ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯಲ್ಲಿ 18 ‘ಸಖಿ’ ಮತಗಟ್ಟೆಗಳ ಸ್ಥಾಪನೆ

ಮಹಿಳಾ ಮತದಾರರ ಸೆಳೆಯಲು ಚುನಾವಣಾ ಆಯೋಗದ ವಿಶೇಷ ಕ್ರಮ, ಬಣ್ಣ ಬಣ್ಣ ಗುಲಾಬಿ ಬಣ್ಣ
Last Updated 29 ಏಪ್ರಿಲ್ 2018, 13:51 IST
ಅಕ್ಷರ ಗಾತ್ರ

ಶಿವಮೊಗ್ಗ: ಮಹಿಳಾ ಮತದಾರರ ಸಂಖ್ಯೆ ಹೆಚ್ಚಾಗಿರುವ ಜಿಲ್ಲೆಯ 18 ಮತಗಟ್ಟೆಗಳನ್ನು ‘ಸಖಿ’ ಮತಗಟ್ಟೆ (ಪಿಂಕ್)ಗಳಾಗಿ ಪರಿವರ್ತಿಸಲಾಗಿದೆ.

ಈ ಎಲ್ಲಾ ಮತಗಟ್ಟೆಗಳಿಗೆ ಗುಲಾಬಿ ಬಣ್ಣ ಬಳಿಯಲಾಗಿದೆ. ವಿಶೇಷವಾಗಿ ಸಿಂಗರಿಸಲಾಗುತ್ತಿದೆ. ಚುನಾವಣಾಧಿಕಾರಿ ಸೇರಿದಂತೆ ಸಂಪೂರ್ಣ ಮಹಿಳಾ ಸಿಬ್ಬಂದಿ ಇಂತಹ ಮತಗಟ್ಟೆಗಳಲ್ಲಿ ಕಾರ್ಯನಿರ್ವಹಿಸುತ್ತಾರೆ ಬಹುತೇಕ ಪೊಲೀಸ್ ಸಿಬ್ಬಂದಿ ಸಹ ಮಹಿಳೆಯರೇ ಆಗಿರುತ್ತಾರೆ. ಇವು ಪಿಂಕ್ ಮತಗಟ್ಟೆಗಳ ವಿಶೇಷ ಎಂದು ಜಿಲ್ಲಾ ಚುನಾವಣಾಧಿಕಾರಿ ಡಾ.ಎಂ. ಲೋಕೇಶ್ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಈ ಬಾರಿಯ ಚುನಾವಣೆಯಲ್ಲಿ ಮಹಿಳೆಯರಿಗೆ ಹೆಚ್ಚಿನ ಆದ್ಯತೆ ನೀಡಲು, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಮತ ಚಲಾಯಿಸುವಂತೆ ಪ್ರೇರೇಪಿಸಲು ಈ ಪಿಂಕ್ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಶೇ 50ಕ್ಕಿಂತ ಹೆಚ್ಚಿನ ಮಹಿಳಾ ಮತದಾರರು ಇರುವ ಮತಗಟ್ಟೆಗಳನ್ನು ಇದಕ್ಕಾಗಿ ಗುರುತಿಸಲಾಗಿದೆ. ಈ ಮತಗಟ್ಟೆಗಳಲ್ಲಿ ಆಯಾ ಮತಗಟ್ಟೆ ವ್ಯಾಪ್ತಿಯ ಪುರುಷ ಮತದಾರರೂ ಮತ ಚಲಾಯಿಸಲಿದ್ದಾರೆ ಎಂದು ವಿವರ ನೀಡಿದರು.

ಚುನಾವಣೆಗೆ ಸರ್ವಸಿದ್ಧತೆ: ಜಿಲ್ಲೆಯಲ್ಲಿ ಮಾದರಿ ನೀತಿ ಸಂಹಿತೆ ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುತ್ತಿದ್ದು, ಹೋಟೆಲ್‌, ಕ್ಲಬ್‌ಗಳಲ್ಲಿ ಆಯೋಜಿಸಲಾಗುವ ಪಾರ್ಟಿಗಳ ಮೇಲೆ ನಿಗಾ ಇರಿಸಲಾಗುವುದು. ಮಾದರಿ ನೀತಿ ಸಂಹಿತೆ ಜಾರಿಗೆ ರಚಿಸಲಾಗಿರುವ ವಿಚಕ್ಷಣ ದಳಗಳು ಕಟ್ಟೆಚ್ಚರ ವಹಿಸಿವೆ. ಜನುಮ ದಿನ ಸೇರಿದಂತೆ ಸಂಭ್ರಮ ಕೂಟಗಳ ಮೇಲೆ ನಿಗಾ ವಹಿಸಲು ಸೂಚಿಸಲಾಗಿದೆ. ಈ ಕುರಿತು ದೂರು ಬಂದ ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗುತ್ತಿದೆ. ಈ ರೀತಿಯ ಸಮಾರಂಭ ಆಯೋಜಿಸುವ ಪೂರ್ವದಲ್ಲಿ ಆಯಾ ವಿಧಾನಸಭಾ ವ್ಯಾಪ್ತಿಯ ಚುನಾವಣಾಧಿಕಾರಿಗೆ ಮಾಹಿತಿ ನೀಡಲು ಸೂಚಿಸಲಾಗಿದೆ ಎಂದರು.

₹ 1.39 ಕೋಟಿ ವಶ: ಚುನಾವಣಾ ಅಧಿಸೂಚನೆ ಪ್ರಕಟವಾದ ಬಳಿಕ ₹ 1.39ಕೋಟಿ ಮೌಲ್ಯದ ನಗದು ಹಾಗೂ ಸಾಮಾಗ್ರಿ ವಶಪಡಿಸಿಕೊಳ್ಳಲಾಗಿದೆ. ಇದರಲ್ಲಿ ಸರಿಯಾದ ದಾಖಲೆ ಒದಗಿಸಿದ ₹ 76 ಲಕ್ಷ ಮರಳಿಸಲಾಗಿದೆ. ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳಿಗೆ ಸಂಬಂಧಿಸಿದಂತೆ 13 ಪ್ರಕರಣಗಳಲ್ಲಿ ಎಫ್ಐಆರ್ ದಾಖಲಿಸಲಾಗಿದೆ ಎಂದು ಮಾದರಿ ನೀತಿ ಸಂಹಿತೆ ಅನುಷ್ಠಾನಾಧಿಕಾರಿ ಡಾ. ರಾಕೇಶ್ ಕುಮಾರ್ ಮಾಹಿತಿ ನೀಡಿದರು.

1,756 ಮತಗಟ್ಟೆಗಳು: ಜಿಲ್ಲೆಯಲ್ಲಿ ಒಟ್ಟು 1,756 ಮತಗಟ್ಟೆಗಳಿವೆ. ಶಿವಮೊಗ್ಗ ಗ್ರಾಮಾಂತರ 247, ಭದ್ರಾವತಿ- 252, ಶಿವಮೊಗ್ಗ 269, ತೀರ್ಥಹಳ್ಳಿ 256, ಶಿಕಾರಿಪುರ 231, ಸೊರಬ 238 ಹಾಗೂ ಸಾಗರದಲ್ಲಿ 263 ಮತಗಟ್ಟೆ ಸ್ಥಾಪಿಸಲಾಗಿದೆ.

ಚುನಾವಣಾ ವೀಕ್ಷಕರಿಂದ ಅಹವಾಲು: ಚುನಾವಣಾ ಕಾರ್ಯ ವೀಕ್ಷಿಸಲು ಈಗಾಗಲೇ ಚುನಾವಣಾ ವೀಕ್ಷಕರು ಬಂದಿದ್ದಾರೆ. ಅವರು ಪ್ರತಿ ದಿನ ಬೆಳಿಗ್ಗೆ 10ರಿಂದ 11ರವರೆಗೆ ಆಯಾ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪ್ರವಾಸಿ ಮಂದಿರದಲ್ಲಿ ಚುನಾವಣಾ ಅಹವಾಲು ಸ್ವೀಕರಿಸಲಿದ್ದಾರೆ. ಚುನಾವಣೆಗೆ ಸಂಬಂಧದ ಯಾವುದೇ ದೂರು, ಅಹವಾಲು ಈ ಅವಧಿಯಲ್ಲಿ ಸಲ್ಲಿಸಬಹುದು ಎಂದು ಮಾಹಿತಿ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಪಂಚಾಯ್ತಿ ಸಿಇಒ ಡಾ.ರಾಕೇಶ್ ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಭಿನವ ಖರೆ, ಹೆಚ್ಚುವರಿ ಜಿಲ್ಲಾಧಿಕಾರಿ ಕೆ. ಚನ್ನಬಸಪ್ಪ ಉಪಸ್ಥಿತರಿದ್ದರು.

ಪಿಂಕ್ ಮತಗಟ್ಟೆಗಳ ವಿವರ

ಶಿವಮೊಗ್ಗ ಗ್ರಾಮಾಂತರ : ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಹಾರೋಬೆನವಳ್ಳಿ. ಹಿರಿಯ ಪ್ರಾಥಮಿಕ ಶಾಲೆ, ಸಂತೆಕಡೂರು.

ಭದ್ರಾವತಿ: ಸರ್ಕಾರಿ ಬಾಲಕರ ಹಿರಿಯ ಪ್ರಾಥಮಿಕ ಶಾಲೆ, ಓಲ್ಡ್ ಟೌನ್. ಬಸವೇಶ್ವರ ವಿದ್ಯಾ ಸಂಸ್ಥೆ, ಜನ್ನಾಪುರ. ಸರ್ ಎಂವಿ ಕಲಾ ಮತ್ತು ವಾಣಿಜ್ಯ ಕಾಲೇಜು ಭದ್ರಾವತಿ.

ಶಿವಮೊಗ್ಗ: ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ, ಹೊಸಮನೆ. ಹಿರಿಯ ಪ್ರಾಥಮಿಕ ಶಾಲೆ, ಸಿದ್ದೇಶ್ವರನಗರ. ಕನ್ನಡ ಕಿರಿಯ ಪ್ರಾಥಮಿಕ ಶಾಲೆ, ಅಶೋಕನಗರ. ಜ್ಞಾನಪ್ರಭ ಶಿಕ್ಷಣ ಸಂಸ್ಥೆ, ಶಿವಮೊಗ್ಗ.

ತೀರ್ಥಹಳ್ಳಿ: ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ, ಸೀಬಿನಕೆರೆ. ಹಿರಿಯ ಪ್ರಾಥಮಿಕ ಶಾಲೆ ಕಡೇಕಲ್.

ಶಿಕಾರಿಪುರ: ಜವಾಹರಲಾಲ್ ನೆಹರೂ ಹಿರಿಯ ಪ್ರಾಥಮಿಕ ಶಾಲೆ, ವಿನಾಯಕನಗರ. ಸಿದ್ಧಲಿಂಗೇಶ್ವರ ಟೌನ್ ಬಾಲಕಿಯರ ಹಿರಿಯ ಪ್ರಾಥಮಿಕ ಶಾಲೆ ಶಿಕಾರಿಪುರ.
ಸೊರಬ: ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ಕನಕೇರಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕುಗ್ವೆ.

ಸಾಗರ: ಸಮುದಾಯ ಭವನ ಸಾಗರ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಅಲಗೇರಿ ಮಂಡ್ರಿ, ತಾಲ್ಲೂಕು ಪಂಚಾಯ್ತಿ ಕಚೇರಿ ಹೊಸನಗರ.

ಮತ ಎಣಿಕೆ ಕೇಂದ್ರಗಳು

ಸಹ್ಯಾದ್ರಿ ವಾಣಿಜ್ಯ ಕಾಲೇಜು, ಶಿವಮೊಗ್ಗ. ಎಚ್.ಎಸ್. ರುದ್ರಪ್ಪ ರಾಷ್ಟ್ರೀಯ ಪದವಿ ಪೂರ್ವ ಕಾಲೇಜು, ಶಿವಮೊಗ್ಗ. ಸಂಚಿ ಹೊನ್ನಮ್ಮ ಬಾಲಿಕಾ ಪದವಿ ಪೂರ್ವ ಕಾಲೇಜು, ಭದ್ರಾವತಿ. ಯು.ಆರ್. ಅನಂತಮೂರ್ತಿ ಕಾಲೇಜು, ತೀರ್ಥಹಳ್ಳಿ. ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಶಿಕಾರಿಪುರ. ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸೊರಬ. ಸರ್ಕಾರಿ ಪದವಿ ಪೂರ್ವ ಕಾಲೇಜು ಸಾಗರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT