ಮಂಗಳವಾರ, ಜೂನ್ 2, 2020
27 °C

ಮೇ 25ರಿಂದ ದೇಶೀಯ ವಿಮಾನ ಸೇವೆ ಆರಂಭ: ಪ್ರಯಾಣಿಕರು ಇವಿಷ್ಟನ್ನು ಪಾಲಿಸಲೇಬೇಕು...

ಪ್ರಜಾವಾಣಿ ವೆಬ್‌ ಡೆಸ್ಕ್ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವು (ಕೆಐಎಬಿ), ಮೇ 25 ರಿಂದ ಪುನರಾರಂಭಗೊಳ್ಳಲಿರುವುದಾಗಿ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್ (ಬಿಐಎಎಲ್) ತಿಳಿಸಿದ್ದು, 2020ರ ಮಧ್ಯಂತರ ಬೇಸಿಗೆ ವೇಳಾಪಟ್ಟಿಯನ್ನು ಪ್ರಕಟಿಸಿದೆ.

ನಾಗರಿಕ ವಿಮಾನಯಾನ ಸಚಿವಾಲಯವು ಮಾರ್ಚ್ 29ರಿಂದ ಜಾರಿಗೆ ಬರಬೇಕಾಗಿದ್ದ ವೇಳಾಪಟ್ಟಿಯ ಶೇ 32ರಷ್ಟು ವಿಮಾನ ಸಂಚಾರಕ್ಕೆ ಅನುವು ನೀಡಿ ಪರಿಷ್ಕೃತ ವೇಳಾಪಟ್ಟಿ ಪ್ರಕಟಿಸಲಾಗಿದೆ. ಇದು ಜೂನ್ 30ರ ವರೆಗೂ ಜಾರಿಯಲ್ಲಿರಲಿದೆ.

ಅಂತರವನ್ನು ಕಾಯ್ದುಕೊಳ್ಳುವ ಮಾನದಂಡಗಳನ್ನು ಖಚಿತಪಡಿಸಿಕೊಳ್ಳುವ ಸಲುವಾಗಿ ಬೆಂಗಳೂರು ವಿಮಾನ ನಿಲ್ದಾಣವು ಈಗಿರುವ ಟರ್ಮಿನಲ್ ಸಾಮರ್ಥ್ಯವನ್ನು ಕಡಿಮೆಗೊಳಿಸಿ ದಿನವೊಂದಕ್ಕೆ ಸರಾಸರಿ 215 (108 ನಿರ್ಗಮನ ಮತ್ತು 107 ಆಗಮನ) ವಾಯು ಮಾರ್ಗ ನಿರ್ವಹಣೆಯನ್ನು (ಎಟಿಎಂ) ಮಾಡಲಿದೆ. 

ಇದನ್ನೂ ಓದಿ: 

ಈ ವೇಳಾಪಟ್ಟಿಯ ಅನ್ವಯ ಪ್ರಮುಖ ವಿಮಾನಯಾನ ಸಂಸ್ಥೆಗಳಾದ ಇಂಡಿಗೊ ಶೇ 47ರಷ್ಟು, ಏರ್ ಏಷ್ಯಾ ಮತ್ತು ಸ್ಪೈಸ್ ಜೆಟ್ ಕ್ರಮವಾಗಿ ಶೇ 16 ಮತ್ತು ಶೇ 14ರಷ್ಟು ವಿಮಾನಗಳು ಸಂಚರಿಸಲಿವೆ. 

ಟರ್ಮಿನಲ್‌ನೊಳಗೆ ಪ್ರಯಾಣಿಕರು ಬರುವಂತೆ ನೆರವಾಗಲು ಪ್ರತಿ 10 ನಿಮಿಷಕ್ಕೆ ಹೊಂದರಂತೆ ವಿಮಾನಗಳ ಸ್ಲಾಟ್‌ಗಳನ್ನು ಹೊಂದಿಸಲಾಗಿದ್ದು, ಸೇವಾ ಮಾನದಂಡಗಳು ಮತ್ತು ಸುರಕ್ಷಿತ ಅಂತರವನ್ನು ಕಾಯ್ದುಕೊಳ್ಳಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ.

ಈ ಮಧ್ಯೆ, ವಿಮಾನಯಾನಕ್ಕೆ ಬರುವ ಪ್ರಯಾಣಿಕರು ಹೊಸ ಕ್ವಾರಂಟೈನ್ ನೀತಿಗೆ ಬದ್ಧರಾಗಿರುವುದನ್ನು ಖಚಿತಪಡಿಸಿಕೊಳ್ಳಲು ಬಿಐಎಎಲ್ ವಿವಿಧ ಸರ್ಕಾರಿ ಇಲಾಖೆಗಳೊಂದಿಗೆ ನಿಕಟವಾಗಿ ಕೆಲಸ ಮಾಡಲಿರುವುದಾಗಿ  ತಿಳಿಸಿದೆ.

ಇದನ್ನೂ ಓದಿ: 

ಪ್ರಯಾಣಿಕರು ಏನೇನು ಮಾಡಬೇಕು?

* ಪ್ರವೇಶ ಪೂರ್ವ ಪ್ರಕ್ರಿಯೆಯಲ್ಲಿ ಪ್ರಯಾಣಿಕರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಮತ್ತು ಪ್ರಿಂಟ್ ತೆಗೆದ ಬೋರ್ಡಿಂಗ್ ಪಾಸ್ ಕೊಂಡೊಯ್ಯಬೇಕು.

* ನಿರ್ಗಮನ ದ್ವಾರಗಳಲ್ಲಿ ಪ್ರಯಾಣಿಕರು ಥರ್ಮಲ್ ಸ್ಕ್ಯಾನ್‌ಗೆ ಒಳಗಾಗಬೇಕು ಮತ್ತು ಪ್ರಯಾಣಿಕರ ಮೊಬೈಲ್‌ನಲ್ಲಿನ ಆರೋಗ್ಯ ಸೇತು ಅಪ್ಲಿಕೇಶನ್‌ನಲ್ಲಿ ‘ನೀವು ಸುರಕ್ಷಿತ’ ಎಂಬ ಸಂದೇಶವನ್ನು ತೋರಿಸಬೇಕು. 

* ಟರ್ಮಿನಲ್‌ನೊಳಗೆ ಪ್ರವೇಶಿಸಿದ ಬಳಿಕ ಪ್ರಯಾಣಿಕರು ಮಾನವ ಸಂಪರ್ಕವಿಲ್ಲದೆ ಸ್ವಯಂ ಸೇವಾ ಕಿಯೋಸ್ಕ್(kiosk) ಯಂತ್ರದಲ್ಲಿ ಬೋರ್ಡಿಂಗ್‌ ಪಾಸ್‌ ಅನ್ನು ಸ್ಕ್ಯಾನ್ ಮಾಡಬೇಕು ಮತ್ತು ಬ್ಯಾಗೇಜ್ ಟ್ಯಾಗ್ಅನ್ನು ಅಲ್ಲಿಯೇ ಪಡೆಯಬೇಕು.

* ಏರ್‌ಲೈನ್ ಬ್ಯಾಗ್ ಡ್ರಾಪ್ ಕೌಂಟರ್‌ಗಳಲ್ಲಿ ಪಾರದರ್ಶಕ ವಿಭಾಗವನ್ನು ಸ್ಥಾಪಿಸಲಾಗಿದ್ದು, ಗುರುತು ಮಾಡಿದ ಸ್ಥಳಗಳಲ್ಲಿಯೇ ಪ್ರಯಾಣಿಕರು ನಿಲ್ಲಬೇಕು. ಬೋರ್ಡಿಂಗ್ ಪಾಸ್‌ ಅನ್ನು ಸಂವೇದಕದಲ್ಲಿ ಸ್ಕ್ಯಾನ್ ಮಾಡಿ ಐಡಿ ತೋರಿಸಿದರೆ ವಿಮಾನಯಾನ ಸಿಬ್ಬಂದಿ ಲಗೇಜ್‌ ಸ್ವೀಕರಿಸುತ್ತಾರೆ. 

* ವಿಮಾನಯಾನ ಸಂಸ್ಥೆಗಳಿಗೆ ಅನ್ವಯವಾಗುವಂತೆ ಸ್ವಯಂಚಾಲಿತ ಸೆಲ್ಫ್ ಬ್ಯಾಗ್ ಡ್ರಾಪ್ ಸೌಲಭ್ಯ ಲಭ್ಯವಿರುತ್ತದೆ. ಯಂತ್ರಗಳನ್ನು ಮುಟ್ಟದಂತೆ ಪ್ರಯಾಣಿಕರಿಗೆ ಸ್ವತಃ ವಿಮಾನ ನಿಲ್ದಾಣದ ಸಿಬ್ಬಂದಿ ಸಹಾಯ ಮಾಡುತ್ತಾರೆ.

* ಭದ್ರತಾ ಪರಿಶೀಲನೆಯ ಮೊದಲು ಮತ್ತು ನಂತರ ಹ್ಯಾಂಡ್ ಸ್ಯಾನಿಟೈಸರ್‌ಗಳನ್ನು ಇಡಲಾಗಿದೆ.

* ವಿಮಾನಯಾನ ಸಿಬ್ಬಂದಿ ಪ್ರಯಾಣಿಕರಿಗೆ ಮಾಸ್ಕ್, ಫೇಸ್ ಶೀಲ್ಡ್ ಮತ್ತು ಸ್ಯಾನಿಟೈಸರ್ ಹೊಂದಿರುವ ಕಿಟ್ ಅನ್ನು ನೀಡುತ್ತಾರೆ. ಆಗ ಅವರು ಹೊಸ ಮಾಸ್ಕ್ ಧರಿಸಬೇಕು ಮತ್ತು ಬೋರ್ಡಿಂಗ್‌ಗೂ ಮೊದಲು ಕೈಗಳನ್ನು ಸ್ವಚ್ಛಗೊಳಿಸಬೇಕು.

* ಟರ್ಮಿನಲ್‌ನಾದ್ಯಂತ ಜೈವಿಕ ತ್ಯಾಜ್ಯ ಸಂಗ್ರಹ ತೊಟ್ಟಿಗಳನ್ನು ಇರಿಸಲಾಗಿದ್ದು, ಪ್ರಯಾಣಿಕರು ತಮ್ಮ ಬಳಸಿದ ಮಾಸ್ಕ್ ಮತ್ತು ಇತರ ವೈಯಕ್ತಿಕ ರಕ್ಷಣಾ ಸಾಧನಗಳನ್ನು ವಿಲೇವಾರಿ ಮಾಡಬೇಕು.

* ಪ್ರಯಾಣಿಕರ ದೃಷ್ಟಿಯಿಂದ ಟರ್ಮಿನಲ್‌ನಾದ್ಯಂತ ಸಂಪರ್ಕರಹಿತ ಸ್ಯಾನಿಟೈಸರ್‌ಗಳನ್ನು ಇಡಲಾಗಿದ್ದು, ಪ್ರಯಾಣಿಕರು ಬಳಸಬೇಕು. 

* ಆಹಾರ ಪದಾರ್ಥಗಳನ್ನು ಆನ್‌ಲೈನ್ ಮೂಲಕವೇ ಬುಕ್ ಮಾಡಿಕೊಳ್ಳಬೇಕು.

* ಪಾರ್ಕಿಂಗ್ ವಲಯಗಳಲ್ಲಿ ಟಿಕೆಟ್ ವಿತರಣಾ ಯಂತ್ರವು ಪ್ರವೇಶದ ಸಮಯ ಮತ್ತು ದಿನಾಂಕವನ್ನು ದಾಖಲಿಸಿದ ನಂತರ ಟಿಕೆಟ್ ಅನ್ನು ಮುದ್ರಿಸುತ್ತದೆ. ನಿರ್ಗಮಿಸುವಾಗ ಟಿಕೆಟ್ ಅನ್ನು ಯಂತ್ರದ ವಿರುದ್ಧ ಸ್ಕ್ಯಾನ್ ಮಾಡಬೇಕು ಮತ್ತು ಡಿಜಿಟಲ್ ರೂಪದಲ್ಲಿ ಪಾವತಿ ಮಾಡಬಹುದು. ಸರಿಯಾದ ಮುನ್ನೆಚ್ಚರಿಕೆಗಳೊಂದಿಗೆ ನಗದು ಮತ್ತು ಕಾರ್ಡ್ ಪಾವತಿ ಆಯ್ಕೆಗಳು ಸಹ ಲಭ್ಯವಿರುತ್ತವೆ.

* ಪ್ರಯಾಣಿಕರು ಬ್ಯಾಗೇಜ್ ಸಂಗ್ರಹ ಪ್ರದೇಳದಲ್ಲಿ ಅಂತರ ಕಾಯ್ದುಕೊಳ್ಳಬೇಕು. 

* ಟ್ಯಾಕ್ಸಿ ಚಾಲಕರು ಪ್ರತಿ ಟ್ರಿಪ್‌ಗೂ ವಾಹನವನ್ನು ಸ್ವಚ್ಛಗೊಳಿಸಬೇಕು ಮತ್ತು ಚಾಲಕರು ಸ್ಕ್ರೀನಿಂಗ್‌ಗೆ ಒಳಪಡಬೇಕು. ಮಾಸ್ಕ್ ಧರಿಸುವುದು ಕಡ್ಡಾಯ. ಮಾಸ್ಕ್ ಇಲ್ಲದ ಪ್ರಯಾಣಿಕರನ್ನು ಟ್ಯಾಕ್ಸಿಯೊಳಗೆ ಅವಕಾಶ ನೀಡಲಾಗುವುದಿಲ್ಲ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು