ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಸರ ದಿನ ಆಚರಣೆಗೆ ಸೀಮಿತ ಬೇಡ

ಗ್ರಾಸಿಂ ಕಂಪನಿ ಕಾರ್ಖಾನೆ ಆವರಣದಲ್ಲಿ ಪರಿಸರ ದಿನಾಚರಣೆ: ಜಿಲ್ಲಾಧಿಕಾರಿ ವೆಂಕಟೇಶ್ ಸಲಹೆ
Last Updated 9 ಜೂನ್ 2018, 11:02 IST
ಅಕ್ಷರ ಗಾತ್ರ

ಕುಮಾರಪಟ್ಟಣ: ‘ಪರಿಸರ, ಪ್ರಕೃತಿ ನಮಗೆ ಯಾವುದನ್ನು ನೀಡಿಲ್ಲ? ಎಲ್ಲವನ್ನೂ ನೀಡುತ್ತದೆ.ಆದರೆ, ನಾವಿಂದು ಪರಿಸರಕ್ಕಾಗಿ ಏನನ್ನು ಕೊಟ್ಟಿದ್ದೇವೆ ಎಂದು ಪ್ರತಿಯೊಬ್ಬರೂ ಪ್ರಶ್ನಿಸಿಕೊಂಡರೆ ಉತ್ತರ ಮಾತ್ರ ಶೂನ್ಯ’ ಎಂದು ಜಿಲ್ಲಾಧಿಕಾರಿ ಡಾ.ವೆಂಕಟೇಶ್ ಎಂ.ವಿ. ನುಡಿದರು.

ಇಲ್ಲಿನ ಗ್ರಾಸಿಂ ಕಂಪನಿ ಕಾರ್ಖಾನೆ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಶುಕ್ರವಾರ ಆಯೋಜಿಸಿದ್ದ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

‘ನಗರ ಪ್ರದೇಶಗಳು ಹೆಚ್ಚೆಚ್ಚು ಬೆಳೆಯುತ್ತಿವೆ. ಹೀಗಾಗಿ ದಿನದಿಂದ ದಿನಕ್ಕೆ ಮಾಲಿನ್ಯ ಹೆಚ್ಚಾಗುತ್ತಿದೆ. ಪರ್ವತದಂತೆ ತಲೆ ಎತ್ತುತ್ತಿರುವ ಕಟ್ಟಡಗಳು, ಕೊಳಚೆ ನೀರಿನ ಪ್ರವಾಹ, ಕಿವಿಗಡಚಿಕ್ಕುವ ವಾಹನಗಳ ಶಬ್ದ, ಕಲುಷಿತ ಗಾಳಿ, ನೀರು, ಆಹಾರ ಸೇವನೆಯಿಂದ ಮನುಷ್ಯ ಒಂದಿಲ್ಲೊಂದು ಕಾಯಿಲೆಗೆ ತುತ್ತಾಗುತ್ತಿದ್ದಾನೆ’ ಎಂದು ಆತಂಕ ವ್ಯಕ್ತಪಡಿಸಿದರು.

‘ಪರಿಸರ ದಿನ ಕೇವಲ ಆಚರಣೆಗೆ ಮಾತ್ರ ಸೀಮಿತ ಆಗಬಾರದು. ಈ ಪ್ರಕ್ರಿಯೆ ನಿರಂತರ ಮುಂದುವರಿಯಬೇಕು. ಅಂದಾಗ ಮಾತ್ರ ನಾವು ನಿರೀಕ್ಷಿತ ಫಲಿತಾಂಶ ಪಡೆಯಲು ಸಾಧ್ಯ. ಈ ನಿಟ್ಟಿನಲ್ಲಿ ಗ್ರಾಸಿಂ ಕಂಪನಿ ನದಿ ತೀರದಲ್ಲಿ ದೊಡ್ಡ ಮಟ್ಟದಲ್ಲಿ ಗಿಡ ನೆಡಲು ಅವರು ತೋರುತ್ತಿರುವ ಉತ್ಸಾಹ ಕಾರ್ಯ ಶ್ಲಾಘನೀಯ’ ಎಂದರು.

ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿ ಕೆ.ಬಿ.ಕೊಟ್ರೇಶ್, ಹಾವೇರಿ ಜಿಲ್ಲೆ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿ ಮಹೇಶಪ್ಪ, ಗ್ರಾಸಿಂ ಕಂಪನಿ ಹಿರಿಯ ಆಡಳಿತಾಧಿಕಾರಿ ಅಜಯ್ ಗುಪ್ತ, ಎಚ್ಆರ್‌ಎಂ ವಿಭಾಗದ ಮುಖ್ಯಸ್ಥ ಅರುಣ್ ಮಿಶ್ರಾ, ತಾಂತ್ರಿಕ ವಿಭಾಗದ ಮುಖ್ಯಸ್ಥರಾದ ಉಮೇಶ್ ದುಗ್ಗಾಣಿ, ಕೆ.ಕೆ.ಗುಪ್ತಾ, ಹಣಕಾಸು ವಿಭಾಗದ ಮುಖ್ಯಸ್ಥ ಮಹಾವೀರ್ ಜೈನ್, ಪವರ್ ಪ್ಲಾಂಟ್ ಮುಖ್ಯಸ್ಥ ಎಸ್.ಜಿ.ಭಟ್, ಸಾರ್ವಜನಿಕ ಸಂಪರ್ಕಾಧಿಕಾರಿ ಶ್ರೀನಿವಾಸ್.ಪಿ, ಎಚ್ಆರ್ ವಿಭಾಗದ ಮುಖ್ಯಸ್ಥ ಸುದರ್ಶನ ರಾವ್, ಸಿಎಸ್ಆರ್ ವಿಭಾಗದ ಶೇಖರಪ್ಪ ಬೇಡರ್, ದಿನೇಶ್ ನಾಯ್ಕ, ರೇಣುಕಮ್ಮ ಉಪಸ್ಥಿತರಿದ್ದರು.

‘ಸ್ಮೃತಿವನ’ ನಿರ್ಮಿಸಿ

‘ಕಂಪನಿಯಲ್ಲಿ ಎರಡು ಸಾವಿರಕ್ಕೂ ಹೆಚ್ಚು ಕಾರ್ಮಿಕರು ಕಾರ್ಯನಿರ್ವಹಿಸುತ್ತಿದ್ದೀರಿ. ಇದೇ ಜಾಗದಲ್ಲಿ ಗ್ರಾಸಿಂ ಸ್ಮೃತಿವನ ನಿರ್ಮಿಸಿ ಪ್ರತಿಯೊಬ್ಬರ ಹೆಸರಿನಲ್ಲಿ ಒಂದು ಸಸಿ ನೆಟ್ಟು ಪೋಷಿಸಿದರೆ ಅದೊಂದು ಮಾದರಿ ಕಾರ್ಯವಾಗುತ್ತದೆ ಎಂದು ಜಿಲ್ಲಾಧಿಕಾರಿ ವೆಂಕಟೇಶ್ ಅವರು ಗ್ರಾಸಿಂ ಕಂಪನಿಯ ಆಡಳಿತ ಮಂಡಳಿಯ ಗಮನ ಸೆಳೆದರು. ಇದಕ್ಕೆ ಆಡಳಿತ ಮಂಡಳಿ ಕೂಡ ಸ್ಪಂದಿಸುವ ಭರವಸೆ ನೀಡಿತು.

ಡಿ.ಸಿ ಮನವಿ

ವಿಶ್ವಸಂಸ್ಥೆ ನಿರ್ದೇಶನದಂತೆ ಶೇ 33% ಅರಣ್ಯ ಪ್ರದೇಶ ಇರಬೇಕು. ಆದರೆ ಪ್ರಸಕ್ತ ಸಾಲಿನ ಅಂಕಿ ಅಂಶಗಳ ಪ್ರಕಾರ ಹಾವೇರಿ
ಜಿಲ್ಲೆಯಲ್ಲಿ ಶೇ 8%ರಷ್ಟು ಅರಣ್ಯಭೂಮಿ ಮಾತ್ರ ಇದೆ. ಜಿಲ್ಲಾಡಳಿತದಿಂದ ಜಿಲ್ಲೆಯಾದ್ಯಂತ ಹನ್ನೆರಡೂವರೆ ಲಕ್ಷ ಸಸಿ ನೆಡುವ ಗುರಿ ಇರಿಸಿ, ಕಾರ್ಯೋನ್ಮುಖವಾಗಿದ್ದೇವೆ. ಜಿಲ್ಲೆಯಲ್ಲಿ ಹಸಿರು ಹೆಚ್ಚಿಸುವ ನಿಟ್ಟಿನಲ್ಲಿ ಸರ್ಕಾರೇತರ ಸಂಸ್ಥೆಗಳು ಹಾಗೂ ಸಂಘ– ಸಂಸ್ಥೆ
ಗಳು ತಮ್ಮದೇ ಪ್ರಯತ್ನಗಳನ್ನು ಮಾಡಬೇಕು ಎಂದು ಜಿಲ್ಲಾಧಿಕಾರಿ ವೆಂಕಟೇಶ್ ಕೋರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT