ಎರಡು ದಿನ ಭಾರತ ಬಂದ್‌: ಏನೇನಿರಲಿದೆ? ಏನೇನಿಲ್ಲ?

7
ಶಾಲಾ–ಕಾಲೇಜುಗಳಿಗೆ ರಜೆ * ಕಾಲೇಜು, ವಿ.ವಿ ಪರೀಕ್ಷೆಗಳ ಮುಂದೂಡಿಕೆ

ಎರಡು ದಿನ ಭಾರತ ಬಂದ್‌: ಏನೇನಿರಲಿದೆ? ಏನೇನಿಲ್ಲ?

Published:
Updated:

ಬೆಂಗಳೂರು: ಮೋಟಾರು ವಾಹನ (ತಿದ್ದುಪಡಿ) ಮಸೂದೆಯನ್ನು ಹಿಂಪಡೆಯಬೇಕು ಹಾಗೂ ಅಸಂಘಟಿತ ವಲಯದ ಸಾರಿಗೆ ಕಾರ್ಮಿಕರಿಗೆ ಸುರಕ್ಷತಾ ಕಾಯಿದೆ ಜಾರಿಗೊಳಿಸಬೇಕು ಎಂಬುವೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಜ. 8 ಮತ್ತು 9ರಂದು ಕಾರ್ಮಿಕ ಸಂಘಟನೆಗಳು ಭಾರತ ಬಂದ್‌ಗೆ ಕರೆ ನೀಡಿವೆ. ಆದರೆ, ಬಂದ್‌ ನಡೆಸಬೇಕೇ ಬೇಡವೇ ಎಂಬ ಕುರಿತು ಕಾರ್ಮಿಕ ಸಂಘಟನೆಗಳೊಳಗೇ ಭಿನ್ನಾಭಿಪ್ರಾಯವಿದೆ. 

ಮುಖ್ಯವಾಗಿ ಸಾರಿಗೆ ವ್ಯವಸ್ಥೆ ಮೇಲೆ ಈ ಬಂದ್‌ ಪರಿಣಾಮ ಬೀರಲಿದೆ. ಸರ್ಕಾರಿ ಬಸ್‌ಗಳು ಸಂಚರಿಸುವುದಿಲ್ಲ. 

ಬಸ್‌ ಆಪರೇಟರ್ಸ್‌ ಕಾನ್‌ಫಿಡರೇಷನ್ ಆಫ್‌ ಇಂಡಿಯಾ (ಬಾಕ್ಸಿ– ಖಾಸಗಿ ಬಸ್‌ ಮಾಲೀಕರ ರಾಷ್ಟ್ರಮಟ್ಟದ ಸಂಘಟನೆ) ಹೋಟೆಲ್ ಮಾಲೀಕರ ಸಂಘ, ಆ್ಯಪ್‌ ಆಧರಿತ ಟ್ಯಾಕ್ಸಿ ಚಾಲಕ– ಮಾಲೀಕರ ಸಂಘ, ಆಟೊರಿಕ್ಷಾ ಚಾಲಕರ ಸಂಘಟನೆಗಳ ಒಕ್ಕೂಟಗಳು ಈ ಬಂದ್‌ಗೆ ಬೆಂಬಲ ಸೂಚಿಸಿಲ್ಲ. ಚಿತ್ರಮಂದಿರಗಳು ಹಾಗೂ ಮಾಲ್‌ಗಳನ್ನು ಬಂದ್‌ ಮಾಡದಿರಲು ಅವುಗಳ ವ್ಯವಸ್ಥಾಪಕರು ನಿರ್ಧರಿಸಿದ್ದಾರೆ.

ಕೆಲವು ಸಂಘಟನೆಗಳು ನೈತಿಕ ಬೆಂಬಲ ಘೋಷಿಸಿದರೂ ಸೇವೆಯನ್ನು ಸ್ಥಗಿತಗೊಳಿಸುವುದಿಲ್ಲ ಎಂದು ಸ್ಪಷ್ಟಪಡಿಸಿವೆ. ಓಲಾ, ಉಬರ್‌ ಟ್ಯಾಕ್ಸಿ ಚಾಲಕ ಮಾಲೀಕರ ಸಂಘದ ಅಧ್ಯಕ್ಷ ತನ್ವೀರ್‌ ಪಾಷಾ ಅವರೂ ಇದೇ ನಿಲುವನ್ನು ವ್ಯಕ್ತಪಡಿಸಿದ್ದಾರೆ. ತಮ್ಮ ಟ್ಯಾಕ್ಸಿಗಳು ಎಂದಿನಂತೆ ಸಂಚರಿಸಲಿವೆ ಎಂದು ಓಲಾ ಕಂಪನಿಯ ಪ್ರತಿನಿಧಿಗಳು ತಿಳಿಸಿದ್ದಾರೆ. 

ಮುಷ್ಕರಕ್ಕೆ ಕರೆ ಕೊಟ್ಟಿರುವುದು ಕೆಲವು ಕಾರ್ಮಿಕ ಸಂಘಟನೆಗಳು ಮಾತ್ರ. ಹೀಗಾಗಿ ನಾವು ಬೆಂಬಲಿಸುವುದಿಲ್ಲ. ರಾಷ್ಟ್ರವ್ಯಾಪಿ ಖಾಸಗಿ ಬಸ್‌ಗಳ ಸೇವೆ ಎಂದಿನಂತೆ ಇರಲಿದೆ ಎಂದು ‘ಬಾಕ್ಸಿ’ ಅಧ್ಯಕ್ಷ ಕೆ.ಟಿ.ರಾಜಶೇಖರ ತಿಳಿಸಿದ್ದಾರೆ.

‘ಕಾರ್ಮಿಕ ಸಂಘಟನೆಗಳು ಬಂದ್‌ಗೆ ಕರೆ ನೀಡಿದ್ದರಿಂದ ಮಂಗಳವಾರ ಹಾಗೂ ಬುಧವಾರ ಸಾರಿಗೆ ಬಸ್‌ ಸೇವೆ ಇರುವುದಿಲ್ಲ’ ಎಂದು ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಸೋಮವಾರ ಮಂಡ್ಯದಲ್ಲಿ ಹೇಳಿದ್ದಾರೆ. 

* ಇದನ್ನೂ ಓದಿ: ಶಾಲಾ, ಕಾಲೇಜುಗಳಿಗೆ ರಜೆ ಎಲ್ಲಿದೆ, ಎಲ್ಲಿಲ್ಲ: ಇಲ್ಲಿದೆ ಮಾಹಿತಿ

‘ಸರ್ಕಾರದ ಆಸ್ತಿ ರಕ್ಷಣೆ ಮಾಡುವುದು ನಮ್ಮ ಜವಾಬ್ದಾರಿ. ಕೇರಳದಲ್ಲಿ ನಡೆಯುತ್ತಿರುವ ಪ್ರತಿಭಟನೆಯಿಂದಾಗಿ ಐದಾರು ಸಾರಿಗೆ ಬಸ್‌ಗಳಿಗೆ ಹಾನಿಯುಂಟಾಗಿದೆ. ಹೀಗಾಗಿ ಬಂದ್‌ ವೇಳೆ ಸಾರಿಗೆ ಬಸ್‌ ಓಡಿಸದಿರಲು ನಿರ್ಧಾರ ಕೈಗೊಳ್ಳಲಾಗಿದೆ. ಪ್ರತಿಭಟನಕಾರರು ಅವಕಾಶ ನೀಡಿದರೆ ಮಾತ್ರ ಬಸ್‌ ಬಿಡಲಾಗುವುದು’ ಎಂದು ತಿಳಿಸಿದ್ದಾರೆ.

ಬಸ್‌ಗಳನ್ನು ಪೊಲೀಸ್‌ ಭದ್ರತೆಯೊಂದಿಗೆ ಓಡಿಸುತ್ತೇವೆ. ಜನರಿಗೆ ತೊಂದರೆಯಾಗಬಾರದು. ಮುಂದೆ ಪರಿಸ್ಥಿತಿ ನೋಡಿಕೊಂಡು ಬಸ್‌ ಸಂಚಾರದ ಕುರಿತು ನಿರ್ಧರಿಸಲಾಗುವುದು ಎಂದು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ಡಾ.ಎನ್‌.ವಿ.ಪ್ರಸಾದ್‌ ಹೇಳಿದ್ದಾರೆ.

‘12 ಸಂಘಟನೆಗಳನ್ನು ಒಳಗೊಂಡ ಈ ಒಕ್ಕೂಟದಲ್ಲಿ ಲಕ್ಷಕ್ಕೂ ಹೆಚ್ಚು ಆಟೊ ಚಾಲಕರಿದ್ದಾರೆ. ಚಾಲಕರ ಬೇಡಿಕೆಗಳನ್ನು ನೆಪ ಮಾಡಿಕೊಂಡು ರಾಜಕೀಯ ದುರುದ್ದೇಶದಿಂದ ಬಂದ್‌ಗೆ ಕರೆ ನೀಡಿದ್ದಾರೆ. ಇದಕ್ಕೆ ನಮ್ಮ ಬೆಂಬಲವಿಲ್ಲ’ ಎಂದು ಆದರ್ಶ ಆಟೊ ಮತ್ತು ಟ್ಯಾಕ್ಸಿ ಚಾಲಕರ ಸಂಘದ ಅಧ್ಯಕ್ಷ ಎಂ.ಮಂಜುನಾಥ್ ಪ್ರತಿಕ್ರಿಯಿಸಿದ್ದಾರೆ. 

‘ಮೆಟ್ರೊ ರೈಲುಗಳು ಎಂದಿನಂತೆ ಸಂಚರಿಸಲಿವೆ. ಪ್ರತಿಭಟನೆಯ ಕಾವು ತೀವ್ರಗೊಂಡು ಪರಿಸ್ಥಿತಿ ಕೈಮೀರುವ ಸಂದರ್ಭ ಎದುರಾದಲ್ಲಿ ಸೇವೆಯನ್ನು ಸ್ಥಗಿತಗೊಳಿಸಬೇಕಾಗಬಹುದು’ ಎಂದು ಮೆಟ್ರೊ ನಿಗಮದ ಹಿರಿಯ ಸಾರ್ವಜನಿಕ ಸಂಪರ್ಕಾಧಿಕಾರಿ ಬಿ.ಎಲ್‌. ಯಶವಂತ ಚವಾಣ್‌ ತಿಳಿಸಿದ್ದಾರೆ. 

ಶಾಲಾ ಕಾಲೇಜು

ಆಯಾ ಪ್ರದೇಶಗಳಲ್ಲಿ ಪರಿಸ್ಥಿತಿ ನೋಡಿಕೊಂಡು ಜಿಲ್ಲಾಧಿಕಾರಿಗಳು ನಿರ್ಧಾರ ಕೈಗೊಳ್ಳಲಿದ್ದಾರೆ. ಅದರ ಪ್ರಕಾರ ಇಲಾಖೆ ಅಧಿಕಾರಿಗಳು ಆಯಾ ಹಂತದಲ್ಲಿ ಕ್ರಮ ಕೈಗೊಳ್ಳಲಿದ್ದಾರೆ ಎಂದು ಶಿಕ್ಷಣ ಇಲಾಖೆ ಆಯುಕ್ತ ಪಿ.ಸಿ.ಜಾಫರ್‌ ಹೇಳಿದ್ದಾರೆ.   

ಏನೇನಿರಲಿದೆ?

ಆಂಬುಲೆನ್ಸ್‌, ಹಾಲು, ಹೋಟೆಲ್‌, ಔಷಧ ಅಂಗಡಿ, ಸಿನಿಮಾ ಪ್ರದರ್ಶನ, ಖಾಸಗಿ ಬಸ್‌, ಟ್ಯಾಕ್ಸಿ, ಏರ್‌‍ಪೋರ್ಟ್‌ ಟ್ಯಾಕ್ಸಿ, ಮೆಟ್ರೊ, ರೈಲು

ಏನೇನಿಲ್ಲ?

ಬಿಎಂಟಿಸಿ, ಕೆಎಸ್‌ಆರ್‌ಟಿಸಿ ಬಸ್‌ಗಳು, ಶಾಲಾ ಕಾಲೇಜುಗಳು (ಆಯಾ ಜಿಲ್ಲಾಧಿಕಾರಿಗಳಿಗೆ ನಿರ್ಧಾರ ಕೈಗೊಳ್ಳುವ ಅಧಿಕಾರ ನೀಡಲಾಗಿದೆ. ಬೆಂಗಳೂರು ನಗರ ಜಿಲ್ಲೆ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಈಗಾಗಲೇ ರಜೆ ಘೋಷಿಸಲಾಗಿದೆ).

ಯಾವುದು ಅನುಮಾನ?

ಆಟೊರಿಕ್ಷಾ, ಬ್ಯಾಂಕ್‌ ಸೇವೆ, ಗಾರ್ಮೆಂಟ್ ಕಾರ್ಖಾನೆಗಳು 

ಪರೀಕ್ಷೆ ಮುಂದೂಡಿಕೆ

ದ್ವಿತೀಯ ಪಿಯು ಪೂರ್ವಭಾವಿ ಪರೀಕ್ಷೆಗಳು, ಧಾರವಾಡ, ತುಮಕೂರು, ದಾವಣಗೆರೆ ವಿಶ್ವವಿದ್ಯಾಲಯ, ಕಾನೂನು ವಿಶ್ವವಿದ್ಯಾಲಯಗಳ ಪರೀಕ್ಷೆಗಳು ಮುಂದೂಡಿಕೆ.

ಯಾರ ಬೆಂಬಲ?

ಸೆಂಟರ್‌ ಫಾರ್‌ ಇಂಡಿಯನ್‌ ಟ್ರೇಡ್‌ ಯೂನಿಯನ್‌, ಇಂಡಿಯನ್‌ ನ್ಯಾಷನಲ್‌ ಟ್ರೇಡ್‌ ಯೂನಿಯನ್‌ ಕಾಂಗ್ರೆಸ್‌. ಅಖಿಲ ಭಾರತ ಕಾರ್ಮಿಕ ಸಂಘಟನೆಗಳ ಒಕ್ಕೂಟ ಸೇರಿ 11 ಕಾರ್ಮಿಕ ಸಂಘಟನೆಗಳು. 

 

ಬರಹ ಇಷ್ಟವಾಯಿತೆ?

 • 18

  Happy
 • 2

  Amused
 • 0

  Sad
 • 0

  Frustrated
 • 3

  Angry

Comments:

0 comments

Write the first review for this !