯಾಂಕ್‌ ಖಾತೆಗೆ ಜಮೆ ಮಾಡಲಿದೆ.

ಮತಗಟ್ಟೆ ಅಧ್ಯಕ್ಷಾಧಿಕಾರಿಗೆ ₹1,700, ನಾಲ್ಕು ಜನ ಸಹಾಯಕ ಅಧ್ಯಕ್ಷಾಧಿಕಾರಿಗಳಿಗೆ ತಲಾ ₹ 1,050. ಒಬ್ಬ ‘ಡಿ’ ಗ್ರೂಪ್‌ ಸಿಬ್ಬಂದಿಗೆ ₹ 450 ಆಯೋಗ ನಿಗದಿಪಡಿಸಿದೆ. ಎಲ್ಲರಿಗೂ ಎರಡು ದಿನದ ಊಟ, ಉಪಾಹಾರವನ್ನು ಆಯೋಗವೇ ವ್ಯವಸ್ಥೆ ಮಾಡಿದ್ದರಿಂದ ಇದರಲ್ಲಿ ₹ 300 ಕಡಿತಗೊಳಿಸಲಾಗುತ್ತದೆ ಎಂದು ಜಿಲ್ಲಾ ಚುನಾವಣಾ ವಿಭಾಗ ತಿಳಿಸಿದೆ.

ಮತಗಟ್ಟೆಗೆ ಮೊಬೈಲ್‌ ತರಬಹುದೇ?

ಮತದಾನಕ್ಕೆ ಮತಗಟ್ಟೆಗೆ ಬರುವವರು ಮೊಬೈಲ್ ತರಬಹುದೇ ಎಂಬ ಪ್ರಶ್ನೆಗೆ ಚುನಾವಣಾ ಆಯೋಗ ಇದುವರೆಗೂ ಯಾವುದೇ ಸ್ಪಷ್ಟ ಮಾಹಿತಿ ನೀಡಿಲ್ಲ. ಇದರಿಂದ ನಾವು ತೊಂದರೆ ಅನುಭವಿಸಬೇಕಾಗುತ್ತದೆ ಎಂದು ಮತಗಟ್ಟೆ ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

ಈ ಚುನಾವಣೆಯಲ್ಲಿ ಮೊದಲ ಬಾರಿಗೆ ವಿ.ವಿ ಪ್ಯಾಟ್‌ ಬಳಸಲಾಗುತ್ತದೆ. ಅಲ್ಲದೇ, ಹಾಕಿದ ಮತವನ್ನು ಮತದಾರರು 7 ಸಕೆಂಡ್‌ವರೆಗೂ ನೋಡುವುದಕ್ಕೆ ಅವಕಾಶವಿದೆ. ಈ ಸಂದರ್ಭದಲ್ಲಿ ಯಾರಾದರೂ ಮೊಬೈಲ್‌ನಲ್ಲಿ ಫೋಟೊ ತೆಗೆದುಕೊಂಡರೆ ಮುಂದೆ ಆನೇಕ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಮತಗಟ್ಟೆ ಒಳಗೆ ಮೊಬೈಲ್‌ ನಿಷೇಧಿಸಬೇಕು ಎಂಬುದು ಅವರ ಒತ್ತಾಯ.

ಈಗ ಪ್ರತಿಯೊಬ್ಬರ ಕೈಯಲ್ಲಿ ಮೊಬೈಲ್‌ ಸದಾ ಇರುತ್ತೆ. ಅದನ್ನು ಬಿಟ್ಟಿರಲು ಸಾಧ್ಯವಿಲ್ಲ. ಮತಗಟ್ಟೆ ಒಳಗೆ ಬರಬೇಕು ಎಂದರೆ ಮೊಬೈಲ್‌ ಅನ್ನು ಎಲ್ಲಿಟ್ಟು ಬರಬೇಕು? ಅದರ ಜವಾಬ್ದಾರಿ ಯಾರದ್ದು? ಇದಕ್ಕೆ ಆಯೋಗ ಏನಾದರೂ ವ್ಯವಸ್ಥೆ ಮಾಡಿದೆಯೇ? ಎಂದು ಮತದಾರರು ಪ್ರಶ್ನಿಸುತ್ತಾರೆ.

**
ಮತಗಟ್ಟೆಗೆ ಮೊಬೈಲ್‌ ತರಬಹುದು ಅಥವಾ ಇಲ್ಲ ಎಂಬ ಬಗ್ಗೆ ಆಯೋಗದ ನಿರ್ದಿಷ್ಟ ಸೂಚನೆಗಳಿಲ್ಲ. ಆದರೆ, ಮೊಬೈಲ್ ಸ್ವಿಚ್ಡ್ಆಫ್‌ ಮಾಡಿಕೊಂಡಿರಬೇಕು
– ಪದ್ಮ ಬಸವಂತಪ್ಪ, ಸಹಾಯಕ ಚುನಾವಣಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT