ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಚಡಚಣ’ ಹತ್ಯೆ; ನಾಲ್ವರು ಅಧಿಕಾರಿಗಳ ವಿಚಾರಣೆ

ಅಧಿಕಾರಿಗಳ ಸೂಚನೆ ಪಾಲಿಸಿದೆ; ಇನ್‌ಸ್ಪೆಕ್ಟರ್ * ಎನ್‌ಕೌಂಟರ್ ಮಾಡುವ ವಿಷಯ ಹೇಳಿರಲಿಲ್ಲ; ಎಡಿಜಿಪಿ
Last Updated 15 ನವೆಂಬರ್ 2018, 19:40 IST
ಅಕ್ಷರ ಗಾತ್ರ

ಬೆಂಗಳೂರು: ಭೀಮಾತೀರದ ಚಡಚಣ ಸೋದರರ ಹತ್ಯೆ ಪ್ರಕರಣದ ಸಂಬಂಧ ಸಿಐಡಿ ಅಧಿಕಾರಿಗಳು ಎಡಿಜಿಪಿ ರಾಮಚಂದ್ರರಾವ್, ಎಸ್ಪಿ ಕುಲದೀಪ್ ಜೈನ್, ಹೆಚ್ಚುವರಿ ಎಸ್ಪಿ ಶಿವಕುಮಾರ್ ಗುಣಾರೆ ಹಾಗೂ ಡಿಎಸ್ಪಿ ರವೀಂದ್ರ ಶಿರೂರ್ ಅವರನ್ನು ವಿಚಾರಣೆ ನಡೆಸಿ ಹೇಳಿಕೆ ದಾಖಲಿಸಿಕೊಂಡಿದ್ದಾರೆ.

2017ರ ಅ.29ರಂದು ರೌಡಿ ಧರ್ಮರಾಜ ಚಡಚಣನನ್ನು ಎನ್‌ಕೌಂಟರ್‌ನಲ್ಲಿ ಮುಗಿಸಿದ್ದ ಪೊಲೀಸರು, ಆತನ ತಮ್ಮ ಗಂಗಾಧರ ಚಡಚಣನನ್ನು ಸೋದರರ ಎದುರಾಳಿ ಮಹಾದೇವ ಭೈರಗೊಂಡನ ಸಹಚರರ ಸುಪರ್ದಿಗೆ ಕೊಟ್ಟಿದ್ದರು. ಅವರು ಗಂಗಾಧರನನ್ನು ತುಂಡು ತುಂಡಾಗಿ ಕತ್ತರಿಸಿ ಶವವನ್ನು ನದಿಗೆ ಎಸೆದಿದ್ದರು.

ಈ ಪ್ರಕರಣದಲ್ಲಿ ಸಿಐಡಿ ಪೊಲೀಸರು ಪಿಎಸ್‌ಐ ಗೋಪಾಲ್ ಹಳ್ಳೂರ ಅವರನ್ನು ಬಂಧಿಸುತ್ತಿದ್ದಂತೆಯೇ ಸರ್ಕಲ್ ಇನ್‌ಸ್ಪೆಕ್ಟರ್ ಎಂ.ಬಿ.ಅಸೋಡೆ ತಲೆಮರೆಸಿಕೊಂಡಿದ್ದರು. ಇತ್ತೀಚೆಗೆ ಅವರನ್ನು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ಅವರು ಅಧಿಕಾರಿಗಳ ಪಾತ್ರವನ್ನು ಬಾಯ್ಬಿಟ್ಟಿದ್ದಾರೆ.

‘ಸೋದರರನ್ನು ಕೊಲ್ಲುವ ವಿಚಾರದಲ್ಲಿ ನಾನು ಸ್ವಂತ ನಿರ್ಧಾರ ತೆಗೆದುಕೊಂಡಿಲ್ಲ. ಮೇಲಿನ ಅಧಿಕಾರಿಗಳು ಕೊಟ್ಟ ಸೂಚನೆಗಳನ್ನು ಪಾಲಿಸಿದ್ದೇನೆ ಅಷ್ಟೆ’ ಎಂದು ಹೇಳಿಕೆ ಕೊಟ್ಟಿರುವ ಅಸೋಡೆ, ಆ ಅಧಿಕಾರಿಗಳ ಹೆಸರನ್ನು ಬಾಯ್ಬಿಟ್ಟಿಲ್ಲ. ಹೀಗಾಗಿ, ಕೃತ್ಯ ನಡೆದ ಸಮಯದಲ್ಲಿ ಅಲ್ಲಿ ಕೆಲಸ ಮಾಡುತ್ತಿದ್ದ ಎಲ್ಲ ಅಧಿಕಾರಿಗಳನ್ನೂ ವಿಚಾರಣೆ ನಡೆಸಿದ್ದೇವೆ ಎಂದು ಸಿಐಡಿ ಅಧಿಕಾರಿಯೊಬ್ಬರು ತಿಳಿಸಿದರು.

ಕೃತ್ಯ ನಡೆದ ಸಂದರ್ಭದಲ್ಲಿ ರಾಮಚಂದ್ರರಾವ್ ಉತ್ತರ ವಲಯದ ಐಜಿಪಿ (ಈಗ ಎಡಿಜಿಪಿ ಆಗಿ ಬಡ್ತಿ ಪಡೆದಿದ್ದಾರೆ) ಆಗಿದ್ದರು. ಸ್ಥಳೀಯ ಶಾಸಕರ ಶಿಫಾರಸಿನ ಮೇರೆಗೆ ಅವರು ಗೋಪಾಲ್ ಹಳ್ಳೂರ ಅವರನ್ನು ಚಡಚಣ ಠಾಣೆಗೆ ವರ್ಗ ಮಾಡಿದ್ದರು. ‘ಅಣ್ಣ–ತಮ್ಮನನ್ನು ಮುಗಿಸುವ ಉದ್ದೇಶದಿಂದಲೇ ಭೈರಗೊಂಡನ ಸೂಚನೆ ಮೇರೆಗೆ ಹಳ್ಳೂರ ಅವರನ್ನು ಈ ಠಾಣೆಗೆ ಕಳುಹಿಸಲಾಗಿತ್ತು’ ಎಂದು ಮೃತರ ಕುಟುಂಬ ಸದಸ್ಯರು ಆರೋಪಿಸಿದ್ದರು.

‌ನ.9ರಂದು ಸಿಐಡಿ ಕಚೇರಿಗೆ ಬಂದು ನಾಲ್ಕು ತಾಸು ವಿಚಾರಣೆ ಎದುರಿಸಿದ ರಾಮಚಂದ್ರರಾವ್, ‘ನಾನು ಕಾನೂನಿನ ಪ್ರಕಾರವೇ ಹಳ್ಳೂರ ಅವರನ್ನು ವರ್ಗ ಮಾಡಿದ್ದೆ. ಅವರು ಧರ್ಮರಾಜನನ್ನು ಎನ್‌ಕೌಂಟರ್ ಮಾಡುವ ಬಗ್ಗೆ ನನಗೂ ಮಾಹಿತಿ ಕೊಟ್ಟಿರಲಿಲ್ಲ. ನಂತರ ಎಸ್ಪಿ ಕರೆ ಮಾಡಿ ದಾಳಿಯ ಬಗ್ಗೆ ಹೇಳಿದರು. ಆ ನಂತರ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದೆ. ಈ ಪ್ರಕರಣದಲ್ಲಿ ನನ್ನಿಂದ ಲೋಪವಾಗಿಲ್ಲ’ ಎಂದು ಹೇಳಿಕೆ ಕೊಟ್ಟಿದ್ದಾರೆ. ಎಸ್ಪಿ, ಹೆಚ್ಚುವರಿ ಎಸ್ಪಿ ಹಾಗೂ ಡಿಎಸ್ಪಿ ಸಹ ತಾವೂ ಕಾನೂನಿನ ಪ್ರಕಾರವೇ ನಡೆದುಕೊಂಡಿರುವುದಾಗಿ ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.

‘ಪೊಲೀಸರೇ ಸುಪಾರಿ ಹಂತಕರಾಗೋದ? ಇದು ನಾಚಿಕೆಗೇಡಿನ ಸಂಗತಿ’ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಇತ್ತೀಚೆಗೆ ಅಧಿಕಾರಿಗಳ ಸಭೆಯಲ್ಲಿ ರಾಮಚಂದ್ರರಾವ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT