ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷ್ಣೆಯ ನಾಡಿಗೆ ‘ಭಾರತ ಮಾಲಾ’ ಹೆದ್ದಾರಿ ಯೋಜನೆ ಮೆರುಗು

ಬಾಗಲಕೋಟೆ, ಬೆಳಗಾವಿ, ರಾಯಚೂರು ಮೂಲಕ ಹಾದು ಹೊಗಲಿದೆ ನಾಲ್ಕು ಪಥದ ಹೆದ್ದಾರಿ
Last Updated 23 ಆಗಸ್ಟ್ 2018, 9:10 IST
ಅಕ್ಷರ ಗಾತ್ರ

ಬಾಗಲಕೋಟೆ: ಉತ್ತರ–ದಕ್ಷಿಣವನ್ನು ಒಂದುಗೂಡಿಸುವ ಕೇಂದ್ರ ಸರ್ಕಾರದ ಕನಸಿನ ’ಭಾರತ ಮಾಲಾ’ ಯೋಜನೆಯಡಿ ಪಣಜಿ–ಹೈದರಾಬಾದ್ ನಡುವೆ ನಾಲ್ಕು ಪಥದ ರಾಷ್ಟ್ರೀಯ ಹೆದ್ದಾರಿ ನಿರ್ಮಾಣವಾಗಲಿದೆ. ಅದು ಬಾಗಲಕೋಟೆ ಜಿಲ್ಲೆಯ ಮೂಲಕ ಹಾದು ಹೋಗಲಿದೆ.

ದೇಶದ ಅರ್ಥ ವ್ಯವಸ್ಥೆಯನ್ನು ಸದೃಢಗೊಳಿಸುವಲ್ಲಿ ಮಹತ್ವದ ಪಾತ್ರ ವಹಿಸಲಿರುವ ಈ ಹೆದ್ದಾರಿ ನಿರ್ಮಾಣ ಜವಾಬ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್ಎಐ) ಕೈಗೆತ್ತಿಕೊಂಡಿದೆ.

ಈ ರಸ್ತೆ ಹೈದರಾಬಾದ್‌ನಿಂದ ಆರಂಭವಾಗಿ ರಾಯಚೂರು, ಲಿಂಗಸೂರು, ಬಾಗಲಕೋಟೆ, ಬೆಳಗಾವಿ ಮೂಲಕ ಪಣಜಿ ಸಂಪರ್ಕಿಸಲಿದೆ. ಈಗಿರುವ ರಾಯಚೂರು–ಬೆಳಗಾವಿ ರಾಜ್ಯ ಹೆದ್ದಾರಿ ಭಾರತ ಮಾಲಾ ಅಡಿನಾಲ್ಕು ಪಥದ ರಾಷ್ಟ್ರೀಯ ಹೆದ್ದಾರಿಯಾಗಲಿದೆ.

’ರಸ್ತೆಯ ಮಧ್ಯಭಾಗದಿಂದ ಎರಡೂ ಬದಿಗೆ ತಲಾ 22.5 ಮೀಟರ್ ವಿಸ್ತೀರ್ಣದ 45 ಮೀಟರ್ ರಸ್ತೆ ನಿರ್ಮಾಣವಾಗಲಿದೆ’ ಎಂದು ವಿಜಯಪುರದ ರಾಷ್ಟ್ರೀಯ ಹೆದ್ದಾರಿ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ನರಸಿಂಗ ಮಂಗಳಗಿ ಹೇಳುತ್ತಾರೆ.

ಈ ಯೋಜನೆಯ ಮೊದಲ ಹಂತದಲ್ಲಿ 25 ಸಾವಿರ ಕಿ.ಮೀ ರಸ್ತೆಯನ್ನು ಅಭಿವೃದ್ಧಿಪಡಿಸಲಾಗುತ್ತಿದ್ದು, ಈಗಾಗಲೇ ಅದಕ್ಕೆ ವಿಸ್ತೃತ ಯೋಜನಾ ವರದಿ (ಡಿಪಿಎಆರ್) ಸಿದ್ಧವಾಗಿದೆ. 2018ರ ಡಿಸೆಂಬರ್‌ ತಿಂಗಳಿನಿಂದ ಕಾಮಗಾರಿ ಆರಂಭವಾಗಲಿದೆ. 2022ಕ್ಕೆ ಮೊದಲ ಹಂತ ಪೂರ್ಣಗೊಳಿಸುವ ಉದ್ದೇಶ ಕೇಂದ್ರ ಸರ್ಕಾರ ಹೊಂದಿದೆ.

ಪಣಜಿ–ಹೈದರಾಬಾದ್ ಹೆದ್ದಾರಿ ನಿರ್ಮಾಣದ ಹಿನ್ನೆಲೆಯಲ್ಲಿ ಈ ಭಾಗದ ಸಮಾಜೋ ಆರ್ಥಿಕ ವ್ಯವಸ್ಥೆ, ಭೂಸ್ವಾಧೀನ ಸೇರಿದಂತೆ ತಾಂತ್ರಿಕ ವಿಚಾರಗಳ ಸಮೀಕ್ಷೆಯನ್ನು ದೆಹಲಿಯ ನೋಯ್ಡಾದ ಹೈವೇ ರಿಸರ್ಚ್ ಇನ್‌ಸ್ಟಿಟ್ಯೂಟ್ ಕೈಗೆತ್ತಿಕೊಂಡಿದೆ.

ಉಪನಗರ, ವರ್ತುಲ ರಸ್ತೆಗಳು, ಮೇಲ್ಸೇತುವೆಗಳು, 44 ವಿಶೇಷ ಆರ್ಥಿಕ ವಲಯ, ಟ್ರಕ್ ಬೇ, ಲಾಜಿಸ್ಟಿಕ್ ಪಾರ್ಕ್‌ಗಳು ಈ ಯೋಜನೆಯಡಿ ತಲೆ ಎತ್ತಲಿವೆ. ಕೇಂದ್ರದ ರಸ್ತೆ ನಿಧಿ, ಬಾಂಡ್‌ಗಳ ಹಂಚಿಕೆ, ಖಾಸಗಿ ಸಹಭಾಗಿತ್ವದಡಿ ಈ ಯೋಜನೆ ಕಾರ್ಯಗತಗೊಳ್ಳುತ್ತಿದ್ದು, ಈಗಾಗಲೇ ಕೇಂದ್ರದ ಸಾರ್ವಜನಿಕ ಹೂಡಿಕೆ ಮಂಡಳಿ (ಪಿಐಬಿ) ಅನುಮೋದನೆ ನೀಡಿದೆ.
**
ಇನ್ನೂ ಎರಡು ರಸ್ತೆ ಮೇಲ್ದರ್ಜೆಗೆ
ಬಾಗಲಕೋಟೆ ಜಿಲ್ಲೆಯಲ್ಲಿ ಇನ್ನೂ ಎರಡು ರಸ್ತೆಗಳನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಿಸಲು ಲೋಕೋಪಯೋಗಿ ಇಲಾಖೆಯ ರಾಷ್ಟ್ರೀಯ ಹೆದ್ದಾರಿ ವಿಭಾಗ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದೆ. ಹುನಗುಂದ–ಐಹೊಳೆ–ಪಟ್ಟದಕಲ್ಲು–ಬಾದಾಮಿ–ಕುಳಗೇರಿ ಕ್ರಾಸ್–ರಾಮದುರ್ಗ ನಡುವಿನ ರಾಜ್ಯ ಹೆದ್ದಾರಿ ಹಾಗೂ ಗುರ್ಲಾಪುರ–ಮುಧೋಳ–ಬೀಳಗಿ ನಡುವಿನ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಿಸಲು ಉದ್ದೇಶಿಸಲಾಗಿದೆ. ಈಗಾಗಲೇ ಪ್ರಕ್ರಿಯೆಗಳು ಆರಂಭವಾಗಿವೆ ಎಂದು ಅಧಿಕಾರಿಯೊಬ್ಬರು ಹೇಳುತ್ತಾರೆ.
**
ಬೆಳಗಾವಿಗೆ ವರ್ತುಲ ರಸ್ತೆ ಭಾಗ್ಯ
ಭಾರತ ಮಾಲಾ ಯೋಜನೆ ದೇಶದ ಗಡಿ ಹಾಗೂ ಕರಾವಳಿ ಪ್ರದೇಗಳೊಂದಿಗೆ ಪ್ರಮುಖ ನಗರಗಳನ್ನು ಸಂಪರ್ಕಿಸಲಿದೆ. ಎಲ್ಲಾ ದಿಕ್ಕಿನಿಂದಲೂ ದೇಶದ ಮೂಲೆ ಮೂಲೆಯನ್ನು ತುರ್ತಾಗಿ ಸಂಪರ್ಕಿಸಲು ಸಾಧ್ಯವಾಗಲಿದೆ. ಈ ಯೋಜನೆಯಡಿ ಇನ್ನೂ ಹಲವು ಹೆದ್ದಾರಿಗಳು ಮೇಲ್ದರ್ಜೆಗೆ ಏರಲಿದ್ದು, ರಾಜ್ಯದ ಬೆಳಗಾವಿ, ಚಿತ್ರದುರ್ಗ ಹಾಗೂ ಬೆಂಗಳೂರಿನಲ್ಲಿ ವರ್ತುಲ ರಸ್ತೆ ನಿರ್ಮಾಣವಾಗಲಿದೆ.
**
ಗದ್ದನಕೇರಿ–ಬಾಣಾಪುರ ಹೆದ್ದಾರಿಯೂ ಗದ್ದನಕೇರಿಯಿಂದ–ಶಿರೂರುವರೆಗೆ ಭಾರತ ಮಾಲಾ ಯೋಜನೆಯಲ್ಲಿ ಲೀನವಾಗಲಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವೇ ಕೆಲಸ ಕೈಗೆತ್ತಿಕೊಳ್ಳಲಿದೆ.
–ನರಸಿಂಗ ಮಂಗಳಗಿ, ಕಾರ್ಯನಿರ್ವಾಹಕ ಎಂಜಿನಿಯರ್, ಲೋಕೋಪಯೋಗಿ ಇಲಾಖೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT